18
ಎಲೀಯನು ಮತ್ತು ಬಾಳನ ಪ್ರವಾದಿಗಳು
1 ಬರಗಾಲದ ಮೂರನೆ ವರ್ಷದಲ್ಲಿ ಯೆಹೋವನು ಎಲೀಯನಿಗೆ, “ಹೋಗಿ, ರಾಜನಾದ ಅಹಾಬನನ್ನು ಭೇಟಿಮಾಡು. ನಾನು ಬೇಗ ಮಳೆಯನ್ನು ಸುರಿಸುತ್ತೇನೆ” ಎಂದು ಹೇಳಿದನು.
2 ಎಲೀಯನು ಅಹಾಬನನ್ನು ಭೇಟಿಮಾಡಲು ಹೋದನು.
ಆಗ ಸಮಾರ್ಯದಲ್ಲಿ ಆಹಾರವಿರಲಿಲ್ಲ.
3 ರಾಜನಾದ ಅಹಾಬನು ಓಬದ್ಯನನ್ನು ತನ್ನ ಬಳಿಗೆ ಕರೆಯಿಸಿದನು. ಓಬದ್ಯನು ರಾಜನ ಅರಮನೆಯ ಮೇಲ್ವಿಚಾರಕನಾಗಿದ್ದನು. (ಓಬದ್ಯನು ಯೆಹೋವನ ನಿಜವಾದ ಹಿಂಬಾಲಕರಲ್ಲಿ ಒಬ್ಬನಾಗಿದ್ದನು.
4 ಒಂದು ಕಾಲದಲ್ಲಿ ಈಜೆಬೆಲಳು ಯೆಹೋವನ ಪ್ರವಾದಿಗಳನ್ನೆಲ್ಲ ಕೊಲ್ಲುತ್ತಿದ್ದಳು. ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ಕರೆದೊಯ್ದು, ಅವರನ್ನು ಗುಹೆಗಳಲ್ಲಿ ಅಡಗಿಸಿಟ್ಟನು. ಓಬದ್ಯನು ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿ ಪ್ರವಾದಿಗಳನ್ನು ಮತ್ತೊಂದು ಗುಹೆಯಲ್ಲಿಯೂ ಇಟ್ಟನು. ಓಬದ್ಯನು ಅವರಿಗೆ ಆಹಾರವನ್ನೂ ನೀರನ್ನೂ ಒದಗಿಸುತ್ತಿದ್ದನು.)
5 ರಾಜನಾದ ಅಹಾಬನು ಓಬದ್ಯನಿಗೆ, “ನನ್ನ ಜೊತೆಯಲ್ಲಿ ಬಾ. ನಾವು ದೇಶದಲ್ಲಿರುವ ಪ್ರತಿಯೊಂದು ನೀರಿನ ಬುಗ್ಗೆಗಳಿಗೂ ತೊರೆಗಳಿಗೂ ಹೋಗಿ ನಮ್ಮ ಕುದುರೆಗಳಿಗೂ ಹೇಸರಕತ್ತೆಗಳಿಗೂ ಸಾಕಷ್ಟು ಹುಲ್ಲು ಸಿಕ್ಕುತ್ತದೆಯೋ ನೋಡಿಕೊಂಡು ಬರೋಣ. ಸಿಕ್ಕುವುದಾದರೆ, ನಮ್ಮ ಪಶುಗಳು ಸಾಯುವುದಿಲ್ಲ” ಎಂದು ಹೇಳಿದನು.
6 ಅಂತೆಯೇ ನೀರನ್ನು ಕಂಡುಕೊಳ್ಳಲು ದೇಶದ ಒಂದು ಕಡೆಗೆ ಅಹಾಬನು, ಮತ್ತೊಂದು ಕಡೆಗೆ ಓಬದ್ಯನು ಹೊರಟರು. ಅವರಿಬ್ಬರೂ ದೇಶವನ್ನೆಲ್ಲಾ ಸಂಚರಿಸಿದರು.
7 ಓಬದ್ಯನು ಸಂಚರಿಸುತ್ತಿರುವಾಗ ಎಲೀಯನನ್ನು ಭೇಟಿಯಾದನು. ಓಬದ್ಯನು ಎಲೀಯನನ್ನು ಕಂಡ ಕೂಡಲೇ ಅವನನ್ನು ಗುರುತಿಸಿ ಎಲೀಯನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ನನ್ನ ಒಡೆಯನಾದ ಎಲೀಯನು ನೀನೋ?” ಎಂದು ಕೇಳಿದನು.
