4
ದೇವರ ಕರುಣೆಯು ಯೋನನನ್ನು ಕೋಪಗೊಳ್ಳುವಂತೆ ಮಾಡಿತು
1 ದೇವರು ಆ ನಗರವನ್ನು ಕಾಪಾಡಿದನೆಂದು ಯೋನನಿಗೆ ಸಂತೋಷವಾಗಲಿಲ್ಲ. ಯೋನನಿಗೆ ಸಿಟ್ಟು ಬಂದಿತು.
2 ಯೋನನು ಯೆಹೋವನಿಗೆ ದೂರು ಹೇಳುತ್ತಾ, “ಇದು ಹೀಗಾಗುತ್ತದೆಯೆಂದು ನನಗೆ ಗೊತ್ತಿತ್ತು. ನಾನು ನನ್ನ ದೇಶದಲ್ಲಿದ್ದೆ. ಇಲ್ಲಿಗೆ ಬರಲು ನನಗೆ ಹೇಳಿದವನು ನೀನೇ. ಈ ದುಷ್ಟಪಟ್ಟಣದ ಜನರನ್ನು ನೀನು ಕ್ಷಮಿಸುತ್ತೀ ಎಂದು ನನಗೆ ಆಗಲೇ ಗೊತ್ತಿತ್ತು. ಆದ್ದರಿಂದ ನಾನು ತಾರ್ಷೀಷಿಗೆ ಓಡಿಹೋಗಲು ನಿರ್ಧರಿಸಿದೆನು. ನೀನು ದಯಾಪರನಾದ, ಕೃಪಾಪೂರ್ಣನಾದ, ಕೋಪಗೊಳ್ಳುವುದರಲ್ಲಿ ನಿಧಾನವಾದ ಮತ್ತು ಮಹಾಕನಿಕರವುಳ್ಳ ದೇವರೆಂದು ನನಗೆ ಗೊತ್ತಿತ್ತು. ಆ ಜನರು ಪಾಪ ಮಾಡುವದನ್ನು ನಿಲ್ಲಿಸಿದರೆ, ನೀನು ನಿನ್ನ ಯೋಜನೆಯಂತೆ ಅವರನ್ನು ನಾಶಮಾಡುವುದಿಲ್ಲ ಎಂದು ನನಗೆ ಗೊತ್ತಿತ್ತು.
3 ಆದ್ದರಿಂದ ನಾನು ಹೇಳುವುದೇನೆಂದರೆ ನನ್ನ ದೇವರೇ ನೀನು ನನ್ನನ್ನು ಕೊಂದುಬಿಡು. ನಾನು ಬದುಕುವದಕ್ಕಿಂತ ಸಾಯುವುದೇ ಮೇಲು.”
4 ಆಗ ಯೆಹೋವನು ಅವನಿಗೆ, “ನಾನು ಆ ಜನರನ್ನು ನಾಶಮಾಡದೆ ಹೋದುದರಿಂದ ನೀನು ಸಿಟ್ಟುಗೊಳ್ಳುವದು ಸರಿಯೋ?” ಎಂದು ಕೇಳಿದನು.
5 ಇವೆಲ್ಲಾ ಯೋನನನ್ನು ಇನ್ನೂ ಸಿಟ್ಟುಗೊಳಿಸಿದ್ದವು. ಅವನು ನಗರದ ಹೊರಗೆ ಪೂರ್ವದ ಕಡೆಗೆ ಹೋಗಿ ತನಗೊಂದು ಮಂಟಪವನ್ನು ಕಟ್ಟಿ ಅದರ ನೆರಳಿನಲ್ಲಿ ಕುಳಿತುಕೊಂಡು ನಗರಕ್ಕೆ ಏನಾಗುವದು ಎಂಬದನ್ನು ಕಾಯುತ್ತಾ ಕುಳಿತನು.
ಸೋರೆ ಗಿಡ ಮತ್ತು ಹುಳ
6 ದೇವರಾದ ಯೆಹೋವನು ಒಂದು ಸೋರೆ ಗಿಡವನ್ನು ಯೋನನ ಬಳಿಯಲ್ಲಿಯೇ ಶೀಘ್ರದಲ್ಲಿ ಬೆಳೆಯ ಮಾಡಿದನು. ಆ ಸೋರೆ ಗಿಡವು ಆ ಜಾಗವನ್ನು ತಂಪು ಮಾಡಿದ್ದರಿಂದ ಯೋನನಿಗೆ ತುಂಬಾ ಹಿತವಾಯಿತು ಮತ್ತು ತುಂಬಾ ಸಂತೋಷವಾಯಿತು.
