5
ಇಸ್ರೇಲು ದೇವರ ವಿಶೇಷವಾದ ತೋಟ
1 ನನ್ನ ಪ್ರಿಯನನ್ನೂ ಆತನ ತೋಟವನ್ನೂ ಕುರಿತು ಗೀತೆಯೊಂದನ್ನು ಹಾಡುವೆ.
ಫಲವತ್ತಾದ ಪ್ರದೇಶದಲ್ಲಿ
ನನ್ನ ಪ್ರಿಯನಿಗೆ ದ್ರಾಕ್ಷಿತೋಟವಿತ್ತು.
2 ಆತನು ಭೂಮಿಯನ್ನು ಅಗೆದು ಹಸನು ಮಾಡಿದನು;
ಅದರಲ್ಲಿ ಉತ್ತಮವಾದ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.
ತೋಟದ ಮಧ್ಯದಲ್ಲಿ ಒಂದು ಗೋಪುರವನ್ನು ಕಟ್ಟಿಸಿ
ದ್ರಾಕ್ಷಿಯ ತೊಟ್ಟಿಯನ್ನು ಮಾಡಿಸಿದನು.
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡತೊಡಗಿದನು.
ಆದರೆ ಅದು ಹೊಲಸು ಹಣ್ಣನ್ನು ಬಿಟ್ಟಿತು.
3 ಆಗ ಆತನು, “ಜೆರುಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ನನ್ನ ವಿಚಾರವಾಗಿಯೂ
ನನ್ನ ದ್ರಾಕ್ಷಿತೋಟದ ವಿಚಾರವಾಗಿಯೂ ಯೋಚಿಸಿರಿ.
4 ನನ್ನ ದ್ರಾಕ್ಷಿತೋಟಕ್ಕೆ ನಾನು ಇನ್ನೇನು ಮಾಡಬೇಕಿತ್ತು.
ನಾನು ಮಾಡಬೇಕಿದ್ದನ್ನೆಲ್ಲಾ ಮಾಡಿದೆನು.
ಒಳ್ಳೆಯ ದ್ರಾಕ್ಷಿಹಣ್ಣು ಬಿಡುವುದೆಂದು ಆಶಿಸಿದ್ದೆನು.
ಆದರೆ ಅದು ಹೊಲಸು ದ್ರಾಕ್ಷಿಗಳನ್ನೇ ಬಿಟ್ಟಿತು.
ಹೀಗೆ ಆದದ್ದೇಕೆ?
5 “ನಾನೀಗ ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡುವೆನೆಂದು ತಿಳಿಸುವೆನು:
ಅದರ ಸುತ್ತಲೂ ರಕ್ಷಣೆಗಾಗಿ ಹಾಕಿದ್ದ ಮುಳ್ಳಿನ ಬೇಲಿಯನ್ನು
ಕಿತ್ತು ಸುಟ್ಟುಬಿಡುವೆನು.
ಅದರ ಕಲ್ಲಿನ ಗೋಡೆಯನ್ನು ಕೆಡವಿ
ತುಳಿದಾಟಕ್ಕೆ ಈಡುಮಾಡುವೆನು.
6 ನಾನು ಅದನ್ನು ಬೆಂಗಾಡಾಗಿ ಮಾಡುವೆನು.
ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು. ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ.
ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು.
ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”
7 ಸರ್ವಶಕ್ತನಾದ ಯೆಹೋವನ ದ್ರಾಕ್ಷಿತೋಟವೇ ಇಸ್ರೇಲ್ ದೇಶ. ಯೆಹೋವನು ಪ್ರೀತಿಸುವ ದ್ರಾಕ್ಷಿಬಳ್ಳಿಯೇ ಯೆಹೂದದ ಪ್ರಜೆ.
ಯೆಹೋವನು ನ್ಯಾಯವನ್ನು ಅಪೇಕ್ಷಿಸಿದರೂ
ಸಿಕ್ಕಿದ್ದು ನರಹತ್ಯವೇ.
ಯೆಹೋವನು ಧರ್ಮವನ್ನು ಅಪೇಕ್ಷಿಸಿದರೂ
ದೊರಕಿದ್ದು ಗೋಳಾಟವೇ.
