30
ರಾಹೇಲಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿದಳು. ರಾಹೇಲಳಿಗೆ ತನ್ನ ಅಕ್ಕನಾದ ಲೇಯಳ ಮೇಲೆ ಹೊಟ್ಟೆಕಿಚ್ಚಾಯಿತು. ಆದ್ದರಿಂದ ರಾಹೇಲಳು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲವಾದರೆ ನಾನು ಸಾಯುವೆ” ಎಂದು ಹೇಳಿದಳು.
ಯಾಕೋಬನಿಗೆ ರಾಹೇಲಳ ಮೇಲೆ ಕೋಪವಾಯಿತು. ಅವನು ಆಕೆಗೆ, “ನಾನು ದೇವರಲ್ಲ. ನಿನಗೆ ಮಕ್ಕಳಾಗದಂತೆ ಮಾಡಿರುವವನು ದೇವರು” ಎಂದು ಹೇಳಿದನು.
ನಂತರ ರಾಹೇಲಳು, “ನೀನು ನನ್ನ ಸೇವಕಿಯಾದ ಬಿಲ್ಹಾಳನ್ನು ತೆಗೆದುಕೊಳ್ಳಬಹುದು. ಆಕೆಯೊಡನೆ ಮಲಗಿಕೊ; ಆಕೆ ನನಗೋಸ್ಕರ ಒಂದು ಮಗುವನ್ನು ಹೆರುವಳು. ಆಗ ನಾನು ಆಕೆಯ ಮೂಲಕ ತಾಯಿಯಾಗುವೆನು” ಎಂದು ಹೇಳಿದಳು.
ಅಂತೆಯೇ ರಾಹೇಲಳು ಬಿಲ್ಹಾಳನ್ನು ತನ್ನ ಗಂಡನಾದ ಯಾಕೋಬನಿಗೆ ಕೊಟ್ಟಳು. ಯಾಕೋಬನು ಬಿಲ್ಹಾಳನ್ನು ಕೂಡಿದನು. ಬಿಲ್ಹಾ ಬಸುರಾಗಿ ಯಾಕೋಬನಿಗೆ ಒಬ್ಬ ಮಗನನ್ನು ಹೆತ್ತಳು.
ರಾಹೇಲಳು, “ದೇವರು ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಒಬ್ಬ ಮಗನನ್ನು ಕೊಡಲು ನಿರ್ಧರಿಸಿದನು” ಎಂದು ಹೇಳಿ ಆ ಮಗುವಿಗೆ ದಾನ್ ಎಂದು ಹೆಸರಿಟ್ಟಳು.
ಬಿಲ್ಹಾ ಮತ್ತೆ ಬಸುರಾಗಿ ಯಾಕೋಬನಿಗೆ ಎರಡನೆ ಮಗನನ್ನು ಹೆತ್ತಳು. ರಾಹೇಲಳು, “ನನ್ನ ಅಕ್ಕನೊಂದಿಗೆ ಕಷ್ಟಪಟ್ಟು ಹೋರಾಡಿ ಗೆದ್ದಿದ್ದೇನೆ” ಎಂದು ಹೇಳಿ ಆ ಮಗುವಿಗೆ ನಫ್ತಾಲಿ ಎಂದು ಹೆಸರಿಟ್ಟಳು.
ಲೇಯಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿ ತನ್ನ ಸೇವಕಿಯಾದ ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಳು. 10 ಜಿಲ್ಪಳಿಗೂ ಒಬ್ಬ ಮಗನು ಹುಟ್ಟಿದನು. 11 ಲೇಯಳು, “ನಾನು ಅದೃಷ್ಟವಂತೆ” ಎಂದು ಹೇಳಿ, ಆ ಮಗುವಿಗೆ ಗಾದ್ ಎಂದು ಹೆಸರಿಟ್ಟಳು. 12 ಜಿಲ್ಪಳು ಮತ್ತೊಬ್ಬ ಮಗನನ್ನು ಹೆತ್ತಳು. ಲೇಯಳು, “ನಾನು ಧನ್ಯಳಾದೆ. 13 ಈಗ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು” ಎಂದು ಹೇಳಿ ಆ ಮಗುವಿಗೆ ಆಶೇರ್ ಎಂದು ಹೆಸರಿಟ್ಟಳು.
