7
“ನಾನು ಇಸ್ರೇಲನ್ನು ಗುಣಪಡಿಸುವೆನು.
ಆಗ ಎಫ್ರಾಯೀಮನು ಪಾಪಮಾಡಿದ್ದಾನೆಂದು ಜನರಿಗೆ ತಿಳಿದುಬರುವದು.
ಜನರಿಗೆ ಸಮಾರ್ಯದವರ ಸುಳ್ಳು ತಿಳಿದುಬರುವದು.
ಆ ನಗರದಲ್ಲಿ ಕಳ್ಳರು ಬರುತ್ತಾ ಹೋಗುತ್ತಾ ಇರುವದನ್ನು ಜನರು ತಿಳಿಯುವರು.
ನಾನು ಅವರ ದುಷ್ಟತ್ವವನ್ನು ನೆನಪಿನಲ್ಲಿಟ್ಟಿರುತ್ತೇನೆಂಬುದನ್ನು ಅವರು ನಂಬುವದಿಲ್ಲ.
ಅವರು ಮಾಡಿದ ದುಷ್ಟತನವು ಸುತ್ತಲೂ ಕಾಣಿಸುವದು.
ನಾನು ಅವರ ಪಾಪಗಳನ್ನು ಸ್ಪಷ್ಟವಾಗಿ ನೋಡುತ್ತೇನೆ.
ಅವರ ದುಷ್ಟತನವು ಅವರ ಅರಸರನ್ನು ಸಂತಸಗೊಳಿಸುತ್ತದೆ.
ಅವರ ಸುಳ್ಳುಗಳು ಅವರ ನಾಯಕರನ್ನು ಸಂತೋಷಪಡಿಸುತ್ತವೆ.
ರೊಟ್ಟಿಯನ್ನು ಸುಡಲು ರೊಟ್ಟಿಗಾರನು ಹಿಟ್ಟನ್ನು ನಾದುವನು.
ರೊಟ್ಟಿಯು ಶಾಖದಿಂದ ಉಬ್ಬುತ್ತಿರುವಾಗ ರೊಟ್ಟಿಗಾರನು ಒಲೆಯನ್ನು ಮತ್ತಷ್ಟು ಉರಿಸುವುದಿಲ್ಲ.
ಇಸ್ರೇಲರಾದರೋ ಹಾಗಲ್ಲ,
ಅವರು ಒಲೆಯನ್ನು ಮತ್ತಷ್ಟು ಉರಿಸುತ್ತಾರೆ.
ನಮ್ಮ ಅರಸನ ದಿವಸದಲ್ಲಿ ನಾಯಕರು ಅತಿಯಾಗಿ ಕುಡಿದು ರೋಗಗ್ರಸ್ತರಾಗುವರು.
ಅವರು ದ್ರಾಕ್ಷಾರಸದಿಂದ ಅಮಲೇರಿದವರಾಗಿ
ದೇವರನ್ನು ಅಪಹಾಸ್ಯಮಾಡುವ ಜನರೊಂದಿಗೆ ಒಪ್ಪಂದ ಮಾಡಿಕೊಳ್ಳುವರು.
ಜನರು ಗುಪ್ತವಾಗಿ ಯೋಜನೆಯನ್ನು ತಯಾರಿಸುವರು.
ಉರಿಯುವ ಒಲೆಯಂತೆ ಅವರ ಹೃದಯವು ಉತ್ಸಾಹಗೊಳ್ಳುವುದು.
ಅವರ ಉತ್ಸಾಹವು ರಾತ್ರಿಯೆಲ್ಲಾ ಉರಿಯುವುದು.
ಅದು ಮುಂಜಾನೆಯಲ್ಲಿ ಧಗಧಗಿಸುವ ಬೆಂಕಿಯ ಕಾವಿನಂತಿರುವದು.
ಅವರು ಬಿಸಿ ಮಾಡಲ್ಪಟ್ಟ ಕುಲುಮೆಯಂತಿರುವರು.
ಅವರು ತಮ್ಮನ್ನು ಆಳುವವರನ್ನು ನಾಶಮಾಡಿದರು.
ಅವರ ರಾಜರುಗಳೆಲ್ಲಾ ಬಿದ್ದುಹೋದರು.
ಅವರಲ್ಲಿ ಒಬ್ಬರಾದಲೂ ಸಹಾಯಕ್ಕಾಗಿ ನನಗೆ ಮೊರೆಯಿಡಲಿಲ್ಲ.”
ತಾನು ನಾಶವಾಗುತ್ತೇನೆಂದು ಇಸ್ರೇಲಿಗೆ ಗೊತ್ತಿಲ್ಲ
“ಎಫ್ರಾಯೀಮು ಬೇರೆ ದೇಶಗಳೊಂದಿಗೆ ಬೆರೆತುಹೋಗುತ್ತದೆ.
ಎಫ್ರಾಯೀಮು ತಿರುವಿಹಾಕದ ಚಪಾತಿಯಂತಿದೆ.
