9
ದೇವರ ಸಂದೇಶಕನು ಜೆರುಸಲೇಮ್‌ನ್ನು ದಂಡಿಸಿದ್ದು
ಆಮೇಲೆ ದೇವರು ಗಟ್ಟಿಯಾದ ಧ್ವನಿಯಿಂದ ಕರೆಯುವುದು ನನಗೆ ಕೇಳಿಸಿತು: “ಪಟ್ಟಣವನ್ನು ದಂಡಿಸಲು ನೇಮಕಗೊಂಡಿರುವವರೇ, ಇಲ್ಲಿಗೆ ಬನ್ನಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಾಶದ ಆಯುಧವನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಬನ್ನಿ.” ಆಗ ಆರು ಮಂದಿ ಪುರುಷರು ಉತ್ತರದಿಕ್ಕಿನಲ್ಲಿದ್ದ ಮೇಲಿನ ದ್ವಾರದ ಮಾರ್ಗದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಪ್ರತಿಯೊಬ್ಬನ ಕೈಯಲ್ಲಿ ಮಾರಕಾಸ್ತ್ರವಿತ್ತು. ಅವರಲ್ಲೊಬ್ಬನು ನಾರುಮಡಿಯನ್ನು ಧರಿಸಿದ್ದನು. ಅವನ ಸೊಂಟದಲ್ಲಿ ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವಿತ್ತು. ಅವರು ಆಲಯದೊಳಗಿದ್ದ ತಾಮ್ರದ ವೇದಿಕೆಯ ಬಳಿ ಹೋಗಿ ನಿಂತುಕೊಂಡರು. ಆಗ ಇಸ್ರೇಲರ ದೇವರ ಮಹಿಮೆಯು ತಾನು ಆಸನಾರೂಢನಾಗಿದ್ದ ಕೆರೂಬಿದೂತರ ಮೇಲಿನಿಂದ ಏರಿ ದೇವಾಲಯದ ಪ್ರವೇಶ ಸ್ಥಳಕ್ಕೆ ಹೋಯಿತು. ಆ ಮಹಿಮೆಯು ನಾರುಮಡಿಯನ್ನು ಧರಿಸಿದ್ದ, ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಹೊಂದಿದ್ದ ಪುರುಷನನ್ನು ಕರೆಯಿತು.
ಆಗ ಯೆಹೋವನು ಅವನಿಗೆ, “ಜೆರುಸಲೇಮ್ ನಗರದಲ್ಲೆಲ್ಲಾ ತಿರುಗಾಡು. ಜೆರುಸಲೇಮಿನಲ್ಲಿ ನಡೆಯುತ್ತಿರುವ ಅಸಹ್ಯವಾದ ದುಷ್ಕೃತ್ಯಗಳ ಬಗ್ಗೆ ನರಳಾಡುತ್ತಿರುವವರ ಮತ್ತು ನಿಟ್ಟುಸಿರುಬಿಡುತ್ತಿರುವವರ ಹಣೆಯ ಮೇಲ್ಗಡೆ ಒಂದು ಗುರುತನ್ನಿಡು” ಎಂದು ಹೇಳಿದನು.
5-6 ಬಳಿಕ ದೇವರು ಅಲ್ಲಿದ್ದ ಉಳಿದವರಿಗೆ, “ಮೊದಲನೆಯವನನ್ನು ಹಿಂಬಾಲಿಸಿರಿ. ಹಣೆಗಳ ಮೇಲೆ ಗುರುತಿಲ್ಲದ ಜನರನ್ನು ಕೊಂದು ನಾಶಪಡಿಸಿರಿ. ಯಾವ ಮರುಕವನ್ನಾಗಲಿ ಕನಿಕರವನ್ನಾಗಲಿ ತೋರದೆ ವೃದ್ಧರನ್ನೂ ಯೌವನಸ್ಥರನ್ನೂ ಯುವತಿಯರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಕೊಲ್ಲಿರಿ. ಆದರೆ ಹಣೆಯ ಮೇಲೆ ಗುರುತು ಹೊಂದಿರುವ ಯಾರನ್ನೂ ಮುಟ್ಟಬೇಡಿ. ಇದನ್ನು ನನ್ನ ಆಲಯದಿಂದಲೇ ಆರಂಭಿಸಿ” ಎಂದು ಹೇಳಿದನು. ಆದ್ದರಿಂದ ಅವರು ಆಲಯದ ಮುಂದೆ ಇದ್ದ ಹಿರಿಯರನ್ನು ಕೊಲ್ಲುವುದರ ಮೂಲಕ ಈ ಕೆಲಸವನ್ನು ಆರಂಭಿಸಿದರು.
