12
ದೇವರಲ್ಲಿ ಯೆರೆಮೀಯನ ದೂರು
ಯೆಹೋವನೇ, ನಾನು ನಿನ್ನ ಜೊತೆ ವಾದ ಮಾಡಿದರೆ,
ನೀನು ಯಾವಾಗಲೂ ನ್ಯಾಯಪರನೆಂಬುದು ರುಜುವಾತಾಗುತ್ತದೆ.
ಆದರೂ ನ್ಯಾಯಪೂರ್ಣವಲ್ಲದ ಕೆಲವು ವಿಷಯಗಳ ಬಗ್ಗೆ ನಾನು ನಿನ್ನನ್ನು ಕೇಳಬಯಸುತ್ತೇನೆ.
ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ?
ನಿನ್ನ ವಿಶ್ವಾಸಕ್ಕೆ ಪಾತ್ರರಾಗದವರು ನೆಮ್ಮದಿಯ ಜೀವನ ನಡೆಸಲು ಹೇಗೆ ಸಾಧ್ಯ?
ನೀನು ಆ ದುಷ್ಟರನ್ನು ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಬೇರುಬಿಟ್ಟ ಸಸಿಗಳಂತಿದ್ದಾರೆ,
ಅವು ಬೆಳೆಯುತ್ತವೆ, ಹಣ್ಣು ಬಿಡುತ್ತವೆ.
ನೀನು ಅವರಿಗೆ ತುಂಬ ಹತ್ತಿರದವನು ಮತ್ತು ಪ್ರೀತಿಪಾತ್ರನು ಎಂದು ಅವರು ಬಾಯಿಂದ ಹೇಳುತ್ತಾರೆ.
ಆದರೆ ಹೃದಯದಲ್ಲಿ ಅವರು ನಿನ್ನಿದ ತುಂಬಾ ದೂರದಲ್ಲಿದ್ದಾರೆ.
ಆದರೆ ಯೆಹೋವನೇ, ನಿನಗೆ ನನ್ನ ಹೃದಯದ ಬಗ್ಗೆ ತಿಳಿದಿದೆ,
ನೀನು ನನ್ನನ್ನು ನೋಡಿ ನನ್ನ ಮನಸ್ಸನ್ನು ಪರೀಕ್ಷಿಸುವೆ.
ವಧೆಗೆ ಎಳೆದುಕೊಂಡು ಹೋಗುವ ಕುರಿಗಳಂತೆ ಆ ಕೆಡುಕರನ್ನು ಎಳೆದುಹಾಕು.
ಅವರನ್ನು ವಧೆಯ ದಿನಕ್ಕೆಂದು ಆರಿಸು.
ಎಷ್ಟು ಕಾಲದವರೆಗೆ ಭೂಮಿಯು ಒಣಗಿರಬೇಕು?
ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಬೇಕು?
ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ.
ಇದು ದುಷ್ಟರ ತಪ್ಪಾದರೂ
ಆ ದುಷ್ಟರು,
“ನಮಗೆ ಏನಾಗುವದೆಂದು ನೋಡಲು
ಯೆರೆಮೀಯನು ಬಹಳ ದಿವಸ ಬಂದುಕಿರಲಾರ” ಎಂದು ಹೇಳುತ್ತಿದ್ದಾರೆ.
ಯೆರೆಮೀಯನಿಗೆ ದೇವರ ಉತ್ತರ
“ಯೆರೆಮೀಯನೇ, ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿರುವುದಾದರೆ,
ಕುದುರೆಗಳೊಂದಿಗೆ ಓಡಿ ಹೇಗೆ ಗೆಲ್ಲುವೆ?
ಸುರಕ್ಷಿತವಾದ ದೇಶದಲ್ಲಿ ನೀನು ದಣಿದುಕೊಂಡರೆ
ಜೋರ್ಡನ್ ನದಿ ದಡದ ಭಯಾನಕ ಮುಳ್ಳುಕಂಟಿಯ ಪ್ರದೇಶಕ್ಕೆ ಬಂದಾಗ ಏನು ಮಾಡುವೆ?
ಈ ಜನರು ನಿನ್ನ ಸ್ವಂತ ಸಹೋದರರಾಗಿದ್ದಾರೆ.
ನಿನ್ನ ಸ್ವಂತ ಕುಟುಂಬದ ಜನರೇ ನಿನ್ನ ವಿರುದ್ಧ ಕೂಗಾಡುತ್ತಾ ಸಂಚು ಮಾಡುತ್ತಿದ್ದಾರೆ.
ಅವರು ನಿನ್ನೊಡನೆ ಸ್ನೇಹಿತರಂತೆ
ಮಾತನಾಡಿದರೂ ಅವರನ್ನು ನಂಬಬೇಡ.”
