15
ಯೆಹೂದದ ರಾಜನಾದ ಅಬೀಯಾಮ
ನೆಬಾಟನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿದ್ದನು. ಯಾರೊಬ್ಬಾಮನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಹೊಸ ರಾಜನಾದನು. ಅಬೀಯಾಮನು ಮೂರು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮಾಕಾ. ಅವಳು ಅಬೀಷಾಲೋಮನ ಮಗಳು.
ಅವನಿಗಿಂತಲೂ ಮುಂಚೆ ಅವನ ತಂದೆಯು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಅವನ ಪಿತೃವಾದ ದಾವೀದನು ತನ್ನ ದೇವರಾದ ಯೆಹೋವನಿಗೆ ನಂಬಿಗಸ್ತನಾಗಿದ್ದಂತೆ ಅಬೀಯಾಮನು ನಂಬಿಗಸ್ತನಾಗಿರಲಿಲ್ಲ. ಯೆಹೋವನು ದಾವೀದನನ್ನು ಪ್ರೀತಿಸಿದ್ದರಿಂದ ಅವನಿಗೋಸ್ಕರ ಅಬೀಯಾಮನಿಗೆ ಜೆರುಸಲೇಮಿನಲ್ಲಿ ರಾಜ್ಯವನ್ನು ದಯಪಾಲಿಸಿದನು; ಅವನಿಗೆ ಮಗನನ್ನು ಅನುಗ್ರಹಿಸಿದನು; ಜೆರುಸಲೇಮ್ ಸುರಕ್ಷಿತವಾಗಿರುವಂತೆ ಮಾಡಿದನು. ಯೆಹೋವನು ಇಚ್ಛಿಸಿದ ಕಾರ್ಯಗಳನ್ನು ದಾವೀದನು ಯಾವಾಗಲೂ ಮಾಡುತ್ತಿದ್ದನು. ಯೆಹೋವನ ಆಜ್ಞೆಗಳಿಗೆ ಅವನು ಯಾವಾಗಲೂ ವಿಧೇಯತೆಯಿಂದಿದ್ದನು. ದಾವೀದನು ಹಿತ್ತಿಯನಾದ ಊರೀಯನ ವಿಷಯದಲ್ಲಿ ಮಾತ್ರ ಯೆಹೋವನಿಗೆ ಅವಿಧೇಯನಾದನು.
ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯುದ್ಧವು ನಡೆಯುತ್ತಲೇ ಇರುತ್ತಿತ್ತು. ಅಬೀಯಾಮನು ಮಾಡಿದ ಇತರ ಎಲ್ಲಾ ಕಾರ್ಯಗಳ ಬಗ್ಗೆ “ಯೆಹೂದದ ರಾಜರುಗಳ ಚರಿತ್ರೆಯಲ್ಲಿ” ಬರೆದಿದೆ.
ಅಬೀಯಾಮನು ರಾಜನಾಗಿದ್ದ ಎಲ್ಲಾ ಕಾಲದಲ್ಲೂ, ಯಾರೊಬ್ಬಾಮನ ಮತ್ತು ಅಬೀಯಾಮನ ನಡುವೆ ಯುದ್ಧ ನಡೆಯುತ್ತಲೇ ಇತ್ತು. ಅಬೀಯಾಮನು ಸತ್ತಾಗ, ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯಾಮನ ನಂತರ ಅವನ ಮಗನಾದ ಆಸನು ಹೊಸ ರಾಜನಾದನು.
ಆಸನು ಯೆಹೂದದ ರಾಜ
ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ರಾಜನಾದನು. 10 ಆಸನು ಜೆರುಸಲೇಮಿನಲ್ಲಿ ನಲವತ್ತೊಂದು ವರ್ಷ ಆಳಿದನು. ಅವನ ಅಜ್ಜಿಯ ಹೆಸರು ಮಾಕಾ. ಈಕೆಯು ಅಬೀಷಾಲೋಮನ ಮಗಳು.
