7
ಬೆಳಗಿನ ಜಾವ ಯೆರುಬ್ಬಾಳನು (ಗಿದ್ಯೋನನು) ಮತ್ತು ಅವನ ಎಲ್ಲಾ ಜನರು ಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಪಾಳೆಯ ಮಾಡಿಕೊಂಡರು. ಮಿದ್ಯಾನ್ಯರು ಮೋರೆ ಎಂಬ ಬೆಟ್ಟದ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡರು. ಇದು ಗಿದ್ಯೋನ ಮತ್ತು ಅವನ ಜನರ ಉತ್ತರಕ್ಕಿತ್ತು.
ಆಗ ಯೆಹೋವನು ಗಿದ್ಯೋನನಿಗೆ, “ನಾನು ಮಿದ್ಯಾನ್ಯರನ್ನು ಸೋಲಿಸಲು ನಿನ್ನ ಜನರಿಗೆ ಸಹಾಯ ಮಾಡುತ್ತೇನೆ. ಆದರೆ ಈ ಕೆಲಸಕ್ಕೆ ನಿನ್ನ ಜನರು ತುಂಬ ಹೆಚ್ಚು. ಇಸ್ರೇಲರು ನನ್ನನ್ನು ಮರೆತು ತಾವೇ ತಮ್ಮನ್ನು ರಕ್ಷಿಸಿಕೊಂಡೆವೆಂದು ಜಂಬಕೊಚ್ಚಿಕೊಳ್ಳುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿ ಈಗ, ‘ಭಯಪಡುವವರೆಲ್ಲರು ಗಿಲ್ಯಾದ್ ಬೆಟ್ಟವನ್ನು ಬಿಟ್ಟುಹೋಗಬಹುದು’ ಎಂದು ಪ್ರಕಟಿಸು” ಎಂದು ಹೇಳಿದನು.
ಆ ಸಮಯದಲ್ಲಿ ಇಪ್ಪತ್ತೆರಡು ಸಾವಿರ ಜನರು ಗಿದ್ಯೋನನನ್ನು ಬಿಟ್ಟು ಮನೆಗೆ ಹಿಂದಿರುಗಿದರು. ಆದರೆ ಇನ್ನೂ ಹತ್ತು ಸಾವಿರ ಜನರು ಉಳಿದುಕೊಂಡರು.
ಆಗ ಯೆಹೋವನು ಗಿದ್ಯೋನನಿಗೆ, “ಇನ್ನೂ ಬಹಳಷ್ಟು ಜನರಿದ್ದಾರೆ. ಇವರನ್ನು ನೀನು ನದಿಗೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗಾಗಿ ಪರೀಕ್ಷಿಸುತ್ತೇನೆ. ‘ಯಾವನು ನಿನ್ನ ಜೊತೆಯಲ್ಲಿ ಹೋಗಬಹುದು’ ಎಂದು ನಾನು ಹೇಳುತ್ತೇನೋ ಅವನು ಹೋಗಲಿ. ‘ಯಾವನು ನಿನ್ನ ಜೊತೆಯಲ್ಲಿ ಹೋಗುವುದು ಬೇಡ’ ಎಂದು ನಾನು ಹೇಳುತ್ತೇನೋ ಅವನು ಹೋಗದಿರಲಿ” ಎಂದು ಹೇಳಿದನು.
ಆದ್ದರಿಂದ ಗಿದ್ಯೋನನು ಅವರನ್ನು ನದಿಯ ಹತ್ತಿರ ಕರೆದುಕೊಂಡು ಹೋದನು. ಅಲ್ಲಿ ಯೆಹೋವನು ಗಿದ್ಯೋನನಿಗೆ, “ನೀರನ್ನು ನಾಯಿಯಂತೆ ತಮ್ಮ ನಾಲಿಗೆಯಿಂದ ನೆಕ್ಕಿ ಕುಡಿಯುವವರನ್ನು ಒಂದು ಗುಂಪನ್ನಾಗಿ ಮತ್ತು ನೆಲಕ್ಕೆ ಮೊಣಕಾಲೂರಿ ನೀರನ್ನು ಕುಡಿಯುವವರನ್ನು ಇನ್ನೊಂದು ಗುಂಪನ್ನಾಗಿ ವಿಂಗಡಿಸು” ಎಂದು ಹೇಳಿದನು.
