6
ಇಸ್ರೇಲಿನ ವಿರುದ್ಧ ಪ್ರವಾದನೆ
1 ಮತ್ತೆ ಯೆಹೋವನ ಸಂದೇಶವು ನನಗೆ ಬಂದಿತು.
2 ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲಿನ ಪರ್ವತಗಳ ಕಡೆಗೆ ಮುಖ ಮಾಡು. ಅವುಗಳ ವಿರುದ್ಧವಾಗಿ ನನಗೋಸ್ಕರ ಮಾತನಾಡಿ ಹೀಗೆ ಹೇಳು:
3 ‘ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಸಂದೇಶಕ್ಕೆ ಕಿವಿಗೊಡಿರಿ. ಬೆಟ್ಟಗಳಿಗೂ ಪರ್ವತಗಳಿಗೂ ಕೊರಕಲುಗಳಿಗೂ ಕಣಿವೆಗಳಿಗೂ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಾನು ವೈರಿಯನ್ನು ನಿಮ್ಮ ವಿರುದ್ಧ ಯುದ್ಧ ಮಾಡಲು ಕಳುಹಿಸುವೆನು. ನಿಮ್ಮ ಎಲ್ಲಾ ಉನ್ನತ ಸ್ಥಳಗಳನ್ನು ನಾಶಮಾಡುವೆನು.
4 ನಿಮ್ಮ ಯಜ್ಞವೇದಿಕೆಗಳು ನಾಶವಾಗುವವು. ನಿಮ್ಮ ಧೂಪವೇದಿಕೆಗಳು ಕೆಡವಲ್ಪಡುವವು. ನಿಮ್ಮ ಹೆಣಗಳನ್ನು ನಿಮ್ಮ ಹೊಲಸು ವಿಗ್ರಹಗಳ ಮುಂದೆ ಬಿಸಾಡುವೆನು.
5 ಇಸ್ರೇಲ್ ಜನರ ಸತ್ತ ಹೆಣಗಳನ್ನು ಅವರ ಹೊಲಸು ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಎಲುಬುಗಳನ್ನು ನಿಮ್ಮ ಯಜ್ಞವೇದಿಗಳ ಸುತ್ತಲೂ ಹರಡುವೆನು.
6 ನಿಮ್ಮ ಜನರು ವಾಸಮಾಡುವಲ್ಲೆಲ್ಲಾ ಕೆಟ್ಟಸಂಗತಿಗಳು ನಡೆಯುವವು; ಪಟ್ಟಣಗಳು ಕಲ್ಲಿನ ರಾಶಿಗಳಾಗುವವು; ಪೂಜಾಸ್ಥಳಗಳು ನಾಶಮಾಡಲ್ಪಡುವವು. ನಿಮ್ಮ ಯಜ್ಞವೇದಿಕೆಗಳು ಕೆಡವಲ್ಪಟ್ಟು ಹಾಳಾಗಿಹೋಗುವವು; ನಿಮ್ಮ ವಿಗ್ರಹಗಳು ಮುರಿಯಲ್ಪಟ್ಟು ನಾಶವಾಗುವವು. ಜನರು ಅವುಗಳನ್ನು ಇನ್ನು ಎಂದಿಗೂ ಪೂಜಿಸರು. ನಿಮ್ಮ ಧೂಪವೇದಿಕೆಗಳು ಕತ್ತರಿಸಲ್ಪಡುವವು. ನೀವು ಮಾಡಿಕೊಂಡ ವಿಗ್ರಹಗಳು ಅಳಿದುಹೋಗುವವು.
7 ಜನರು ನಿಮ್ಮ ಮಧ್ಯದಲ್ಲಿ ಕೊಲ್ಲಲ್ಪಟ್ಟು ಬೀಳುವರು. ಆಗ ನೀನು, ನಾನು ಯೆಹೋವನೆಂದು ತಿಳಿಯುವಿ.’ ”
8 ದೇವರು ಹೇಳಿದ್ದೇನೆಂದರೆ: “ಆದರೆ ನಾನು ನಿಮ್ಮ ಜನರಲ್ಲಿ ಕೆಲವರನ್ನು ಉಳಿದುಕೊಳ್ಳುವಂತೆ ಮಾಡುವೆನು. ನೀವು ಬೇರೆ ದೇಶಗಳಲ್ಲಿ ಚದರಿಹೋಗಿರುವಾಗ ಜನಾಂಗಗಳ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಕೊಲ್ಲಲ್ಪಡುವುದಿಲ್ಲ.
