47
ಆಲಯದಿಂದ ನೀರಿನ ಹರಿಯುವಿಕೆ
1 ಅವನು ಆಲಯದ ಪ್ರವೇಶ ದ್ವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ನಾನು ಅಲ್ಲಿ ಆಲಯದ ಪೂರ್ವ ದ್ವಾರದ ಕೆಳಗಡೆಯಿಂದ ಹರಿಯುವ ನೀರನ್ನು ಕಂಡೆನು. ಆಲಯದ ಮುಂಭಾಗ ಪೂರ್ವ ದಿಕ್ಕಿನಲ್ಲಿದೆ. ಆ ನೀರು ಆಲಯದ ದಕ್ಷಿಣದ ಭಾಗದ ಕೆಳಗಿನಿಂದ ಹರಿಯುತ್ತಾ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯುತ್ತಿತ್ತು.
2 ಅವನು ನನ್ನನ್ನು ಉತ್ತರದ ದ್ವಾರದಿಂದ ಹೊರಕ್ಕೆ ತಂದು, ದೇವಾಲಯದ ಹೊರ ಅಂಚಿನಲ್ಲಿಯೇ ಪೂರ್ವ ದ್ವಾರಕ್ಕೆ ತಂದನು. ಆ ದ್ವಾರದ ದಕ್ಷಿಣದ ಕಡೆಯಿಂದ ನೀರು ಹರಿದು ಬರುತ್ತಿತ್ತು.
3 ಅವನು ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡು ಪೂರ್ವದ ಕಡೆಗೆ ನಡೆದನು. ಅವನು ಸಾವಿರ ಮೊಳ ಅಳೆದನು. ನನ್ನನ್ನು ಆ ಸ್ಥಳದಲ್ಲಿ ನೀರಿನಲ್ಲಿ ನಡೆದುಕೊಂಡು ಬರುವಂತೆ ಹೇಳಿದನು. ನೀರು ನನ್ನ ಪಾದ ಮುಳುಗುವಷ್ಟು ಆಳವಿತ್ತು.
4 ಅವನು ತಿರುಗಿ ಸಾವಿರ ಮೊಳ ಅಳೆದನು. ಆ ಜಾಗದಲ್ಲಿದ್ದ ನೀರಿನಲ್ಲಿ ನನಗೆ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಮೊಣಕಾಲಿನಷ್ಟು ಆಳವಿತ್ತು. ತಿರುಗಿ ಅವನು ಸಾವಿರ ಮೊಳದಷ್ಟು ದೂರ ಅಳತೆ ಮಾಡಿದನು. ಆ ಸ್ಥಳದಲ್ಲಿ ನೀರಿನಲ್ಲಿ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಸೊಂಟದಷ್ಟು ಆಳವಾಗಿತ್ತು.
5 ಅವನು ಇನ್ನೂ ಒಂದು ಸಾವಿರ ಮೊಳ ದೂರ ಅಳೆದನು. ಅಲ್ಲಿ ನೀರು ಹೆಚ್ಚಿದ್ದು ನನ್ನಿದ ದಾಟಲು ಆಗದಷ್ಟು ಆಳವಿತ್ತು. ಅದು ನದಿಯಾಗಿತ್ತು. ಆ ನೀರಿನಲ್ಲಿ ಈಜಾಡಬಹುದಾಗಿತ್ತು. ದಾಟಲಾಗದ ಆಳವಾದ ಹೊಳೆಯಾಗಿತ್ತು.
6 ಆಗ ಅವನು ನನಗೆ, “ನರಪುತ್ರನೇ, ನೀನು ನೋಡಿರುವ ವಿಷಯಗಳ ಬಗ್ಗೆ ಗಮನವಿಟ್ಟಿಯಾ?” ಎಂದು ಕೇಳಿದನು.
ಆಗ ಅವನು ನನ್ನನ್ನು ಹೊಳೆಯ ಪಕ್ಕದಲ್ಲೇ ಕರೆದುಕೊಂಡು ಹೋದನು.
7 ನಾನು ನದಿಯ ತೀರದಲ್ಲಿ ನಡೆಯುತ್ತಿರುವಾಗ ಅದರ ಎರಡೂ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ನೋಡಿದೆನು.