ದೇವರು ಅವರಿಗೆ ಹೇಳಿದ್ದೇನೆಂದರೆ, “ಈ ಆಲಯವನ್ನು ಹೊಲೆ ಮಾಡಿರಿ. ಆಲಯದ ಅಂಗಳವನ್ನು ಹೆಣಗಳಿಂದ ತುಂಬಿಸಿರಿ. ಈಗ ಹೊರಡಿ.” ಅವರು ಹೊರಟುಹೋಗಿ ನಗರದ ಜನರನ್ನು ಕೊಂದರು.
ಅವರು ಜನರನ್ನು ಕೊಲ್ಲಲು ಹೊರಟಾಗ ನಾನೊಬ್ಬನೇ ಅಲ್ಲಿದ್ದೆನು. ನಾನು ಬಾಗಿ ನಮಸ್ಕರಿಸಿ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನೀನು ಜೆರುಸಲೇಮಿನ ಮೇಲೆ ನಿನ್ನ ಕೋಪವನ್ನು ಪ್ರದರ್ಶಿಸುವಾಗ ಉಳಿದ ಇಸ್ರೇಲರನ್ನು ನೀನು ನಿರ್ಮೂಲ ಮಾಡುವೆ!” ಎಂದು ಹೇಳಿದೆನು.
ಅದಕ್ಕೆ ದೇವರು, “ಇಸ್ರೇಲ್ ಮತ್ತು ಯೆಹೂದ ಜನರ ದೋಷವು ಬಹಳ ಹೆಚ್ಚಾಗಿದೆ. ಈ ದೇಶದಲ್ಲಿ ಎಲ್ಲೆಲ್ಲಿಯೂ ಕೊಲೆಗಳು ನಡೆಯುತ್ತಿವೆ. ಈ ನಗರವು ಅಪರಾಧಗಳಿಂದ ತುಂಬಿಹೋಗಿದೆ. ಯಾಕೆಂದರೆ ಜನರು ಹೀಗೆಂದುಕೊಳ್ಳುತ್ತಿದ್ದಾರೆ, ‘ಯೆಹೋವನು ಈ ದೇಶವನ್ನು ಬಿಟ್ಟುಹೋಗಿದ್ದಾನೆ. ನಾವು ಮಾಡುತ್ತಿರುವಂಥದ್ದನ್ನು ಅವನು ನೋಡುವುದಿಲ್ಲ.’ 10 ಅವರಿಗೆ ನಾನು ಕನಿಕರ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದಿಲ್ಲ. ಅವರು ತಾವೇ ಇದನ್ನು ತಮ್ಮ ಮೇಲೆ ಬರಮಾಡಿಕೊಂಡರು. ಅವರು ಹೊಂದಲು ಯೋಗ್ಯವಾದ ಶಿಕ್ಷೆಯನ್ನೆ ನಾನು ಕೊಡುತ್ತಿರುವುದು.”
11 ಆಗ ನಾರುಬಟ್ಟೆಯನ್ನು ಧರಿಸಿಕೊಂಡು ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದವನು, “ನೀನು ಆಜ್ಞಾಪಿಸಿದ ಮೇರೆಗೆ ನಾನು ಮಾಡಿದೆ” ಅಂದನು.