ಅವರಲ್ಲಿ ಮೂನ್ನೂರು ಮಂದಿ ಗಂಡಸರು ಕೈಯಿಂದ ನೀರನ್ನು ಬಾಯಿಯವರೆಗೆ ತೆಗೆದುಕೊಂಡು ನಾಯಿಯಂತೆ ನೆಕ್ಕಿದರು. ಉಳಿದವರೆಲ್ಲರು ಬಗ್ಗಿ ಮೊಣಕಾಲೂರಿ ನೀರನ್ನು ಕುಡಿದರು. ಯೆಹೋವನು ಗಿದ್ಯೋನನಿಗೆ, “ನಾಯಿಯಂತೆ ನೀರನ್ನು ನೆಕ್ಕಿದ ಮುನ್ನೂರು ಮಂದಿಯಿಂದಲೇ ಮಿದ್ಯಾನ್ಯರನ್ನು ಸೋಲಿಸಿ ನಿಮ್ಮನ್ನು ರಕ್ಷಿಸುವೆನು. ಉಳಿದವರು ತಮ್ಮ ಮನೆಗಳಿಗೆ ಹೋಗಲಿ” ಎಂದು ಹೇಳಿದನು.
ಗಿದ್ಯೋನನು ಉಳಿದ ಇಸ್ರೇಲರನ್ನು ಮನೆಗೆ ಕಳುಹಿಸಿ ಆಯ್ಕೆಗೊಂಡ ಮುನ್ನೂರು ಜನರನ್ನು ಉಳಿಸಿಕೊಂಡನು. ಆ ಮುನ್ನೂರು ಜನರು ಮನೆಗೆ ಹಿಂತಿರುಗಿ ಹೋದವರ ಆಹಾರವನ್ನೂ ತುತ್ತೂರಿಗಳನ್ನೂ ತೆಗೆದುಕೊಂಡರು.
ಮಿದ್ಯಾನ್ಯರು ಗಿದ್ಯೋನನ ಪಾಳೆಯದ ಕೆಳಭಾಗದ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಅಂದು ರಾತ್ರಿ ಯೆಹೋವನು ಗಿದ್ಯೋನನಿಗೆ, “ಏಳು, ನೀನು ಮಿದ್ಯಾನ್ಯರ ಸೈನ್ಯವನ್ನು ಸೋಲಿಸುವಂತೆ ಮಾಡುತ್ತೇನೆ. ಅವರ ಪಾಳೆಯಕ್ಕೆ ಹೋಗು. 10 ಒಬ್ಬನೇ ಹೋಗಲು ನಿನಗೆ ಹೆದರಿಕೆಯಾದರೆ ನಿನ್ನ ಸೇವಕನಾದ ಪುರನನ್ನು ಜೊತೆಗೆ ಕರೆದುಕೊಂಡು ಹೋಗು. 11 ಮಿದ್ಯಾನ್ಯರ ಶಿಬಿರದ ಒಳಗಡೆ ಹೋಗಿ ಅವರ ಮಾತುಗಳನ್ನು ಕೇಳಿಸಿಕೋ. ಆಗ ನೀನು ಅವರ ಮೇಲೆ ಧಾಳಿಮಾಡುವುದಕ್ಕೆ ಹೆದರುವುದಿಲ್ಲ” ಎಂದನು.
ಗಿದ್ಯೋನನು ಮತ್ತು ಅವನ ಸೇವಕನಾದ ಪುರನು ಇಬ್ಬರೂ ಶತ್ರುಗಳ ಪಾಳೆಯದ ಗಡಿಯವರೆಗೂ ಹೋದರು. 12 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವದೇಶದ ಉಳಿದೆಲ್ಲ ಜನರು ಆ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿದ್ದರು. ಅವರು ಅಸಂಖ್ಯಾತವಾಗಿದ್ದು ಮಿಡತೆಯ ಗುಂಪಿನಂತೆ ಕಂಡರು. ಅವರಲ್ಲಿದ್ದ ಒಂಟೆಗಳೋ ಲೆಕ್ಕವಿಲ್ಲದ ಸಮುದ್ರ ತೀರದ ಮರಳಿನಂತೆ ಎದ್ದುಕಾಣುತ್ತಿದ್ದವು.