7 ಮರುದಿನ ಮುಂಜಾನೆ, ದೇವರು ಆ ಗಿಡವನ್ನು ತಿನ್ನಲು ಒಂದು ಹುಳವನ್ನು ಕಳುಹಿಸಿದನು. ಆ ಹುಳವು ಗಿಡವನ್ನು ತಿಂದ ನಿಮಿತ್ತ ಅದು ಬಾಡಿಹೋಗಿ ಸತ್ತಿತ್ತು.
8 ಸೂರ್ಯನು ಆಕಾಶದಲ್ಲಿ ಏರಿ ಬಂದಾಗ ದೇವರು ಪೂರ್ವದ ಬಿಸಿಗಾಳಿ ಬೀಸುವಂತೆ ಮಾಡಿದನು. ಬಿಸಿಲಿನ ತಾಪವು ಯೋನನ ತಲೆಯ ಮೇಲೆ ಹೆಚ್ಚಾಯಿತು. ಯೋನನಿಗೆ ಶಾಖ ತಡೆಯಲಾಗಲಿಲ್ಲ. ಬಹಳ ಬಲಹೀನನಾದನು. ನನ್ನನ್ನು ಸಾಯಿಸು ಎಂದು ಯೋನನು ದೇವರನ್ನು ಬೇಡುತ್ತಾ, “ದೇವರೇ, ನಾನು ಬದುಕುವದಕ್ಕಿಂತ ಸಾಯುವುದೇ ಲೇಸು” ಅಂದನು.
9 ಆದರೆ ದೇವರು ಯೋನನಿಗೆ ಹೇಳಿದ್ದೇನೆಂದರೆ, “ಆ ಸೋರೆ ಗಿಡವು ಸತ್ತುಹೋದುದಕ್ಕೆ ನೀನು ಕೋಪಗೊಳ್ಳುವುದು ಸರಿಯೋ?”
ಅದಕ್ಕುತ್ತರವಾಗಿ ಯೋನನು, “ಹೌದು! ನಾನು ಕೋಪಗೊಂಡದ್ದು ನಿಜ. ನಾನು ಸಾಯುವಷ್ಟು ಕೋಪಗೊಂಡಿದ್ದೇನೆ” ಅಂದನು.
10 ಆಗ ಯೆಹೋವನು, “ನೀನು ಆ ಸೋರೆ ಗಿಡಕ್ಕಾಗಿ ಏನೂ ಮಾಡಲಿಲ್ಲ. ಅದು ಬೆಳೆಯುವಂತೆ ನೀನು ಮಾಡಲಿಲ್ಲ. ಅದು ರಾತ್ರಿಯಲ್ಲಿ ಬೆಳೆಯಿತು. ಮರುದಿನ ಅದು ಸತ್ತಿತ್ತು. ಈಗ ನೀನು ಅದಕ್ಕಾಗಿ ದುಃಖಪಡುತ್ತಿರುವೆ.
11 ಒಂದು ಗಿಡಕ್ಕಾಗಿ ನೀನು ಇಷ್ಟೊಂದು ದುಃಖಗೊಂಡರೆ, ನಿನೆವೆಯಂತಹ ಇಷ್ಟು ದೊಡ್ಡ ನಗರಕ್ಕಾಗಿ ನನಗೂ ಖಂಡಿತವಾಗಿ ದುಃಖವಾಗುತ್ತದೆ. ಈ ನಗರದಲ್ಲಿ ಅನೇಕಾನೇಕ ಜನರಿದ್ದಾರೆ! ಅನೇಕ ಪ್ರಾಣಿಗಳಿವೆ. ಈ ನಗರದಲ್ಲಿರುವ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಜನರಿಗೆ ತಾವು ತಪ್ಪು ಮಾಡುತ್ತಿರುವುದಾಗಿ ತಿಳಿದಿರಲಿಲ್ಲ” ಅಂದನು.