39
ಯಾಜಕರ ವಿಶೇಷ ಬಟ್ಟೆಗಳು
1 ಯಾಜಕರು ಯೆಹೋವನ ಪವಿತ್ರಸ್ಥಳದಲ್ಲಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.
ಏಫೋದು
2 ಅವರು ಏಫೋದನ್ನು ಚಿನ್ನದ ದಾರದಿಂದಲೂ ಶ್ರೇಷ್ಠ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಿದರು.
3 (ಅವರು ಚಿನ್ನವನ್ನು ಸುತ್ತಿಗೆಯಿಂದ ಹೊಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪುದಾರಗಳಿಗೂ ಮತ್ತು ಶ್ರೇಷ್ಠ ನಾರುಬಟ್ಟೆಗೂ ಹೆಣೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.)
4 ಅವರು ಏಫೋದಿನ ಭುಜದ ಪಟ್ಟಿಗಳನ್ನು ಮಾಡಿದರು. ಅವರು ಈ ಭುಜದ ಪಟ್ಟಿಗಳನ್ನು ಏಫೋದಿನ ಎರಡು ಮೂಲೆಗಳಿಗೆ ಕಟ್ಟಿದರು.
5 ಅವರು ನಡುಕಟ್ಟನ್ನು ಹೆಣೆದು ಏಫೋದಿಗೆ ಬಿಗಿಯಾಗಿ ಕಟ್ಟಿದರು. ಏಫೋದನ್ನು ಮಾಡಿದಂತೆಯೇ ಇದನ್ನು ಮಾಡಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡುವುದಕ್ಕೆ ಚಿನ್ನದ ದಾರ, ಶ್ರೇಷ್ಠ ನಾರುಬಟ್ಟೆಯನ್ನು ಮತ್ತು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು.
6 ಕೆಲಸಗಾರರು ಗೋಮೇಧಕ ರತ್ನಗಳನ್ನು ಏಫೋದಿನೊಳಗೆ ಚಿನ್ನದ ಕುಂದಣದಲ್ಲಿ ಇಟ್ಟರು. ಈ ರತ್ನಗಳಲ್ಲಿ ಇಸ್ರೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದರು.
7 ಬಳಿಕ ಅವರು ಈ ರತ್ನಗಳನ್ನು ಏಫೋದಿನ ಭುಜದ ಪಟ್ಟಿಯಲ್ಲಿ ಇಟ್ಟರು. ಇಸ್ರೇಲರನ್ನು ದೇವರ ಜ್ಞಾಪಕಕ್ಕೆ ತರುವಂತೆ ಈ ರತ್ನಗಳು ಇಡಲ್ಪಟ್ಟವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಯಿತು.
ದೈವನಿರ್ಣಯದ ಪದಕ
8 ಬಳಿಕ ಅವರು ದೈವನಿರ್ಣಯ ಪದಕವನ್ನು ಮಾಡಿದರು. ಏಫೋದಿನಂತೆಯೇ ಇದು ಸಹ ಬುಟೇದಾರೀ ಕೆಲಸವಾಗಿತ್ತು. ಅದನ್ನು ಚಿನ್ನದ ದಾರಗಳಿಂದಲೂ ಶ್ರೇಷ್ಠವಾದ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಯಿತು.
9 ದೈವನಿರ್ಣಯದ ಪದಕವನ್ನು ಅರ್ಧ ಮಡಚಿ ಚಚ್ಚೌಕವಾದ ಚೀಲವನ್ನಾಗಿ ಮಾಡಲಾಗಿತ್ತು. ಅದು ಒಂಭತ್ತು ಇಂಚು ಉದ್ದ ಮತ್ತು ಒಂಭತ್ತು ಇಂಚು ಅಗಲ ಇತ್ತು.
10 ಬಳಿಕ ಕೆಲಸಗಾರರು ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ದೈವನಿರ್ಣಯದ ಪದಕದಲ್ಲಿ ಇಟ್ಟರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳು ಇದ್ದವು.
11 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲಪಚ್ಚೆಗಳು ಇದ್ದವು.