13 ಗಿದ್ಯೋನನು ಶತ್ರುಗಳ ಪಾಳೆಯಕ್ಕೆ ಬಂದಾಗ ಒಬ್ಬನ ಮಾತನ್ನು ಕೇಳಿಸಿಕೊಂಡನು. ಆ ಮನುಷ್ಯನು ತಾನು ಕಂಡ ಒಂದು ಕನಸಿನ ಬಗ್ಗೆ ತನ್ನ ಮಿತ್ರನಿಗೆ ಹೇಳುತ್ತಿದ್ದನು. “ನಾನು ಕನಸಿನಲ್ಲಿ ಒಂದು ದುಂಡಾದ ರೊಟ್ಟಿಯು ಉರುಳಿಕೊಂಡು ಮಿದ್ಯಾನ್ಯರ ಪಾಳೆಯದಲ್ಲಿ ಬರುವುದನ್ನು ಕಂಡೆ. ಆ ರೊಟ್ಟಿಯು ರಭಸದಿಂದ ಬಂದು ಒಂದು ಗುಡಾರಕ್ಕೆ ಅಪ್ಪಳಿಸಲು ಆ ಗುಡಾರವು ಕುಸಿದುಬಿತ್ತು” ಎಂದನು.
14 ಆ ಮನುಷ್ಯನ ಸ್ನೇಹಿತನು ಕನಸಿನ ಅರ್ಥವನ್ನು ತಿಳಿದುಕೊಂಡು ಅವನಿಗೆ, “ನಿನ್ನ ಕನಸು ಇಸ್ರೇಲಿನ ಯೋವಾಷನ ಮಗನಾದ ಗಿದ್ಯೋನನ ಕುರಿತಾಗಿದೆ. ಗಿದ್ಯೋನನು ಮಿದ್ಯಾನ್ಯರ ಇಡೀ ಸೈನ್ಯವನ್ನು ಸೋಲಿಸುವಂತೆ ದೇವರು ಮಾಡುತ್ತಾನೆ” ಎಂದನು.
15 ಕನಸಿನ ಬಗ್ಗೆ ಮತ್ತು ಅದರ ಅರ್ಥದ ಬಗ್ಗೆ ಅವರು ಮಾತನಾಡುವುದನ್ನು ಕೇಳಿದ ಗಿದ್ಯೋನನು ಯೆಹೋವನಿಗೆ ತಲೆಬಾಗಿ ನಮಸ್ಕರಿಸಿದನು. ಆಮೇಲೆ ಗಿದ್ಯೋನನು ಇಸ್ರೇಲರ ಪಾಳೆಯಕ್ಕೆ ಹಿಂದಿರುಗಿದನು. ಗಿದ್ಯೋನನು ಜನರನ್ನು, “ಏಳಿರಿ! ಯೆಹೋವನು ಮಿದ್ಯಾನ್ಯರನ್ನು ಸೋಲಿಸಲು ನಮಗೆ ಸಹಾಯ ಮಾಡುತ್ತಾನೆ” ಎಂದು ಕೂಗಿಕರೆದನು. 16 ಆಮೇಲೆ ಗಿದ್ಯೋನನು ಆ ಮುನ್ನೂರು ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಗಿದ್ಯೋನನು ಪ್ರತಿಯೊಬ್ಬನಿಗೆ ಒಂದು ತುತ್ತೂರಿ ಮತ್ತು ಒಂದು ಬರಿದಾದ ಮಣ್ಣಿನ ಪಾತ್ರೆಯನ್ನು ಕೊಟ್ಟನು. ಪ್ರತಿಯೊಂದು ಪಾತ್ರೆಯ ಒಳಗಡೆ ಒಂದು ಉರಿಯುತ್ತಿರುವ ಪಂಜು ಇತ್ತು. 17 ಗಿದ್ಯೋನನು ಅವರಿಗೆ, “ನನ್ನನ್ನು ಗಮನಿಸುತ್ತಾ ನಾನು ಮಾಡಿದಂತೆ ಮಾಡಿರಿ. ಶತ್ರುಗಳ ಪಾಳೆಯದ ಸೀಮೆಯವರೆಗೆ ನನ್ನನ್ನು ಹಿಂಬಾಲಿಸಿ ಬನ್ನಿ. ನಾನು ಪಾಳೆಯದ ಗಡಿಯನ್ನು ಮುಟ್ಟಿದ ಮೇಲೆ ನಾನು ಮಾಡಿದಂತೆಯೇ ಮಾಡಿರಿ. 