14 ಗೋಧಿಯ ಸುಗ್ಗಿಕಾಲದಲ್ಲಿ, ರೂಬೇನನು ಹೊಲಕ್ಕೆ ಹೋಗಿದ್ದಾಗ ಕಾಮಜನಕಗಿಡದ ಹೂವುಗಳನ್ನು ಕಂಡನು. ರೂಬೇನನು ಈ ಹೂವುಗಳನ್ನು ತನ್ನ ತಾಯಿಯಾದ ಲೇಯಳಿಗೆ ತಂದುಕೊಟ್ಟನು. ರಾಹೇಲಳು ಲೇಯಳಿಗೆ, “ದಯವಿಟ್ಟು, ನಿನ್ನ ಮಗನು ತಂದಿರುವ ಹೂವುಗಳಲ್ಲಿ ನನಗೆ ಸ್ವಲ್ಪಕೊಡು” ಎಂದು ಕೇಳಿದಳು.
15 ಲೇಯಳು, “ನೀನು ಈಗಾಗಲೇ ನನ್ನ ಗಂಡನನ್ನು ತೆಗೆದುಕೊಂಡಿರುವೆ. ಈಗ ನನ್ನ ಮಗನು ತಂದಿರುವ ಹೂವುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವೆ” ಎಂದು ಹೇಳಿದಳು.
ರಾಹೇಲಳು, “ನಿನ್ನ ಮಗನು ತಂದಿರುವ ಹೂವುಗಳನ್ನು ನನಗೆ ಕೊಟ್ಟರೆ, ನೀನು ಈ ರಾತ್ರಿ ಯಾಕೋಬನ ಸಂಗಡ ಮಲಗಿಕೊಳ್ಳಬಹುದು” ಎಂದು ಹೇಳಿದಳು.
16 ಆ ರಾತ್ರಿ ಯಾಕೋಬನು ಹೊಲದಿಂದ ಬಂದನು. ಲೇಯಳು ಅವನನ್ನು ಕಂಡು ಭೇಟಿಯಾಗಲು ಹೋದಳು. ಅವಳು ಅವನಿಗೆ, “ಈ ರಾತ್ರಿ ನೀನು ನನ್ನ ಸಂಗಡ ಮಲಗಿಕೊಳ್ಳುವೆ. ನನ್ನ ಮಗನು ತಂದ ಹೂವುಗಳನ್ನು ನಾನು ನಿನಗೋಸ್ಕರವಾಗಿ ಕೊಟ್ಟಿರುವೆ” ಎಂದು ಹೇಳಿದಳು. ಆದ್ದರಿಂದ ಯಾಕೋಬನು ಆ ರಾತ್ರಿ ಲೇಯಳೊಡನೆ ಮಲಗಿಕೊಂಡನು.
17 ಲೇಯಳು ಮತ್ತೆ ಬಸುರಾಗುವಂತೆ ದೇವರು ಅನುಗ್ರಹಿಸಿದನು. ಆಕೆ ತನ್ನ ಐದನೆಯ ಮಗನನ್ನು ಹೆತ್ತಳು. 18 ಲೇಯಳು, “ದೇವರು ನನಗೆ ಒಂದು ಬಹುಮಾನವನ್ನು ಕೊಟ್ಟನು; ಯಾಕೆಂದರೆ ನಾನು ನನ್ನ ಸೇವಕಿಯನ್ನು ನನ್ನ ಗಂಡನಿಗೆ ಕೊಟ್ಟೆನು” ಎಂದು ಹೇಳಿ, ಆ ಮಗುವಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.
19 ಲೇಯಳು ಮತ್ತೆ ಬಸುರಾಗಿ ಆರನೆಯ ಮಗನನ್ನು ಹೆತ್ತಳು. 20 ಲೇಯಳು, “ದೇವರು ನನಗೆ ಒಂದು ಒಳ್ಳೆಯ ಬಹುಮಾನವನ್ನು ಕೊಟ್ಟಿದ್ದಾನೆ. ಈಗ ಖಂಡಿತವಾಗಿ ಯಾಕೋಬನು ನನ್ನನ್ನು ಸ್ವೀಕರಿಸುವನು, ಯಾಕೆಂದರೆ ನಾನು ಅವನಿಗೆ ಆರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ, ಜೆಬುಲೂನ್ ಎಂದು ಹೆಸರಿಟ್ಟಳು.
