26
ಆಲಯದಲ್ಲಿ ಯೆರೆಮೀಯನ ಪ್ರಸಂಗ
ಯೆಹೋಯಾಕೀಮನು ಯೆಹೂದದ ರಾಜನಾದ ಮೊದಲನೇ ವರ್ಷದಲ್ಲಿ ಯೆಹೋವನಿಂದ ಈ ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನು ಹೀಗೆಂದನು, “ಯೆರೆಮೀಯನೇ, ಯೆಹೋವನ ಆಲಯದ ಅಂಗಳದಲ್ಲಿ ನಿಲ್ಲು, ಯೆಹೋವನ ಆಲಯದಲ್ಲಿ ಆರಾಧನೆಗೆಂದು ಬರುವ ಯೆಹೂದದ ಎಲ್ಲಾ ಜನರಿಗೆ ಈ ಸಂದೇಶವನ್ನು ತಿಳಿಸು. ನಾನು ನಿನಗೆ ತಿಳಿಸೆಂದು ಹೇಳುವ ಎಲ್ಲವನ್ನೂ ಅವರಿಗೆ ಹೇಳು. ನನ್ನ ಸಂದೇಶದ ಯಾವ ಭಾಗವನ್ನೂ ಬಿಡಬೇಡ. ಅವರು ನನ್ನ ಸಂದೇಶವನ್ನು ಕೇಳಿ ಅದರಂತೆ ನಡೆಯಬಹುದು; ತಮ್ಮ ಕೆಟ್ಟ ಜೀವನವನ್ನು ತ್ಯಜಿಸಿ ಸನ್ಮಾರ್ಗವನ್ನು ಹಿಡಿಯಬಹುದು. ಅವರು ಪರಿವರ್ತನೆ ಹೊಂದಿದರೆ ನಾನು ಅವರನ್ನು ಶಿಕ್ಷಿಸಬೇಕೆಂದು ಮಾಡಿದ ಯೋಚನೆಗಳನ್ನು ಬದಲಾಯಿಸುವೆನು. ಅವರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದರಿಂದ ಅವರನ್ನು ಶಿಕ್ಷಿಸಬೇಕೆಂದು ನಾನು ಯೋಚಿಸುತ್ತಿದ್ದೇನೆ. ನೀನು ಅವರಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿಮಗೆ ನನ್ನ ಧರ್ಮೋಪದೇಶಗಳನ್ನು ಕೊಟ್ಟಿದ್ದೇನೆ. ನೀವು ಅವುಗಳನ್ನು ಪಾಲಿಸಬೇಕು; ಅನುಸರಿಸಬೇಕು. ನನ್ನ ಸೇವಕರು ಹೇಳುವುದನ್ನು ನೀವು ಕೇಳಬೇಕು. ಪ್ರವಾದಿಗಳು ನನ್ನ ಸೇವಕರಾಗಿದ್ದಾರೆ. ನಾನು ಮತ್ತೆಮತ್ತೆ ನನ್ನ ಪ್ರವಾದಿಗಳನ್ನು ನಿಮ್ಮಲ್ಲಿಗೆ ಕಳುಹಿಸಿದೆನು. ಆದರೆ ನೀವು ಅವರ ಮಾತುಗಳಿಗೆ ಕಿವಿಗೊಡಲಿಲ್ಲ. ನೀವು ನನ್ನ ಆಜ್ಞಾಪಾಲನೆ ಮಾಡದಿದ್ದರೆ ಜೆರುಸಲೇಮಿನ ನನ್ನ ಈ ಆಲಯಕ್ಕೆ ಶಿಲೋವಿನ ನನ್ನ ಪವಿತ್ರವಾದ ಗುಡಾರದ ಗತಿಯನ್ನು ತರುತ್ತೇನೆ. ಜಗತ್ತಿನ ಜನರು ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಕೇಳಿಕೊಳ್ಳುವಾಗ ಜೆರುಸಲೇಮನ್ನು ಜ್ಞಾಪಿಸಿಕೊಳ್ಳುವರು.’ ”
ಯೆಹೋವನ ಆಲಯದಲ್ಲಿ ಯೆರೆಮೀಯನು ಹೇಳಿದ ಇದೆಲ್ಲವನ್ನು ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಕೇಳಿದರು. ಯೆಹೋವನು ಜನರಿಗೆ ತಿಳಿಸಬೇಕೆಂದು ಹೇಳಿದ ಎಲ್ಲವನ್ನು ಯೆರೆಮೀಯನು ಹೇಳಿ ಮುಗಿಸಿದನು. ಆಗ ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಯೆರೆಮೀಯನನ್ನು ಹಿಡಿದುಕೊಂಡರು. ಅವರು “ನೀನು ಇಂಥಾ ಭಯಂಕರವಾದ ವಿಷಯವನ್ನು ಹೇಳಿದ್ದಕ್ಕಾಗಿ ನಿನಗೆ ಮರಣವೇ ಗತಿ! ಯೆಹೋವನ ಹೆಸರಿನಲ್ಲಿ ಹಾಗೆ ಪ್ರವಾದಿಸಲು ನಿನಗೆ ಹೇಗೆ ಧೈರ್ಯ ಬಂದಿತು? ಶಿಲೋವಿನಂತೆ ಯೆಹೋವನ ಈ ಆಲಯವು ಹಾಳಾಗುವದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು? ಜೆರುಸಲೇಮು ಜನರಿಲ್ಲದ ಒಂದು ಮರುಭೂಮಿಯಾಗುವುದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು?” ಎಂದು ಕೇಳಿದರು. ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನನ್ನು ಮುತ್ತಿದರು.
10 ನಡೆಯುತ್ತಿರುವ ಎಲ್ಲಾ ಘಟನೆಗಳ ಬಗ್ಗೆ ಯೆಹೂದದ ಅಧಿಪತಿಗಳು ಕೇಳಿದರು. ಅವರು ರಾಜನ ಅರಮನೆಯಿಂದ ಹೊರಗೆ ಬಂದರು. ಅವರು ಯೆಹೋವನ ಆಲಯದವರೆಗೆ ಹೋದರು. ಅಲ್ಲಿ ಅವರು ಹೊಸ ಬಾಗಿಲಿನಲ್ಲಿದ್ದ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಹೊಸಬಾಗಿಲಿನಿಂದ ದಾರಿ ಯೆಹೋವನ ಆಲಯಕ್ಕೆ ಹೋಗುತ್ತದೆ. 11 ಆಗ ಯಾಜಕರು ಮತ್ತು ಪ್ರವಾದಿಗಳು ಅಧಿಪತಿಗಳಿಗೂ ಇನ್ನುಳಿದ ಜನರಿಗೂ ಹೀಗೆ ಹೇಳಿದರು: “ಯೆರೆಮೀಯನನ್ನು ಕೊಲ್ಲಬೇಕು. ಅವನು ಜೆರುಸಲೇಮಿನ ಬಗ್ಗೆ ಕೆಟ್ಟ ಮಾತುಗಳನ್ನಾಡಿದ್ದಾನೆ. ಅವನು ಆಡಿದ ಆ ಮಾತುಗಳನ್ನು ನೀವೇ ಕೇಳಿದ್ದೀರಿ.”
12 ಆಗ ಯೆರೆಮೀಯನು ಯೆಹೂದದ ಸಕಲ ಸರದಾರರಿಗೂ ಸಮಸ್ತ ಜನರಿಗೂ ಹೀಗೆ ಹೇಳಿದನು: “ಈ ಆಲಯದ ಬಗ್ಗೆ ಮತ್ತು ಈ ನಗರದ ಬಗ್ಗೆ ಹೀಗೆ ಹೇಳಲು ಯೆಹೋವನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ನೀವು ಕೇಳಿದ ಪ್ರತಿಯೊಂದು ವಿಷಯವೂ ಯೆಹೋವನಿಂದಲೇ ಬಂದದ್ದು. 13 ನೀವು ನಿಮ್ಮ ನಡತೆಯನ್ನು ಬದಲಾಯಿಸಿಕೊಂಡು, ಸತ್ಕಾರ್ಯಗಳನ್ನು ಮಾಡಲಾರಂಭಿಸಬೇಕು. ನೀವು ನಿಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಬೇಕು. ಆಗ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ನಿಮಗೆ ಕೇಡುಮಾಡುವುದಿಲ್ಲ. 14 ನಾನಂತೂ ನಿಮ್ಮ ಅಧಿನದಲ್ಲಿದ್ದೇನೆ. ನಿಮಗೆ ಒಳ್ಳೆಯದಾಗಿಯೂ ನ್ಯಾಯವಾಗಿಯೂ ತೋರಿದ್ದನ್ನು ಮಾಡಿರಿ. 15 ಆದರೆ ನೀವು ನನ್ನನ್ನು ಕೊಂದರೆ ಒಬ್ಬ ನಿರಪರಾಧಿಯನ್ನು ಕೊಂದದೋಷಕ್ಕೆ ಗುರಿಯಾಗುವಿರೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿರಿ. ನೀವು ಈ ನಗರವನ್ನೂ ಇದರ ಪ್ರತಿಯೊಬ್ಬ ನಿವಾಸಿಯನ್ನೂ ಸಹ ದೋಷಿಗಳನ್ನಾಗಿ ಮಾಡುವಿರಿ. ನಿಜವಾಗಿಯೂ, ಯೆಹೋವನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ನೀವು ಕೇಳಿದ ಸಂದೇಶವು ನಿಜವಾಗಿಯೂ ಯೆಹೋವನಿಂದ ಬಂದದ್ದು.”