8 ನೀವು ಒಬ್ಬರಿಗೊಬ್ಬರು ಸಮೀಪದಲ್ಲಿ ವಾಸಿಸುತ್ತೀರಿ. ಬೇರೆ ಯಾವುದಕ್ಕೂ ಸ್ಧಳ ಸಿಗದಂತೆ ನೀವು ಹತ್ತಿರಹತ್ತಿರವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತೀರಿ. ಆದರೆ ಯೆಹೋವನು ನಿಮ್ಮನ್ನು ಶಿಕ್ಷಿಸಿ ಇಡೀ ದೇಶದಲ್ಲಿಯೇ ನೀವು ಒಬ್ಬಂಟಿಗರಾಗಿ ವಾಸಿಸುವಂತೆ ಮಾಡುವನು.
9 ಸರ್ವಶಕ್ತನಾದ ಯೆಹೋವನ ನುಡಿಗಳಿವು. ನಾನು ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ಈಗ ಅನೇಕ ಮನೆಗಳಿವೆ, ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಎಲ್ಲಾ ಮನೆಗಳು ಕೆಡವಲ್ಪಡುವವು. ಈಗ ಭವ್ಯವಾದ ಬಂಗಲೆಗಳಿವೆ, ಆದರೆ ಅವುಗಳೆಲ್ಲಾ ಬರಿದಾಗುವವು.
10 ಆ ದಿವಸಗಳಲ್ಲಿ ಹತ್ತು ಎಕರೆ ವಿಶಾಲವಾದ ದ್ರಾಕ್ಷಿತೋಟದಲ್ಲಿ ಸ್ವಲ್ಪ ಮಾತ್ರವೇ ದ್ರಾಕ್ಷಾರಸವು ದೊರಕುವದು. ಅನೇಕ ಚೀಲ ಬೀಜವನ್ನು ಬಿತ್ತಿದರೆ ಸ್ವಲ್ಪ ಧಾನ್ಯ ಮಾತ್ರ ಸಿಗುವುದು.”
11 ನೀವು ಮುಂಜಾನೆ ಎದ್ದು ಮದ್ಯಕ್ಕಾಗಿ ಹುಡುಕಾಡುವಿರಿ. ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಕುಡಿದು ಮತ್ತರಾಗುವಿರಿ.
12 ನೀವು ಕುಡಿಯುತ್ತಾ ಹಾರ್ಪ್ವಾದ್ಯಗಳನ್ನೂ ದಮ್ಮಡಿಗಳನ್ನೂ ಕೊಳಲುಗಳನ್ನೂ ಬಾರಿಸುತ್ತಾ ನೃತ್ಯಮಾಡುವಿರಿ. ಆದರೆ ಯೆಹೋವನು ಮಾಡಿದ ಕಾರ್ಯಗಳನ್ನು ನೀವು ಗಮನಿಸುವುದಿಲ್ಲ. ಯೆಹೋವನ ಹಸ್ತವು ಅನೇಕಾನೇಕ ಕಾರ್ಯಗಳನ್ನು ಮಾಡಿದೆ. ಆದರೆ ನೀವು ಅವುಗಳನ್ನು ಲಕ್ಷಿಸುವುದಿಲ್ಲ. ಆದ್ದರಿಂದ ನಿಮಗೆ ಕೇಡಾಗುವುದು.
13 ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. ಯಾಕೆಂದರೆ ಅವರು ನಿಜವಾಗಿಯೂ ನನ್ನನ್ನು ಅರಿತಿಲ್ಲ. ಇಸ್ರೇಲಿನಲ್ಲಿ ವಾಸಿಸುವ ಕೆಲವು ಜನರು ಈಗ ಪ್ರಮುಖರಾಗಿದ್ದಾರೆ. ತಮ್ಮ ಅನಾಯಾಸದ ಜೀವಿತದಲ್ಲಿ ಆನಂದಿಸುತ್ತಾರೆ. ಆದರೆ ಆ ಗಣ್ಯವ್ಯಕ್ತಿಗಳೆಲ್ಲಾ ಬಾಯಾರಿಕೆಯಿಂದಲೂ ಹಸಿವೆಯಿಂದಲೂ ನರಳುವರು.