11 ಆಸನು ತನ್ನ ಪೂರ್ವಿಕನಾದ ದಾವೀದನು ಮಾಡಿದಂತೆ, ಯೆಹೋವನು ಇಚ್ಛಿಸಿದ ಕಾರ್ಯಗಳನ್ನೇ ಮಾಡಿದನು. 12 ಆ ಕಾಲದಲ್ಲಿ, ಇತರ ದೇವರುಗಳ ಸೇವೆಗೋಸ್ಕರ ತಮ್ಮ ದೇಹಗಳನ್ನು ಲೈಂಗಿಕವಾಗಿ ಮಾರಾಟ ಮಾಡುತ್ತಿದ್ದ ಜನರು ಅಲ್ಲಿದ್ದರು. ಆ ಜನರು ದೇಶವನ್ನು ಬಿಟ್ಟುಹೋಗುವಂತೆ ಅವನು ಬಲವಂತ ಮಾಡಿದನು. ಆಸನು ತನ್ನ ಪೂರ್ವಿಕರು ನಿರ್ಮಿಸಿದ ವಿಗ್ರಹಗಳನ್ನು ನಿರ್ಮೂಲಮಾಡಿದನು. 13 ಆಸನು ತನ್ನ ಅಜ್ಜಿ ಮಾಕಳನ್ನು ರಾಣಿಯ ಪಟ್ಟದಿಂದ ಕೆಳಗಿಳಿಸಿದನು. ಮಾಕಳು ಅಶೇರ ದೇವತೆಯ ಒಂದು ಭೀಕರ ಮೂರ್ತಿಯನ್ನು ಮಾಡಿಸಿದ್ದಳು. ಅವನು ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದನು. 14 ಆಸನು ಎತ್ತರವಾದ ಸ್ಥಳಗಳನ್ನು ನಾಶಪಡಿಸಲಿಲ್ಲ. ಆದರೆ ಅವನು ತನ್ನ ಜೀವಮಾನವೆಲ್ಲಾ ಯೆಹೋವನಿಗೆ ನಂಬಿಗಸ್ಥನಾಗಿದ್ದನು. 15 ಇದಲ್ಲದೆ ತಾನು ಮತ್ತು ತನ್ನ ತಂದೆಯು ಮೀಸಲಾಗಿಟ್ಟಿದ್ದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿಟ್ಟನು.
16 ರಾಜನಾದ ಆಸನು ಯೆಹೂದದ ಅರಸನಾಗಿದ್ದ ಕಾಲದಲ್ಲಿ ಅವನಿಗೆ ಮತ್ತು ಇಸ್ರೇಲಿನ ರಾಜನಾದ ಬಾಷನಿಗೆ ಯಾವಾಗಲೂ ಯುದ್ಧವು ನಡೆಯುತ್ತಿತ್ತು. 17 ಯೆಹೂದದ ವಿರುದ್ಧವಾಗಿ ಬಾಷನು ಹೋರಾಡಿದನು. ಆಸನ ದೇಶವಾದ ಯೆಹೂದದಿಂದ ಜನರು ಬರುವುದನ್ನೂ ಹೋಗುವುದನ್ನೂ ನಿಲ್ಲಿಸಲು ಬಾಷನು ಇಚ್ಛಿಸಿದನು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಿದನು. 18 ಆದ್ದರಿಂದ ಆಸನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರದಲ್ಲಿ ಉಳಿದಿದ್ದ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡನು. ಅವನು ತನ್ನ ಸೇವಕರಿಗೆ ಬೆಳ್ಳಿಬಂಗಾರಗಳನ್ನು ಕೊಟ್ಟು, ಅವರನ್ನು ಅರಾಮ್ಯರ ರಾಜನಾದ ಬೆನ್ಹದದನ ಬಳಿಗೆ ಕಳುಹಿಸಿದನು. (ಬೆನ್ಹದದನು ಟಬ್ರಿಮ್ಮೋನನ ಮಗ. ಟಬ್ರಿಮ್ಮೋನನು ಹಜ್ಯೋನನ ಮಗ.) ದಮಸ್ಕ ನಗರವು ಅವನ ರಾಜಧಾನಿಯಾಗಿತ್ತು. 19 ಆಸನು ಈ ಸಂದೇಶವನ್ನು ಕಳುಹಿಸಿದನು: “ನನ್ನ ತಂದೆಯೂ ನಿನ್ನ ತಂದೆಯೂ ಶಾಂತಿಒಪ್ಪಂದವನ್ನು ಮಾಡಿಕೊಂಡಿದ್ದರು. ಈಗ ನಾನು ನಿನ್ನೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಅಪೇಕ್ಷಿಸಿದ್ದೇನೆ. ನಾನು ನಿನಗೆ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದೇನೆ. ಇಸ್ರೇಲಿನ ರಾಜನಾದ ಬಾಷನೊಂದಿಗೆ ನಿನಗಿರುವ ಒಪ್ಪಂದವನ್ನು ಮುರಿದುಬಿಡು. ಆಗ ಬಾಷನು ನನ್ನ ದೇಶವನ್ನು ಬಿಟ್ಟುಹೋಗುತ್ತಾನೆ.”