8 ಅವನು ನನ್ನೊಡನೆ, “ಈ ನದಿಯು ಪೂರ್ವಕ್ಕೆ ಹೊರಟು ಅರಾಬಾ ತಗ್ಗಿನ ಕಡೆ ಹರಿಯುತ್ತಿದೆ.
9 ಇದು ಮೃತ್ಯುಸಮುದ್ರವನ್ನು ಸೇರಿದಾಗ ಅದರ ನೀರು ಹೊಸದಾಗಿ ಶುದ್ಧವಾಗುವದು. ನೀರಿನಲ್ಲಿ ನಾನಾ ತರದ ಮೀನುಗಳು ಜೀವಿಸುವವು, ಮತ್ತು ಆ ಹೊಳೆಯು ಹರಿಯುವಲ್ಲೆಲ್ಲಾ ವಿವಿಧ ಜಾತಿಯ ಪ್ರಾಣಿಗಳು ವಾಸಿಸುವವು.
10 ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ.
11 ಆದರೆ ಜವುಗು ನೆಲಗಳೂ ಸವುಳು ನೆಲಗಳೂ ಸಿಹಿಯಾಗುವದಿಲ್ಲ. ಅವು ಉಪ್ಪು ತಯಾರಿಸುವದಕ್ಕಾಗಿ ಉಪಯೋಗಿಸಲ್ಪಡುವವು.
12 ಎಲ್ಲಾ ತರಹದ ಹಣ್ಣಿನ ಮರಗಳು ನದಿಯ ಇಕ್ಕೆಡೆಗಳಲ್ಲಿಯೂ ಬೆಳೆಯುವವು. ಅವುಗಳ ಎಲೆಗಳು ಎಂದಿಗೂ ಒಣಗಿ ನೆಲಕ್ಕೆ ಉದುರವು. ಆ ಮರಗಳಲ್ಲಿ ಸದಾಕಾಲ ಹಣ್ಣುಗಳು ಇರುವವು. ಪ್ರತೀ ತಿಂಗಳಿಗೆ ಹಣ್ಣುಗಳನ್ನು ಕೊಡುವವು. ಯಾಕೆಂದರೆ ಆ ಮರಗಳಿಗೆ ನೀರು ಆಲಯದಿಂದ ಬರುತ್ತದೆ. ಅದರ ಹಣ್ಣುಗಳನ್ನು ಆಹಾರಕ್ಕಾಗಿಯೂ ಅದರ ಎಲೆಗಳಿಂದ ಔಷಧಿಯನ್ನೂ ತಯಾರಿಸಬಹುದು.”
ಕುಲಗಳಿಗನುಸಾರವಾಗಿ ದೇಶದ ವಿಭಜನೆ
13 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರ ಹನ್ನೆರಡು ಕುಲಗಳಿಗೆ ದೇಶವನ್ನು ವಿಂಗಡಿಸುವಾಗ ಅವುಗಳ ಮೇರೆ ಯಾವುವೆಂದರೆ, ಯೋಸೇಫನಿಗೆ ಎರಡು ಪಾಲು ಇರುವದು.
14 ನೀವು ದೇಶವನ್ನು ಸಮಾನವಾಗಿ ಪಾಲು ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಈ ದೇಶವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದೆನು. ಈಗ ನಾನು ಇದನ್ನು ನಿಮಗೆ ಕೊಡುತ್ತಿದ್ದೇನೆ.
15 “ದೇಶದ ಮೇರೆ ಯಾವದೆಂದರೆ, ಉತ್ತರದ ಮೇರೆಯು ಭೂಮಧ್ಯ ಸಮುದ್ರದಲ್ಲಿ ಪ್ರಾರಂಭವಾಗಿ ಹೆತ್ಲೋನ್ ಕಡೆಗೂ ಅಲ್ಲಿಂದ ಚೆದಾದ್ ಕಡೆಗೂ
16 ಅಲ್ಲಿಂದ ಬೇರೋತ್ ಕಡೆಗೂ ಅಲ್ಲಿಂದ ಸಿಬ್ರಯಿಮ್ (ಇದು ದಮಸ್ಕ ಮತ್ತು ಹಾಮತ್‌ಗಳ ಮೇರೆಯಲ್ಲಿದೆ) ಕಡೆಗೂ ಅಲ್ಲಿಂದ ಹಾಚೇರ್ ಕಡೆಗೂ ಅಲ್ಲಿಂದ ಹತ್ತೀಕೋನ್ (ಇದು ಹವಾನದ ಮೇರೆಯಲ್ಲಿದೆ) ಕಡೆಗೂ ಹೋಗುತ್ತದೆ.