8 ಎಲೀಯನು, “ಹೌದು, ನಾನೇ. ಹೋಗಿ, ನಿನ್ನ ಒಡೆಯನಾದ ರಾಜನಿಗೆ ನಾನಿಲ್ಲಿದ್ದೇನೆಂದು ಹೇಳು” ಎಂದು ಉತ್ತರಿಸಿದನು.
9 ಆಗ ಓಬದ್ಯನು, “ನೀನು ಎಲ್ಲಿರುವೆ ಎಂಬುದು ನನಗೆ ತಿಳಿದಿದೆಯೆಂದು ನಾನು ರಾಜನಿಗೆ ಹೇಳಿದರೆ, ಅವನು ನನ್ನನ್ನು ಕೊಂದುಬಿಡುತ್ತಾನೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ನೀನೇಕೆ ನನ್ನನ್ನು ಸಾಯಿಸಬೇಕೆಂದಿರುವೆ?
10 ನಿನ್ನ ದೇವರಾದ ಯೆಹೋವನಾಣೆ, ರಾಜನು ನಿನಗಾಗಿ ಎಲ್ಲಾ ಕಡೆಯೂ ಹುಡುಕುತ್ತಿದ್ದಾನೆ! ಅವನು ನಿನ್ನನ್ನು ಕಂಡುಹಿಡಿಯಲು ಎಲ್ಲಾ ದೇಶಗಳಿಗೂ ಜನರನ್ನು ಕಳುಹಿಸಿದ್ದಾನೆ. ಒಂದು ದೇಶದ ಅಧಿಪತಿಯು ನಮ್ಮ ದೇಶದಲ್ಲಿ ಎಲೀಯನು ಇಲ್ಲವೆಂದು ಹೇಳಿದರೆ ಆ ಮಾತು ಸತ್ಯವೊ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಅಹಾಬನು ಆ ಅಧಿಪತಿಯಿಂದ ಪ್ರಮಾಣ ಮಾಡಿಸುತ್ತಾನೆ.
11 ಈಗ ನೀನು ಇಲ್ಲಿರುವೆಯೆಂಬುದನ್ನು ನಾನು ಹೋಗಿ ಅವನಿಗೆ ತಿಳಿಸುವಂತೆ, ನೀನು ಇಚ್ಛಿಸಿರುವೆಯಲ್ಲವೇ?
12 ನಾನು ಹೋಗಿ ರಾಜನಾದ ಅಹಾಬನಿಗೆ ನೀನು ಇಲ್ಲಿರುವೆಯೆಂಬುದನ್ನು ತಿಳಿಸಿದರೆ, ನಂತರ ಯೆಹೋವನು ನಿನ್ನನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ಯುವನು. ರಾಜನಾದ ಅಹಾಬನು ಇಲ್ಲಿಗೆ ಬಂದಾಗ, ನಿನ್ನನ್ನು ಕಂಡುಹಿಡಿಯಲು ಸಮರ್ಥನಾಗುವುದಿಲ್ಲ. ಆಗ ಅವನು ನನ್ನನ್ನು ಕೊಂದುಬಿಡುತ್ತಾನೆ! ನನ್ನ ಬಾಲ್ಯದಿಂದಲೂ ನಾನು ಯೆಹೋವನನ್ನೇ ಅನುಸರಿಸುತ್ತಿದ್ದೇನೆ.
13 ನಾನು ಏನು ಮಾಡಿದೆನೆಂಬುದು ನಿನಗೆ ತಿಳಿಯಲಿಲ್ಲವೇ? ಯೆಹೋವನ ಪ್ರವಾದಿಗಳನ್ನು ಈಜೆಬೆಲಳು ಕೊಲ್ಲುತ್ತಿದ್ದಾಗ ನೂರು ಮಂದಿ ಪ್ರವಾದಿಗಳನ್ನು ನಾನು ಗುಹೆಗಳಲ್ಲಿ ಅಡಗಿಸಿಟ್ಟೆನು. ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿಯನ್ನು ಮತ್ತೊಂದು ಗುಹೆಯಲ್ಲಿಯೂ ನಾನು ಅಡಗಿಸಿಟ್ಟೆನು. ಅವರಿಗೆ ಆಹಾರವನ್ನೂ ನೀರನ್ನೂ ನಾನು ತಂದುಕೊಡುತ್ತಿದ್ದೆನು.