9 ಆಗ ಉಳಿದವರು ಸೆರೆಹಿಡಿಯಲ್ಪಡುವರು. ಅವರು ಪರದೇಶಕ್ಕೆ ಒಯ್ಯಲ್ಪಟ್ಟು ಅಲ್ಲಿ ವಾಸಿಸುವರು. ಅಲ್ಲಿ ಅಳಿದುಳಿದ ಜನರು ನನ್ನನ್ನು ಜ್ಞಾಪಿಸಿಕೊಳ್ಳುವರು ಮತ್ತು ಅವರ ಅಪನಂಬಿಗಸ್ತಿಕೆಯ ಹೃದಯವನ್ನು ನಾನು ಜಜ್ಜಿದೆನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ತಮ್ಮನ್ನು ತಾವೇ ದೆಬಷೀಸುವರು. ಹಿಂದಿನ ಕಾಲದಲ್ಲಿ ಅವರು ನನ್ನಿದ ದೂರವಾಗಿ ನನ್ನನ್ನು ತ್ಯಜಿಸಿದರು. ತಮ್ಮ ಹೊಲಸು ವಿಗ್ರಹಗಳ ಹಿಂದೆ ಹೋದರು. ಗಂಡನನ್ನು ಬಿಟ್ಟು ಬೇರೆ ಪುರುಷನ ಸಂಗಡ ಓಡುವ ಸ್ತ್ರೀಯಂತೆ ಅವರಿದ್ದರು. ಅವರು ಇನ್ನೂ ಅನೇಕ ಅಸಹ್ಯಕರವಾದ ಕಾರ್ಯಗಳನ್ನು ಮಾಡಿದರು.
10 ನಾನೇ ಯೆಹೋವನೆಂದು ಅವರಿಗೆ ತಿಳಿಯುವುದು. ಈ ಆಪತ್ತನ್ನು ಬರಮಾಡುವೆನು ಎಂದು ನಾನು ಹೇಳಿದ್ದಕ್ಕೆ ಸರಿಯಾದ ಕಾರಣವಿತ್ತೆಂದು ಅವರು ಗ್ರಹಿಸಿಕೊಳ್ಳುವರು.”
11 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಚಪ್ಪಾಳೆ ತಟ್ಟು, ನಿನ್ನ ಕಾಲುಗಳನ್ನು ನೆಲಕ್ಕೆ ಒದ್ದು, ‘ಅಯ್ಯೋ, ಬೇಡ!’ ಎಂದು ಹೇಳು. ಯಾಕೆಂದರೆ ಇಸ್ರೇಲ್ ಜನರು ಎಲ್ಲಾ ಅಸಹ್ಯಕರವಾದ ಮತ್ತು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಅವರು ಯುದ್ಧದಿಂದಲೂ ಕ್ಷಾಮದಿಂದಲೂ ಭಯಂಕರವಾದ ಕಾಯಿಲೆಗಳಿಂದಲೂ ಸಾಯುವರು.
12 ದೂರದಲ್ಲಿರುವ ಜನರು ರೋಗಗಳಿಂದ ಸಾಯುವರು. ಹತ್ತಿರದಲ್ಲಿರುವವರು ಕತ್ತಿಯಿಂದ ಸಾಯುವರು. ತಪ್ಪಿಸಿಕೊಂಡವರೂ ಉಳಿಸಲ್ಪಟ್ಟವರೂ ಹಸಿವೆಯಿಂದ ಸಾಯುವರು. ಆಗಲೇ ನನ್ನ ಕೋಪವು ಶಮನವಾಗುವದು.
13 ಆಗಲೇ ನಾನು ಯೆಹೋವನೆಂದು ನೀವು ಅರಿಯುವಿರಿ. ಅವರ ದೇಶದಲ್ಲಿರುವವರ ಹೆಣಗಳು ಅವರ ಹೊಲಸು ವಿಗ್ರಹಗಳ ಸುತ್ತಲೂ ಯಜ್ಞವೇದಿಗಳ ಸುತ್ತಲೂ ಎತ್ತರವಾದ ಸ್ಥಳಗಳ ಮೇಲೆಯೂ ಬೆಟ್ಟಗಳಲ್ಲಿಯೂ ಮತ್ತು ಪ್ರತಿಯೊಂದು ಹಸಿರು ಮರದ ಕೆಳಗೂ ಬೀಳುವಾಗ ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು. ಅವರು ಈ ಎಲ್ಲಾ ಸ್ಥಳಗಳಲ್ಲಿ ತಮ್ಮ ಎಲ್ಲಾ ಹೊಲಸು ವಿಗ್ರಹಗಳಿಗೆ ಪರಿಮಳಭರಿತವಾದ ಯಜ್ಞಗಳನ್ನು ಅರ್ಪಿಸಿದರು.
14 ನಾನು ಅವರ ಮೇಲೆ ನನ್ನ ಕೈಯೆತ್ತಿ ಅವರನ್ನು ದಂಡಿಸುವೆನು ಮತ್ತು ಮರುಭೂಮಿಯಿಂದ ದಿಬ್ಲದವರೆಗೆ ಅವರು ಯಾವುದೇ ದೇಶದಲ್ಲಿ ವಾಸವಾಗಿದ್ದರೂ ನಾಶಮಾಡುವೆನು. ಆಗ ನಾನೇ ಯೆಹೋವನೆಂಬುದು ಅವರಿಗೆ ತಿಳಿಯುವುದು.”