20 ರಾಜನಾದ ಬೆನ್ಹದದನು ರಾಜನಾದ ಆಸನ ಜೊತೆ ಒಪ್ಪಂದ ಮಾಡಿಕೊಂಡನು. ಆದ್ದರಿಂದ ಅವನು ತನ್ನ ಸೈನ್ಯವನ್ನು ಇಸ್ರೇಲಿನ ಪಟ್ಟಣಗಳ ವಿರುದ್ದ ಹೋರಾಡಲು ಕಳುಹಿಸಿದನು. ಬೆನ್ಹದದನು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ ಪಟ್ಟಣಗಳನ್ನು ಮತ್ತು ಗಲಿಲಾಯ ಸರೋವರದ ಸುತ್ತಲಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿದನು. ಅವನು ನಫ್ತಾಲಿ ಪ್ರದೇಶವನ್ನೆಲ್ಲ ಸೋಲಿಸಿದನು. 21 ಈ ಆಕ್ರಮಣದ ಸುದ್ದಿಯು ಬಾಷನಿಗೆ ತಿಳಿಯಿತು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಲು ತಾನು ಕೈಗೊಂಡಿದ್ದ ಕೆಲಸವನ್ನು ನಿಲ್ಲಿಸಿದನು. ಅವನು ಆ ಪಟ್ಟಣದಿಂದ ತಿರ್ಚಕ್ಕೆ ಹಿಂದಿರುಗಿದನು. 22 ಆಗ ರಾಜನಾದ ಆಸನು ಯೆಹೂದದ ಜನರಿಗೆಲ್ಲ ಒಂದು ಆಜ್ಞೆಯನ್ನು ಮಾಡಿದನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಹಾಯಮಾಡಬೇಕಾಯಿತು. ಬಾಷನು ರಾಮ ನಗರವನ್ನು ಬಲಪಡಿಸಲೆಂದು ಉಪಯೋಗಿಸುತ್ತಿದ್ದ ಎಲ್ಲಾ ಕಲ್ಲುಗಳನ್ನು ಮತ್ತು ಮರಗಳನ್ನು ಅವರು ರಾಮಕ್ಕೆ ಹೋಗಿ ತೆಗೆದುಕೊಂಡು ಬಂದರು. ಅವರು ಆ ವಸ್ತುಗಳನ್ನು ಬೆನ್ಯಾಮೀನ್ ದೇಶದ ಗೆಬಕ್ಕೆ ಮತ್ತು ಮಿಚ್ಛೆಗಳಿಗೆ ತೆಗೆದುಕೊಂಡು ಹೋದರು. ನಂತರ ರಾಜನಾದ ಆಸನು ಆ ಪಟ್ಟಣಗಳನ್ನು ಮತ್ತಷ್ಟು ಬಲಪಡಿಸಿದನು.
23 ಆಸನು ಮಾಡಿದ ಮಹಾಕಾರ್ಯಗಳನ್ನೂ ಅವನು ಕಟ್ಟಿಸಿದ ನಗರಗಳನ್ನೂ ಮತ್ತು ಅವನನ್ನು ಕುರಿತ ಇತರ ಸಂಗತಿಗಳನ್ನೂ “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆಸನಿಗೆ ವಯಸ್ಸಾದಾಗ, ಅವನ ಕಾಲುಗಳಿಗೆ ರೋಗವಾಗಿತ್ತು. 24 ಆಸನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಆಸನ ಮಗನಾದ ಯೆಹೋಷಾಫಾಟನು ಅವನ ನಂತರ ಹೊಸ ರಾಜನಾದನು.