ಯೆಹೋವನು ತನ್ನ ಜನರನ್ನೂ ಯೆಹೂದವನ್ನೂ ನಿರಾಕರಿಸುವನು
“ನಾನು (ಯೆಹೋವನು) ನನ್ನ ಮನೆಯನ್ನು ತ್ಯಜಿಸಿದ್ದೇನೆ.
ನಾನು ನನ್ನ ಆಸ್ತಿಯನ್ನು ಬಿಟ್ಟುಬಿಟ್ಟಿದ್ದೇನೆ.
ನಾನು ನನ್ನ ಪ್ರಿಯತಮೆಯನ್ನು (ಯೆಹೂದ) ಅವಳ ಶತ್ರುಗಳಿಗೆ ಕೊಟ್ಟಿದ್ದೇನೆ.
ನನ್ನ ‘ಸಾಬಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ.
ಅವರು ನನ್ನನ್ನು ಕಂಡು ಗರ್ಜಿಸುತ್ತಾರೆ.
ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.
ನನ್ನ ‘ಸಾಬಸ್ತ್ಯವಾದ ಜನರು’ ಹದ್ದುಗಳಿಂದ
ಸುತ್ತುವರಿಯಲ್ಪಟ್ಟು ಸಾಯುತ್ತಿರುವ ಪ್ರಾಣಿಯಂತಾಗಿದ್ದಾರೆ.
ಆ ಪಕ್ಷಿಗಳು ಅವರ ಸುತ್ತಲೂ ಹಾರಾಡುತ್ತವೆ.
ಕಾಡುಪ್ರಾಣಿಗಳೇ, ಬನ್ನಿ, ಬನ್ನಿ,
ಬಂದು ನಿಮ್ಮ ಆಹಾರವನ್ನು ತೆಗೆದುಕೊಳ್ಳಿ.
10 ಅನೇಕ ಕುರುಬರು ದ್ರಾಕ್ಷಿತೋಟವನ್ನು ಹಾಳುಮಾಡಿದ್ದಾರೆ.
ಆ ಕುರುಬರು ನನ್ನ ತೋಟದ ಸಸಿಗಳನ್ನು ತುಳಿದುಬಿಟ್ಟಿದ್ದಾರೆ:
ನನ್ನ ಸುಂದರವಾದ ತೋಟವನ್ನು ಮರಳುಗಾಡನ್ನಾಗಿ ಮಾಡಿದ್ದಾರೆ.
11 ಹೌದು, ಮರಳುಭೂಮಿಯನ್ನಾಗಿ ಮಾಡಿದ್ದಾರೆ.
ಅದು ಒಣಗಿಹೋಗಿ ನಿಸ್ಸತ್ವವಾಗಿದೆ.
ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಬರಿದಾದ ಮರಳುಗಾಡಾಗಿದೆ.
ಆ ತೋಟವನ್ನು ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.
12 ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು.
ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು.
ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು.
ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
13 ಜನರು ಗೋಧಿಯನ್ನು ಬಿತ್ತುವರು;
ಆದರೆ ಅವರು ಕೇವಲ ಮುಳ್ಳಿನ ರಾಶಿಯನ್ನು ಕೊಯ್ಯುವರು.
ಅವರು ತುಂಬ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು.
ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ.
ಅವರು ತಮ್ಮ ಬೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು.
ಯೆಹೋವನ ರೋಷವು ಹಾಗೆಲ್ಲ ಮಾಡುವುದು.”
ಇಸ್ರೇಲಿನ ನೆರೆಯವರಿಗೆ ಯೆಹೋವನ ವಾಗ್ದಾನ
14 ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು. 15 ಬಳಿಕ ನಾನು ಅವರಿಗಾಗಿ ಪರಿತಪಿಸುವೆನು. ನಾನು ಪ್ರತಿಯೊಂದು ಕುಟುಂಬವನ್ನು ಅದರ ಸಾಬಸ್ತ್ಯಕ್ಕೂ ಅದರ ದೇಶಕ್ಕೂ ಕರೆತರುವೆನು. 16 ಆ ಜನರು ತಮ್ಮ ಪಾಠಗಳನ್ನು ಸರಿಯಾಗಿ ಕಲಿತುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ಮೊದಲು, ಆ ಜನರು ಬಾಳನ ಹೆಸರೆತ್ತಿ ಪ್ರಮಾಣ ಮಾಡುವುದನ್ನು ನನ್ನ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನ್ನು ಕಲಿತುಕೊಳ್ಳಬೇಕೆಂಬುದು ನನ್ನ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನ್ನು ಅಭಿವೃದ್ಧಿಪಡಿಸಿ ಅವರನ್ನು ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು. 17 ಯಾವ ಜನಾಂಗವಾದರೂ ನನ್ನ ಸಂದೇಶವನ್ನು ಕೇಳದೆಹೋದರೆ ಅದನ್ನು ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನ್ನು ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಬಂದ ಸಂದೇಶ.