6
ಮೊರ್ದೆಕೈಯನ್ನು ಗೌರವಿಸಿದ್ದು
1 ಆ ರಾತ್ರಿ ಅರಸನಿಗೆ ನಿದ್ರಿಸಲಾಗಲಿಲ್ಲ. ಒಬ್ಬ ಸೇವಕನನ್ನು ಕರೆದು ರಾಜಕಾಲವೃತ್ತಾಂತ ಪುಸ್ತಕವನ್ನು ತರಹೇಳಿ ಅವನಿಂದ ಅದನ್ನು ಓದಿಸಿದನು. (ಈ ಪುಸ್ತಕದಲ್ಲಿ ಅರಸರ ರಾಜ್ಯ ಆಳ್ವಿಕೆಯಲ್ಲಿ ನಡೆದ ಘಟನೆಗಳು ಲಿಖಿತವಾಗಿರುತ್ತದೆ.)
2 ಆ ಸೇವಕನು ರಾಜನಿಗೆ ಪುಸ್ತಕದಿಂದ ಓದುತ್ತಾ ಹೋದನು. ರಾಜನನ್ನು ಕೊಲ್ಲುವ ಒಳಸಂಚಿನ ವಿಚಾರವನ್ನೂ ಕೇಳಿದನು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ರಾಜನನ್ನು ಕೊಲ್ಲಲು ಒಳಸಂಚು ಮಾಡಿದಾಗ ಮೊರ್ದೆಕೈಗೆ ಅದು ತಿಳಿದುಬಂತು. ಕೂಡಲೇ ಅವನು ಬೇರೆಯವರ ಮುಖಾಂತರ ಅರಸನಿಗೆ ತಿಳಿಸಿದನು.
3 ಇದನ್ನು ಕೇಳುತ್ತಿದ್ದ ಅರಸನು, “ಮೊರ್ದೆಕೈ ಹೀಗೆ ಮಾಡಿದುದಕ್ಕೆ ಯಾವ ಗೌರವ ಮತ್ತು ಬಹುಮಾನಗಳು ಕೊಡಲ್ಪಟ್ಟವು?” ಎಂದು ವಿಚಾರಿಸಿದನು. “ಮೊರ್ದೆಕೈಗೆ ಏನೂ ಕೊಡಲಿಲ್ಲ” ಎಂದು ಸೇವಕರು ಉತ್ತರಿಸಿದರು.
4 ಅದೇ ಸಮಯದಲ್ಲಿ ಹಾಮಾನನು ಹೊರಾಂಗಣದಲ್ಲಿದ್ದನು. ಅವನು ತಾನು ತಯಾರಿಸಿಟ್ಟಿರುವ ಗಲ್ಲುಕಂಬದಲ್ಲಿ ಮೊರ್ದೆಕೈಯನ್ನು ಗಲ್ಲಿಗೆ ಹಾಕಲು ಅರಸನಿಂದ ಅಪ್ಪಣೆ ಪಡೆದುಕೊಳ್ಳಲು ಬಂದಿದ್ದನು. ಅರಸನು ಹೊರಾಂಗಣದಲ್ಲಿ “ಈಗ ತಾನೇ ಯಾರು ಬಂದರು?” ಎಂದು ಕೇಳಿದಾಗ
5 ಸೇವಕರು, “ಹಾಮಾನನು ನಿಂತಿದ್ದಾನೆ!” ಎಂದು ಹೇಳಿದರು.
“ಸರಿ, ಒಳಕ್ಕೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
6 ಹಾಮಾನನು ಒಳಗೆ ಪ್ರವೇಶಮಾಡುವಾಗ ಅರಸನು, “ಹಾಮಾನನೇ, ಅರಸನು ಒಬ್ಬನಿಗೆ ಗೌರವಿಸಬೇಕೆಂದು ಇಚ್ಫಿಸುವಾಗ ಯಾವ ರೀತಿಯಲ್ಲಿ ಅದನ್ನು ಮಾಡಬೇಕು?” ಎಂದು ಕೇಳಿದನು.
ಆಗ ಹಾಮಾನನು, “ಅರಸನು ಗೌರವಿಸುವವನು ನನಗಿಂತ ಹೆಚ್ಚಿನವನು ಯಾರಿರಬಹುದು? ಅವನು ನನ್ನ ವಿಚಾರವಾಗಿಯೇ ನೆನಸುತ್ತಿರಬಹುದು” ಎಂದು ತನ್ನ ಮನಸ್ಸಿನಲ್ಲಿಯೇ ನೆನೆಸಿಕೊಂಡು
7 ಅರಸನಿಗೆ, “ನೀನು ಗೌರವಿಸಬೇಕಾದ ಮನುಷ್ಯನಿಗೆ ಈ ರೀತಿಯಾಗಿ ಮಾಡಬೇಕು.