12 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ, ಧೂಮ್ರಮಣಿಗಳು ಇದ್ದವು.
13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಇಟ್ಟರು.
14 ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.
15 ಅವರು ದೈವನಿರ್ಣಯಪದಕಕ್ಕೆ ಅಪ್ಪಟ ಬಂಗಾರದ ಸರಪಣಿಗಳನ್ನು ಹುರಿಗಳಂತಿರುವ ಹಗ್ಗದಂತೆ ಮಾಡಿದರು.
16 ಕೆಲಸಗಾರರು ಎರಡು ಚಿನ್ನದ ಕುಂದಣಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿದರು. ಅವರು ಎರಡು ಚಿನ್ನದ ಉಂಗುರಗಳನ್ನು ದೈವನಿರ್ಣಯಪದಕದ ಎರಡು ಕೊನೆಗಳಲ್ಲಿ ಇರಿಸಿದರು.
17 ಬಳಿಕ ಅವರು ದೈವನಿರ್ಣಯಪದಕದ ಕೊನೆಗಳಲ್ಲಿರುವ ಉಂಗುರಗಳಿಗೆ ಎರಡು ಚಿನ್ನದ ಸರಪಣಿಗಳನ್ನು ಸಿಕ್ಕಿಸಿದರು.
18 ಅವರು ಚಿನ್ನದ ಸರಪಣಿಗಳ ಇನ್ನೆರಡು ಕೊನೆಗಳನ್ನು ಎರಡು ಕುಂದಣಗಳಿಗೆ ಕಟ್ಟಿದರು. ಇದು ಅವುಗಳನ್ನು ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಮುಂಭಾಗದಲ್ಲಿ ಬಿಗಿಯಾಗಿ ಹಿಡಿದುಕೊಂಡಿತು.
19 ಬಳಿಕ ಅವರು ಇನ್ನೆರಡು ಚಿನ್ನದ ಉಂಗುರಗಳನ್ನು ಮಾಡಿ, ದೈವನಿರ್ಣಯ ಪದಕದ ಇನ್ನೆರಡು ಕೊನೆಗಳಿಗೆ ಸಿಕ್ಕಿಸಿದರು. ಅವರು ಉಂಗುರಗಳನ್ನು ಏಫೋದಿನ ಹತ್ತಿರವಿರುವ ದೈವನಿರ್ಣಯ ಪದಕದ ಒಳಗಿನ ಅಂಚಿನಲ್ಲಿ ಇರಿಸಿದರು.
20 ಅವರು ಎರಡು ಚಿನ್ನದ ಉಂಗುರಗಳನ್ನು ಏಫೋದಿನ ಮುಂಭಾಗದಲ್ಲಿ ಭುಜದ ಪಟ್ಟಿಗಳ ಕೆಳಭಾಗದಲ್ಲಿ ಇರಿಸಿದರು. ಈ ಉಂಗುರಗಳು ನಡುಕಟ್ಟಿನ ಮೇಲ್ಗಡೆಯಲ್ಲಿರುವ ಕಟ್ಟಿನ ಹತ್ತಿರ ಇದ್ದವು.
21 ಬಳಿಕ ಅವರು ನೀಲಿದಾರದಿಂದ ದೈವನಿರ್ಣಯ ಪದಕದ ಉಂಗುರಗಳನ್ನು ಏಫೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದೈವನಿರ್ಣಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.
ಯಾಜಕರಿಗೆ ಇತರ ಬಟ್ಟೆಗಳು
22 ಬಳಿಕ ಅವರು ಏಫೋದಿನೊಂದಿಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ಮಾಡಿದರು. ಅದು ನಿಪುಣನಾದ ಕೆಲಸಗಾರನಿಂದ ಹೆಣೆಯಲ್ಪಟ್ಟಿತ್ತು. ಅವರು ಅದನ್ನು ನೀಲಿ ಬಟ್ಟೆಯಿಂದ ಮಾಡಿದರು.
