14
ಯೋಬನು ಹೇಳಿದನು:
 
“ನಾವು ಮನುಷ್ಯರಷ್ಟೇ.
ನಮ್ಮ ಅಲ್ಪಜೀವಿತವು ಕಷ್ಟಗಳಿಂದ ತುಂಬಿಕೊಂಡಿದೆ.
ಮನುಷ್ಯನ ಜೀವಿತವು ಹೂವಿನಂತೆ ಬೇಗನೆ ಬೆಳೆದು ಒಣಗಿಹೋಗುವುದು.
ಮನುಷ್ಯನ ಜೀವಿತವು ನೆರಳಿನಂತೆ ಕ್ಷಣಿಕವಾದದ್ದು.
ದೇವರೇ, ಇಂಥವನಾದ ನನ್ನ ಮೇಲೆ ಕಣ್ಣಿಟ್ಟು
ನ್ಯಾಯಾಲಯಕ್ಕೆ ಎಳೆದುಕೊಂಡು ಹೋಗುವಿಯಾ?
 
“ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.
ಮನುಷ್ಯನ ದಿನಗಳು ಇಷ್ಟೇ ಎಂದು ನಿರ್ಣಯವಾಗಿದೆ;
ಅವನ ತಿಂಗಳುಗಳನ್ನು ನೀನು ನಿರ್ಣಯಿಸಿರುವೆ.
ಅವನ ಆಯುಷ್ಯಕ್ಕೆ ದಾಟಲಾರದ ಮೇರೆಯನ್ನು ಹಾಕಿರುವೆ.
ದೇವರೇ, ನಿನ್ನ ದೃಷ್ಟಿಯನ್ನು ಮನುಷ್ಯನ ಕಡೆಯಿಂದ ತಿರುಗಿಸು.
ಅವನನ್ನು ಅವನ ಪಾಡಿಗೆ ಬಿಟ್ಟುಬಿಡು. ಅವನು ಕೂಲಿಯವನಂತಾದರೂ ಜೀವಿಸಲಿ.
 
“ಮರಕ್ಕೆ ನಿರೀಕ್ಷೆಯಿದೆ.
ಕಡಿದುಹಾಕಲ್ಪಟ್ಟರೂ ಅದು ಮತ್ತೆ ಚಿಗುರಬಹುದು;
ಹೊಸ ಕವಲುಗಳನ್ನು ಮೊಳೆಯಿಸುತ್ತಲೇ ಇರುವುದು.
ಅದರ ಬೇರುಗಳು ನೆಲದೊಳಗೆ ಮುದಿಯಾದರೂ
ಅದರ ಬುಡವು ನೆಲದಲ್ಲಿ ಸತ್ತುಹೋದರೂ,
ಅದು ನೀರಿನಿಂದ ಮತ್ತೆ ಹೊಸದಾಗಿ ಬೆಳೆಯುವುದು;
ಎಳೆ ಗಿಡದಂತೆ ಕವಲೊಡೆಯುವುದು.
10 ಮನುಷ್ಯನಾದರೋ ಸತ್ತು ಕೊನೆಗೊಳ್ಳುವನು.
ಪ್ರಾಣ ಹೋದಾಗ ಇಲ್ಲವಾಗುವನು.
11 ಸರೋವರದಿಂದ ನೀರು ಕಾಣೆಯಾಗುವವರೆಗೂ
ನದಿಯ ನೀರು ಒಣಗಿಹೋಗುವವರೆಗೂ
12 ಸತ್ತ ಮನುಷ್ಯನು ಮಲಗಿಕೊಂಡೇ ಇರುವನು.
ಅವನು ಮತ್ತೆ ಮೇಲೇಳುವುದಿಲ್ಲ.
ಆಕಾಶವು ಅಳಿದುಹೋಗುವವರೆಗೆ
ಅವನು ನಿದ್ರೆಯಿಂದ ಎಬ್ಬಿಸಲ್ಪಡುವುದಿಲ್ಲ.
 