14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.”
15 ಆ ಜನರು ತಗ್ಗಿಸಲ್ಪಡುವರು. ಆ ಗಣ್ಯವ್ಯಕ್ತಿಗಳು ತಮ್ಮ ತಲೆಗಳನ್ನು ಕೆಳಗೆ ಮಾಡಿ ನೆಲದ ಕಡೆಗೆ ನೋಡುವರು.
16 ಸರ್ವಶಕ್ತನಾದ ಯೆಹೋವನು ನೀತಿಯಿಂದ ನ್ಯಾಯತೀರಿಸುವನು. ಯೆಹೋವನು ಉನ್ನತೋನ್ನತನೆಂದು ಜನರೆಲ್ಲರೂ ಅರಿತುಕೊಳ್ಳುವರು. ಪರಿಶುದ್ಧನಾದ ದೇವರು ನ್ಯಾಯವಾದದ್ದನ್ನೇ ಮಾಡುವನು. ಜನರು ಆತನನ್ನು ಗೌರವಿಸುವರು.
17 ಆತನು ಇಸ್ರೇಲ್ ದೇಶದ ಜನರನ್ನು ದೇಶಭ್ರಷ್ಟರನ್ನಾಗಿ ಮಾಡುವನು. ಆಗ ದೇಶವು ಬರಿದಾಗುವುದು. ಕುರಿಗಳು ತಮ್ಮ ಮನಸ್ಸು ಬಂದೆಡೆಗೆ ಹೋಗುವವು. ಐಶ್ವರ್ಯವಂತರಿಗೆ ಸೇರಿದ್ದ ಜಮೀನಿನ ಮೇಲೆ ಕುರಿಮರಿಗಳು ನಡೆದಾಡುವವು.
18 ಆ ಜನರನ್ನು ನೋಡಿರಿ. ಜನರು ಹಗ್ಗಗಳಿಂದ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಅವರು ತಮ್ಮ ಪಾಪಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ.
19 ಅವರು, “ದೇವರು ತಾನು ಮಾಡಲಿಕ್ಕಿರುವುದನ್ನು ಬೇಗನೇ ಮಾಡಿಮುಗಿಸಲಿ. ಆಗ ಏನಾಗುವದೋ ನೋಡೋಣ. ಆತನ ಯೋಜನೆ ಬೇಗನೆ ಕಾರ್ಯರೂಪಕ್ಕೆ ಬರಲಿ. ಆಗ ಆತನ ಯೋಜನೆ ಏನೆಂಬುದು ನಮಗೆ ತಿಳಿಯುವುದು” ಎಂದು ಹೇಳುತ್ತಿದ್ದಾರೆ.
20 ಆ ಜನರು ಒಳ್ಳೆಯವುಗಳನ್ನು ಕೆಟ್ಟವುಗಳೆಂದೂ ಕೆಟ್ಟವುಗಳನ್ನು ಒಳ್ಳೆಯವುಗಳೆಂದೂ ಹೇಳುತ್ತಾರೆ. ಅವರು ಬೆಳಕನ್ನು ಕತ್ತಲೆಯೆಂದೂ ಕತ್ತಲೆಯನ್ನು ಬೆಳಕೆಂದೂ ಅನ್ನುತ್ತಾರೆ. ಅವರು ಸಿಹಿಯನ್ನು ಕಹಿಯೆಂದೂ ಕಹಿಯನ್ನು ಸಿಹಿಯೆಂದೂ ಹೇಳುವರು.
21 ಅವರು ತಾವು ತುಂಬಾ ಬುದ್ಧಿವಂತರೆಂದೂ ಜ್ಞಾನಿಗಳೆಂದೂ ಹೇಳಿಕೊಳ್ಳುವರು.
22 ಅವರು ಮದ್ಯವನ್ನು ಬೆರೆಸುವುದರಲ್ಲಿ ಪರಿಣಿತರು; ಮದ್ಯಸೇವನೆ ಮಾಡುವದಕ್ಕೆ ಹೆಸರಾದವರು.
