4
ಸೊಲೊಮೋನನ ರಾಜ್ಯ
ರಾಜನಾದ ಸೊಲೊಮೋನನು ಇಸ್ರೇಲಿನ ಜನತೆಯನ್ನೆಲ್ಲ ಆಳಿದನು. ಅವನಿಗೆ ಆಳಲು ನೆರವಾದ ಅವನ ಮುಖ್ಯಾಧಿಕಾರಿಗಳ ಹೆಸರುಗಳು ಹೀಗಿವೆ:
 
ಚಾದೋಕನ ಮಗನಾದ ಅಜರ್ಯನು ಯಾಜಕನಾಗಿದ್ದನು.
ಶೀಷನ ಮಕ್ಕಳಾದ ಎಲೀಹೋರೆಫ್ ಮತ್ತು ಅಹೀಯಾಹು; ಇವರಿಬ್ಬರೂ ನ್ಯಾಯಾಲಯದಲ್ಲಿ ನಡೆದ ಸಂಗತಿಗಳ ಕುರಿತಾಗಿ ಟಿಪ್ಪಣಿ ಬರೆಯುವ ಉದ್ಯೋಗವನ್ನು ಹೊಂದಿದ್ದರು.
ಅಹೀಲೂದನ ಮಗನಾದ ಯೆಹೋಷಾಫಾಟನು ಜನರ ಇತಿಹಾಸದ ಕುರಿತು ಟಿಪ್ಪಣಿ ಬರೆದನು.
ಯೆಹೋಯಾದಾವನ ಮಗನಾದ ಬೆನಾಯ; ಬೆನಾಯನು ಸೇನಾಧಿಪತಿಯಾಗಿದ್ದನು.
ಚಾದೋಕ ಮತ್ತು ಎಬ್ಯಾತಾರರು; ಚಾದೋಕ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.
ನಾತಾನನ ಮಗನಾದ ಅಜರ್ಯ; ಅಜರ್ಯನು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಕನಾಗಿದ್ದನು.
ನಾತಾನನ ಮಗನಾದ ಚಾಬೂದ; ಚಾಬೂದನು ರಾಜನಾದ ಸೊಲೊಮೋನನಿಗೆ ಯಾಜಕನೂ ಸಲಹೆಗಾರನೂ ಆಗಿದ್ದನು.
ಅಹೀಷಾರ್; ಅಹೀಷಾರನು ರಾಜನ ಅರಮನೆಯ ಪ್ರತಿಯೊಂದರಲ್ಲೂ ಜವಾಬ್ದಾರನಾಗಿದ್ದನು.
ಅಬ್ದನ ಮಗನಾದ ಅದೋನೀರಾಮ; ಅದೋನೀರಾಮನು ಗುಲಾಮರ ಮೇಲ್ವಿಚಾರಕನಾಗಿದ್ದನು.
 
ಇಸ್ರೇಲರನ್ನು ಹನ್ನೆರಡು ವಿಭಾಗ ಮಾಡಿ ಅವುಗಳನ್ನು ಜಿಲ್ಲೆಗಳೆಂದು ಕರೆದರು. ಪ್ರತಿಯೊಂದು ಜಿಲ್ಲೆಯನ್ನು ಆಳಲು ಸೊಲೊಮೋನನು ರಾಜ್ಯಪಾಲರನ್ನು ನೇಮಿಸಿದನು. ಈ ರಾಜ್ಯಪಾಲರು ತಮ್ಮ ಜಿಲ್ಲೆಗಳಿಂದ ಆಹಾರಪದಾರ್ಥಗಳನ್ನು ಸಂಗ್ರಹಿಸಿ ರಾಜನಿಗೂ ಅವನ ಕುಟುಂಬಕ್ಕೂ ಕೊಡಬೇಕೆಂದು ಆಜ್ಞಾಪಿಸಿದನು. ಪ್ರತಿಯೊಬ್ಬ ರಾಜ್ಯಪಾಲನು ವರ್ಷಕ್ಕೆ ಒಂದು ತಿಂಗಳು ರಾಜನಿಗೆ ಆಹಾರಪದಾರ್ಥಗಳನ್ನು ಕೊಡುವ ಜವಾಬ್ದಾರಿಯನ್ನು ಹೊಂದಿದ್ದನು. ಹನ್ನೆರಡು ರಾಜ್ಯಪಾಲರುಗಳ ಹೆಸರುಗಳು ಹೀಗಿವೆ:
 
ಎಫ್ರಾಯೀಮ್ ಬೆಟ್ಟಪ್ರದೇಶಕ್ಕೆ ಬೆನ್-ಹೂರನು ರಾಜ್ಯಪಾಲನಾಗಿದ್ದನು.