21 ತರುವಾಯ ಲೇಯಳು ಒಬ್ಬ ಮಗಳನ್ನು ಹೆತ್ತಳು. ಆಕೆ ತನ್ನ ಮಗಳಿಗೆ ದೀನಾ ಎಂದು ಹೆಸರಿಟ್ಟಳು.
22 ನಂತರ, ದೇವರು ರಾಹೇಲಳ ಪ್ರಾರ್ಥನೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಅನುಗ್ರಹಿಸಿದನು. 23-24 ರಾಹೇಲಳು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ರಾಹೇಲಳು, “ದೇವರು ನನಗಿದ್ದ ಅವಮಾನವನ್ನು ತೆಗೆದುಹಾಕಿದ್ದಾನೆ; ನನಗೆ ಒಬ್ಬ ಮಗನನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಯೋಸೇಫ ಎಂದು ಹೆಸರಿಟ್ಟಳು.
ಯಾಕೋಬನು ಲಾಬಾನನಿಗೆ ಮೋಸ ಮಾಡಿದ್ದು
25 ಯೋಸೇಫನು ಹುಟ್ಟಿದ ಮೇಲೆ, ಯಾಕೋಬನು ಲಾಬಾನನಿಗೆ, “ಈಗ ನಾನು ನನ್ನ ಸ್ವಂತ ಮನೆಗೆ ಹೋಗಲು ಅನುಮತಿ ಕೊಡು. 26 ನನ್ನ ಹೆಂಡತಿಯರನ್ನೂ ಮಕ್ಕಳನ್ನೂ ನನಗೆ ಕೊಡು. ನಾನು ಹದಿನಾಲ್ಕು ವರ್ಷ ನಿನ್ನ ಸೇವೆಮಾಡಿ ಅವರನ್ನು ಸಂಪಾದಿಸಿಕೊಂಡಿದ್ದೇನೆ. ನಾನು ನಿನಗೆ ಒಳ್ಳೆಯ ಸೇವೆ ಮಾಡಿರುವುದು ನಿನಗೆ ತಿಳಿದಿದೆ” ಎಂದು ಹೇಳಿದನು.
27 ಲಾಬಾನನು ಅವನಿಗೆ, “ನಾನು ಹೇಳುವುದನ್ನು ಕೇಳು; ಯೆಹೋವನು ನಿನ್ನ ನಿಮಿತ್ತವಾಗಿ ನನ್ನನ್ನು ಆಶೀರ್ವದಿಸಿದ್ದಾನೆಂದು ನನಗೆ ತಿಳಿದಿದೆ. 28 ಹೇಳು, ನಾನು ನಿನಗೆ ಎಷ್ಟು ಸಂಬಳ ಕೊಡಬೇಕು? ನೀನು ಹೇಳಿದಷ್ಟು ಕೊಡುತ್ತೇನೆ” ಎಂದು ಹೇಳಿದನು.
29 ಯಾಕೋಬನು, “ನಾನು ನಿನಗೋಸ್ಕರ ಕಷ್ಟಪಟ್ಟು ಕೆಲಸ ಮಾಡಿರುವುದು ನಿನಗೆ ಗೊತ್ತಿದೆ. ನಾನು ನಿನ್ನ ಕುರಿಮಂದೆಗಳನ್ನು ನೋಡಿಕೊಂಡಿದ್ದರಿಂದ ಅವು ಹೆಚ್ಚಾಗಿವೆ. 30 ನಾನು ಬಂದಾಗ ನಿನಗೆ ಸ್ವಲ್ಪವಿತ್ತು, ಈಗ ನಿನಗೆ ಬೇಕಾದಷ್ಟಿದೆ. ನಾನು ನಿನಗೋಸ್ಕರ ಮಾಡಿದ್ದನ್ನೆಲ್ಲ ಯೆಹೋವನು ಆಶೀರ್ವದಿಸಿದನು. ನಾನು ನನಗೋಸ್ಕರ ಕೆಲಸ ಮಾಡುವ ಸಮಯವಿದು. ನನ್ನ ಸ್ವಂತ ಮನೆಗೆ ಒದಗಿಸುವ ಸಮಯವಿದು” ಎಂದು ಹೇಳಿದನು.