16 ಆಗ ಸರದಾರರು ಮತ್ತು ಸಮಸ್ತ ಜನರು ಒಬ್ಬರಿಗೊಬ್ಬರು ಮಾತನಾಡಿ ಯಾಜಕರಿಗೂ ಪ್ರವಾದಿಗಳಿಗೂ, “ಯೆರೆಮೀಯನನ್ನು ಕೊಲ್ಲಕೂಡದು. ಯೆರೆಮೀಯನು ನಮಗೆ ಹೇಳಿದ ಸಂಗತಿಗಳು ನಮ್ಮ ದೇವರಾದ ಯೆಹೋವನಿಂದ ಬಂದವುಗಳಾಗಿವೆ” ಎಂದು ಹೇಳಿದರು.
17 ಆಗ ಹಿರಿಯ ನಾಯಕರಲ್ಲಿ ಕೆಲವರು ಎದ್ದುನಿಂತು ಎಲ್ಲಾ ಜನರನ್ನುದ್ದೇಶಿಸಿ 18 ಹೀಗೆ ಹೇಳಿದರು, “ಪ್ರವಾದಿಯಾದ ಮೀಕಾಯನು ಮೋರೆಷೆತ್ ನಗರದವನಾಗಿದ್ದನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಕಾಲದಲ್ಲಿ ಮೀಕಾಯನು ಪ್ರವಾದಿಯಾಗಿದ್ದನು. ಯೆಹೂದದ ಸಮಸ್ತ ಜನರಿಗೆ ಮೀಕಾಯನು ಹೀಗೆ ಹೇಳಿದನು:
 
‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
ಚೀಯೋನ್ ನಗರವು
ನೇಗಿಲುಹೊಡೆದ ಹೊಲವಾಗುವುದು.
ಜೆರುಸಲೇಮ್ ನಗರವು ಕಲ್ಲಿನ ದಿಬ್ಬವಾಗುವುದು.
ಪವಿತ್ರ ಆಲಯವಿದ್ದ ಪರ್ವತವು ಮರಗಿಡಗಳಿಂದ ಮುಚ್ಚಿಹೋಗುವುದು.’ ಮೀಕ 3:12
 
19 “ಹಿಜ್ಕೀಯನು ಯೆಹೂದದ ರಾಜನಾಗಿದ್ದನು. ಹಿಜ್ಕೀಯನು ಮೀಕಾಯನ ಕೊಲೆ ಮಾಡಲಿಲ್ಲ. ಯೆಹೂದದ ಯಾರೂ ಮೀಕಾಯನನ್ನು ಕೊಲೆಮಾಡಲಿಲ್ಲ. ಹಿಜ್ಕೀಯನು ಯೆಹೋವನನ್ನು ಗೌರವಿಸುತ್ತಿದ್ದನೆಂಬುದು ನಿಮಗೆ ಗೊತ್ತು. ಅವನು ಯೆಹೋವನನ್ನು ಸಂತೋಷಪಡಿಸಲು ಬಯಸಿದನು. ಯೆಹೂದಕ್ಕೆ ಕೇಡನ್ನು ತರುವೆನೆಂದು ಯೆಹೋವನು ಹೇಳಿದ್ದನು. ಆದರೆ ಹಿಜ್ಕೀಯನು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ಕೇಡನ್ನು ಬರಮಾಡಲಿಲ್ಲ. ನಾವು ಯೆರೆಮೀಯನನ್ನು ಕೊಂದರೆ ಅನೇಕ ಕಷ್ಟಗಳನ್ನು ತಂದುಕೊಳ್ಳುವೆವು. ಆ ಕಷ್ಟಗಳಿಗೆ ನಮ್ಮ ತಪ್ಪೇ ಕಾರಣವಾಗುವುದು.”
