3
ಹಬಕ್ಕೂಕನ ಪ್ರಾರ್ಥನೆ
ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ:
 
ಯೆಹೋವನೇ, ನಾನು ನಿನ್ನ ವಿಚಾರ ಕೇಳಿದೆನು.
ಯೆಹೋವನೇ, ನೀನು ಹಿಂದಿನ ಕಾಲದಲ್ಲಿ ಮಾಡಿದ ಮಹತ್ಕಾರ್ಯಗಳು ನನ್ನನ್ನು ಚಕಿತಗೊಳಿಸಿವೆ.
ನಮ್ಮ ಕಾಲದಲ್ಲಿಯೂ ಮಹತ್ಕಾರ್ಯಗಳನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ.
ದಯಮಾಡಿ, ಆ ಘಟನೆಗಳು ನಮ್ಮ ದಿವಸಗಳಲ್ಲೂ ನೆರವೇರುವಂತೆ ಮಾಡು.
ಅದರ ಜೊತೆಯಲ್ಲಿ ನಮ್ಮ ಮೇಲೆ
ಕರುಣೆ ತೋರಿಸಲು ಮರೆಯಬೇಡ.
 
ತೇಮಾನಿನಿಂದ ಯೆಹೋವನು ಬರುತ್ತಿದ್ದಾನೆ.
ಪರಿಶುದ್ಧನಾದವನು ಪಾರಾನ್ ಪರ್ವತದಿಂದ ಬರುತ್ತಿದ್ದಾನೆ.
ಯೆಹೋವನ ಮಹಿಮೆಯು ಆಕಾಶಮಂಡಲವನ್ನು ಮುಚ್ಚುತ್ತದೆ.
ಅವನ ಸ್ತೋತ್ರವು ಭೂಲೋಕವನ್ನು ತುಂಬುತ್ತದೆ.
ಬೆಳಕಿನ ಕಿರಣಗಳು ಆತನ ಕೈಯಿಂದ ಹೊಳೆಯುತ್ತವೆ. ಅದು ಹೊಳೆಯುವಂಥ ಪ್ರಕಾಶಮಾನವಾದ ಹೊಳಪು.
ಆ ಕೈಗಳಲ್ಲಿ ಅಂಥಾ ಶಕ್ತಿಯು ಅಡಕವಾಗಿದೆ.
ರೋಗವು ಆತನ ಮುಂದೆ ಹೊರಟಿತು.
ನಾಶಕನು ಆತನನ್ನು ಹಿಂಬಾಲಿಸಿದನು.
ಯೆಹೋವನು ನಿಂತು ಪ್ರಪಂಚದ ನ್ಯಾಯತೀರಿಸಿದನು.
ಎಲ್ಲಾ ಜನಾಂಗಗಳ ಜನರ ಕಡೆಗೆ ನೋಡಿದನು.
ಅವರು ಭಯದಿಂದ ನಡುಗಿದರು.
ತಲಾಂತರಗಳಿಂದ ಪರ್ವತಗಳು ಸ್ಥಿರವಾಗಿ ನಿಂತಿದ್ದವು.
ಆದರೆ ಅದೇ ಪರ್ವತಗಳು ತುಂಡುತುಂಡಾಗಿ ಬಿದ್ದವು.
ಪುರಾತನ ಕಾಲದ ಬೆಟ್ಟಗಳು ಬಿದ್ದುಹೋದವು.
ಹಾಗೆ ಮಾಡಲು ದೇವರು ಯಾವಾಗಲೂ ಶಕ್ತನಾಗಿದ್ದಾನೆ.
ಕೂಷಾನಿನ ನಗರಗಳು ಸಂಕಟದಲ್ಲಿರುವುದನ್ನು ಕಂಡೆನು.
ಮಿದ್ಯಾನಿನ ಮನೆಗಳು ಹೆದರಿ ನಡುಗುತ್ತಿದ್ದವು.
ಯೆಹೋವನೇ, ನೀನು ನದಿಗಳ ಮೇಲೆ ಕೋಪಗೊಂಡಿದ್ದೀಯೋ?
ತೊರೆಗಳ ಮೇಲೆ ನೀನು ಕೋಪಗೊಂಡಿದ್ದೀಯೋ?
ಸಮುದ್ರದ ಮೇಲೆ ನೀನು ಕೋಪಗೊಂಡಿದ್ದೀಯೋ?
ನೀನು ನಿನ್ನ ಕುದುರೆಗಳ ಮೇಲೆ ಮತ್ತು ರಥಗಳ ಮೇಲೆ ಸವಾರಿ ಮಾಡಿದಾಗ ಕೋಪಗೊಂಡಿದ್ದೀಯೋ?
 