ಮಾಕಚ್, ಶಾಲೀಮ್, ಬೇತ್‌ಷ್‌ಮೆಷ್, ಏಲೋನ್, ಬೇತ್‌ಹಾನಾನ್‌ಗಳಿಗೆ ಬೆನ್‌ದೆಕರನು ರಾಜ್ಯಪಾಲನಾಗಿದ್ದನು.
10 ಅರುಬ್ಬೋತ್, ಸೋಕೋ, ಹೇಫರ್‌ಗಳಿಗೆ ಬೆನ್‌ಹೆಸೆದನು ರಾಜ್ಯಪಾಲನಾಗಿದ್ದನು.
11 ನಾಫೋತ್ ದೋರ್‌ಗೆ ಬೆನ್‌ಅಬೀನಾದ್ವಾನು ರಾಜ್ಯಪಾಲನಾಗಿದ್ದನು. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
12 ತಾಣಕ್, ಮೆಗಿದ್ದೋ ಮತ್ತು ಚಾರೆತಾನಿನ ಅಂಚಿನಲ್ಲಿದ್ದ ಬೇತ್‌ಷೆಯಾನಿನ ಎಲ್ಲ ಪ್ರದೇಶಕ್ಕೆ ಅಹೀಲೂದನ ಮಗನಾದ ಬಾಣಾ ರಾಜ್ಯಪಾಲನಾಗಿದ್ದನು. ಇದು ಇಜ್ರೇಲಿನ ತಳದಲ್ಲಿ ಬೇತ್‌ಷೆಯಾನಿನಿಂದ ಅಬೇಲ್ ಮೆಹೋಲವರೆಗಿರುವ, ಯೊಕ್ಮೆಯಾನಿನ ಆಚೆಗಿರುವ ಪ್ರದೇಶ.
13 ರಾಮೋತ್ ಗಿಲ್ಯಾದಿಗೆ ಬೆನ್‌ಗೆಬೆರನು ರಾಜ್ಯಪಾಲನಾಗಿದ್ದನು. ಗಿಲ್ಯಾದಿನ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ ಮತ್ತು ಪಟ್ಟಣಗಳೆಲ್ಲಕ್ಕೂ ಅವನು ರಾಜ್ಯಪಾಲನಾಗಿದ್ದನು. ಅವನು ಬಾಷಾನಿನ ಅರ್ಗೋಬ್ ಜಿಲ್ಲೆಗೂ ರಾಜ್ಯಪಾಲನಾಗಿದ್ದನು. ಈ ಪ್ರದೇಶದಲ್ಲಿ ಗೋಡೆಗಳಿಂದ ಸುತ್ತುವರಿದ ಅರವತ್ತು ನಗರಗಳಿದ್ದವು. ಈ ನಗರಗಳ ದ್ವಾರದಲ್ಲಿ ಹಿತ್ತಾಳೆಯ ಸಲಾಕೆಗಳುಳ್ಳ ಬಾಗಿಲುಗಳಿದ್ದವು.
14 ಮಹನಯಿಮಿಗೆ ಇದ್ದೋವಿನ ಮಗನಾದ ಅಹೀನಾದ್ವಾನು ರಾಜ್ಯಪಾಲನಾಗಿದ್ದನು.
15 ನಫ್ತಾಲಿಗೆ ಅಹೀಮಾಚನು ರಾಜ್ಯಪಾಲನಾಗಿದ್ದನು. ಸೊಲೊಮೋನನ ಮಗಳಾದ ಬಾಸೆಮತಳನ್ನು ಇವನು ಮದುವೆಯಾಗಿದ್ದನು.
16 ಆಶೇರಿಗೂ ಅಲೋತಿಗೂ ಹೂಷೈಯನ ಮಗ ಬಾಣನು ರಾಜ್ಯಪಾಲನಾಗಿದ್ದನು.
17 ಇಸ್ಸಾಕಾರಿಗೆ ಫಾರೂಹನ ಮಗನಾದ ಯೆಹೋಷಾಫಾಟನು ರಾಜ್ಯಪಾಲನಾಗಿದ್ದನು.
18 ಬೆನ್ಯಾಮೀನಿಗೆ ಏಲನ ಮಗನಾದ ಶಿಮ್ಮಿಯು ರಾಜ್ಯಪಾಲನಾಗಿದ್ದನು.
19 ಊರಿಯ ಮಗನಾದ ಗೆಬೆರನು ಗಿಲ್ಯಾದಿನ ರಾಜ್ಯಪಾಲನಾಗಿದ್ದನು. ಅಮೋರಿಯರ ರಾಜನಾದ ಸೀಹೋನನು ಮತ್ತು ಬಾಷಾನಿನ ರಾಜನಾದ ಓಗನು ವಾಸವಾಗಿದ್ದ ರಾಜ್ಯವೇ ಗಿಲ್ಯಾದ್. ಆದರೆ ಆ ಜಿಲ್ಲೆಗೆ ಗೆಬೆರ್ ಒಬ್ಬನೇ ರಾಜ್ಯಪಾಲನಾಗಿದ್ದನು.