20 ಮೊದಲು ಯೆಹೋವನ ಸಂದೇಶವನ್ನು ಪ್ರವಾದಿಸುವ ಇನ್ನೊಬ್ಬ ಮನುಷ್ಯನಿದ್ದನು. ಅವನ ಹೆಸರು ಊರೀಯ. ಅವನು ಶಮಾಯನ ಮಗ. ಊರೀಯನು ಕಿರ್ಯತ್‌ಯಾರೀಮ್ ಎಂಬ ಊರಿನವನು. ಈ ನಗರದ ಬಗ್ಗೆ ಮತ್ತು ಪ್ರದೇಶದ ಬಗ್ಗೆ ಯೆರೆಮೀಯನು ಪ್ರವಾದಿಸಿದ್ದನ್ನೇ ಊರೀಯನು ಪ್ರವಾದಿಸಿದ್ದನು. 21 ರಾಜನಾದ ಯೆಹೋಯಾಕೀಮನೂ ಅವನ ಸೇನೆಯ ಅಧಿಕಾರಿಗಳೂ ಯೆಹೂದದ ನಾಯಕರೂ ಊರೀಯನ ಪ್ರವಾದನೆಯನ್ನು ಕೇಳಿದರು. ಅವರಿಗೆ ಕೋಪಬಂದಿತು. ರಾಜನಾದ ಯೆಹೋಯಾಕೀಮನು ಊರೀಯನನ್ನು ಕೊಲ್ಲಬಯಸಿದನು. ಆದರೆ ಯೆಹೋಯಾಕೀಮನು ತನ್ನನ್ನು ಕೊಲ್ಲಬಯಸುತ್ತಾನೆಂದು ಊರೀಯನು ಕೇಳಿದನು. ಊರೀಯನು ಭಯಪಟ್ಟು ತಪ್ಪಿಸಿಕೊಂಡು ಈಜಿಪ್ಟ್ ದೇಶಕ್ಕೆ ಹೋದನು. 22 ಆದರೆ ರಾಜನಾದ ಯೆಹೋಯಾಕೀಮನು ಎಲ್ನಾತಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನು ಈಜಿಪ್ಟಿಗೆ ಕಳುಹಿಸಿದನು. ಎಲ್ನಾತಾನನು ಅಕ್ಬೋರನ ಮಗ. 23 ಅವರು ಊರೀಯನನ್ನು ಈಜಿಪ್ಟಿನಿಂದ ತಂದರು. ಅವರು ಊರೀಯನನ್ನು ರಾಜನಾದ ಯೆಹೋಯಾಕೀಮನ ಹತ್ತಿರ ತೆಗೆದುಕೊಂಡು ಹೋದರು. ಯೆಹೋಯಾಕೀಮನು ಕತ್ತಿಯಿಂದ ಊರೀಯನ ಕೊಲೆಮಾಡಬೇಕೆಂದು ಆಜ್ಞಾಪಿಸಿದನು. ಊರೀಯನ ದೇಹವನ್ನು ಬಡವರ ಸ್ಮಶಾನದಲ್ಲಿ ಎಸೆಯಲಾಯಿತು.
24 ಶಾಫಾನನ ಮಗನಾದ ಅಹೀಕಾಮನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಅಹೀಕಾಮನು ಯೆರೆಮೀಯನಿಗೆ ಬೆಬಲ ಕೊಟ್ಟನು; ಯಾಜಕರು ಮತ್ತು ಪ್ರವಾದಿಗಳು ಅವನನ್ನು ಕೊಲ್ಲದಂತೆ ಕಾಪಾಡಿದರು.