13 “ನಿನ್ನ ಕೋಪವು ಇಳಿಯುವ ತನಕ ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟಿದ್ದು,
ನೀನು ಗೊತ್ತುಪಡಿಸಿದ ಸಮಯದಲ್ಲಿ ನನ್ನನ್ನು ಜ್ಞಾಪಿಸಿಕೊಂಡಿದ್ದರೆ
ಎಷ್ಟೋ ಒಳ್ಳೆಯದಾಗುತ್ತಿತ್ತು.
14 ಸತ್ತ ಮನುಷ್ಯನು ಮತ್ತೆ ಬದುಕುವನೇ?
ಬದುಕುವುದಾಗಿದ್ದರೆ, ನನಗೆ ಬಿಡುಗಡೆಯಾಗುವ ತನಕ ನನ್ನ ಎಲ್ಲಾ ಕಷ್ಟದ ದಿನಗಳಲ್ಲಿಯೂ ಕಾದುಕೊಂಡಿರುವೆ.
15 ದೇವರೇ, ನೀನು ನನ್ನನ್ನು ಕರೆದರೆ,
ಉತ್ತರ ಕೊಡುವೆನು.
ಆಗ ನಿನ್ನ ಸೃಷ್ಟಿಯಾದ ನನ್ನನ್ನು
ನೀನು ಇಷ್ಟಪಡುವೆ.
16 ನಾನಿಡುವ ಪ್ರತಿ ಹೆಜ್ಜೆಯನ್ನೂ ನೀನು ಗಮನಿಸುವೆ.
ಆದರೆ ನೀನು ನನ್ನ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
17 ನನ್ನ ಪಾಪಗಳನ್ನು ಚೀಲದಲ್ಲಿಟ್ಟು ಮುದ್ರಿಸಿ
ದೂರಕ್ಕೆ ಎಸೆದುಬಿಡುವೆ.
 
18 “ಪರ್ವತವು ಬಿದ್ದು ಕರಗಿಹೋಗುವಂತೆ
ಬಂಡೆಯು ತನ್ನ ಸ್ಥಳದಿಂದ ಚಲಿಸುವುದು.
19 ಹರಿಯುವ ನೀರು ಕಲ್ಲುಗಳನ್ನು ಸವೆಯಿಸುವಂತೆಯೂ
ನೆಲದ ಮೇಲಿನ ಧೂಳನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋಗುವಂತೆಯೂ
ದೇವರೇ, ನೀನು ಮನುಷ್ಯನ ನಿರೀಕ್ಷೆಯನ್ನು ನಾಶಮಾಡುವೆ.
20 ನೀನು ಮನುಷ್ಯನನ್ನು ಶಾಶ್ವತವಾಗಿ ಸೋಲಿಸಿಬಿಡುವೆ.
ಆಗ ಮನುಷ್ಯನು ಇಲ್ಲವಾಗುವನು.
ನೀನು ಅವನ ಮುಖವನ್ನು ವಿಕಾರಗೊಳಿಸಿ
ಶಾಶ್ವತವಾಗಿ ಕಳುಹಿಸಿಬಿಡುವೆ.
21 ಅವನ ಮಕ್ಕಳಿಗೆ ಸನ್ಮಾನವಾದರೂ ಅವನಿಗೆ ತಿಳಿಯುವುದಿಲ್ಲ;
ಅವರಿಗೆ ಅವಮಾನವಾದರೂ ಅವನಿಗೆ ಅದರ ಅರಿವೇ ಇರುವುದಿಲ್ಲ.
22 ಅವನು ತನ್ನ ದೇಹದಲ್ಲಿ ನೋವನ್ನೇ ಅನುಭವಿಸುತ್ತಾ
ತನಗೋಸ್ಕರ ಗೋಳಾಡುವನು.”