31 ಲಾಬಾನನು “ಹಾಗಾದರೆ ನಾನು ನಿನಗೇನು ಕೊಡಬೇಕು” ಎಂದು ಕೇಳಿದನು.
ಯಾಕೋಬನು, “ನೀನು ನನಗೆ ಏನೂ ಕೊಡಬೇಕಾಗಿಲ್ಲ. (ನಾನು ಕೆಲಸ ಮಾಡಿದ್ದಕ್ಕೆ ನೀನು ಸಂಬಳ ಕೊಟ್ಟರೆ ಸಾಕು.) ಇದೊಂದು ಕಾರ್ಯವನ್ನು ಮಾಡು; ನಾನು ಹೋಗಿ ನಿನ್ನ ಕುರಿಗಳನ್ನು ನೋಡಿಕೊಳ್ಳುವೆ. 32 ನಾನು ನಿನ್ನ ಕುರಿಮಂದೆಯೊಳಗೆ ಹೋಗಿ, ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಕುರಿಯನ್ನೂ ಪ್ರತಿಯೊಂದು ಕಪ್ಪು ಕುರಿಯನ್ನೂ ಚುಕ್ಕೆಮಚ್ಚೆಗಳಿರುವ ಪ್ರತಿಯೊಂದು ಮೇಕೆಯನ್ನೂ ತೆಗೆದುಕೊಳ್ಳುವೆನು. ಅದೇ ನನಗೆ ಸಂಬಳ. 33 ಮುಂದಿನ ದಿನಗಳಲ್ಲಿ ನೀನು ಬಂದು ಪರೀಕ್ಷಿಸಿದಾಗ ನಾನು ಯಥಾರ್ಥನೊ ಇಲ್ಲವೊ ಎಂಬುದನ್ನು ನೀನು ಸುಲಭವಾಗಿ ಕಂಡುಕೊಳ್ಳಬಹುದು. ನಾನೇನಾದರೂ ಚುಕ್ಕೆಯಿಲ್ಲದ ಮೇಕೆಗಳನ್ನಾಗಲಿ ಅಥವಾ ಕಪ್ಪಿಲ್ಲದ ಕುರಿಗಳನ್ನಾಗಲಿ ಹೊಂದಿದ್ದರೆ, ನಾನು ಅದನ್ನು ಕದ್ದುಕೊಂಡದ್ದೆಂದು ನೀನು ಪರಿಗಣಿಸಬಹುದು” ಎಂದು ಹೇಳಿದನು.
34 ಲಾಬಾನನು, “ನಾನು ಅದಕ್ಕೆ ಒಪ್ಪಿಕೊಂಡಿದ್ದೇನೆ. ನೀನು ಹೇಳಿದಂತೆ ನಾವು ಮಾಡೋಣ” ಎಂದು ಹೇಳಿದನು. 35 ಆ ದಿನ ಲಾಬಾನನು ಚುಕ್ಕೆಗಳಿದ್ದ ಎಲ್ಲಾ ಹೋತಗಳನ್ನೂ ಮೇಕೆಗಳನ್ನೂ ಕಪ್ಪಾದ ಕುರಿಗಳನ್ನೂ ಪ್ರತ್ಯೇಕಿಸಿದನು. ಲಾಬಾನನು ತನ್ನ ಗಂಡುಮಕ್ಕಳಿಗೆ ಆ ಕುರಿಗಳನ್ನು ನೋಡಿಕೊಳ್ಳಲು ಹೇಳಿದನು. 36 ಆದ್ದರಿಂದ ಅವನ ಗಂಡುಮಕ್ಕಳು ಚುಕ್ಕೆಗಳಿದ್ದ ಅವುಗಳೊಂದಿಗೆ ಮತ್ತೊಂದು ಸ್ಥಳಕ್ಕೆ ಹೋದರು. ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಯಾಕೋಬನು ಅಲ್ಲಿದ್ದುಕೊಂಡು ಉಳಿದವುಗಳನ್ನೆಲ್ಲ ನೋಡಿಕೊಳ್ಳತೊಡಗಿದನು.
