41
ನಿರ್ಮಾಣಿಕನಾದ ಯೆಹೋವನು ನಿರಂತರವೂ ಜೀವಿಸುವನು
1 ಯೆಹೋವನು ಹೇಳುವುದೇನೆಂದರೆ:
“ಬಹು ದೂರದಲ್ಲಿರುವ ಜನಾಂಗಗಳವರೇ, ಮೌನವಾಗಿದ್ದು ನನ್ನ ಬಳಿಗೆ ಬನ್ನಿರಿ.
ಜನಾಂಗಗಳೇ, ಮತ್ತೆ ಬಲಿಷ್ಠರಾಗಿರಿ.
ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಿರಿ.
ನಾವು ಒಟ್ಟಾಗಿ ಸೇರಿಬಂದು
ಯಾರು ಸರಿ ಎಂದು ವಾದಿಸೋಣ!
2 ಈ ಪ್ರಶ್ನೆಗಳಿಗೆ ಉತ್ತರಿಸಿರಿ: ಪೂರ್ವದಿಕ್ಕಿನಿಂದ ಬರುವ ಮನುಷ್ಯನನ್ನು ಎಚ್ಚರಿಸಿದವರು ಯಾರು?
ಅವನು ಒಳ್ಳೆಯತನವನ್ನು ತನ್ನೊಂದಿಗಿರಲು ಕೇಳುತ್ತಾನೆ.
ತನ್ನ ಖಡ್ಗವನ್ನು ಉಪಯೋಗಿಸಿ ಜನಾಂಗಗಳನ್ನು ಸೋಲಿಸುವನು.
ಅವರನ್ನು ಧೂಳಿನಂತೆ ಮಾಡುವನು. ತನ್ನ ಬಿಲ್ಲನ್ನು ಉಪಯೋಗಿಸಿ ರಾಜರನ್ನು ವಶಪಡಿಸಿಕೊಳ್ಳುತ್ತಾನೆ.
ಅವರು ಗಾಳಿಯಲ್ಲಿ ತೂರಾಡುವ ಹುಲ್ಲಿನಂತೆ ಓಡಿಹೋಗುವರು.
3 ಅವನು ಸೈನ್ಯವನ್ನು ಓಡಿಸಿದರೂ ಗಾಯಗೊಳ್ಳುವದಿಲ್ಲ.
ತಾನು ಹಿಂದೆಂದೂ ಹೋಗದ ಸ್ಥಳಗಳಿಗೆ ಹೋಗುವನು.
4 ಇವೆಲ್ಲಾ ನೆರವೇರುವಂತೆ ಮಾಡಿದವರು ಯಾರು?
ಆದಿಯಿಂದ ಎಲ್ಲಾ ಜನರನ್ನು ಕರೆದವರು ಯಾರು? ಯೆಹೋವನೆಂಬ ನಾನೇ ಇವೆಲ್ಲವನ್ನು ಮಾಡಿದೆನು.
ನಾನೇ ಮೊದಲನೆಯವನಾಗಿದ್ದೇನೆ.
ಅನಾದಿಕಾಲಕ್ಕಿಂತ ಮೊದಲು ನಾನಿದ್ದೆನು.
ಎಲ್ಲವೂ ಅಂತ್ಯವಾಗುವ ತನಕ ನಾನು ಇರುತ್ತೇನೆ.
5 ದೂರ ಸ್ಥಳಗಳವರೇ,
ನೋಡಿರಿ, ಭಯಗೊಳ್ಳಿರಿ.
ಭೂಮಿಯ ಕಟ್ಟಕಡೆಗಿರುವ ದೇಶಗಳೇ,
ಭಯದಿಂದ ನಡುಗಿರಿ.
ನನ್ನ ಬಳಿಗೆ ಬಂದು
ನನ್ನ ಮಾತನ್ನು ಕೇಳಿರಿ ಎಂದಾಗ ಅವರು ಬಂದರು.
6 “ಕೆಲಸಗಾರರು ಒಬ್ಬರಿಗೊಬ್ಬರು ಸಹಾಯ ಮಾಡುವರು. ಅವರು ಬಲಶಾಲಿಗಳಾಗಬೇಕೆಂದು ಪರಸ್ಪರ ಪ್ರೋತ್ಸಾಹಿಸುವರು.
