25
ಅಬ್ರಹಾಮನ ಕುಟುಂಬ
ಅಬ್ರಹಾಮನು ಮತ್ತೆ ಮದುವೆಯಾದನು. ಅವನ ಹೊಸ ಹೆಂಡತಿಯ ಹೆಸರು ಕೆಟೂರ. ಆಕೆ ಅವನಿಗೆ; ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬವರನ್ನು ಹೆತ್ತಳು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರ ತಂದೆ. ದೆದಾನನ ಸಂತತಿಯವರು: ಅಶ್ಶೂರ್ಯರು ಲೆಟೂಶ್ಯರು ಮತ್ತು ಲೆಯುಮ್ಯರು. ಮಿದ್ಯಾನನ ಗಂಡುಮಕ್ಕಳು: ಗೇಫಾ, ಗೇಫೆರ್, ಹನೋಕ್, ಅಬೀದಾ ಮತ್ತು ಎಲ್ದಾಗ. ಇವರೆಲ್ಲರೂ ಕೆಟೂರಳ ಸಂತತಿಯವರು. 5-6 ಅಬ್ರಹಾಮನು ಸಾಯುವುದಕ್ಕಿಂತ ಮುಂಚೆ ತನ್ನ ದಾಸಿಯ ಗಂಡುಮಕ್ಕಳಿಗೆ ಕೆಲವು ಉಡುಗೊರೆಗಳನ್ನು ಕೊಟ್ಟನು. ಅಬ್ರಹಾಮನು ಆ ಗಂಡುಮಕ್ಕಳನ್ನು ಪೂರ್ವದ ಕಡೆಯಲ್ಲಿದ್ದ ಕೆದೆಮೆಂಬ ದೇಶಕ್ಕೆ ಕಳುಹಿಸಿ ಅವರನ್ನು ಇಸಾಕನಿಂದ ದೂರಮಾಡಿದನು; ಬಳಿಕ ತನ್ನ ಆಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು.
ಅಬ್ರಹಾಮನು ನೂರೆಪ್ಪತ್ತೈದು ವರ್ಷ ಜೀವಿಸಿದನು. ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ವೃದ್ಧನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಗಂಡುಮಕ್ಕಳಾದ ಇಸಾಕ ಮತ್ತು ಇಷ್ಮಾಯೇಲರು ಅವನನ್ನು ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಈ ಗವಿಯು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಿನಲ್ಲಿದೆ. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ. 10 ಅಬ್ರಹಾಮನು ಹಿತ್ತಿಯರಿಂದ ಕೊಂಡುಕೊಂಡ ಈ ಗವಿಯಲ್ಲೇ ಅಬ್ರಹಾಮನನ್ನು ಅವನ ಹೆಂಡತಿಯಾದ ಸಾರಳ ಜೊತೆಯಲ್ಲಿ ಸಮಾಧಿಮಾಡಲಾಯಿತು. 11 ಅಬ್ರಹಾಮನು ತೀರಿಕೊಂಡ ಮೇಲೆ, ದೇವರು ಇಸಾಕನನ್ನು ಆಶೀರ್ವದಿಸಿದನು; ಇಸಾಕನು ಬೀರ್‌ಲಹೈರೋಯಿಯಲ್ಲಿ ತನ್ನ ಜೀವನವನ್ನು ಮುಂದುವರೆಸಿದನು.