ನಾದ್ವಾ ಇಸ್ರೇಲಿನ ರಾಜ
25 ಆಸನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ, ಯಾರೊಬ್ಬಾಮನ ಮಗನಾದ ನಾದ್ವಾನು ಇಸ್ರೇಲಿನ ರಾಜನಾದನು. ನಾದ್ವಾನು ಇಸ್ರೇಲನ್ನು ಎರಡು ವರ್ಷ ಆಳಿದನು. 26 ನಾದ್ವಾನು ಯೆಹೋವನ ವಿರುದ್ಧ ಕೆಟ್ಟಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
27 ಬಾಷನು ಅಹೀಯನ ಮಗ. ಅವನು ಇಸ್ಸಾಕಾರನ ಕುಲದವನಾಗಿದ್ದನು. ರಾಜನಾದ ನಾದ್ವಾನನ್ನು ಕೊಲ್ಲಲು ಬಾಷನು ಸಂಚು ಮಾಡಿದನು. ನಾದ್ವಾನು ಇಸ್ರೇಲರೊಡನೆ ಗಿಬ್ಬೆತೋನ್ ಪಟ್ಟಣದ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭವಿದು. ಇದು ಫಿಲಿಷ್ಟಿಯ ಪಟ್ಟಣ. ಆ ಸ್ಥಳದಲ್ಲಿ ಬಾಷನು ನಾದ್ವಾನನ್ನು ಕೊಂದುಹಾಕಿದನು. 28 ಆಸನು ಯೆಹೂದದ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಇದು ಸಂಭವಿಸಿತು. ಅನಂತರ ಬಾಷನು ಇಸ್ರೇಲಿಗೆ ರಾಜನಾದನು.
ಇಸ್ರೇಲಿನ ರಾಜನಾದ ಬಾಷನು
29 ಬಾಷನು ಹೊಸರಾಜನಾದ ಸಮಯದಲ್ಲಿ ಅವನು ಯಾರೊಬ್ಬಾಮನ ವಂಶದಲ್ಲಿ ಎಲ್ಲರನ್ನೂ ಕೊಂದುಹಾಕಿದನು. ಯಾರೊಬ್ಬಾಮನ ವಂಶದಲ್ಲಿ ಯಾರೂ ಜೀವಸಹಿತ ಉಳಿಯಲು ಬಾಷನು ಬಿಡಲಿಲ್ಲ. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನಾದ ಶೀಲೋವಿನ ಅಹೀಯನ ಮೂಲಕ ಇದನ್ನು ಹೇಳಿದ್ದನು. 30 ರಾಜನಾದ ಯಾರೊಬ್ಬಾಮನು ಅನೇಕ ಪಾಪಗಳನ್ನು ಮಾಡಿದ್ದರಿಂದ ಇದು ಸಂಭವಿಸಿತು. ಇಸ್ರೇಲಿನ ಜನರು ಅನೇಕ ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಇಸ್ರೇಲಿನ ದೇವರಾದ ಯೆಹೋವನು ಹೆಚ್ಚು ಕೋಪಗೊಳ್ಳುವಂತೆ ಯಾರೊಬ್ಬಾಮನು ಮಾಡಿದ್ದನು.
31 ನಾದ್ವಾನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 32 ಬಾಷನು ಇಸ್ರೇಲನ್ನು ಆಳುತ್ತಿದ್ದ ಕಾಲದಲ್ಲೆಲ್ಲಾ, ಯೆಹೂದದ ರಾಜನಾದ ಆಸನ ವಿರುದ್ಧವಾಗಿ ಯುದ್ಧ ಮಾಡುತ್ತಲೇ ಇದ್ದನು.
33 ಆಸನು ಯೆಹೂದದ ರಾಜನಾದ ಮೂರನೆಯ ವರ್ಷದಲ್ಲಿ, ಅಹೀಯನ ಮಗನಾದ ಬಾಷನು ಇಡೀ ಇಸ್ರೇಲಿಗೆ ರಾಜನಾದನು. ಅವನ ರಾಜಧಾನಿಯಾದ ತಿರ್ಚದಲ್ಲಿ, ಅವನು ಇಪ್ಪತ್ತನಾಲ್ಕು ವರ್ಷ ಆಳಿದನು. 34 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಬಾಷನು ಮಾಡಿದನು. ತನಗಿಂತ ಮುಂಚೆ ಆಳಿದ ಇಸ್ರೇಲಿನ ರಾಜನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.