37 ಆದ್ದರಿಂದ ಯಾಕೋಬನು ಲಿಬ್ನೆ, ಲೂಜ್ ಮತ್ತು ಅರ್ಮೋನ್ ಎಂಬ ಮರಗಳಿಂದ ಹಸಿರುಕೊಂಬೆಗಳನ್ನು ಕತ್ತರಿಸಿದನು. ಅವುಗಳನ್ನು ಪಟ್ಟಿಪಟ್ಟಿಯಾಗಿ ತೊಗಟೆ ಸುಲಿದು ಅವುಗಳಲ್ಲಿರುವ ಬಿಳುಪುಬಣ್ಣವು ಕಾಣಿಸುವಂತೆ ಮಾಡಿದನು. 38 ಯಾಕೋಬನು ಆ ಕೊಂಬೆಗಳನ್ನು ಮಂದೆಗಳ ಎದುರಿಗೆ ನೀರು ಕುಡಿಯುವ ಸ್ಥಳದಲ್ಲಿಟ್ಟನು. ಪ್ರಾಣಿಗಳು ನೀರು ಕುಡಿಯುವುದಕ್ಕೆ ಬಂದಾಗ ಆ ಸ್ಥಳದಲ್ಲಿ ಸಂಗಮ ಮಾಡುತ್ತಿದ್ದವು. 39 ಮೇಕೆಗಳು ಆ ಕೊಂಬೆಗಳ ಎದುರಿನಲ್ಲಿ ಸಂಗಮ ಮಾಡಿದಾಗ, ಅವುಗಳಲ್ಲಿ ಹುಟ್ಟಿದ ಮರಿಗಳೆಲ್ಲ ಚುಕ್ಕೆಮಚ್ಚೆಗಳಿಂದಲೂ ಕಪ್ಪು ಬಣ್ಣದಿಂದಲೂ ಕೂಡಿದ್ದವು.
40 ಯಾಕೋಬನು ಚುಕ್ಕೆಯುಳ್ಳ ಮತ್ತು ಕಪ್ಪಾಗಿರುವ ಆಡುಕುರಿಗಳನ್ನು ಮಂದೆಯ ಇತರ ಆಡುಕುರಿಗಳಿಂದ ಬೇರ್ಪಡಿಸಿದನು. ಯಾಕೋಬನು ತನ್ನ ಪಶುಗಳನ್ನು ಲಾಬಾನನ ಪಶುಗಳಿಂದ ಪ್ರತ್ಯೇಕವಾಗಿರಿಸಿದನು. 41 ಬಲವಾದ ಆಡುಕುರಿಗಳು ಸಂಗಮ ಮಾಡುವಾಗಲೆಲ್ಲ ಯಾಕೋಬನು ಆ ಕೊಂಬೆಗಳನ್ನು ಅವುಗಳ ಕಣ್ಣಿಗೆ ಎದುರಾಗಿಡುತ್ತಿದ್ದನು. ಅವುಗಳು ಆ ಕೊಂಬೆಗಳ ಸಮೀಪದಲ್ಲಿ ಸಂಗಮ ಮಾಡುತ್ತಿದ್ದವು. 42 ಆದರೆ ಬಲಹೀನವಾದ ಪ್ರಾಣಿಗಳು ಸಂಗಮ ಮಾಡುವಾಗ ಯಾಕೋಬನು ಆ ಕೊಂಬೆಗಳನ್ನು ಅಲ್ಲಿ ಇಡುತ್ತಿರಲಿಲ್ಲ. ಆದ್ದರಿಂದ ಬಲಹೀನವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಲಾಬಾನನಿಗೆ ಸೇರಿಕೊಂಡವು. ಬಲವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಯಾಕೋಬನಿಗೆ ಸೇರಿಕೊಂಡವು. 43 ಹೀಗೆ ಯಾಕೋಬನು ತುಂಬ ಐಶ್ವರ್ಯವಂತನಾದನು. ಅವನಿಗೆ ದೊಡ್ಡ ಮಂದೆಗಳಿದ್ದವು. ಅನೇಕ ಸೇವಕರಿದ್ದರು; ಒಂಟೆಗಳಿದ್ದವು ಮತ್ತು ಕತ್ತೆಗಳಿದ್ದವು.