7 ಒಬ್ಬ ಕೆಲಸಗಾರನು ಮರವನ್ನು ಕಡಿದು ಅದರಿಂದ ವಿಗ್ರಹವನ್ನು ಮಾಡುವನು. ಅವನು ಬಂಗಾರದ ಕೆಲಸದವನನ್ನು ಪ್ರೋತ್ಸಾಹಿಸುವನು. ಇನ್ನೊಬ್ಬನು ತನ್ನ ಸುತ್ತಿಗೆಯಿಂದ ತಗಡನ್ನು ಸಮತಟ್ಟು ಮಾಡುವನು. ಅವನು ಕಬ್ಬಿಣದ ಕೆಲಸದವನನ್ನು ಪ್ರೋತ್ಸಾಹಿಸುವನು. ಈ ಕೆಲಸದವನು ‘ಇದು ಒಳ್ಳೆಯ ಕೆಲಸ. ತಗಡು ಹೊರಗೆ ಬರಲಾರದು’ ಎಂದು ಹೇಳಿ ಆ ವಿಗ್ರಹವನ್ನು ಪೀಠಕ್ಕೆ ಮೊಳೆ ಹೊಡೆದು ಭದ್ರಪಡಿಸುವನು. ಈಗ ವಿಗ್ರಹವು ಅಲ್ಲಾಡುವದಿಲ್ಲ, ಕೆಳಕ್ಕೆ ಬೀಳುವದಿಲ್ಲ.”
ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸುವನು
8 ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ.
ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು.
ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.
9 ನೀನು ದೂರದೇಶದಲ್ಲಿದ್ದೆ.
ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು.
‘ನೀನು ನನ್ನ ಸೇವಕ’ ಎಂದು ಹೇಳಿದೆನು.
ನಾನು ನಿನ್ನನ್ನು ಆರಿಸಿಕೊಂಡೆನು.
ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.
10 ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು.
ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ.
ನಿನ್ನನ್ನು ಬಲಪಡಿಸುವೆನು.
ನಿನಗೆ ಸಹಾಯ ಮಾಡುವೆನು.
ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.
11 ನೋಡು, ಕೆಲವರು ನಿನ್ನ ಮೇಲೆ ಕೋಪಗೊಂಡಿದ್ದಾರೆ.
ಆದರೆ ಅವರು ನಾಚಿಕೆಪಡುವರು.
ನಿನ್ನ ಶತ್ರುಗಳು ಕಳೆದುಹೋಗಿ ಕಾಣದೆಹೋಗುವರು.
12 ನಿನಗೆ ವಿರುದ್ಧವಾಗಿದ್ದ ಜನರನ್ನು ನೀನು ಹುಡುಕುವೆ.
ಆದರೆ ಅವರು ನಿನಗೆ ಕಾಣಿಸುವುದಿಲ್ಲ.
ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ಕಾಣದೆಹೋಗುವರು.
13 ನಿನ್ನ ದೇವರಾದ ಯೆಹೋವನು ನಾನೇ.
ನಾನು ನಿನ್ನ ಬಲಗೈಯನ್ನು ಹಿಡಿದಿದ್ದೇನೆ.
‘ನೀನು ಹೆದರಬೇಡ, ನಾನೇ ನಿನಗೆ ಸಹಾಯ ಮಾಡುತ್ತೇನೆ’
ಎಂದು ಹೇಳುತ್ತಿದ್ದೇನೆ.
14 ನನಗೆ ಅಮೂಲ್ಯವಾದ ಯಾಕೋಬೇ, ಭಯಪಡಬೇಡ.
ನನ್ನ ಪ್ರಿಯ ಇಸ್ರೇಲೇ, ಹೆದರಬೇಡ.
ನಾನು ನಿಜವಾಗಿಯೂ ನಿನಗೆ ಸಹಾಯ ಮಾಡುತ್ತೇನೆ.”
ಇದು ಯೆಹೋವನ ನುಡಿ.
“ಇಸ್ರೇಲರ ಪರಿಶುದ್ಧನೂ ನಿನ್ನನ್ನು ರಕ್ಷಿಸುವಾತನೂ
ಈ ಮಾತುಗಳನ್ನು ಹೇಳಿದ್ದಾನೆ:
15 ಇಗೋ, ನಾನು ನಿನ್ನನ್ನು ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ. ಅದಕ್ಕೆ ಅನೇಕ ಹರಿತವಾದ ಹಲ್ಲುಗಳಿವೆ.
ಬೇಸಾಯಗಾರರು ಧಾನ್ಯವನ್ನು ಹುಲ್ಲಿನಿಂದ ಪ್ರತ್ಯೇಕಿಸುವದಕ್ಕಾಗಿ ಅದನ್ನು ಉಪಯೋಗಿಸುವರು.
ನೀವು ಬೆಟ್ಟದ ಶಿಖರಗಳಲ್ಲಿ ತುಳಿದಾಡಿ ಅದನ್ನು ಪುಡಿ ಮಾಡುವಿರಿ.
ಆ ಬೆಟ್ಟಗಳನ್ನು ನೀವು ಕುಂಟೆಯಂತೆ ಮಾಡುವಿರಿ.