ಆದಾಗ್ಯೂ ನೀನು ನಿನ್ನ ಮೇಘದ ಬಿಲ್ಲನ್ನು ತೋರಿಸಿದೆ.
ಈ ಲೋಕದ ಮನುಷ್ಯರೊಂದಿಗೆ ಅದು ನಿನ್ನ ಒಡಂಬಡಿಕೆಯ ಸಾಕ್ಷಿ.
 
ಭೂಮಿಯು ನದಿಯನ್ನು ಇಬ್ಭಾಗವಾಗಿ ಮಾಡಿತು.
10 ಪರ್ವತಗಳು ನಿನ್ನನ್ನು ನೋಡಿ ನಡುಗಿದವು.
ನೆಲದ ಮೇಲಿಂದ ನೀರು ಹರಿದುಹೋಯಿತು.
ಭೂಮಿಯ ಮೇಲೆ ತನಗಿದ್ದ ಶಕ್ತಿ ಹೋದದ್ದನ್ನು ನೋಡಿ
ಸಮುದ್ರವು ಗಟ್ಟಿಯಾಗಿ ಶಬ್ದ ಮಾಡಿತು.
11 ಸೂರ್ಯಚಂದ್ರರು ತಮ್ಮ ಪ್ರಕಾಶವನ್ನು ಕಳಕೊಂಡವು.
ಹೊಳೆಯುವ ನಿನ್ನ ಮಿಂಚುಗಳನ್ನು ನೋಡಿ ಅವು ಪ್ರಕಾಶಿಸುವದನ್ನು ನಿಲ್ಲಿಸಿದವು.
ಆ ಮಿಂಚುಗಳು ಗಾಳಿಯಲ್ಲಿ ತೂರಿಬರುವ ಭರ್ಜಿ, ಬಾಣಗಳಂತಿದ್ದವು.
12 ಸಿಟ್ಟಿನಿಂದ ನೀನು ಭೂಮಿಯ ಮೇಲೆ ನಡೆದೆ.
ಮತ್ತು ಜನಾಂಗಗಳನ್ನು ಶಿಕ್ಷಿಸಿದೆ.
13 ನಿನ್ನ ಜನರನ್ನು ರಕ್ಷಿಸಲು ನೀನು ಬಂದೆ.
ನೀನು ಆರಿಸಿದ್ದ ರಾಜನನ್ನು ಜಯದ ಕಡೆಗೆ ನಡಿಸುವುದಕ್ಕಾಗಿ ಬಂದೆ.
ಪ್ರತೀ ದುಷ್ಟ ಕುಟುಂಬದ ನಾಯಕನನ್ನು ನೀನು ಸಂಹರಿಸಿದೆ.
ಭೂಲೋಕದಲ್ಲಿದ್ದ ಪ್ರಮುಖನಿಂದಿಡಿದು
ಪ್ರಮುಖನಲ್ಲದವನವರೆಗೂ ನೀನು ಹತಿಸಿದೆ.
 