14 ಈಗ ನಿನ್ನ ಅಪೇಕ್ಷೆಯಂತೆ ನಾನು ಹೋಗಿ, ನೀನು ಇಲ್ಲಿರುವೆ ಎಂಬುದನ್ನು ರಾಜನಿಗೆ ತಿಳಿಸಿದರೆ, ರಾಜನು ನನ್ನನ್ನು ಕೊಂದು ಹಾಕುತ್ತಾನೆ” ಎಂದು ಹೇಳಿದನು.
15 ಎಲೀಯನು, “ನಾನು ಸೇವೆ ಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ಈ ದಿನ ನಾನು ರಾಜನ ಎದುರಿನಲ್ಲಿ ಹಾಜರಾಗುತ್ತೇನೆ ಎಂಬುದಾಗಿ ಪ್ರಮಾಣ ಮಾಡುತ್ತೇನೆ” ಎಂದನು.
16 ಓಬದ್ಯನು ರಾಜನಾದ ಅಹಾಬನ ಬಳಿಗೆ ಹೋಗಿ ಎಲೀಯನು ಇರುವ ಸ್ಥಳವನ್ನು ತಿಳಿಸಿದನು. ರಾಜನಾದ ಅಹಾಬನು ಎಲೀಯನನ್ನು ಭೇಟಿಮಾಡಲು ಹೋದನು.
17 ಅಹಾಬನು ಎಲೀಯನನ್ನು ಕಂಡು, “ಇಸ್ರೇಲಿಗೆ ತೊಂದರೆ ಕೊಡುವವನು ನೀನೇ ಅಲ್ಲವೇ?” ಎಂದನು.
18 ಎಲೀಯನು, “ಇಸ್ರೇಲಿನ ತೊಂದರೆಗೆ ನಾನು ಕಾರಣನಲ್ಲ. ನೀನು ಮತ್ತು ನಿನ್ನ ತಂದೆಯ ಕುಟುಂಬವು ಈ ತೊಂದರೆಗಳಿಗೆಲ್ಲ ಕಾರಣ. ಯೆಹೋವನ ಆಜ್ಞೆಗಳಿಗೆ ವಿಧೇಯನಾಗದೆ ಸುಳ್ಳುದೇವರುಗಳನ್ನು ಅನುಸರಿಸತೊಡಗಿದ್ದರಿಂದ ಆ ತೊಂದರೆಗಳಿಗೆಲ್ಲಾ ನೀನೇ ಕಾರಣನಾಗಿರುವೆ.
19 ಈಗ ಕರ್ಮೆಲ್ ಬೆಟ್ಟದ ಮೇಲೆ ನನ್ನನ್ನು ಭೇಟಿಮಾಡಲು ಎಲ್ಲಾ ಇಸ್ರೇಲರಿಗೆ ತಿಳಿಸು. ಬಾಳನ ನಾನೂರೈವ್ತತು ಮಂದಿ ಪ್ರವಾದಿಗಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಸುಳ್ಳುದೇವತೆಯಾದ ಅಶೇರಳ ನಾನೂರು ಮಂದಿ ಪ್ರವಾದಿಗಳನ್ನೂ ಕರೆದುಕೊಂಡು ಬಾ. ಆ ಪ್ರವಾದಿಗಳನ್ನು ರಾಣಿಯಾದ ಈಜೆಬೆಲಳು ಪೋಷಣೆ ಮಾಡುತ್ತಿದ್ದಾಳೆ” ಎಂದು ಹೇಳಿದನು.
20 ಇಸ್ರೇಲರೆಲ್ಲರನ್ನು ಮತ್ತು ಆ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಅಹಾಬನು ಕರೆಸಿದನು.
21 ಜನರೆಲ್ಲರ ಹತ್ತಿರಕ್ಕೆ ಎಲೀಯನು ಬಂದು ಅವರಿಗೆ, “ನೀವು ಯಾರನ್ನು ಹಿಂಬಾಲಿಸಬೇಕೆಂಬುದನ್ನು ಯಾವಾಗ ತೀರ್ಮಾನಿಸುತ್ತೀರಿ? ಯೆಹೋವನು ನಿಜವಾದ ದೇವರಾಗಿದ್ದರೆ, ನೀವು ಆತನನ್ನು ಹಿಂಬಾಲಿಸಬೇಕು; ಬಾಳನೇ ನಿಜವಾದ ದೇವರಾಗಿದ್ದರೆ, ನೀವು ಅವನನ್ನೇ ಹಿಂಬಾಲಿಸಬೇಕು” ಎಂದನು.