23 ಅವರು ನಿಲುವಂಗಿಯ ಮಧ್ಯದಲ್ಲಿ ಒಂದು ಸಂದನ್ನು ಮಾಡಿ ಆ ಸಂದಿನ ಅಂಚಿನ ಸುತ್ತಲೂ ಬಟ್ಟೆಯನ್ನಿಟ್ಟು ಹೊಲಿದರು. ಈ ಬಟ್ಟೆಯು ಸಂದು ಹರಿದು ಹೋಗದಂತೆ ಮಾಡಿತು.
24 ತರುವಾಯ ಅವರು ಬಟ್ಟೆಗೆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ಮಾಡಲು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಈ ದಾಳಿಂಬೆ ಹಣ್ಣಿನಂತಿರುವ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ತೂಗುಹಾಕಿದರು.
25 ಬಳಿಕ ಅವರು ಅಪ್ಪಟ ಬಂಗಾರದ ಗೆಜ್ಜೆಗಳನ್ನು ಮಾಡಿದರು. ಅವರು ಈ ಗೆಜ್ಜೆಗಳನ್ನು ನಿಲುವಂಗಿಯ ಕೆಳಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳ ನಡುವೆ ತೂಗು ಹಾಕಿದರು.
26 ಹೀಗೆ ನಿಲುವಂಗಿಯ ಕೆಳಅಂಚಿನ ಸುತ್ತಲೆಲ್ಲ ದಾಳಿಂಬೆ ಹಣ್ಣುಗಳೂ ಗೆಜ್ಜೆಗಳೂ ಇದ್ದವು. ಪ್ರತಿ ದಾಳಿಂಬೆ ಹಣ್ಣಿನ ನಡುವೆ ಒಂದೊಂದು ಗೆಜ್ಜೆ ಇತ್ತು. ಯಾಜಕರು ಯೆಹೋವನ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ನಿಲುವಂಗಿ ಇದಾಗಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಗಿತ್ತು.
27 ನಿಪುಣರಾದ ಕೆಲಸಗಾರರು ಆರೋನನಿಗೂ ಅವನ ಮಕ್ಕಳಿಗೂ ಅಂಗಿಗಳನ್ನು ಹೊಲಿದರು. ಈ ಅಂಗಿಗಳು ಶ್ರೇಷ್ಠವಾದ ನಾರುಬಟ್ಟೆಯಿಂದ ಮಾಡಲ್ಪಟ್ಟವು.
28 ಶ್ರೇಷ್ಠವಾದ ನಾರುಬಟ್ಟೆಯಿಂದ ಕೆಲಸಗಾರರು ಒಂದು ಮುಂಡಾಸನ್ನು ಮಾಡಿದರು. ಅವರು ತಲೆಪಟ್ಟಿಗಳನ್ನು ಮತ್ತು ಒಳಅಂಗಿಗಳನ್ನು ಮಾಡುವುದಕ್ಕೆ ಶ್ರೇಷ್ಠವಾದ ನಾರುಬಟ್ಟೆಯನ್ನು ಉಪಯೋಗಿಸಿದರು.
29 ಬಳಿಕ ಅವರು ಶ್ರೇಷ್ಠವಾದ ನಾರುಬಟ್ಟೆಯಿಂದಲೂ ಮತ್ತು ನೀಲಿ, ನೇರಳೆ, ಕೆಂಪುದಾರಗಳಿಂದಲೂ ನಡುಕಟ್ಟನ್ನು ಮಾಡಿದರು. ಈ ಬಟ್ಟೆಗೆ ಕಸೂತಿ ಹಾಕಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಈ ವಸ್ತುಗಳನ್ನು ಮಾಡಲಾಯಿತು.
30 ತರುವಾಯ ಅವರು ಪವಿತ್ರಕಿರೀಟವನ್ನೂ ಅಪ್ಪಟ ಬಂಗಾರದಿಂದ ಮಾಡಿದರು. ಅವರು ಬಂಗಾರದಲ್ಲಿ ಅಕ್ಷರಗಳನ್ನು ಕೆತ್ತಿದರು. ಅವರು, “ಯೆಹೋವನಿಗೆ ಪವಿತ್ರವಾದದ್ದು” ಎಂಬ ಮಾತುಗಳನ್ನು ಬರೆದರು.