16 ನೀವು ಅವುಗಳನ್ನು ಗಾಳಿಗೆ ತೂರಿಬಿಡುವಿರಿ.
ಗಾಳಿಯು ಅವುಗಳನ್ನು ಹಾರಿಸಿ ಚದರಿಸಿಬಿಡುವುದು.
ಆಗ ನೀವು ಯೆಹೋವನಲ್ಲಿ ಸಂತಸಪಡುವಿರಿ.
ಇಸ್ರೇಲರ ಪರಿಶುದ್ಧನಲ್ಲಿ ಹೆಚ್ಚಳಪಡುವಿರಿ.
17 “ಬಡಜನರು ನೀರಿಗಾಗಿ ಹುಡುಕಾಡುವರು.
ಆದರೆ ನೀರು ಅವರಿಗೆ ದೊರಕುವದಿಲ್ಲ.
ಅವರು ದಾಹಗೊಂಡಿದ್ದಾರೆ, ಅವರ ನಾಲಿಗೆ ಒಣಗಿಹೋಗಿದೆ.
ನಾನು ಅವರ ಮೊರೆಯನ್ನು ಕೇಳುವೆನು.
ನಾನು ಅವರನ್ನು ತೊರೆಯುವುದಿಲ್ಲ, ಅವರನ್ನು ಸಾಯಲು ಬಿಡುವುದಿಲ್ಲ.
18 ಒಣಬೆಟ್ಟಗಳಲ್ಲಿ ನದಿಗಳು ಹರಿಯುವಂತೆ ನಾನು ಮಾಡುವೆನು.
ಕಣಿವೆಗಳ ಮೂಲಕ ಬುಗ್ಗೆಯ ನೀರು ಹರಿಯುವಂತೆ ಮಾಡುವೆನು.
ಮರುಭೂಮಿಯನ್ನು ಸರೋವರವನ್ನಾಗಿ ಮಾಡುವೆನು.
ಆ ಒಣನೆಲದಲ್ಲಿ ನೀರಿನ ಬುಗ್ಗೆಗಳು ಕಾಣುವವು.
19 ಮರುಭೂಮಿಯ ಮೇಲೆ ಮರಗಳು ಬೆಳೆಯುವವು.
ಅಲ್ಲಿ ದೇವದಾರು, ಆಲೀವ್, ಕಸ್ತೂರಿಜಾಲಿ, ತುರಾಯಿ, ತಪಸಿ ಮತ್ತು ತಿಲಕ ವೃಕ್ಷಗಳು ಇರುವವು.
20 ಜನರು ಇವುಗಳನ್ನು ನೋಡಿ,
ಇವು ಯೆಹೋವನ ಶಕ್ತಿಯಿಂದ ಆದವು ಎಂದು ತಿಳಿದುಕೊಳ್ಳುವರು.
ಜನರು ಈ ಸಂಗತಿಗಳನ್ನು ನೋಡಿ ಇಸ್ರೇಲರ ಪರಿಶುದ್ಧನಾದ ಯೆಹೋವನೇ
ಇವುಗಳನ್ನು ಮಾಡಿದನೆಂದು ತಿಳಿದುಕೊಳ್ಳುವರು.”
ಸುಳ್ಳುದೇವರಿಗೆ ಯೆಹೋವನ ಸವಾಲು
21 ಯಾಕೋಬ್ಯರ ಅರಸನಾದ ಯೆಹೋವನು ಹೇಳುವುದೇನೆಂದರೆ: “ಬನ್ನಿ ನಿಮ್ಮ ವಾದಗಳನ್ನು ಮಂಡಿಸಿರಿ, ನಿಮ್ಮ ಆಧಾರಗಳನ್ನು ತೋರಿಸಿರಿ.
22 ನಿಮ್ಮ ವಿಗ್ರಹಗಳು ನಮ್ಮ ಬಳಿಗೆ ಬಂದು ನಡೆಯುತ್ತಿರುವುದನ್ನು ತಿಳಿಸಲಿ. ಪ್ರಾರಂಭದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ನಮಗೆ ತಿಳಿಸಿರಿ. ನಾವು ಸೂಕ್ಷ್ಮವಾಗಿ ಕೇಳಿ ಭವಿಷ್ಯವನ್ನು ತಿಳಿದುಕೊಳ್ಳುವೆವು.