12 ಇದು ಇಷ್ಮಾಯೇಲನ ವಂಶಾವಳಿ: ಇಷ್ಮಾಯೇಲನು ಅಬ್ರಹಾಮನ ಮತ್ತು ಹಾಗರಳ ಮಗನು. (ಈಜಿಪ್ಟಿನವಳಾದ ಹಾಗರಳು ಸಾರಳ ಸೇವಕಿ.) 13 ಇಷ್ಮಾಯೇಲನ ಗಂಡುಮಕ್ಕಳ ಹೆಸರುಗಳು: ಮೊದಲನೆ ಮಗನು ನೆಬಾಯೋತ್. ಆಮೇಲೆ ಹುಟ್ಟಿದವರು: ಕೇದಾರ್, ಅದ್ಬಯೇಲ್, ಮಿಬ್ಸಾಮ್, 14 ಮಿಷ್ಮಾ, ದೂಮಾ, ಮಸ್ಸಾ, 15 ಹದದ್, ತೇಮಾ, ಯಟೂರ್, ನಾಫೀಷ್ ಮತ್ತು ಕೇದ್ಮಾ. 16 ಪ್ರತಿಯೊಬ್ಬನೂ ತನ್ನದೇ ಆದ ಪಾಳೆಯವನ್ನು ಹೊಂದಿದ್ದನು. ಆ ಪಾಳೆಯಗಳೇ ಮುಂದೆ ಚಿಕ್ಕ ಪಟ್ಟಣಗಳಾದವು. ಈ ಹನ್ನೆರಡು ಮಂದಿ ಗಂಡುಮಕ್ಕಳು ತಮ್ಮ ಜನರಿಗೆ ಹನ್ನೆರಡು ಮಂದಿ ರಾಜರುಗಳಂತಿದ್ದರು. 17 ಇಷ್ಮಾಯೇಲನು ನೂರ ಮೂವತ್ತೇಳು ವರ್ಷ ಬದುಕಿದನು. ಅವನು ಸತ್ತ ನಂತರ ಅವನನ್ನು ತನ್ನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ಟರು. 18 ಇಷ್ಮಾಯೇಲನ ಸಂತತಿಯವರು ಮರುಭೂಮಿ ಪ್ರದೇಶದ ಉದ್ದಕ್ಕೂ ಪಾಳೆಯಗಳನ್ನು ಮಾಡಿಕೊಂಡಿದ್ದರು. ಈ ಪ್ರದೇಶವು ಹವೀಲ ಮತ್ತು ಈಜಿಪ್ಟಿನ ಸಮೀಪದಲ್ಲಿರುವ ಶೂರಿನಿಂದ ಆರಂಭಗೊಂಡು ಅಶ್ಶೂರದವರೆಗೂ ಇತ್ತು. ಇಷ್ಮಾಯೇಲನ ಸಂತತಿಗಳವರು ಪದೇಪದೇ ತಮ್ಮ ಸಹೋದರನ ಜನರಿಗೆ ವಿರೋಧವಾಗಿ ಆಕ್ರಮಣ ಮಾಡುತ್ತಿದ್ದರು.
ಇಸಾಕನ ಕುಟುಂಬ
19 ಇದು ಇಸಾಕನ ಚರಿತ್ರೆ. ಅಬ್ರಹಾಮನಿಗೆ ಇಸಾಕ ಎಂಬ ಹೆಸರಿನ ಮಗನಿದ್ದನು. 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ. 21 ಇಸಾಕನ ಹೆಂಡತಿ ಮಕ್ಕಳನ್ನು ಪಡೆಯಲಾಗಲಿಲ್ಲ. ಆದ್ದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಇಸಾಕನ ಪ್ರಾರ್ಥನೆಯನ್ನು ಕೇಳಿ ರೆಬೆಕ್ಕಳಿಗೆ ಗರ್ಭಧಾರಣೆಯನ್ನು ಅನುಗ್ರಹಿಸಿದನು.
22 ರೆಬೆಕ್ಕಳು ಗರ್ಭಿಣಿಯಾಗಿದ್ದಾಗ, ಅವಳ ಗರ್ಭದಲ್ಲಿದ್ದ ಕೂಸುಗಳು ಒಂದನ್ನೊಂದು ನೂಕಾಡಿದ್ದರಿಂದ ಅವಳು ಬಹಳ ತೊಂದರೆಪಡಬೇಕಾಯಿತು. ರೆಬೆಕ್ಕಳು ಯೆಹೋವನಿಗೆ ಪ್ರಾರ್ಥಿಸಿ, “ನನಗೇಕೆ ಹೀಗೆ ಆಗುತ್ತಿದೆ?” ಎಂದು ಕೇಳಿದಳು. 23 ಯೆಹೋವನು ಅವಳಿಗೆ,
 
“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ.
ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು;
ಅವರು ವಿಭಾಗವಾಗುವರು.
ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು.
ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು”
 
ಎಂದು ಹೇಳಿದನು.