 
20 ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಅನೇಕ ಜನರಿದ್ದರು. ಅಲ್ಲಿನ ಜನಸಂಖ್ಯೆಯು ಸಮುದ್ರತೀರದ ಮರಳಿನ ಕಣಗಳಷ್ಟಿತ್ತು. ಜನರು ಸಂತುಷ್ಟರಾಗಿ ಜೀವಿಸುತ್ತಿದ್ದರು. ಅವರು ತಿಂದು ಕುಡಿದು ಸಂತೋಷಿಸುತ್ತಿದ್ದರು.
21 ಸೊಲೊಮೋನನು ಯೂಫ್ರೇಟೀಸ್ ನದಿಯಿಂದ ಮೊದಲುಗೊಂಡು ಫಿಲಿಷ್ಟಿಯರ ದೇಶದವರೆಗಿನ ರಾಜ್ಯಗಳನ್ನೆಲ್ಲ ಆಳುತ್ತಿದ್ದನು. ಅವನ ರಾಜ್ಯಾಧಿಕಾರವು ಈಜಿಪ್ಟಿನ ಗಡಿಯವರೆಗೆ ವಿಸ್ತರಿಸಿತ್ತು. ಈ ದೇಶಗಳು ಸೊಲೊಮೋನನಿಗೆ ಕಪ್ಪಕಾಣಿಕೆಯನ್ನು ಕೊಡುತ್ತ ಅವನ ಜೀವಮಾನ ಪೂರ್ತಿ ಅವರು ಅವನಿಗೆ ಆಧೀನರಾಗಿದ್ದರು.
22-23 ಪ್ರತಿದಿನವೂ ಸೊಲೊಮೋನನಿಗೆ ಮತ್ತು ಅವನ ಪಂಕ್ತಿಯಲ್ಲಿ ಊಟಮಾಡುವವರಿಗೆ ಬೇಕಾದ ಆಹಾರಪದಾರ್ಥಗಳು ಹೀಗಿವೆ: ನೂರೈವತ್ತು ಬುಷೆಲ್ಸ್* ಉತ್ತಮವಾದ ಗೋಧಿಯ ಹಿಟ್ಟು; ಮುನ್ನೂರು ಬುಷೆಲ್ಸ್ ಹಿಟ್ಟು; ಚೆನ್ನಾಗಿ ಮೇಯಿಸಿದ ಹತ್ತು ಹಸುಗಳು; ಹೊಲಗಳಲ್ಲಿ ಮೇಯಿಸಿದ ಇಪ್ಪತ್ತು ಹಸುಗಳು; ನೂರು ಕುರಿಗಳು; ಇವುಗಳಲ್ಲದೆ ದುಪ್ಪಿ, ಜಿಂಕೆ, ಸಾರಂಗ ಮತ್ತು ಕೊಬ್ಬಿದ ಕೋಳಿಗಳು.
24 ಸೊಲೊಮೋನನು ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರದೇಶವನ್ನೆಲ್ಲ ಆಳಿದನು. ಈ ದೇಶವು ತಿಫ್ಸಹುದಿಂದ ಗಾಜದವರೆಗಿತ್ತು. ಸೊಲೊಮೋನನ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. 25 ಸೊಲೊಮೋನನ ಆಳ್ವಿಕೆಯಲ್ಲಿ ಯೆಹೂದದ ಮತ್ತು ಇಸ್ರೇಲಿನ ಜನರೆಲ್ಲರೂ ದಾನ್‌ನಿಂದ ಬೇರ್ಷೆಬದವರೆಗೆ ಸುರಕ್ಷಿತವಾಗಿದ್ದರು; ಶಾಂತಿಯಿಂದ ಜೀವಿಸುತ್ತಿದ್ದರು. ಜನರು ತಮ್ಮ ಅಂಜೂರ ಗಿಡಗಳ ಮತ್ತು ದ್ರಾಕ್ಷಾಲತೆಗಳ ನೆರಳಿನಲ್ಲಿ ಸಮಾಧಾನದಿಂದ ಕುಳಿತಿರುತ್ತಿದ್ದರು.
