33
ದೇವರ ವಾಗ್ದಾನ
ಎರಡನೇ ಬಾರಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. “ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ಆತನೇ ಅದನ್ನು ಸುರಕ್ಷಿತವಾಗಿಡುವನು. ಯೆಹೋವನು ಹೀಗೆನ್ನುತ್ತಾನೆ: ‘ಯೆಹೂದವೇ, ನನಗೆ ಪ್ರಾರ್ಥಿಸು. ಆಗ ನಾನು ನಿನಗೆ ಉತ್ತರಿಸುವೆನು. ನಾನು ನಿನಗೆ ಬಹು ಮುಖ್ಯವಾದ ರಹಸ್ಯಗಳನ್ನು ತಿಳಿಸುತ್ತೇನೆ. ಈ ಸಂಗತಿಗಳನ್ನು ನೀನು ಹಿಂದೆಂದೂ ಕೇಳಲಿಲ್ಲ. ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.
“ ‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಬಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.
“ ‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು. ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು. ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು. ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’
10 “ ‘ನಮ್ಮ ದೇಶವು ಒಂದು ಬರಿದಾದ ಮರುಭೂಮಿಯಾಗಿದೆ. ಅಲ್ಲಿ ಜನರಾಗಲಿ ಪ್ರಾಣಿಗಳಾಗಲಿ ವಾಸಿಸುವದಿಲ್ಲ’ ಎಂದು ನೀವು ಹೇಳುತ್ತಿರುವಿರಿ. ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಊರುಗಳಲ್ಲಿ ಈಗ ಮೌನವಿದೆ. ಆದರೆ ಬೇಗನೆ ಅಲ್ಲಿ ಧ್ವನಿಕೇಳಿಸುವುದು. 11 ಅಲ್ಲಿ ಹರ್ಷದ ಮತ್ತು ಸಂತೋಷದ ಧ್ವನಿ ಕೇಳಿಬರುವುದು. ಅಲ್ಲಿ ವಧುವರರ ಸಂತೋಷದ ಧ್ವನಿ ಕೇಳಿಸುವುದು. ಜನರು ಯೆಹೋವನ ಆಲಯಕ್ಕೆ ತಮ್ಮ ಕಾಣಿಕೆಗಳನ್ನು ಅರ್ಪಿಸಲು ಬರುವ ಧ್ವನಿಯು ಕೇಳಿಸುವುದು. ಅವರು ‘ಸರ್ವಶಕ್ತನಾದ ಯೆಹೋವನನ್ನು ಸ್ತುತಿಸಿರಿ. ಆತನು ಒಳ್ಳೆಯವನು. ಆತನ ಕರುಣೆಯು ಶಾಶ್ವತವಾಗಿರುವುದು’ ಎಂದು ಹೇಳುವರು. ನಾನು ಯೆಹೂದಕ್ಕೆ ಪುನಃ ಸುಸ್ಥಿತಿಯನ್ನು ತರುವುದರಿಂದ ಜನರು ಹೀಗೆ ಹೇಳುವರು. ಅದು ಮೊದಲಿನಂತೆ ಆಗುವುದು.” ಯೆಹೋವನು ಈ ವಿಷಯಗಳನ್ನು ಹೇಳಿದನು.
12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಈ ಸ್ಥಳವು ಈಗ ಬರಿದಾಗಿದೆ. ಈಗ ಇಲ್ಲಿ ಜನರಾಗಲಿ ಪಶುಗಳಾಗಲಿ ವಾಸಿಸುವದಿಲ್ಲ. ಆದರೆ ಯೆಹೂದದ ಎಲ್ಲಾ ಊರುಗಳಲ್ಲಿ ಜನರು ವಾಸಿಸುವರು; ಕುರುಬರು ವಾಸಿಸುವರು. ಕುರಿಮಂದೆಗಳಿಗಾಗಿ ಹುಲ್ಲುಗಾವಲುಗಳಿರುವವು. 13 ಕುರಿಗಳು ತಮ್ಮ ಮುಂದೆ ನಡೆದುಕೊಂಡು ಹೋಗುವಾಗ ಕುರುಬರು ಅವುಗಳನ್ನು ಎಣಿಸುವರು. ಇಡೀ ದೇಶದಲ್ಲೆಲ್ಲ ಅಂದರೆ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶಗಳಲ್ಲಿಯೂ ನೆಗೆವ್ ಪ್ರದೇಶದಲ್ಲಿಯೂ ಯೆಹೂದದ ಎಲ್ಲಾ ಊರುಗಳಲ್ಲಿಯೂ ತಮ್ಮ ಕುರಿಗಳನ್ನು ಎಣಿಸುತ್ತಿರುವರು.”