24 ದಿನ ತುಂಬಿದ ಮೇಲೆ ರೆಬೆಕ್ಕಳು ಅವಳಿಜವಳಿ ಮಕ್ಕಳನ್ನು ಹೆತ್ತಳು. 25 ಮೊದಲನೆಯ ಮಗುವು ಕೆಂಪಗಿತ್ತು. ಅವನ ಚರ್ಮವು ಕೂದಲಿನ ಉಡುಪಿನಂತಿತ್ತು. ಆದ್ದರಿಂದ ಅವನಿಗೆ “ಏಸಾವ್” ಎಂದು ಹೆಸರಿಡಲಾಯಿತು. 26 ಎರಡನೆಯ ಮಗು ಹುಟ್ಟಿದಾಗ ಅದು ಏಸಾವನ ಹಿಮ್ಮಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಆದ್ದರಿಂದ ಆ ಮಗುವಿಗೆ “ಯಾಕೋಬ” ಎಂದು ಹೆಸರಿಡಲಾಯಿತು. ಯಾಕೋಬ ಮತ್ತು ಏಸಾವ ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷ ವಯಸ್ಸಾಗಿತ್ತು.
27 ಆ ಬಾಲಕರು ಬೆಳೆದು ದೊಡ್ಡವರಾದರು. ಏಸಾವನು ಚತುರ ಬೇಟೆಗಾರನಾದನು. ಹೊಲದಲ್ಲಿರುವುದು ಅವನಿಗೆ ಪ್ರಿಯವಾಗಿತ್ತು. ಆದರೆ ಯಾಕೋಬನು ಸಾಧು ಮನುಷ್ಯನಾಗಿದ್ದನು. ಅವನು ತನ್ನ ಗುಡಾರದಲ್ಲಿರುತ್ತಿದ್ದನು. 28 ಇಸಾಕನು ಏಸಾವನನ್ನು ಪ್ರೀತಿಸಿದನು. ಏಸಾವನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಅವನಿಗೆ ಇಷ್ಟವಾಗಿತ್ತು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29 ಒಂದು ಸಲ ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ ಹಸಿವೆಯಿಂದ ಆಯಾಸಗೊಂಡಿದ್ದನು ಮತ್ತು ಬಲಹೀನನಾಗಿದ್ದನು. ಯಾಕೋಬನು ಅಲಸಂಧಿ ಗುಗ್ಗರಿ ಮಾಡುತ್ತಿದ್ದನು. 30 ಆಗ ಏಸಾವನು ಯಾಕೋಬನಿಗೆ, “ಹಸಿವೆಯಿಂದ ನನಗೆ ಆಯಾಸವಾಗಿದೆ. ನನಗೆ ಕೆಂಪಾದ ಸ್ವಲ್ಪ ಅಲಸಂದಿ ಗುಗ್ಗರಿಯನ್ನು ಕೊಡು” ಎಂದು ಕೇಳಿದನು. (ಈ ಕಾರಣದಿಂದ ಜನರು ಅವನಿಗೆ “ಏದೋಮ್” ಎಂದು ಕರೆಯುತ್ತಾರೆ.)
31 ಆದರೆ ಯಾಕೋಬನು, “ನಿನ್ನ ಚೊಚ್ಚಲತನದ ಹಕ್ಕನ್ನು ನೀನು ನನಗೆ ಈ ದಿನ ಮಾರಬೇಕು” ಎಂದು ಹೇಳಿದನು.
32 ಏಸಾವನು, “ನನಗೆ ಹಸಿವೆಯಿಂದ ಸಾಯುವಂತಾಗಿದೆ. ನಾನು ಸತ್ತುಹೋದರೆ, ನನ್ನ ತಂದೆಯ ಐಶ್ವರ್ಯವೆಲ್ಲ ನನಗೆ ಸಹಾಯ ಮಾಡಲಾರದು. ಆದ್ದರಿಂದ ನಾನು ನನ್ನ ಹಕ್ಕನ್ನು ನಿನಗೆ ಕೊಡುವೆನು” ಎಂದು ಹೇಳಿದನು.
33 ಆದರೆ ಯಾಕೋಬನು, “ನೀನು ಅದನ್ನು ಕೊಡುವುದಾಗಿ ಪ್ರಮಾಣಮಾಡು” ಅಂದನು. ಆದ್ದರಿಂದ ಏಸಾವನು ಯಾಕೋಬನಿಗೆ ಪ್ರಮಾಣ ಮಾಡಿದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಕೊಂಡನು. 34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಕುದಿಸಿದ ಅಲಸಂಧಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಅಲ್ಲಿಂದ ಹೊರಟುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕುಗಳ ಮೇಲೆ ತನಗೆ ಚಿಂತೆಯಿಲ್ಲದಿರುವುದನ್ನು ತೋರಿಸಿಕೊಂಡನು.