ಅನ್ಯರು ಎಫ್ರಾಯೀಮನ ಶಕ್ತಿಯನ್ನು ಮುರಿಯುವರು.
ಆದರೆ ಅವನಿಗೆ ಅದು ತಿಳಿದಿರುವದಿಲ್ಲ.
ಎಫ್ರಾಯೀಮನ ತಲೆಯಲ್ಲಿ ನರೆಕೂದಲು ಬಂದಾಗ್ಯೂ
ಅದಕ್ಕೆ ತಿಳಿವಳಿಕೆ ಬಂದಿರುವುದಿಲ್ಲ.
10 ಎಫ್ರಾಯೀಮನ ಹೆಮ್ಮೆಯು ಅವನಿಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತದೆ.
ಜನರಿಗೆ ನಾನಾ ತರದ ಸಂಕಟಗಳು ಬಂದಾಗ್ಯೂ
ಅವರು ತಮ್ಮ ದೇವರಾದ ಯೆಹೋವನ ಬಳಿಗೆ ಹೋಗಲಿಲ್ಲ.
ಜನರು ತಮ್ಮ ಸಹಾಯಕ್ಕಾಗಿ ಆತನಿಗೆ ಮೊರೆಯಿಡಲಿಲ್ಲ.
11 ಹೀಗೆ ಎಫ್ರಾಯೀಮ್ ತಿಳಿವಳಿಕೆ ಇಲ್ಲದ ಮೂರ್ಖ ಪಾರಿವಾಳದಂತಾಗಿದೆ.
ಜನರು ಸಹಾಯಕ್ಕಾಗಿ ಈಜಿಪ್ಟನ್ನು ಕರೆದರು,
ಅಶ್ಶೂರ್ಯದ ಕಡೆಗೆ ಓಡಿದರು.
12 ಅವರು ಆ ದೇಶಗಳಿಗೆ ಹೋಗುವಾಗ
ನಾನು ಅವರನ್ನು ಉರುಲಿನೊಳಗೆ ಸಿಕ್ಕಿಸುವೆನು.
ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು.
ಆಕಾಶದ ಪಕ್ಷಿಗಳ ರೀತಿಯಲ್ಲಿ ಅವರನ್ನು ಕೆಳಗೆ ಬೀಳಿಸುವೆನು.
ಅವರು ಮಾಡಿದ ಒಪ್ಪಂದಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು.
13 ಅವರು ನನ್ನನ್ನು ಬಿಟ್ಟು ತೊಲಗಿದರು. ಇದು ಅವರಿಗೆ ಕೆಡುಕು ಉಂಟುಮಾಡುವದು.
ಅವರು ನನಗೆ ವಿಧೇಯರಾಗಲು ಇಷ್ಟಪಡಲಿಲ್ಲ. ಆದ್ದರಿಂದ ಅವರು ನಾಶವಾಗುವರು.
ನಾನು ಅವರನ್ನು ರಕ್ಷಿಸಿ ಕಾಪಾಡಿದ್ದಾಗ್ಯೂ
ಅವರು ನನಗೆ ವಿರುದ್ಧವಾಗಿ ಸುಳ್ಳಾಡಿದರು.
14 ಹೃದಯಪೂರ್ವಕವಾಗಿ ಅವರು ನನ್ನನ್ನು ಕರೆಯಲಿಲ್ಲ.
ಹೌದು, ಅವರು ತಮ್ಮ ಹಾಸಿಗೆಗಳ ಮೇಲೆ ಅಳುವರು.
ಆಹಾರಧಾನ್ಯ, ಹೊಸ ದ್ರಾಕ್ಷಾರಸವನ್ನು ಕೇಳುವಾಗ, ಬೇರೆಯವರ ದೇಶಗಳಲ್ಲಿ ಆಹಾರಕ್ಕಾಗಿ ಅಲೆದಾಡುವಾಗ ಅವರು ಅಳುವರು.
ಆದರೆ ತಮ್ಮ ಹೃದಯಗಳಲ್ಲಿ ಅವರು ನನ್ನಿಂದ ದೂರವಾಗಿದ್ದಾರೆ.
15 ನಾನು ಅವರಿಗೆ ತರಬೇತಿಕೊಟ್ಟು ಅವರ ತೋಳುಗಳನ್ನು ಬಲಪಡಿಸಿದೆನು.
ಆದರೆ ನನಗೆ ವಿರುದ್ಧವಾಗಿ ಅವರು ದುರಾಲೋಚನೆಯನ್ನು ಮಾಡಿದರು.
16 ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು.
ಮೋಸದ ಬಿಲ್ಲಿನಂತೆ ಅವರಾದರು.
ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು.
ಆದರೆ ಅವರು ಕತ್ತಿಯಲ್ಲಿ ಸಾಯುವರು.
ಆಗ ಈಜಿಪ್ಟಿನ ಜನರು
ಅವರನ್ನು ನೋಡಿ ನಗಾಡುವರು.