ಜನರು ಏನನ್ನೂ ಹೇಳಲಿಲ್ಲ.
22 ಎಲೀಯನು, “ಯೆಹೋವನ ಪ್ರವಾದಿಯಾಗಿ ನಾನೊಬ್ಬನು ಮಾತ್ರ ಇಲ್ಲಿದ್ದೇನೆ. ಆದರೆ ಇಲ್ಲಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳಿದ್ದಾರೆ.
23 ಎರಡು ಹೋರಿಗಳನ್ನು ತನ್ನಿ. ಬಾಳನ ಪ್ರವಾದಿಗಳು ಒಂದು ಹೋರಿಯನ್ನು ತೆಗೆದುಕೊಳ್ಳಲಿ. ಅವರು ಅದನ್ನು ಕೊಂದು, ತುಂಡುತುಂಡಾಗಿ ಕತ್ತರಿಸಲಿ. ನಂತರ ಅವರು ಆ ಮಾಂಸವನ್ನು ಸೌದೆಯ ಮೇಲಿಡಲಿ. ಆದರೆ ಬೆಂಕಿಯನ್ನು ಹೊತ್ತಿಸುವುದು ಬೇಡ. ಆಗ ನಾನು ಮತ್ತೊಂದು ಹೋರಿಯನ್ನು ಅವರಂತೆಯೇ ಕತ್ತರಿಸುವೆನು. ನಾನೂ ಬೆಂಕಿಯನ್ನು ಹೊತ್ತಿಸುವುದಿಲ್ಲ.
24 ಬಾಳನ ಪ್ರವಾದಿಗಳಾದ ನೀವು ನಿಮ್ಮ ದೇವರನ್ನು ಪ್ರಾರ್ಥಿಸಿ. ನಾನು ಯೆಹೋವನನ್ನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಯಾರ ಪ್ರಾರ್ಥನೆಗೆ ಉತ್ತರವಾಗಿ ದೇವರು ಸೌದೆಯನ್ನು ಉರಿಯುವಂತೆ ಮಾಡುತ್ತಾನೋ ಆತನೇ ನಿಜವಾದ ದೇವರು” ಎಂದು ಹೇಳಿದನು.
ಜನರೆಲ್ಲರೂ ಇದು ಒಳ್ಳೆಯ ಆಲೋಚನೆಯೆಂದು ಒಪ್ಪಿಕೊಂಡರು.
25 ನಂತರ ಎಲೀಯನು ಬಾಳನ ಪ್ರವಾದಿಗಳಿಗೆ, “ನಿಮ್ಮಲ್ಲಿ ಬಹು ಜನರು ಇರುವುದರಿಂದ ಮೊದಲು ನೀವೇ ಹೋಗಿ ನಿಮ್ಮ ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ. ನಿಮ್ಮ ದೇವರಿಗೆ ಪ್ರಾರ್ಥಿಸಿ. ಆದರೆ ನೀವು ಬೆಂಕಿಯನ್ನು ಹೊತ್ತಿಸಬೇಡಿ” ಎಂದು ಹೇಳಿದನು.
26 ಪ್ರವಾದಿಗಳು ತಾವು ತಂದಿದ್ದ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. ಅವರು ಬಾಳನನ್ನು ಮಧ್ಯಾಹ್ನದವರೆಗೆ ಪ್ರಾರ್ಥಿಸಿದರು. “ಬಾಳನೇ, ದಯವಿಟ್ಟು ನಮಗೆ ಉತ್ತರ ನೀಡು!” ಎಂದು ಅವರು ಪ್ರಾರ್ಥಿಸಿದರು. ಆದರೆ ಯಾವ ಶಬ್ದವೂ ಆಗಲಿಲ್ಲ: ಯಾರೊಬ್ಬರೂ ಉತ್ತರಿಸಲಿಲ್ಲ; ಪ್ರವಾದಿಗಳು ತಾವು ನಿರ್ಮಿಸಿದ್ದ ಯಜ್ಞವೇದಿಕೆಯ ಸುತ್ತಲೂ ನರ್ತಿಸಿದರು. ಆದರೆ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ.
