19
ಸಿಮೆಯೋನ್ ಕುಲದವರಿಗೆ ಭೂಮಿ
1 ಅನಂತರ ಯೆಹೋಶುವನು ಸಿಮೆಯೋನ್ ಕುಲದ ಎಲ್ಲ ಗೋತ್ರಗಳಿಗೆ ಅವರ ಪಾಲಿನ ಭೂಮಿಯನ್ನು ಕೊಟ್ಟನು. ಅವರಿಗೆ ಸಿಕ್ಕ ಭೂಮಿಯು ಯೆಹೂದ ಕುಲದವರಿಗೆ ಸೇರಿದ ಭೂಭಾಗದ ಮಧ್ಯದಲ್ಲಿತ್ತು.
2 ಅವರಿಗೆ ದೊರೆತ ಭಾಗವಿದು: ಬೇರ್ಷೆಬ, ಮೋಲಾದಾ,
3 ಹಚರ್‌ಷೂವಾಲ್, ಬಾಲಾ, ಎಚೆಮ್,
4 ಎಲ್ತೋಲದ್, ಬೆತೂಲ್,
5 ಹೊರ್ಮಾ, ಚಿಕ್ಲಗ್, ಬೇತ್‌ಮರ್ಕಾಬೋತ್, ಹಚರ್‌ಸೂಸಾ,
6 ಬೇತ್ ಲೆಬಾವೋತ್ ಮತ್ತು ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
7 ಆಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳನ್ನು ಅವರು ಪಡೆದುಕೊಂಡರು.
8 ಬಾಲತ್‌ಬೇರನ (ನೆಗೇವದಲ್ಲಿದ್ದ ರಾಮ)ವರೆಗೆ ಹಬ್ಬಿದ ಎಲ್ಲ ಪಟ್ಟಣಗಳ ಸುತ್ತಲಿನ ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. ಇದೇ ಸಿಮೆಯೋನ್ ಕುಲದವರಿಗೆ ದೊರೆತ ಭಾಗವಾಗಿತ್ತು. ಪ್ರತಿಯೊಂದು ಗೋತ್ರದವರು ತಮ್ಮ ಭೂಮಿಯನ್ನು ಪಡೆದುಕೊಂಡರು.
9 ಸಿಮೆಯೋನ್ಯರ ಭೂಮಿಯು ಯೆಹೂದದ ಭೂಮಿಯ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ಅವರ ಅವಶ್ಯಕತೆಗಿಂತ ಹೆಚ್ಚು ಭೂಮಿ ಇದ್ದಕಾರಣ ಸಿಮೆಯೋನ್ಯರು ಅದರಲ್ಲಿ ಒಂದು ಭಾಗವನ್ನು ಪಡೆದುಕೊಂಡರು.
ಜೆಬುಲೂನ್ ಕುಲದವರಿಗೆ ಭೂಮಿ
10 ತರುವಾಯ ತಮ್ಮ ಪಾಲಿನ ಭೂಮಿಯನ್ನು ಪಡೆದವರು ಜೆಬುಲೂನ್ ಕುಲದವರು. ಜೆಬುಲೂನ್ ಕುಲದ ಪ್ರತಿಯೊಂದು ಗೋತ್ರಕ್ಕೆ ವಾಗ್ದಾನದ ಪ್ರಕಾರ ಭೂಮಿಯನ್ನು ಕೊಡಲಾಯಿತು. ಜೆಬುಲೂನ್ಯರ ಪ್ರದೇಶವು ಸಾರೀದಿನವರೆಗೂ ವಿಸ್ತರಿಸಿತ್ತು.
11 ಅಲ್ಲಿಂದ ಅದು ಪಶ್ಚಿಮಕ್ಕೆ ಮರ್ಗಲಾಕ್ಕೆ ಹೋಗಿ ದಬ್ಬೆಷೆತ್‌ನ್ನು ತಲುಪುತ್ತದೆ. ಅಲ್ಲಿಂದ ಯೊಕ್ನೆಯಾಮ್ ಊರಿನ ಈಚೆ ಇರುವ ಹಳ್ಳಕ್ಕೆ ಹೋಗುತ್ತದೆ.
12 ಅಲ್ಲಿಂದ ಅದು ಪೂರ್ವಕ್ಕೆ ತಿರುಗಿಕೊಂಡು ಸಾರೀದಿನಿಂದ ಕಿಸ್ಲೋತ್ ತಾಬೋರಿಗೆ ಹೋಗುತ್ತದೆ. ಅಲ್ಲಿಂದ ಅದು ದ್ವಾೆರತ್ ಮತ್ತು ಯಾಫೀಯಕ್ಕೆ ಹೋಗುತ್ತದೆ.