23 ಅವರಿಗೆ ಹಣಕೊಟ್ಟರೆ, ಅಪರಾಧಿಯನ್ನೂ ಬಿಟ್ಟುಬಿಡುವರು; ಆದರೆ ಒಳ್ಳೆಯವರಿಗೆ ಸರಿಯಾದ ನ್ಯಾಯತೀರ್ಪು ದೊರಕಲು ಅವರು ಅವಕಾಶ ಕೊಡುವುದಿಲ್ಲ.
24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು.
ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ.
25 ಆದ್ದರಿಂದ ಯೆಹೋವನು ತನ್ನ ಜನರ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ಯೆಹೋವನು ತನ್ನ ಕೈಗಳನ್ನೆತ್ತಿ ಅವರನ್ನು ಶಿಕ್ಷಿಸುವನು. ಆಗ ಪರ್ವತಗಳೂ ಹೆದರಿಕೊಳ್ಳುವವು; ಹೆಣಗಳು ಕಸದಂತೆ ರಸ್ತೆಗಳಲ್ಲಿ ಬಿದ್ದುಕೊಂಡಿರುವವು. ಆದರೆ ದೇವರು ಅವರ ಮೇಲೆ ಕೋಪಿಸಿಕೊಂಡೇ ಇರುವನು. ಜನರನ್ನು ಶಿಕ್ಷಿಸಲು ಆತನ ಕೈಗಳು ಮೇಲೆತ್ತಲ್ಪಟ್ಟಿರುವವು.
ಇಸ್ರೇಲರನ್ನು ಶಿಕ್ಷಿಸಲು ದೇವರು ಸೈನ್ಯವನ್ನು ತರುವನು
26 ಎದ್ದು ನೋಡು! ದೂರದೇಶದ ಜನಾಂಗಗಳಿಗೆ ದೇವರು ಗುರುತನ್ನು ಕೊಡುತ್ತಿದ್ದಾನೆ. ಆತನು ಧ್ವಜವನ್ನೆತ್ತಿ ಆ ಜನರನ್ನು ಸಿಳ್ಳುಹಾಕಿ ಕರೆಯುತ್ತಿದ್ದಾನೆ.
ಶತ್ರುಗಳು ದೂರದೇಶದಿಂದ ಬರುತ್ತಿದ್ದಾರೆ. ಅವರು ಬೇಗನೆ ನಿನ್ನ ದೇಶವನ್ನು ಪ್ರವೇಶಿಸುವರು. ಅವರು ಬಹುವೇಗವಾಗಿ ಬರುತ್ತಿದ್ದಾರೆ.
27 ಶತ್ರುಗಳು ಆಯಾಸಗೊಳ್ಳುವುದಿಲ್ಲ, ನೆಲಕ್ಕೆ ಬೀಳುವುದಿಲ್ಲ. ಅವರು ತೂಕಡಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ. ಅವರ ಸೊಂಟಪಟ್ಟಿಯು ಆಯುಧದೊಂದಿಗೆ ಯಾವಾಗಲೂ ಸಿದ್ಧವಾಗಿರುವುದು. ಅವರ ಪಾದರಕ್ಷೆಗಳ ದಾರವು ಎಂದಿಗೂ ತುಂಡಾಗುವದಿಲ್ಲ.
28 ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.
29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ.
30 ಆದ್ದರಿಂದ ಸಮುದ್ರವು ಭೋರ್ಗರೆಯವಂತೆ ಆ ದಿನದಲ್ಲಿ ಗರ್ಜನೆಯಿರುವುದು. ಸೆರೆಹಿಡಿಯಲ್ಪಟ್ಟ ಜನರು ನೆಲದ ಕಡೆ ನೋಡುವರು. ಅಲ್ಲಿ ಬರೇ ಕತ್ತಲೆಯೇ. ಆ ದಟ್ಟವಾದ ಮೋಡಗಳಲ್ಲಿ ಎಲ್ಲವೂ ಕಪ್ಪಾಗಿಯೇ ಕಾಣುತ್ತದೆ.