4
ಜನರಿಗೆ ನೆನಪನ್ನು ತರುವ ಕಲ್ಲುಗಳು
ಜನರೆಲ್ಲರೂ ಜೋರ್ಡನ್ನದಿಯನ್ನು ದಾಟಿದರು. ಆಗ ಯೆಹೋವನು ಯೆಹೋಶುವನಿಗೆ, “ಪ್ರತಿಯೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸು. ನದಿಯಲ್ಲಿ ಯಾಜಕರು ನಿಂತುಕೊಂಡಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಹುಡುಕಿ ತೆಗೆದುಕೊಂಡು ಬರುವುದಕ್ಕೆ ಅವರಿಗೆ ಹೇಳು. ನೀವು ಈ ರಾತ್ರಿ ಇಳಿದುಕೊಳ್ಳುವ ಸ್ಥಳದಲ್ಲಿ ಆ ಕಲ್ಲುಗಳನ್ನು ನಿಲ್ಲಿಸಿರಿ” ಎಂದು ಹೇಳಿದನು.
ಆದ್ದರಿಂದ ಯೆಹೋಶುವನು ಪ್ರತಿಯೊಂದು ಕುಲದಿಂದ ಒಬ್ಬೊಬ್ಬನನ್ನು ಆರಿಸಿದನು. ಆಮೇಲೆ ಆ ಹನ್ನೆರಡು ಜನರನ್ನು ಒಟ್ಟಿಗೆ ಕರೆದು ಅವರಿಗೆ, “ನದಿಯಲ್ಲಿ ನಿಮ್ಮ ದೇವರಾದ ಯೆಹೋವನ ಪವಿತ್ರ ಪೆಟ್ಟಿಗೆ ಇರುವ ಸ್ಥಳಕ್ಕೆ ಹೋಗಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ. ಈ ಕಲ್ಲುಗಳು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುತ್ತಾರೆ. ಅದಕ್ಕೆ ನೀವು, ‘ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಜೋರ್ಡನ್ ನದಿಯನ್ನು ದಾಟುತ್ತಿರುವಾಗ ಹರಿಯುವ ನೀರು ನಿಂತುಹೋಯಿತು’ ಎಂದು ಹೇಳಿರಿ. ಆ ಕಲ್ಲುಗಳು ಇಸ್ರೇಲರಿಗೆ ಸದಾಕಾಲ ಸಾಕ್ಷಿಗಳಾಗಿರುತ್ತವೆ” ಎಂದು ಹೇಳಿದನು.
ಇಸ್ರೇಲರು ಯೆಹೋಶುವನ ಆಜ್ಞೆಯಂತೆ ಜೋರ್ಡನ್ ನದಿಯ ಮಧ್ಯಭಾಗದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಬಂದರು. ಇಸ್ರೇಲಿನ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲುಗಳಿದ್ದವು. ಯೆಹೋವನು ಯೆಹೋಶುವನಿಗೆ ಹೇಳಿದಂತೆಯೇ ಅವರು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಬಂದು ತಾವು ಇಳಿದುಕೊಂಡಿದ್ದ ಸ್ಥಳದಲ್ಲಿ ಆ ಕಲ್ಲುಗಳನ್ನು ಇಟ್ಟರು. (ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ಜೋರ್ಡನ್ ನದಿಯ ಮಧ್ಯದಲ್ಲಿ ಅಂದರೆ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುವಾಗ ಯಾಜಕರು ನಿಂತಿದ್ದ ಸ್ಥಳದಲ್ಲಿ ಇಟ್ಟನು. ಆ ಕಲ್ಲುಗಳು ಇಂದಿಗೂ ಆ ಸ್ಥಳದಲ್ಲಿವೆ.)
10 ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ. ಯೆಹೋವನ ಅಪ್ಪಣೆಗಳನ್ನೆಲ್ಲ ಅವರು ಕೈಗೊಳ್ಳುವವರೆಗೆ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ಮಧ್ಯದಲ್ಲಿ ನಿಂತುಕೊಂಡೇ ಇದ್ದರು. ಜನರು ತ್ವರಿತಗತಿಯಿಂದ ನದಿಯನ್ನು ದಾಟಿದರು. 11 ಜನರು ನದಿ ದಾಟಿದ ಮೇಲೆ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಜನರ ಮುಂದಗಡೆಯಲ್ಲಿ ತೆಗೆದುಕೊಂಡು ಹೋದರು.
12 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ಮೋಶೆಯ ಆಜ್ಞೆಯನ್ನು ಪಾಲಿಸಿದರು. ಇವರು ಬೇರೆಯವರಿಗಿಂತ ಮುಂಚೆಯೇ ನದಿಯನ್ನು ದಾಟಿದರು. ಯೆಹೋವನು ವಾಗ್ದಾನ ಮಾಡಿದ ದೇಶವನ್ನು ಪಡೆಯಲು ಇಸ್ರೇಲರಿಗೆ ಸಹಾಯ ಮಾಡಲು ಇವರು ಯುದ್ಧಸನ್ನದ್ಧರಾಗಿ ಹೋಗುತ್ತಿದ್ದರು. 13 ಯುದ್ಧಸನ್ನದ್ಧರಾದ ಸುಮಾರು ನಲವತ್ತು ಸಾವಿರ ಭಟರು ಯೆಹೋವನ ಮುಂದೆ ಜೆರಿಕೊವಿನ ಬಯಲಿನ ಕಡೆಗೆ ಹೋದರು.