18 ನೀವು ಶತ್ರುಗಳ ಪಾಳೆಯಕ್ಕೆ ಮುತ್ತಿಗೆ ಹಾಕಿರಿ. ನನ್ನ ಸಂಗಡವಿರುವ ಜನರು ತುತ್ತೂರಿಯನ್ನು ಊದುವರು. ನಾವು ನಮ್ಮ ತುತ್ತೂರಿಗಳನ್ನು ಊದಿದಾಗ ನೀವು ಸಹ ನಿಮ್ಮ ತುತ್ತೂರಿಗಳನ್ನು ಊದಿರಿ. ‘ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ,’ ಎಂದು ಕೂಗಿರಿ” ಎಂದು ಹೇಳಿದನು.
19 ಗಿದ್ಯೋನನು ಮತ್ತು ಅವನ ಜೊತೆಯಲ್ಲಿದ್ದ ನೂರು ಜನರು ಶತ್ರುಗಳ ಪಾಳೆಯದ ಬಳಿಗೆ ಹೋದರು. ಶತ್ರುಗಳ ಪಾಳೆಯದ ಕಾವಲುಗಾರರು ಬದಲಾದ ಕೂಡಲೆ ಅವರು ಅಲ್ಲಿಗೆ ಹೋಗಿದ್ದರು. ಆಗ ಮಧ್ಯರಾತ್ರಿಯಾಗಿತ್ತು. ಗಿದ್ಯೋನ ಮತ್ತು ಅವನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ಮಡಕೆಗಳನ್ನು ಒಡೆದುಹಾಕಿದರು. 20 ಆಗ ಗಿದ್ಯೋನನ ಮೂರು ಗುಂಪಿನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ತಮ್ಮ ಮಡಕೆಗಳನ್ನು ಒಡೆದುಹಾಕಿದರು. ಅವರು ಪಂಜುಗಳನ್ನು ತಮ್ಮ ಎಡಗೈಗಳಲ್ಲಿಯೂ ತುತ್ತೂರಿಗಳನ್ನು ತಮ್ಮ ಬಲಗೈಗಳಲ್ಲಿಯೂ ಹಿಡಿದುಕೊಂಡರು. ಅವರು ತಮ್ಮ ತುತ್ತೂರಿಗಳನ್ನು ಊದುತ್ತಾ “ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ” ಎಂದು ಕೂಗಿಕೊಂಡರು.
21 ಗಿದ್ಯೋನನ ಜನರು ನಿಂತಲ್ಲಿಯೇ ನಿಂತುಕೊಂಡರು. ಮಿದ್ಯಾನ್ಯರು ಕೂಗಿಕೊಂಡು ಓಡಿಹೋಗಲು ಆರಂಭಿಸಿದರು. 22 ಗಿದ್ಯೋನನ ಮುನ್ನೂರು ಜನರು ತಮ್ಮ ತುತ್ತೂರಿಗಳನ್ನು ಊದಿದ ಕೂಡಲೆ ಮಿದ್ಯಾನ್ಯರು ತಮ್ಮತಮ್ಮಲ್ಲಿಯೇ ಒಬ್ಬರನ್ನೊಬ್ಬರು ಕತ್ತಿಯಿಂದ ಇರಿದು ಕೊಲ್ಲುವಂತೆ ಯೆಹೋವನು ಮಾಡಿದನು. ಶತ್ರುಗಳ ಸೈನ್ಯವು ಚೆರೇರದ ದಾರಿಯಲ್ಲಿರುವ ಬೇತ್‌ಷಿಟ್ಟಿನವರೆಗೂ ಓಡಿಹೋಯಿತು. ಅವರು ಟಬ್ಬಾತಿನ ಬಳಿಯಲ್ಲಿರುವ ಅಬೇಲ್ಮೆಹೋಲಾ ನಗರದವರೆಗೂ ಓಡಿದರು.
