11
ಚೊಚ್ಚಲು ಮಕ್ಕಳ ಮರಣ
ಬಳಿಕ ಯೆಹೋವನು ಮೋಶೆಗೆ, “ನಾನು ಫರೋಹನಿಗೂ ಈಜಿಪ್ಟಿಗೂ ಮತ್ತೊಂದು ವಿಪತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಜಿಪ್ಟಿನಿಂದ ಕಳುಹಿಸುವನು; ನಿಮ್ಮನ್ನು ಬಲವಂತದಿಂದ ಕಳುಹಿಸಿಬಿಡುವನು. ನೀನು ಇಸ್ರೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೆರೆಯವರಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು.’ ಈಜಿಪ್ಟಿನವರು ನಿಮಗೆ ದಯೆತೋರುವಂತೆ ಯೆಹೋವನು ಅವರನ್ನು ಪ್ರೇರೇಪಿಸುವನು. ಈಜಿಪ್ಟಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.
ಮೋಶೆಯು ಜನರಿಗೆ, “ಯೆಹೋವನು ಹೀಗೆನ್ನುತ್ತಾನೆ: ‘ಇಂದು ಮಧ್ಯರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗುವೆನು. ಈಜಿಪ್ಟಿನ ಚೊಚ್ಚಲು ಮಕ್ಕಳೆಲ್ಲರೂ ಅಂದರೆ ಫರೋಹನ ಚೊಚ್ಚಲು ಮಗನಿಂದಿಡಿದು ಧಾನ್ಯವನ್ನು ಬೀಸುವ ಸೇವಕಿಯ ಚೊಚ್ಚಲು ಮಗನವರೆಗೂ ಇರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಇದಲ್ಲದೆ ಚೊಚ್ಚಲು ಪಶುಗಳೂ ಸಾಯುತ್ತವೆ. ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ. ಆದರೆ ಇಸ್ರೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುವುದಿಲ್ಲ. ಇಸ್ರೇಲಿನ ಜನರಿಗಾಗಲಿ ಪಶುಗಳಿಗಾಗಲಿ ಕೇಡಾಗುವುದಿಲ್ಲ. ಇಸ್ರೇಲರಿಗೂ ಮತ್ತು ಈಜಿಪ್ಟಿನವರಿಗೂ ನಾನು ವ್ಯತ್ಯಾಸ ಮಾಡಿದ್ದೇನೆಂದು ಆಗ ನೀವು ತಿಳಿದುಕೊಳ್ಳುವಿರಿ. ಆಗ ನಿಮ್ಮ ಈ ಗುಲಾಮರೆಲ್ಲರೂ (ಈಜಿಪ್ಟಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸುವರು.’ ಅವರು, ‘ಹೊರಟುಹೋಗಿ, ನಿಮ್ಮ ಜನರೆಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.
ಬಳಿಕ ಯೆಹೋವನು ಮೋಶೆಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ನನ್ನ ಮಹಾಶಕ್ತಿಯನ್ನು ಈಜಿಪ್ಟಿನಲ್ಲಿ ತೋರಿಸಬೇಕಾಗಿದೆ” ಅಂದನು. 10 ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ; ಆದ್ದರಿಂದ ಮೋಶೆ ಆರೋನರು ಈ ಅದ್ಭುತಕಾರ್ಯಗಳನ್ನೆಲ್ಲಾ ಮಾಡಿದರು.