13 ಅಲ್ಲಿಂದ ಪೂರ್ವಕ್ಕೆ ಮುಂದುವರೆದು ಗತ್‌ಹೇಫೆರ್ ಮತ್ತು ಎತ್‌ಕಾಚೀನಿನ ಮೇಲಿಂದ ರಿಮ್ಮೋನಿಗೆ ತಲುಪಿ ಅಲ್ಲಿಂದ ತಿರುಗಿಕೊಂಡು “ನೇಯಕ್ಕೆ” ಹೋಗುತ್ತದೆ.
14 “ನೇಯ”ದಿಂದ ಅದು ತಿರುಗಿಕೊಂಡು ಉತ್ತರದಿಕ್ಕಿನ ಹನ್ನಾತೋನಿನ ಮೇಲಿಂದ ಇಫ್ತಹೇಲಿನ ಕಣಿವೆಗೆ ಹೋಗುತ್ತದೆ.
15 ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲ್ಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಈ ಸೀಮೆಯಲ್ಲಿ ಸೇರಿವೆ.
16 ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಜೆಬುಲೂನ್ಯರಿಗೆ ಕೊಡಲಾಯಿತು. ಜೆಬುಲೂನ್ಯರ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಇಸ್ಸಾಕಾರ್ ಕುಲದವರಿಗೆ ಭೂಮಿ
17 ಭೂಮಿಯ ನಾಲ್ಕನೆಯ ಭಾಗವನ್ನು ಇಸ್ಸಾಕಾರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
18 ಈ ಭೂಮಿಯನ್ನು ಆ ಕುಲದವರಿಗೆ ಕೊಡಲಾಯಿತು: ಇಜ್ರೇಲ್, ಕೆಸುಲ್ಲೋತ್, ಶೂನೇಮ್,
19 ಹಫಾರಯಿಮ್, ಶೀಯೋನ್, ಅನಾಹರತ್,
20 ರಬ್ಬೀತ್, ಕಿಷ್ಯೋನ್, ಎಬೆಜ್,
21 ರೆಮೆತ್, ಏಂಗನ್ನೀಮ್, ಏನ್‌ಹದ್ದಾ ಮತ್ತು ಬೇತ್ ಪಚ್ಚೇಚ್.
22 ಅವರ ಭೂಮಿಯ ಮೇರೆಯು ತಾಬೋರ್, ಶಹಚೀಮಾ, ಬೇತ್‌ಷೆಮೆಷ್ ಎಂಬ ಊರುಗಳನ್ನು ತಲುಪಿತ್ತು. ಆ ಸೀಮೆಯು ಜೋರ್ಡನ್ ನದಿಗೆ ಮುಕ್ತಾಯಗೊಳ್ಳುತ್ತಿತ್ತು. ಒಟ್ಟಿನಲ್ಲಿ ಹದಿನಾರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳು ಇದರಲ್ಲಿದ್ದವು.
23 ಈ ನಗರಗಳು ಮತ್ತು ಪಟ್ಟಣಗಳು ಇಸ್ಸಾಕಾರ್ ಕುಲದವರಿಗೆ ಕೊಟ್ಟ ಭೂಮಿಯ ಭಾಗಗಳಾಗಿದ್ದವು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಆಶೇರ್ ಕುಲದವರಿಗೆ ಭೂಮಿ
24 ಭೂಮಿಯ ಐದನೆಯ ಭಾಗವನ್ನು ಆಶೇರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ಭೂಮಿಯಲ್ಲಿ ತಮ್ಮ ಪಾಲನ್ನು ಪಡೆದುಕೊಂಡರು.
25 ಆ ಕುಲದವರಿಗೆ ಕೊಟ್ಟ ಭೂಮಿಯಿದು: ಹೆಲ್ಕತ್, ಹಲೀ ಬೆಟೆನ್, ಆಕ್ಷಾಫ್,
26 ಅಲಮ್ಮೆಲೆಕ್, ಅಮಾದ್ ಮತ್ತು ಮಿಷಾಲ್.
ಇದರ ಪಶ್ಚಿಮ ಮೇರೆಯು ಕರ್ಮೆಲ್ ಬೆಟ್ಟ ಮತ್ತು ಶೀಹೋರ್‌ಲಿಬ್ನತ್‌ವರೆಗೆ ಚಾಚಿಕೊಂಡಿತ್ತು.