23 ಆಗ ನಫ್ತಾಲಿ, ಆಶೇರ ಮತ್ತು ಮನಸ್ಸೆ ಕುಲಗಳ ಎಲ್ಲ ಸೈನಿಕರಿಗೆ ಮಿದ್ಯಾನ್ಯರನ್ನು ಬೆನ್ನಟ್ಟಲು ಹೇಳಲಾಯಿತು. 24 ಗಿದ್ಯೋನನು ಎಫ್ರಾಯೀಮ್ ಬೆಟ್ಟಪ್ರದೇಶಗಳಿಗೆ ದೂತರನ್ನು ಕಳುಹಿಸಿದನು. ಆ ದೂತರು, “ಬನ್ನಿ, ಮಿದ್ಯಾನ್ಯರ ಮೇಲೆ ಧಾಳಿ ಮಾಡಿರಿ. ಬೇತ್‌ಬಾರದವರೆಗಿನ ನದಿಯ ಮತ್ತು ಜೋರ್ಡನ್ ನದಿಯ ಪ್ರದೇಶವನ್ನು ಹಿಡಿದುಕೊಳ್ಳಿರಿ. ಮಿದ್ಯಾನ್ಯರು ಅಲ್ಲಿಗೆ ಬರುವ ಮೊದಲೇ ಈ ಕೆಲಸವನ್ನು ಮಾಡಿರಿ” ಎಂದು ತಿಳಿಸಿದರು.
ಅವರು ಎಫ್ರಾಯೀಮ್ ಕುಲದ ಎಲ್ಲ ಜನರನ್ನು ಕರೆದರು. ಅವರು ಬೇತ್‌ಬಾರಾದವರೆಗೆ ನದಿಯ ಪ್ರದೇಶವನ್ನು ಹಿಡಿದುಕೊಂಡರು. 25 ಎಫ್ರಾಯೀಮ್ಯರು ಮಿದ್ಯಾನ್ಯರ ಇಬ್ಬರು ನಾಯಕರನ್ನು ಹಿಡಿದುಕೊಂಡರು. ಆ ಇಬ್ಬರು ನಾಯಕರುಗಳ ಹೆಸರುಗಳು ಓರೇಬ್ ಮತ್ತು ಜೇಬ್. ಎಫ್ರಾಯೀಮ್ಯರು ಓರೇಬನನ್ನು, ಓರೇಬ್ ಬಂಡೆಯ ಮೇಲೆಯೂ ಜೇಬನನ್ನು, ಜೇಬ್ ದ್ರಾಕ್ಷಿಯ ಆಲೆಯಲ್ಲಿಯೂ ಕೊಂದುಹಾಕಿದರು. ಎಫ್ರಾಯೀಮ್ಯರು ಮಿದ್ಯಾನ್ಯರನ್ನು ಬೆನ್ನಟ್ಟುತ್ತಲೇ ಹೋದರು. ಅವರು ಓರೇಬ್ ಮತ್ತು ಜೇಬನ ತಲೆಗಳನ್ನು ಕತ್ತರಿಸಿ ಅವುಗಳನ್ನು ತೆಗೆದುಕೊಂಡು ಜೋರ್ಡನ್ ನದಿಯ ಹಾಯಗಡದಲ್ಲಿದ್ದ ಗಿದ್ಯೋನನ ಬಳಿಗೆ ತೆಗೆದುಕೊಂಡು ಬಂದರು.