27 ಮಧ್ಯಾಹ್ನವಾದಾಗ ಎಲೀಯನು ಅವರನ್ನು ಅಪಹಾಸ್ಯ ಮಾಡಲಾರಂಭಿಸಿದನು. ಎಲೀಯನು, “ಬಾಳನು ನಿಜವಾದ ದೇವರಾಗಿದ್ದರೆ, ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ! ಬಹುಶಃ ಅವನು ಯೋಚನಾನಿರತನಾಗಿರಬಹುದು! ಅಥವಾ ಕಾರ್ಯನಿರತನಾಗಿರಬಹುದು! ಅಥವಾ ಸಂಚಾರನಿರತನಾಗಿರಬಹುದು! ಅಥವಾ ನಿದ್ರಾಮಗ್ನನಾಗಿರಬಹುದು! ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ, ಅವನನ್ನು ಎಚ್ಚರಗೊಳಿಸಿ!” ಎಂದು ಹೇಳಿದನು.
28 ಪ್ರವಾದಿಗಳು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿದರು. ಅವರು ಖಡ್ಗ ಮತ್ತು ಬರ್ಜಿಗಳಿಂದ ತಮ್ಮನ್ನು ತಾವೇ ತಿವಿದುಕೊಂಡರು. (ಅವರು ಆರಾಧಿಸುವ ರೀತಿಯೇ ಇದು.) ರಕ್ತವು ತಮ್ಮ ದೇಹದ ಮೇಲೆ ಚಿಮ್ಮುವತನಕ ಅವರು ತಮ್ಮನ್ನು ತಾವು ತಿವಿದುಕೊಂಡರು.
29 ಮಧ್ಯಾಹ್ನದ ಸಮಯವು ಮೀರುತ್ತಾ ಬಂದರೂ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ. ಸಾಯಂಕಾಲದ ಯಜ್ಞಗಳನ್ನು ಅರ್ಪಿಸುವ ಸಮಯ ಬರುವ ತನಕ ಪ್ರವಾದಿಗಳು ಗಟ್ಟಿಯಾಗಿ ಕೂಗುತ್ತಲೇ ಇದ್ದರು. ಆದರೂ ಬಾಳನಿಂದ ಉತ್ತರವೇ ಬರಲಿಲ್ಲ. ಯಾವ ಶಬ್ದವೂ ಆಗಲಿಲ್ಲ; ಅವರ ಕೂಗಾಟವನ್ನು ಯಾರೂ ಲಕ್ಷಿಸಲಿಲ್ಲ.
30 ಆಗ ಎಲೀಯನು ಜನರೆಲ್ಲರಿಗೂ, “ಈಗ ನನ್ನ ಬಳಿಗೆ ಬನ್ನಿ” ಎಂದನು. ಅವನ ಸುತ್ತಲೂ ಜನರೆಲ್ಲರೂ ಒಟ್ಟುಗೂಡಿದರು. ಯೆಹೋವನ ಯಜ್ಞವೇದಿಕೆಯು ಒಡೆದುಹೋಗಿತ್ತು. ಎಲೀಯನು ಅದನ್ನು ಸರಿಪಡಿಸಿದನು.
31 ಎಲೀಯನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಒಂದೊಂದು ಕಲ್ಲಿನಂತೆ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡನು. ಯೆಹೋವನಿಂದ ಇಸ್ರೇಲನೆಂದು ಕರೆಸಿಕೊಂಡ ಯಾಕೋಬನ ಹನ್ನೆರಡು ಗಂಡುಮಕ್ಕಳ ಹೆಸರನ್ನೇ ಈ ಕುಲಗಳಿಗೆ ಕೊಡಲಾಗಿತ್ತು.
32 ಎಲೀಯನು ಯೆಹೋವನ ಗೌರವಾರ್ಥವಾಗಿ ಯಜ್ಞವೇದಿಕೆಯನ್ನು ಈ ಕಲ್ಲುಗಳಿಂದ ಸರಿಪಡಿಸಿದನು. ಎಲೀಯನು ಯಜ್ಞವೇದಿಕೆಯ ಸುತ್ತಲೂ ಹಳ್ಳವನ್ನು ತೋಡಿದನು. ಅದು ಹದಿನೈದು ಲೀಟರ್ ನೀರು ತುಂಬುವಷ್ಟು ಅಗಲವಾಗಿತ್ತು ಮತ್ತು ಆಳವಾಗಿತ್ತು.
