2
ಯೇಸು ನಮ್ಮ ಸಹಾಯಕ
1 ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ.
2 ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.
3 ದೇವರ ಆಜ್ಞೆಗಳಿಗೆ ನಾವು ವಿಧೇಯರಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ.
4 “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ.
5 ಆದರೆ ಯಾವನಾದರೂ ದೇವರ ವಾಕ್ಯಕ್ಕೆ ವಿಧೇಯನಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇದರಿಂದಲೇ ತಿಳಿದುಕೊಳ್ಳುತ್ತೇವೆ.
6 ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೇಸು ಜೀವಿಸಿದಂತೆಯೇ ಜೀವಿಸಬೇಕು.
ಇತರರನ್ನು ಪ್ರೀತಿಸಿ
7 ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ.
8 ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ.
10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ.
11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.
12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ.
16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ.
17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.
ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ
18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ.
19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.
20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ.
21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.
22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ.
23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.
24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ.
25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.
26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.
28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ.
29 ಕ್ರಿಸ್ತನು ನೀತಿವಂತನೆಂಬುದು ನಿಮಗೆ ತಿಳಿದಿದೆ. ಆದ್ದರಿಂದ ಯೋಗ್ಯವಾದುದನ್ನು ಮಾಡುವ ಜನರೆಲ್ಲರೂ ದೇವರ ಮಕ್ಕಳೆಂಬುದು ನಿಮಗೆ ತಿಳಿದಿದೆ.