31 ಅವರು ಚಿನ್ನದ ಪಟ್ಟಿಯನ್ನು ದಾರಕ್ಕೆ ಬಿಗಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಈ ನೀಲಿ ದಾರವನ್ನು ಮುಂಡಾಸಕ್ಕೆ ಕಟ್ಟಿದರು.
ಮೋಶೆಯು ಪವಿತ್ರಗುಡಾರವನ್ನು ಪರೀಕ್ಷಿಸಿದ್ದು
32 ಹೀಗೆ ಪವಿತ್ರಗುಡಾರವಾದ ದೇವದರ್ಶನ ಗುಡಾರದ ಕೆಲಸವೆಲ್ಲವೂ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಪ್ರತಿಯೊಂದನ್ನೂ ಮಾಡಿದರು.
33 ಬಳಿಕ ಅವರು ಪವಿತ್ರಗುಡಾರವನ್ನು ಮೋಶೆಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೆಲ್ಲಾ ಅವನಿಗೆ ತೋರಿಸಿದರು. ಬಳೆಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳನ್ನೆಲ್ಲಾ ಅವನಿಗೆ ತೋರಿಸಿದರು.
34 ಅವರು ಕೆಂಪುಬಣ್ಣದ ಕುರಿತೊಗಲಿನಿಂದ ಮಾಡಿದ ಗುಡಾರದ ಮೇಲ್ಹೊದಿಕೆಯನ್ನು ಅವನಿಗೆ ತೋರಿಸಿದರು; ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನೂ ಅವನಿಗೆ ತೋರಿಸಿದರು. ಮಹಾಪವಿತ್ರಸ್ಥಳವನ್ನು ಮುಚ್ಚುವ ಪರದೆಯನ್ನೂ ಅವನಿಗೆ ತೋರಿಸಿದರು.
35 ಅವರು ಮೋಶೆಗೆ ಒಡಂಬಡಿಕೆಯ ಪೆಟ್ಟಿಗೆಯನ್ನೂ ಆ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಉಪಯೋಗಿಸುವ ಕೋಲುಗಳನ್ನೂ ಪೆಟ್ಟಿಗೆಯ ಕೃಪಾಸನವನ್ನೂ ಮೋಶೆಗೆ ತೋರಿಸಿದರು.
36 ಅವರು ಮೇಜನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ನೈವೇದ್ಯದ ರೊಟ್ಟಿಯನ್ನೂ ಅವನಿಗೆ ತೋರಿಸಿದರು.
37 ಅವರು ಅಪ್ಪಟ ಬಂಗಾರದ ದೀಪಸ್ತಂಭವನ್ನೂ ಅದರಲ್ಲಿರುವ ಹಣತೆಗಳನ್ನೂ ಎಣ್ಣೆಯನ್ನೂ ಹಣತೆಗಳೊಂದಿಗೆ ಉಪಯೋಗಿಸುವ ಇತರ ವಸ್ತುಗಳನ್ನೂ ತೋರಿಸಿದರು.
38 ಅವರು ಚಿನ್ನದ ವೇದಿಕೆಯನ್ನೂ ಅಭಿಷೇಕತೈಲವನ್ನೂ ಪರಿಮಳಧೂಪವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಶೆಗೆ ತೋರಿಸಿದರು.
39 ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನು ಹೊರುವುದಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪರಕಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇಕಲ್ಲನ್ನೂ ಮೋಶೆಗೆ ತೋರಿಸಿದರು.
40 ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ಪವಿತ್ರಗುಡಾರದ ಎಲ್ಲಾ ವಸ್ತುಗಳನ್ನೂ ಮೋಶೆಗೆ ತೋರಿಸಿದರು.
41 ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.
42 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಇವುಗಳನ್ನೆಲ್ಲಾ ಮಾಡಿದರು.
43 ಮೋಶೆಯು ಎಲ್ಲಾ ಕೆಲಸವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಎಲ್ಲವೂ ಮಾಡಲ್ಪಟ್ಟಿದ್ದರಿಂದ ಮೋಶೆ ಅವರನ್ನು ಆಶೀರ್ವದಿಸಿದನು.