8 ಅರಸನು ಧರಿಸಿದ ರಾಜ ವಸ್ತ್ರಗಳನ್ನು ಸೇವಕರ ಮೂಲಕ ತರಿಸು. ಅಲ್ಲದೆ ರಾಜನು ಸವಾರಿ ಮಾಡಿರುವ ಕುದುರೆಯನ್ನು ತರಿಸು. ಸೇವಕರು ಅದರ ಹಣೆಯ ಮೇಲೆ ರಾಜನ ವಿಶೇಷ ಗುರುತನ್ನು ಇಡಲಿ.
9 ಅನಂತರ ಅರಸನ ಮುಖ್ಯ ಅಧಿಕಾರಿಗಳಲ್ಲೊಬ್ಬನನ್ನು ರಾಜವಸ್ತ್ರಗಳಿಗೂ ಕುದುರೆಗೂ ಜವಾಬ್ದಾರನನ್ನಾಗಿ ನೇಮಿಸಿರಿ. ರಾಜನು ಯಾವ ವ್ಯಕ್ತಿಯನ್ನು ಗೌರವಿಸಬೇಕೆಂದಿದ್ದಾನೋ ಆ ವ್ಯಕ್ತಿಯ ಮೇಲೆ ಅವನು ರಾಜವಸ್ತ್ರವನ್ನು ಹಾಕಲಿ. ಆಮೇಲೆ ಅವನನ್ನು ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ‘ರಾಜನು ಗೌರವಿಸುವ ಮನುಷ್ಯನಿಗೆ ಹೀಗೆಯೇ ಆಗುವುದು’ ಎಂದು ಪ್ರಕಟಿಸುತ್ತಾ ಹೋಗಲಿ” ಎಂದು ಹೇಳಿದನು.
10 “ಈಗಲೇ,” ಅರಸನು ಹಾಮಾನನಿಗೆ ಆಜ್ಞೆಕೊಟ್ಟು “ಈಗಲೇ ಹೋಗಿ ರಾಜವಸ್ತ್ರಗಳನ್ನೂ ರಾಜನ ಕುದುರೆಯನ್ನೂ ಕೊಂಡುಹೋಗಿ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ ಪ್ರಕಾರವೆ ಮಾಡು. ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಂಡಿರುತ್ತಾನೆ. ನಿನ್ನ ಸಲಹೆಯಂತೆಯೇ ಎಲ್ಲವನ್ನೂ ಮಾಡು” ಅಂದನು.
11 ಹಾಮಾನನು ಉಡುಪನ್ನೂ ಕುದುರೆಯನ್ನೂ ತೆಗೆದುಕೊಂಡು ಮೊರ್ದೆಕೈಗೆ ತೊಡಿಸಿ, ಕುದುರೆಯ ಮೇಲೆ ಕುಳ್ಳಿರಿಸಿ ನಗರದ ಮುಖ್ಯರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿರುವಾಗ, “ಅರಸನು ಸನ್ಮಾನಿಸುವ ಮನುಷ್ಯನಿಗೆ ಹೀಗೆಯೇ ಆಗುವದು” ಎಂದು ಪ್ರಕಟಿಸಿದನು.
12 ಇದಾದ ಬಳಿಕ ಮೊರ್ದೆಕೈ ಹೆಬ್ಬಾಗಿಲ ಬಳಿಯಲ್ಲಿದ್ದ ತನ್ನ ಸ್ಥಾನಕ್ಕೆ ಹೋದನು. ಆದರೆ ಹಮಾನನು ತನ್ನ ಮನೆಗೆ ಅವಸರವಸರವಾಗಿ ನಡೆದನು. ನಾಚಿಕೆಯಿಂದಲೂ ಸಿಟ್ಟಿನಿಂದಲೂ ತನ್ನ ಮುಖವನ್ನು ಮುಚ್ಚಿಕೊಂಡಿದ್ದನು.
13 ತನ್ನ ಹೆಂಡತಿ ಜೆರೆಷಳಿಗೂ ಮತ್ತು ತನಗೆ ಸಲಹೆ ಕೊಟ್ಟಿದ್ದ ಮಿತ್ರವೃಂದದವರಿಗೂ ನಡೆದ ವಿಷಯ ತಿಳಿಸಿದನು. ಆಗ ಅವರು ತಿಳಿಸಿದ್ದೇನೆಂದರೆ: “ಮೊರ್ದೆಕೈಯು ಯೆಹೂದ್ಯನಾಗಿದ್ದರೆ ನೀನು ಜಯಗಳಿಸುವುದಿಲ್ಲ. ಈಗಲೇ ನೀನು ಸೋಲುತ್ತಿರುವಿ. ನಿಜವಾಗಿಯೂ ನೀನೇ ನಾಶವಾಗುವಿ.”
14 ಅವರು ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಅವನನ್ನು ರಾಣಿ ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಕರೆದುಕೊಂಡು ಹೋಗಲು ಬಂದರು.