14 ವೈರಿಗಳ ಸೈನ್ಯವನ್ನು ಮೋಶೆಯ
ಕೋಲಿನಿಂದ ನಿಲ್ಲಿಸಿದೆ.
ಆ ಸೈನಿಕರು ಬಿರುಗಾಳಿಯಂತೆ ನಮ್ಮೊಂದಿಗೆ
ಯುದ್ಧ ಮಾಡಲು ಬಂದರು.
ರಸ್ತೆಯ ಮೇಲೆ ಇದ್ದ ಒಬ್ಬ ಬಡ ಮನುಷ್ಯನನ್ನು ದೋಚಿದ ಪ್ರಕಾರ
ನಮ್ಮನ್ನೂ ಸುಲಭವಾಗಿ ಗೆಲ್ಲುವೆವೆಂದು ಅವರು ನೆನೆಸಿದ್ದರು.
15 ಆದರೆ ನೀನು ನಿನ್ನ ಕುದುರೆಗಳನ್ನು ಸಮುದ್ರದೊಳಗಿಂದ ನಡೆಸಿದೆ.
ಅವುಗಳು ಆ ಮಹಾ ಸಮುದ್ರವನ್ನು ಕದಡಿಬಿಟ್ಟವು.
16 ಆ ವಿಷಯವನ್ನು ಕೇಳಿದಾಗ ನನ್ನ ಶರೀರವೆಲ್ಲಾ ನಡುಗಿತು.
ಆಶ್ಟರ್ಯದಿಂದ ನಾನು ಸಿಳ್ಳುಹಾಕಿದೆ.
ನನ್ನ ಎಲುಬುಗಳ ಬಲಹೀನತೆಯಿಂದ
ನಾನು ನಡುಗುವವನಾಗಿ ನಿಂತೆನು.
ಅವರು ಜನರ ಮೇಲೆ ಬೀಳಲು ಬರುವಾಗ
ನಾನು ಅವರ ನಾಶನದ ದಿವಸವನ್ನು ಎದುರುನೋಡುತ್ತಿದ್ದೇನೆ.
ಯಾವಾಗಲೂ ಯೆಹೋವನಲ್ಲಿ ಸಂತೋಷಿಸು
17 ಅಂಜೂರದ ಮರಗಳಲ್ಲಿ ಅಂಜೂರದ ಹಣ್ಣು ಬೆಳೆಯದಿದ್ದರೂ
ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳು ಬೆಳೆಯದಿದ್ದರೂ
ಎಣ್ಣೆಮರಗಳಲ್ಲಿ ಆಲೀವ್ ಕಾಯಿಗಳು ಬೆಳೆಯದಿದ್ದರೂ
ಹೊಲದಲ್ಲಿ ಪೈರು ಬೆಳೆಯದಿದ್ದರೂ
ಹಟ್ಟಿಯಲ್ಲಿ ಯಾವ ಕುರಿಗಳು ಇಲ್ಲದಿದ್ದರೂ
ಕೊಟ್ಟಿಗೆಯೊಳಗೆ ಯಾವ ಪಶುಗಳು ಇಲ್ಲದಿದ್ದರೂ
18 ನಾನು ಯೆಹೋವನಲ್ಲಿ ಸಂತೋಷಿಸುವೆನು.
ನನ್ನ ರಕ್ಷಕನಾದ ದೇವರಲ್ಲಿ ಸಂತೋಷಪಡುವೆನು.
 
19 ನನ್ನ ಒಡೆಯನಾದ ಯೆಹೋವನು ನನಗೆ ಬಲವನ್ನು ಕೊಡುವನು.
ಜಿಂಕೆಯಂತೆ ವೇಗವಾಗಿ ಓಡಲು ನನಗೆ ಸಹಾಯ ಮಾಡುವನು.
ಪರ್ವತಗಳಲ್ಲಿ ನನ್ನನ್ನು ಸುರಕ್ಷಿತವಾಗಿ ನಡೆಸುವನು.
 
ಸಂಗೀತ ನಿರ್ದೇಶಕನಿಗೆ. ತಂತಿವಾದ್ಯಗಳಿಂದ ಹಾಡತಕ್ಕದ್ದು.