23 ಮುಂದೆ ಸಂಭವಿಸುವುದನ್ನು ತಿಳಿದುಕೊಳ್ಳಲು ನಾವು ಯಾವ ಸೂಚನೆಗಳಿಗಾಗಿ ಎದುರು ನೋಡಬೇಕು? ತಿಳಿಸಿರಿ. ನೀವೇ ದೇವರುಗಳೆಂದು ಆಗ ನಮಗೆ ಖಚಿತವಾಗುವುದು. ಏನನ್ನಾದರೂ ಮಾಡಿರಿ. ಯಾವದನ್ನಾದರೂ ಮಾಡಿರಿ. ಒಳ್ಳೆಯದನ್ನು, ಕೆಟ್ಟದ್ದನ್ನು ಮಾಡಿರಿ. ಆಗ ನೀವು ಜೀವವುಳ್ಳವರೆಂದು ತಿಳಿದು ನಿಮಗೆ ಗೌರವಿಸಿ, ಭಯಪಟ್ಟು ನಿಮ್ಮನ್ನು ಹಿಂಬಾಲಿಸುವೆವು.
24 “ಸುಳ್ಳುದೇವರುಗಳೇ, ಕೇಳಿ. ನೀವು ಶೂನ್ಯಕ್ಕಿಂತ ಕಡಿಮೆಯಾದವರು. ನೀವು ಏನನ್ನೂ ಮಾಡಲಾರಿರಿ. ದೇವರ ದೃಷ್ಠಿಯಲ್ಲಿ ತುಚ್ಛನಾದವನು ಮಾತ್ರ ನಿಮ್ಮನ್ನು ಪೂಜಿಸುವನು.”
ಯೆಹೋವನೊಬ್ಬನೇ ದೇವರು
25 “ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು.
ಅವನು ಪೂರ್ವದಿಕ್ಕಿನಿಂದ ಬರುವನು.
ನನ್ನ ನಾಮವನ್ನು ಅವನು ಆರಾಧಿಸುವನು.
ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು.
26 “ಇವುಗಳು ಸಂಭವಿಸುವ ಮೊದಲೇ ಇವುಗಳನ್ನು ತಿಳಿಸಿದಾತನನ್ನೇ ದೇವರೆಂದು ಕರೆಯಬೇಕು.
ನಿಮ್ಮ ವಿಗ್ರಹಗಳಲ್ಲಿ ಯಾವದಾದರೂ ನಮಗೆ ಇದನ್ನು ತಿಳಿಸಿತೋ?
ಯಾವ ವಿಗ್ರಹವೂ ನಮಗೆ ಇವುಗಳ ವಿಷಯದಲ್ಲಿ ತಿಳಿಸಲಿಲ್ಲ.
ಆ ವಿಗ್ರಹಗಳು ಒಂದು ಮಾತನ್ನಾದರೂ ಹೇಳಲಿಲ್ಲ;
ಮತ್ತು ನೀವು ಹೇಳಿದ್ದನ್ನು ಆ ಸುಳ್ಳುದೇವರುಗಳು ಕೇಳಿಸಿಕೊಳ್ಳುವದೂ ಇಲ್ಲ.
27 ಈ ವಿಷಯಗಳ ಬಗ್ಗೆ ತಿಳಿಸಿದವರಲ್ಲಿ ಯೆಹೋವನೆಂಬ ನಾನೇ ಮೊದಲನೆಯವನು.
‘ನೋಡು ನಿನ್ನ ಜನರು ಹಿಂತಿರುಗಿ ಬರುತ್ತಿದ್ದಾರೆ’
ಎಂಬ ಸಂದೇಶವನ್ನು ನಾನು ಜೆರುಸಲೇಮಿಗೆ ಕಳುಹಿಸಿದೆನು.”
28 ನಾನು ಆ ಸುಳ್ಳುದೇವರುಗಳನ್ನು ದೃಷ್ಟಿಸಿ ನೋಡಿದೆನು.
ಅವುಗಳಲ್ಲಿ ಯಾವುದೂ ಮಾತಾಡುವಷ್ಟು ಜ್ಞಾನಿಯಾಗಿರಲಿಲ್ಲ.
ನಾನು ಅವುಗಳನ್ನು ಪ್ರಶ್ನಿಸಿದೆನು.
ಆದರೆ ಅವು ಉತ್ತರಿಸಲಿಲ್ಲ.
29 ಆ ದೇವರುಗಳೆಲ್ಲಾ ಶೂನ್ಯಕ್ಕಿಂತಲೂ ಕಡಿಮೆಯೇ.
ಅವುಗಳು ಏನೂ ಮಾಡಲಾರವು.
ಆ ಪ್ರತಿಮೆಗಳು ಸಂಪೂರ್ಣವಾಗಿ ಬೆಲೆಯಿಲ್ಲದವುಗಳಾಗಿವೆ.
ಅವುಗಳು ಖಂಡಿತವಾಗಿಯೂ ನಿಷ್ಪ್ರಯೋಜಕವಾದವುಗಳಾಗಿವೆ.