26 ಸೊಲೊಮೋನನು ತನ್ನ ರಥಗಳಿಗೆ ಬೇಕಾಗಿದ್ದ ನಾಲ್ಕು ಸಾವಿರ ಕುದುರೆಗಳಿಗೆ ಬೇಕಾಗುವಷ್ಟು ಸ್ಥಳ ಪಡೆದಿದ್ದನು. ಅವನಲ್ಲಿ ಹನ್ನೆರಡು ಸಾವಿರ ರಾಹುತರಿದ್ದರು. 27 ರಾಜನಾದ ಸೊಲೊಮೋನನಿಗೆ ಪ್ರತಿ ತಿಂಗಳಿಗೆ ಬೇಕಾದ ವಸ್ತುಗಳನ್ನು ಅವನ ಹನ್ನೆರಡು ಮಂದಿ ರಾಜ್ಯಪಾಲರಲ್ಲಿ ಒಬ್ಬರು ಸರದಿಯ ಪ್ರಕಾರ ಕೊಡುತ್ತಿದ್ದರು. ರಾಜನಿಗೂ ಅವನ ಪಂಕ್ತಿಯಲ್ಲಿ ಊಟಮಾಡುವ ಪ್ರತಿಯೊಬ್ಬರಿಗೂ ಆಹಾರಪದಾರ್ಥಗಳು ಯಥೇಚ್ಛವಾಗಿರುತ್ತಿದ್ದವು. 28 ರಾಜನ ರಥಗಳ ಕುದುರೆಗಳಿಗೆ ಮತ್ತು ಸವಾರಿಯ ಕುದುರೆಗಳಿಗೆ ಬೇಕಾದ ಹುಲ್ಲನ್ನು ಮತ್ತು ಬಾರ್ಲಿಯನ್ನು ಈ ರಾಜ್ಯಪಾಲರುಗಳು ಆಯಾಸ್ಥಳಗಳಿಂದ ತಂದುಕೊಡುತ್ತಿದ್ದರು.
ಸೊಲೊಮೋನನ ಜ್ಞಾನ
29 ದೇವರು ಸೊಲೊಮೋನನಿಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು. ಸೊಲೊಮೋನನು ಅನೇಕಾನೇಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರೂ ಊಹಿಸಿಕೊಳ್ಳಲಾರದಷ್ಟು ಜ್ಞಾನವನ್ನು ಅವನು ಹೊಂದಿದ್ದನು. 30 ಅವನ ಜ್ಞಾನವು ಈಜಿಪ್ಟಿನ ಗಂಡಸರೆಲ್ಲರ ಜ್ಞಾನಕ್ಕಿಂತಲೂ ಹೆಚ್ಚಿನದಾಗಿತ್ತು. ಸೊಲೊಮೋನನ ಜ್ಞಾನವು ಪೂರ್ವದಿಕ್ಕಿನ ಜನರೆಲ್ಲರ ಜ್ಞಾನಕ್ಕಿಂತ ವಿಶಾಲವಾಗಿತ್ತು. 31 ಪ್ರಪಂಚದಲ್ಲಿನ ಯಾವುದೇ ವ್ಯಕ್ತಿಯ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವು ಅವನಲ್ಲಿತ್ತು. ಅವನು ಜೆರಹನ ಮಗನಾದ ಏತಾನನಿಗಿಂತಲೂ ಜ್ಞಾನಿಯಾಗಿದ್ದನು. ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದರಿಗಿಂತ ಅವನು ಜ್ಞಾನಿಯಾಗಿದ್ದನು. ರಾಜನಾದ ಸೊಲೊಮೋನನು ಇಸ್ರೇಲ್ ಮತ್ತು ಯೆಹೂದಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧನಾಗಿದ್ದನು. 32 ರಾಜನಾದ ಸೊಲೊಮೋನನು ತನ್ನ ಜೀವಿತದ ಅವದಿಯಲ್ಲಿ ಮೂರುಸಾವಿರ ಜ್ಞಾನೋಪದೇಶಗಳನ್ನೂ ಒಂದು ಸಾವಿರದ ಐದು ಹಾಡುಗಳನ್ನೂ ಬರೆದನು.
33 ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು. 34 ರಾಜನಾದ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳಲು ಎಲ್ಲಾ ದೇಶಗಳ ಜನರೂ ಬರುತ್ತಿದ್ದರು. ಎಲ್ಲಾ ದೇಶದ ರಾಜರುಗಳು ತಮ್ಮ ದೇಶದ ಜ್ಞಾನಿಗಳನ್ನು ರಾಜನಾದ ಸೊಲೊಮೋನನ ಬಳಿಗೆ ಕಳುಹಿಸುತ್ತಿದ್ದರು.
* 4:22-23 ನೂರೈವತ್ತು ಬುಷೆಲ್ಸ್ ಅಥವಾ 6,600 ಲೀಟರ್, ಅಕ್ಷರಶಃ, 30 ಕೋರ್ಸ್. 4:22-23 ಮುನ್ನೂರು ಬುಷೆಲ್ಸ್ ಅಥವಾ 13,200 ಲೀಟರ್, ಅಕ್ಷರಶಃ, 60 ಕೋರ್ಸ್.