27 ಅಲ್ಲಿಂದ ಅದರ ಸೀಮೆಯು ಪೂರ್ವಕ್ಕೆ ತಿರುಗಿಕೊಂಡು ಬೇತ್‌ದಾಗೋನಿಗೆ ಹೋಗಿತ್ತು. ಆ ಸೀಮೆಯು ಜೆಬುಲೂನ್ಯರ ಮೇರೆಗೂ ಮತ್ತು ಇಪ್ತಹೇಲ್ ಕಣಿವೆಗೂ ತಲುಪಿತ್ತು. ಅಲ್ಲಿಂದ ಅದು ಬೇತ್‌ಏಮೆಕ್ ಮತ್ತು ನೆಗೀಯೇಲ್‌ನ ಉತ್ತರಕ್ಕೆ ಮುಂದುವರಿದು ಕಾಬೂಲಿನ ಉತ್ತರ ಭಾಗವನ್ನು ದಾಟಿತ್ತು.
28 ಅಲ್ಲಿಂದ ಆ ಮೇರೆಯು ಎಬ್ರೋನ್, ರೆಹೋಬ್, ಹಮ್ಮೋನ್ ಮತ್ತು ಕಾನಾ ಇವುಗಳ ಮೂಲಕ ಚೀದೋನ್ ಎಂಬ ಮಹಾನಗರಕ್ಕೆ ತಲುಪಿತ್ತು.
29 ಅಲ್ಲಿಂದ ಆ ಸೀಮೆಯು ದಕ್ಷಿಣದಿಕ್ಕಿಗೆ ಹಿಂತಿರುಗಿ ರಾಮಾವನ್ನು ತಲುಪಿ, ಅಲ್ಲಿಂದ ಸುಭದ್ರ ನಗರವಾದ ತೂರ್‌ಗೆ ಮುಂದುವರೆದು ಅಲ್ಲಿಂದ ತಿರುಗಿಕೊಂಡು ಹೋಸಾಕ್ಕೆ ತಲುಪುತ್ತದೆ. ಅಲ್ಲಿಂದ ಅಕ್ಜೀಬ್,
30 ಉಮ್ಮಾ, ಅಫೇಕ್ ಮತ್ತು ರೆಹೋಬ್ ಹತ್ತಿರ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ.
ಒಟ್ಟಿನಲ್ಲಿ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಇದರಲ್ಲಿ ಸೇರಿದ್ದವು.
31 ಈ ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು ಆಶೇರ್ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಕುಟುಂಬವು ತನ್ನ ಪಾಲಿನ ಭೂ ಭಾಗವನ್ನು ಪಡೆಯಿತು.
ನಫ್ತಾಲಿ ಕುಲದವರಿಗೆ ಭೂಮಿ
32 ಭೂಮಿಯ ಆರನೆಯ ಭಾಗವನ್ನು ನಫ್ತಾಲಿ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಭಾಗವನ್ನು ಪಡೆಯಿತು.
33 ಅವರ ಭೂಮಿಯ ಮೇರೆಯು ಚಾನನ್ನೀಮಿನ ಹತ್ತಿರ ಇರುವ ದೊಡ್ಡ ಮರದಿಂದ ಆರಂಭವಾಗುತ್ತದೆ. ಇದು ಹೇಲೆಫಿನ ಹತ್ತಿರ ಇದೆ. ಬಳಿಕ ಆ ಮೇರೆಯು ಅದಾಮೀನೆಕೆಬ್ ಮತ್ತು ಯಬ್ನೆಯೇಲ್ ಇವುಗಳ ಮೂಲಕ ಲಕ್ಕೂಮಿಗೆ ಹೋಗಿ, ಜೋರ್ಡನ್ ನದಿಯ ತೀರದಲ್ಲಿ ಮುಕ್ತಾಯಗೊಂಡಿತು.
34 ಅಲ್ಲಿಂದ ಆ ಮೇರೆಯು ಆಜ್ನೋತ್‌ತಾಬೋರಿನ ಮೂಲಕ ಹುಕ್ಕೋಕಿಗೆ ಹೋಗಿ ನಿಲ್ಲುತ್ತದೆ. ಅದರ ದಕ್ಷಿಣದ ಮೇರೆ ಜೆಬುಲೂನ್ಯರ ಮೇರೆಗೂ ಪಶ್ಚಿಮದ ಮೇರೆ ಆಶೇರ್ಯರ ಮೇರೆಗೂ ಹೊಂದಿಕೊಂಡಿದೆ. ಆ ಮೇರೆಯು ಪೂರ್ವದಿಕ್ಕಿನಲ್ಲಿ ಜೋರ್ಡನ್ ನದಿಯ ಬಳಿಯಿದ್ದ ಯೆಹೂದಕ್ಕೂ ಹೋಯಿತು.