33 ನಂತರ ಎಲೀಯನು ಸೌದೆಯನ್ನು ಯಜ್ಞವೇದಿಕೆಯ ಮೇಲೆ ಇಟ್ಟನು. ಅವನು ಹೋರಿಯನ್ನು ತುಂಡುತುಂಡಾಗಿ ಕತ್ತರಿಸಿದನು. ಅವನು ಆ ತುಂಡುಗಳನ್ನು ಸೌದೆಯ ಮೇಲಿಟ್ಟನು.
34 ಎಲೀಯನು, “ನಾಲ್ಕು ಕೊಡಗಳಲ್ಲಿ ನೀರನ್ನು ತುಂಬಿಸಿ. ಆ ಮಾಂಸದ ತುಂಡುಗಳ ಮೇಲೆ ಮತ್ತು ಸೌದೆಯ ಮೇಲೆ ಆ ನೀರನ್ನು ಸುರಿಯಿರಿ” ಎಂದು ಹೇಳಿದನು. ಎಲೀಯನು, “ಮತ್ತೆ ಅದೇ ರೀತಿ ಮಾಡಿ” ಎಂದನು, ಅವನು, “ಮೂರನೆಯ ಸಲ ಅದೇ ರೀತಿ ಮಾಡಿ” ಎಂದನು.
35 ಯಜ್ಞವೇದಿಕೆಯಿಂದ ಹರಿದ ನೀರೆಲ್ಲ ಹಳ್ಳವನ್ನು ತುಂಬಿಕೊಂಡಿತ್ತು.
36 ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು.
37 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ಯೆಹೋವನೇ, ನೀನು ದೇವರೆಂಬುದನ್ನು ಈ ಜನರಿಗೆಲ್ಲ ತೋರಿಸು. ಈ ಜನರನ್ನೆಲ್ಲ ಮತ್ತೆ ನೀನು ನಿನ್ನ ಬಳಿಗೆ ತರುತ್ತಿರುವೆ ಎಂಬುದನ್ನೂ ಈ ಜನರು ತಿಳಿದುಕೊಳ್ಳಲಿ” ಎಂದು ಪ್ರಾರ್ಥಿಸಿದನು.
38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಗಳನ್ನು, ಸೌದೆಯನ್ನು, ಕಲ್ಲುಗಳನ್ನು ಮತ್ತು ಯಜ್ಞವೇದಿಕೆಯ ಸುತ್ತಲಿನ ಮಣ್ಣನ್ನೆಲ್ಲ ದಹಿಸಿತು. ಆ ಹಳ್ಳದಲ್ಲಿದ್ದ ನೀರನ್ನೆಲ್ಲ ಬೆಂಕಿಯು ದಹಿಸಿ ಒಣಗಿಸಿತು.
39 ಈ ದೃಶ್ಯವನ್ನು ಜನರೆಲ್ಲರೂ ನೋಡಿದರು. ಜನರು ನೆಲಕ್ಕೆ ಬಾಗಿ ನಮಸ್ಕರಿಸುತ್ತಾ, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
40 ಆಗ ಎಲೀಯನು, “ಬಾಳನ ಪ್ರವಾದಿಗಳನ್ನು ಹಿಡಿದು ತನ್ನಿ! ಅವರಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ!” ಎಂದು ಹೇಳಿದನು. ಪ್ರವಾದಿಗಳನ್ನೆಲ್ಲ ಜನರು ಹಿಡಿದುಕೊಂಡರು. ಎಲೀಯನು ಅವರನ್ನೆಲ್ಲಾ ಕೀಷೋನ್ ಬುಗ್ಗೆಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದನು.
ಮಳೆಯು ಮತ್ತೆ ಸುರಿಯಿತು
41 ನಂತರ ಎಲೀಯನು ರಾಜನಾದ ಅಹಾಬನಿಗೆ, “ಈಗ ಹೋಗಿ, ಅನ್ನಪಾನಗಳನ್ನು ತೆಗೆದುಕೊ. ಬಿರುಸಾದ ಮಳೆಯು ಸುರಿಯುವುದು” ಎಂದು ಹೇಳಿದನು.
