24
ಒಳ್ಳೆಯ ಮತ್ತು ಕೆಟ್ಟ ಅಂಜೂರದ ಹಣ್ಣುಗಳು
ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.) ಒಂದು ಬುಟ್ಟಿಯಲ್ಲಿ ಬಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಬೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನ್ನೊಂದು ಬುಟ್ಟಿಯಲ್ಲಿ ತಿನ್ನಲಾಗದಷ್ಟು ಕೊಳೆತ ಅಂಜೂರಗಳಿದ್ದವು.
ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು.
“ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
ಆಗ ನನಗೆ ಯೆಹೋವನಿಂದ ಸಂದೇಶ ಬಂದಿತು. ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನ್ನು ಬಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು. ನಾನು ಅವರನ್ನು ರಕ್ಷಿಸುವೆನು. ನಾನು ಅವರನ್ನು ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನ್ನು ಬೀಳಿಸುವದಿಲ್ಲ. ನಾನು ಅವರನ್ನು ಅಭಿವೃದ್ಧಿಪಡಿಸುತ್ತೇನೆ. ನಾನು ಅವರನ್ನು ಕೀಳುವದಿಲ್ಲ. ಅವರನ್ನು ನೆಟ್ಟು ಬೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು. ಅವರಲ್ಲಿ ನನ್ನನ್ನು ಅರಿತುಕೊಳ್ಳುವ ಬಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಬುದನ್ನು ಅವರು ತಿಳಿದುಕೊಳ್ಳುವರು. ಅವರು ನನ್ನ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಬಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗುತ್ತಾರೆ.
“ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನ್ನಲು ಬಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಧಿಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು. ನಾನು ಆ ಜನರನ್ನು ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನ್ನು ಉಂಟು ಮಾಡುವುದು. ಜನರು ಯೆಹೂದದ ಜನರನ್ನು ಗೇಲಿಮಾಡುವರು. ನಾನು ಅವರನ್ನು ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಬಗ್ಗೆ ಪರಿಹಾಸ್ಯದ ಮಾತುಗಳನ್ನು ಆಡುವರು; ಅವರನ್ನು ಶಪಿಸುವರು. 10 ನಾನು ಖಡ್ಗ, ಕ್ಷಾಮ, ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”