35 ಈ ಸೀಮೆಯ ಒಳಗಡೆ ಕೆಲವು ಅತಿ ಭದ್ರವಾದ ಪಟ್ಟಣಗಳಿದ್ದವು. ಆ ಪಟ್ಟಣಗಳೆಂದರೆ: ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
36 ಅದಾಮಾ, ರಾಮಾ, ಹಾಚೋರ್,
37 ಕೆದೆಷ್, ಎದ್ರೈ, ಏನ್‌ಹಾಚೋರ್,
38 ಇರೋನ್, ಮಿಗ್ದಲೇಲ್, ಹೊರೇಮ್, ಬೇತನಾತ್ ಮತ್ತು ಬೇತ್‌ಷೆಮೆಷ್ ಎಂಬವುಗಳು. ಒಟ್ಟಿನಲ್ಲಿ ಹತ್ತೊಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
39 ಈ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ನಫ್ತಾಲಿ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ದಾನ್ ಕುಲದವರಿಗೆ ಭೂಮಿ
40 ಆಮೇಲೆ ದಾನ್ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಮಿಯನ್ನು ಪಡೆಯಿತು.
41 ಅವರಿಗೆ ಕೊಟ್ಟ ಊರುಗಳು: ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್,
42 ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
43 ಏಲೋನ್, ತಿಮ್ನಾ, ಎಕ್ರೋನ್,
44 ಎಲ್ತೆಕೇ, ಗಿಬ್ಬೆತೋನ್, ಬಾಲತ್,
45 ಯೆಹುದ್, ಬೆನೇಬೆರಕ್, ಗತ್‌ರಿಮ್ಮೋನ್,
46 ಮೇಯರ್ಕೋನ್ ಮತ್ತು ರಕ್ಕೋನ್, ಯೊಪ್ಪಕ್ಕೆ ಹತ್ತಿರದ ಪ್ರದೇಶಗಳೂ ಇವರಿಗೆ ದೊರೆತವು.
47 ದಾನ್‌ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವಲ್ಲಿ ಕಷ್ಟಪಡಬೇಕಾಯಿತು. ಅಲ್ಲಿ ಅವರಿಗೆ ಬಲಿಷ್ಠರಾದ ವೈರಿಗಳಿದ್ದರು. ದಾನ್ ಕುಲದವರು ಅವರನ್ನು ಸುಲಭವಾಗಿ ಸೋಲಿಸಲಾಗಲಿಲ್ಲ. ಆದ್ದರಿಂದ ಅವರು ಲೆಷೆಮ್ ಜನರೊಡನೆ ಯುದ್ಧಮಾಡಿ ಅವರನ್ನು ಸಂಹರಿಸಿ ಲೆಷೆಮ್ ಪಟ್ಟಣದಲ್ಲಿ ನೆಲೆಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು.
48 ಈ ಎಲ್ಲ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ದಾನ್‌ಕುಲದವರಿಗೆ ಕೊಡಲಾಯಿತು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ಯೆಹೋಶುವನಿಗೆ ಭೂಮಿ
49 ಹೀಗೆ ದೇಶವನ್ನು ಆಯಾ ಕುಲಗಳವರಿಗೆ ನಾಯಕರು ಹಂಚಿಕೊಟ್ಟರು. ಆಗ ಇಸ್ರೇಲರು ನೂನನ ಮಗನಾದ ಯೆಹೋಶುವನಿಗೂ ಸ್ವಲ್ಪ ಭೂಮಿಯನ್ನು ಕೊಡಬೇಕೆಂದು ನಿರ್ಧರಿಸಿದರು. ಈ ಭೂಮಿಯನ್ನು ಅವನಿಗೆ ಕೊಡುವುದಾಗಿ ವಾಗ್ದಾನ ಮಾಡಲಾಗಿತ್ತು.
50 ಆ ಭೂಮಿಯನ್ನು ಕೊಡಬೇಕೆಂಬುದು ಯೆಹೋವನ ಆಜ್ಞೆಯಾಗಿತ್ತು. ಆದ್ದರಿಂದ ಅವರು ಯೆಹೋಶುವನ ಅಪೇಕ್ಷೆಯಂತೆ ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿರುವ ತಿಮ್ನತ್‌ಸೆರಹ ಎಂಬ ಪಟ್ಟಣವನ್ನು ಅವನಿಗೆ ಕೊಟ್ಟರು. ಯೆಹೋಶುವನು ಆ ಪಟ್ಟಣವನ್ನು ಭದ್ರಗೊಳಿಸಿ ಅಲ್ಲಿ ವಾಸವಾಗಿದ್ದನು.
51 ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರೇಲಿನ ಕುಲಪ್ರಧಾನರೂ ಶೀಲೋವಿನಲ್ಲಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತ್ಯಗಳೇ ಇವು. ಹೀಗೆ ದೇಶ ವಿಭಾಗ ಕಾರ್ಯವು ಪೂರ್ಣಗೊಂಡಿತು.