42 ರಾಜನಾದ ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದನು. ಅದೇ ಸಮಯದಲ್ಲಿ ಎಲೀಯನು ಕರ್ಮೆಲ್ ಬೆಟ್ಟದ ತುದಿಗೆ ಹತ್ತಿದನು. ಎಲೀಯನು ಬೆಟ್ಟದ ತುದಿಯಲ್ಲಿ ಸಾಷ್ಟಾಂಗವೆರಗಿದನು. ಅವನು ತನ್ನ ಮೊಣಕಾಲುಗಳ ನಡುವೆ ತಲೆಯನ್ನು ಇಟ್ಟುಕೊಂಡನು.
43 ಎಲೀಯನು ತನ್ನ ಸೇವಕನಿಗೆ, “ಸಮುದ್ರದ ಕಡೆಗೆ ನೋಡು” ಎಂದು ಹೇಳಿದನು.
ಸಮುದ್ರವು ಕಾಣುವ ಸ್ಥಳಕ್ಕೆ ಆ ಸೇವಕನು ಹೋದನು. ನಂತರ ಸೇವಕನು ಹಿಂದಿರುಗಿ ಬಂದು, “ನನಗೆ ಏನೂ ಕಾಣುತ್ತಿಲ್ಲ” ಎಂದನು. ಎಲೀಯನು ಆ ಸೇವಕನಿಗೆ, “ಹೋಗಿ ಮತ್ತೆ ನೋಡು” ಎಂದನು. ಹೀಗೆ ಆ ಸೇವಕನು ಏಳು ಸಲ ಹೋದನು.
44 ಏಳನೆಯ ಸಲ, ಸೇವಕನು ಹಿಂದಿರುಗಿ ಬಂದು, “ಒಬ್ಬ ಮನುಷ್ಯನ ಮುಷ್ಟಿ ಗಾತ್ರದ ಚಿಕ್ಕ ಮೋಡವನ್ನು ನಾನು ನೋಡಿದೆನು. ಆ ಮೋಡವು ಸಮುದ್ರದಿಂದ ಬರುತ್ತಿದೆ” ಎಂದನು.
ಎಲೀಯನು ಸೇವಕನಿಗೆ, “ರಾಜನಾದ ಅಹಾಬನ ಬಳಿಗೆ ಹೋಗಿ, ತನ್ನ ರಥವನ್ನು ಸಿದ್ಧಗೊಳಿಸಿ ಈಗಲೇ ಮನೆಗೆ ಹೋಗುವಂತೆ ಅವನಿಗೆ ಹೇಳು, ಅವನೀಗ ಬಿಟ್ಟುಹೋಗದಿದ್ದರೆ, ಮಳೆಯು ಅವನನ್ನು ತಡೆಯುತ್ತದೆ” ಎಂದು ಹೇಳಿದನು.
45 ಸ್ವಲ್ಪ ಹೊತ್ತಿನಲ್ಲಿಯೇ, ಆಕಾಶವು ಕಪ್ಪಾದ ಮೋಡಗಳಿಂದ ಕವಿದುಕೊಂಡಿತು. ಗಾಳಿಯು ಬೀಸಲಾರಂಭಿಸಿತು ಮತ್ತು ಬಿರುಸಾದ ಮಳೆಯು ಸುರಿಯಲಾರಂಭಿಸಿತು. ಅಹಾಬನು ತನ್ನ ರಥವನ್ನೇರಿ, ಇಜ್ರೇಲಿಗೆ ಪ್ರಯಾಣ ಮಾಡಲಾರಂಭಿಸಿದನು.
46 ಯೆಹೋವನ ಶಕ್ತಿಯು ಎಲೀಯನ ಮೇಲೆ ಬಂದಿತು. ಎಲೀಯನು ಓಡುವುದಕ್ಕಾಗಿ ತನ್ನ ಬಟ್ಟೆಗಳನ್ನು ತನ್ನ ಸುತ್ತಲೂ ಬಿಗಿದುಕೊಂಡನು. ನಂತರ ಎಲೀಯನು ರಾಜನಾದ ಅಹಾಬನಿಗಿಂತ ಮುಂಚೆ ಇಜ್ರೇಲಿನ ದಾರಿಯುದ್ದಕ್ಕೂ ಓಡುತ್ತಲೇ ಹೋದನು.