ಉತ್ತಮ ಕೊಂಬೆ
14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’ ”*
17 ಯೆಹೋವನು ಹೀಗೆನ್ನುತ್ತಾನೆ: “ಯಾವಾಗಲೂ ದಾವೀದನ ವಂಶದವನೊಬ್ಬನು ಸಿಂಹಾಸನಾರೂಢನಾಗಿದ್ದುಕೊಂಡು ಇಸ್ರೇಲರನ್ನು ಆಳುವನು. 18 ಯಾವಾಗಲೂ ಲೇವಿವಂಶದವರೇ ಯಾಜಕರಾಗಿರುವರು. ಆ ಯಾಜಕರು ಸದಾಕಾಲ ನನ್ನ ಎದುರಿನಲ್ಲಿ ನಿಂತುಕೊಂಡು ಸರ್ವಾಂಗಹೋಮ, ಧಾನ್ಯಸಮರ್ಪಣೆ ಮತ್ತು ಯಜ್ಞಗಳನ್ನು ಮಾಡುವರು.”
19 ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು. 20 ಯೆಹೋವನು ಹೀಗೆ ಹೇಳಿದನು: “ಹಗಲು ಮತ್ತು ರಾತ್ರಿಗಳ ಜೊತೆ ನಾನೊಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವುಗಳು ಶಾಶ್ವತವಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಬಹುದಾದರೆ 21 ನೀವು ದಾವೀದನ ಮತ್ತು ಲೇವಿಯರ ಜೊತೆ ನಾನು ಮಾಡಿಕೊಂಡ ಒಡಂಬಡಿಕೆಯನ್ನೂ ಬದಲಾಯಿಸಬಹುದು. ಆಗ ದಾವೀದನ ವಂಶದವರು ರಾಜರಾಗಲಾರರು ಮತ್ತು ಲೇವಿಯರ ವಂಶದವರು ಯಾಜಕರಾಗಲಾರರು. 22 ಆದರೆ ನಾನು ನನ್ನ ಸೇವಕನಾದ ದಾವೀದನಿಗೂ ಲೇವಿಯರಿಗೂ ಅಸಂಖ್ಯಾತ ಸಂತಾನವನ್ನು ಕೊಡುತ್ತೇನೆ. ಅವರು ಆಕಾಶದ ನಕ್ಷತ್ರಗಳಂತೆಯೂ ಸಮುದ್ರದ ತೀರದ ಮರಳಿನಂತೆಯೂ ಅಸಂಖ್ಯಾತರಾಗುವರು.”
23 ಯೆರೆಮೀಯನು ಯೆಹೋವನಿಂದ ಈ ಸಂದೇಶವನ್ನು ಪಡೆದನು: 24 “ಯೆರೆಮೀಯನೇ, ಜನರು ಏನು ಹೇಳಿದರೆಂಬುದನ್ನು ಕೇಳಲಿಲ್ಲವೇ? ‘ಯೆಹೋವನು ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಎರಡು ಕುಟುಂಬಗಳನ್ನು ಆರಿಸಿಕೊಂಡನು; ಆದರೆ ಈಗ ಅವರನ್ನು ತಿರಸ್ಕರಿಸಿದ್ದಾನೆ.’ ಎಂದು ಅವರು ಹೇಳುತ್ತಿದ್ದಾರೆ. ಅನ್ಯಜನರು ನನ್ನ ಜನರನ್ನು ಎಷ್ಟು ದ್ವೇಷಿಸುತ್ತಾರೆಂದರೆ, ಅವರು ಒಂದು ಜನಾಂಗವಾಗಿ ಮುಂದುವರಿಯುವುದು ಅವರಿಗೆ ಇಷ್ಟವೇ ಇಲ್ಲ.”
25 ಯೆಹೋವನು ಹೀಗೆನ್ನುತ್ತಾನೆ: “ಹಗಲಿರುಳುಗಳ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆ ಸ್ಥಿರವಾಗಿಲ್ಲದಿದ್ದರೆ ಮತ್ತು ಭೂಮ್ಯಾಕಾಶಗಳಿಗೆ ನಾನು ಕಟ್ಟಳೆಗಳನ್ನೇ ವಿಧಿಸಿಲ್ಲದಿದ್ದರೆ 26 ಅವರನ್ನು ತ್ಯಜಿಸಬಹುದೇನೊ! ಯಾಕೋಬನ ಸಂತಾನದವರನ್ನು ತ್ಯಜಿಸಿ ದಾವೀದನ ವಂಶದವರು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ಆಳದಂತೆ ಮಾಡಬಹುದೇನೊ! ಆದರೆ ದಾವೀದನು ನನ್ನ ಸೇವಕ. ನಾನು ಅವರಿಗೆ ಕರುಣೆ ತೋರೇ ತೋರುವೆನು; ಅವರಿಗೆ ಒಳ್ಳೆಯದಾಗುವಂತೆ ಮಾಡೇ ಮಾಡುವೆನು.”
* 33:16 ಯೆಹೋವನು ಒಳ್ಳೆಯವನು ಅಕ್ಷರಶಃ, “ನಮ್ಮ ನೀತಿಸ್ವರೂಪತೆಯು ಯೆಹೋವನು ಮಾತ್ರ.” ಅಥವಾ “ಯೆಹೋವನು ನಮ್ಮನ್ನು ನಿರಪರಾಧಿಗಳನ್ನಾಗಿ ಮಾಡುತ್ತಾನೆ” ಅಥವಾ “ನಮಗೆ ಜಯವನ್ನು ಕೊಡುತ್ತಾನೆ.”