14 ಯೆಹೋವನು ಆ ದಿನ ಇಸ್ರೇಲಿನ ಎಲ್ಲಾ ಜನರ ದೃಷ್ಟಿಯಲ್ಲಿ ಯೆಹೋಶುವನನ್ನು ಘನವಂತನನ್ನಾಗಿ ಮಾಡಿದನು. ಆ ಹೊತ್ತಿನಿಂದ ಜನರು ಯೆಹೋಶುವನನ್ನು ಗೌರವಿಸತೊಡಗಿದರು. ಅವರು ಮೋಶೆಯನ್ನು ಗೌರವಿಸಿದಂತೆ ಯೆಹೋಶುವನನ್ನು ಅವನ ಜೀವಮಾನವೆಲ್ಲಾ ಗೌರವಿಸಿದರು.
15 ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಇನ್ನೂ ನದಿಯಲ್ಲಿ ಇದ್ದಾಗ ಯೆಹೋವನು ಯೆಹೋಶುವನಿಗೆ, 16 “ನದಿಯಿಂದ ಹೊರಬರಲು ಯಾಜಕರಿಗೆ ಆಜ್ಞಾಪಿಸು” ಎಂದು ಹೇಳಿದನು.
17 ಯೆಹೋಶುವನು ಯಾಜಕರಿಗೆ, “ಜೋರ್ಡನ್ ನದಿಯಿಂದ ಹೊರಗೆ ಬನ್ನಿರಿ” ಎಂದು ಆಜ್ಞಾಪಿಸಿದನು.
18 ಯಾಜಕರು ಯೆಹೋಶುವನ ಆಜ್ಞೆಯಂತೆ ಪವಿತ್ರ ಪೆಟ್ಟಿಗೆಯನ್ನು ತಮ್ಮ ಸಂಗಡ ತೆಗೆದುಕೊಂಡು ನದಿಯಿಂದ ಹೊರಗಡೆ ಬಂದರು. ಯಾಜಕರ ಪಾದಗಳು ನದಿಯ ಆಚೆದಡದ ನೆಲವನ್ನು ಮುಟ್ಟಿದ ಕೂಡಲೇ ನದಿಯ ನೀರು ಮತ್ತೆ ಹರಿಯುವುದಕ್ಕೆ ಆರಂಭಿಸಿತು. ಜನರು ದಾಟುವುದಕ್ಕಿಂತ ಮುಂಚೆ ಹರಿಯುತ್ತಿದ್ದಂತೆ ನೀರು ಮತ್ತೆ ದಡಮೀರಿ ಹರಿಯಿತು.
19 ಅವರು ಜೋರ್ಡನ್ ನದಿಯನ್ನು ಮೊದಲನೆಯ ತಿಂಗಳಿನ ಹತ್ತನೆಯ ದಿನ ದಾಟಿದರು. ಅವರು ಜೆರಿಕೊವಿನ ಪೂರ್ವಕ್ಕಿರುವ ಗಿಲ್ಗಾಲಿನಲ್ಲಿ ಇಳಿದುಕೊಂಡಿದ್ದರು. 20 ಅವರು ಜೋರ್ಡನ್ ನದಿಯಿಂದ ತೆಗೆದುಕೊಂಡು ಬಂದ ಆ ಹನ್ನೆರಡು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಹೋದರು. ಯೆಹೋಶುವನು ಆ ಕಲ್ಲುಗಳನ್ನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. 21 ಅನಂತರ ಯೆಹೋಶುವನು ಜನರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುವಾಗ ನೀವು ಹೀಗೆ ಹೇಳಬೇಕು: 22 ‘ಇಸ್ರೇಲಿನ ಜನರು ಜೋರ್ಡನ್ ನದಿಯನ್ನು ಒಣನೆಲದ ಮೇಲೆ ಹೇಗೆ ದಾಟಿದರು ಎಂಬುದನ್ನು ನಮ್ಮ ನೆನಪಿಗೆ ತರಲು ಈ ಕಲ್ಲುಗಳು ಸಹಾಯಕವಾಗಿವೆ.’ 23 ನಿಮ್ಮ ದೇವರಾದ ಯೆಹೋವನು ಜೋರ್ಡನ್ ನದಿಯ ನೀರಿನ ಚಲನೆಯನ್ನು ನಿಲ್ಲಿಸಿದನು. ಕೆಂಪುಸಮುದ್ರದ ಹಾಗೆ ಈ ನದಿಯೂ ಸಹ ಜನರೆಲ್ಲರೂ ದಾಟುವವರೆಗೆ ಬತ್ತಿಹೋಗಿತ್ತು. ಜನರು ದಾಟಲು ಸಾಧ್ಯವಾಗುವಂತೆ ಕೆಂಪುಸಮುದ್ರದ ನೀರಿನ ಚಲನೆಯನ್ನು ಸಹ ಯೆಹೋವನು ತಡೆದಿದ್ದನೆಂಬುದನ್ನು ಸ್ಮರಿಸಿಕೊಳ್ಳಿ ಎಂದು ನೀವು ಮಕ್ಕಳಿಗೆ ಹೇಳಬೇಕು. 24 ಈ ಭೂಲೋಕದ ಜನರೆಲ್ಲರೂ ಯೆಹೋವನೇ ಸರ್ವಶಕ್ತನೆಂದು ತಿಳಿದುಕೊಳ್ಳಬೇಕೆಂದು ಆತನು ಹೀಗೆ ಮಾಡಿದನು. ಹೀಗೆ ಅವರು ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವರು” ಅಂದನು.