23
ಯೋಬನ ಉತ್ತರ
ಆಗ ಯೋಬನು ಹೀಗೆಂದನು:
 
“ನಾನಿನ್ನೂ ಸಂಕಟದಲ್ಲಿರುವುದರಿಂದ
ಈ ಹೊತ್ತು ಸಹ ನಾನು ದೂರು ಹೇಳುವೆನು.
ಆಹಾ, ದೇವರ ದರ್ಶನವು ನನಗೆ ಎಲ್ಲಿ ಆಗುವುದು?
ಆತನ ಬಳಿಗೆ ನಾನು ಹೇಗೆ ಹೋಗಬೇಕು? ನನಗೆ ಗೊತ್ತಾಗಿದ್ದರೆ ಎಷ್ಟೋ ಮೇಲು!
ಆಗ ನಾನು ದೇವರಿಗೆ ನನ್ನ ವ್ಯಾಜ್ಯದ ಬಗ್ಗೆ ವಿವರಿಸುತ್ತಿದ್ದೆನು;
ನಾನು ನಿರಪರಾಧಿಯೆಂದು ನಿರೂಪಿಸಲು ನನ್ನ ಬಾಯನ್ನು ವಾದಗಳಿಂದ ತುಂಬಿಸಿಕೊಳ್ಳುತ್ತಿದ್ದೆನು.
ದೇವರ ಪ್ರತ್ಯುತ್ತರವನ್ನು ನಾನು ಕೇಳಬಯಸುವೆ.
ಆತನ ಉತ್ತರಗಳನ್ನು ಅರ್ಥಮಾಡಿಕೊಳ್ಳಬಯಸುವೆ.
ದೇವರು ತನ್ನ ಮಹಾಶಕ್ತಿಯನ್ನು ನನಗೆ ವಿರೋಧವಾಗಿ ಬಳಸುವನೇ? ಇಲ್ಲ,
ಆತನು ನನಗೆ ಕಿವಿಗೊಡುವನು!
ನಾನು ಯಥಾರ್ಥನಾಗಿರುವೆ. ದೇವರು ನನ್ನ ವಿಷಯವನ್ನು ಕೇಳುವನು;
ನನ್ನ ನ್ಯಾಯಾಧಿಪತಿಯು ನನ್ನನ್ನು ಬಿಡುಗಡೆ ಮಾಡುವನು.
 
“ಆದರೆ, ನಾನು ಪೂರ್ವಕ್ಕೆ ಹೋದರೂ ದೇವರು ಅಲ್ಲಿಲ್ಲ.
ನಾನು ಪಶ್ಚಿಮಕ್ಕೆ ಹೋದರೂ ದೇವರು ಅಲ್ಲಿಯೂ ನನಗೆ ಕಾಣುವುದಿಲ್ಲ.
ದೇವರು ಉತ್ತರದಿಕ್ಕಿನಲ್ಲಿ ಕಾರ್ಯನಿರತನಾಗಿರುವಾಗಲೂ ನನಗೆ ಕಾಣುವುದಿಲ್ಲ.
ದೇವರು ದಕ್ಷಿಣ ದಿಕ್ಕಿಗೆ ತಿರುಗಿಕೊಂಡಾಗಲೂ ನನಗೆ ಕಾಣುವುದಿಲ್ಲ.
10 ಆದರೆ ನನ್ನ ಪ್ರತಿಯೊಂದು ಹೆಜ್ಜೆಯನ್ನೂ ದೇವರು ಬಲ್ಲನು.
ಆತನು ನನ್ನನ್ನು ಪರೀಕ್ಷಿಸಿ ನೋಡಿದಾಗ ನಾನು ಅಪ್ಪಟ ಬಂಗಾರದಂತಿರುವುದನ್ನು ಕಂಡುಕೊಳ್ಳುವನು.
11 ಆತನ ಮಾರ್ಗದಲ್ಲೇ ನಾನು ನಡೆದಿದ್ದೇನೆ.
ನಾನು ಓರೆಯಾಗದೆ ಆತನ ಮಾರ್ಗವನ್ನೇ ಅನುಸರಿಸಿದ್ದೇನೆ.
12 ಆತನ ಆಜ್ಞೆಗಳನ್ನು ನಾನು ಮೀರಲೇ ಇಲ್ಲ,
ಆತನ ಬಾಯಿಂದ ಬಂದ ಮಾತುಗಳನ್ನು ಮೃಷ್ಟಾನ್ನಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದೇನೆ.
 
13 “ದೇವರು ಎಂದಿಗೂ ಬದಲಾಗುವುದಿಲ್ಲ.
ಯಾವನೂ ಆತನ ಮನಸ್ಸನ್ನು ಮಾರ್ಪಡಿಸಲಾರನು.
ದೇವರು ತಾನು ಬಯಸಿದ್ದನ್ನೇ ಮಾಡುವನು.
14 ದೇವರು ತನ್ನ ಆಲೋಚನೆಗೆ ತಕ್ಕಂತೆ ನನಗೆ ಮಾಡುವನು.
ಆತನಲ್ಲಿ ಇಂಥಾ ಸಂಕಲ್ಪಗಳು ಎಷ್ಟೋ ಇವೆ.
15 ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಭಯಭ್ರಾಂತನಾಗಿದ್ದೇನೆ.
ಇದನ್ನೆಲ್ಲಾ ಯೋಚಿಸುವಾಗ ಹೆದರಿಕೊಳ್ಳುತ್ತೇನೆ.
16 ನನ್ನ ಹೃದಯವನ್ನು ಕುಂದಿಸಿದವನೂ ದೇವರೇ.
ನನ್ನನ್ನು ಭಯಭ್ರಾಂತನನ್ನಾಗಿ ಮಾಡಿದವನೂ ಸರ್ವಶಕ್ತನಾದ ದೇವರೇ.
17 ಕಪ್ಪು ಮೋಡವು ನನ್ನ ಮುಖವನ್ನು ಕವಿದುಕೊಳ್ಳುವಂತೆ ಆಪತ್ತುಗಳು ನನಗೆ ಸಂಭವಿಸಿದವು.
ಆದರೆ ಕಾರ್ಗತ್ತಲೆಯೂ ನನ್ನನ್ನು ಮೌನಗೊಳಿಸಲಾರದು.