17 ಹೀಗೆ ಉತ್ತರದ ಮೇರೆಯು ಸಮುದ್ರದಿಂದ ದಮಸ್ಕದ ಉತ್ತರದ ಗಡಿಯಾದ ಹಚರ್ ಐನೋನ್ ಮತ್ತು ಹಮಾತಿಗೆ ಸೇರ್ಪಡೆಯಾಗುವದು. ಇದು ಉತ್ತರ ಭಾಗದ ಮೇರೆ.
18 “ಪೂರ್ವ ಭಾಗದಲ್ಲಿ, ಮೇರೆಯು ಹವ್ರಾನ್ ಮತ್ತು ದಮಸ್ಕದ ಮಧ್ಯದಲ್ಲಿರುವ ಹಚರ್ ಐನೋನ್ ಇಲ್ಲಿಂದ ಹೊರಟು ಜೋರ್ಡನ್ ಹೊಳೆಯ ತೀರದಲ್ಲಿ ಮುಂದುವರಿದು ಗಿಲ್ಯಾದಿಗೂ ಇಸ್ರೇಲ್ ರಾಜ್ಯಕ್ಕೂ ಮಧ್ಯದಲ್ಲಿ ಹರಿದು ಪೂರ್ವದ ಸಮುದ್ರದ ಕಡೆಗೆ ಹೋಗುತ್ತದೆ. ಅಲ್ಲಿಂದ ತಾಮಾರಿಗೆ ಸೇರುತ್ತದೆ. ಇದು ಪೂರ್ವ ಕಡೆಯ ಮೇರೆ.
19 “ದಕ್ಷಿಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್-ಕಾದೇಶ್ ನಲ್ಲಿರುವ ನೀರಿನ ಬುಗ್ಗೆಯವರೆಗೂ ಹೋಗುವರು. ಬಳಿಕ ಅಲ್ಲಿಂದ ಹೊರಟು ಈಜಿಪ್ಟಿನ ನೀರಿನ ತೊರೆಯ ಮಾರ್ಗದಿಂದ ಭೂಮಧ್ಯ ಸಮುದ್ರವನ್ನು ಸೇರುವದು. ಇದು ದಕ್ಷಿಣದ ಮೇರೆ.
20 “ಪಶ್ಚಿಮದಲ್ಲಿ ಲೆಬೊಹಮಾತ್ ಎಂಬ ಸ್ಥಳದ ಮುಂಭಾಗದಲ್ಲಿರುವ ಸಮುದ್ರ ತೀರವೇ ಪಶ್ಚಿಮ ದಿಕ್ಕಿನ ಮೇರೆಯಾಗಿರುತ್ತದೆ.
21 “ಈ ದೇಶವನ್ನು ನಿಮ್ಮ ಕುಲಗಳಿಗನುಸಾರವಾಗಿ ನೀವು ವಿಂಗಡಿಸಬೇಕು.
22 ನೀವು ಇದನ್ನು ಸ್ವಂತ ಸಾಬಸ್ತ್ಯಕ್ಕಾಗಿ ವಿಂಗಡಿಸಬೇಕು. ನಿಮ್ಮ ಮಧ್ಯೆ ಪರದೇಶದವರೂ ಅವರ ಮಕ್ಕಳೂ ವಾಸವಾಗಿದ್ದಾರೆ. ಈ ಪರದೇಶಸ್ಥರು ಈ ದೇಶದ ನಿವಾಸಿಗಳಾಗಿರುವರು. ಅವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ಇಸ್ರೇಲಿನವರಂತಿರುತ್ತಾರೆ. ನೀವು ಅವರಿಗೂ ನಿಮ್ಮ ವಂಶದವರೊಂದಿಗೆ ಭೂಮಿಯನ್ನು ಕೊಡಬೇಕು.
23 ಯಾವ ಕುಲದವರೊಂದಿಗೆ ಆ ಪರದೇಶಸ್ಥನು ವಾಸವಾಗಿರುತ್ತಾನೋ ಅದೇ ಕುಲದವರು ಅವನಿಗೆ ನೆಲವನ್ನು ಕೊಡಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.