2 ರಾಜರುಗಳು
1
ಅಹಜ್ಯನಿಗೆ ಒಂದು ಸಂದೇಶ
1 ಅಹಾಬನು ಸತ್ತನಂತರ, ಮೋವಾಬ್ಯರು ಇಸ್ರೇಲಿನ ಆಳ್ವಿಕೆಗೆ ವಿರೋಧವಾಗಿ ದಂಗೆ ಎದ್ದರು.
2 ಒಂದು ದಿನ, ಅಹಜ್ಯನು ಸಮಾರ್ಯದ ತನ್ನ ಮನೆಯ ಮಾಳಿಗೆಯ ಮೇಲಿದ್ದನು. ಅಹಜ್ಯನು ಮನೆಯ ಮೇಲಿನ ಮರದ ಕಂಬಗಳ ಮೂಲಕ ಕೆಳಕ್ಕೆ ಬಿದ್ದನು. ಅವನಿಗೆ ಬಹಳ ಗಾಯಗಳಾದವು. ಅಹಜ್ಯನು ಸಂದೇಶಕರನ್ನು ಕರೆದು ಅವರಿಗೆ, “ಎಕ್ರೋನಿನ ದೇವರಾದ ಬಾಳ್ಜೆಬೂಬನ ಅರ್ಚಕರ ಬಳಿಗೆ ಹೋಗಿ, ನನ್ನ ಗಾಯಗಳು ಗುಣವಾಗುತ್ತವೆಯೇ ಎಂಬುದನ್ನು ಅವರಿಂದ ತಿಳಿದುಕೊಳ್ಳಿ” ಎಂದು ಹೇಳಿದನು.
3 ಆದರೆ ಯೆಹೋವನ ದೂತನೊಬ್ಬನು ತಿಷ್ಬೀಯನಾದ ಎಲೀಯನಿಗೆ, “ರಾಜನಾದ ಅಹಜ್ಯನು ಸಮಾರ್ಯದಿಂದ ಕೆಲವು ಸಂದೇಶಕರನ್ನು ಕಳುಹಿಸಿದ್ದಾನೆ. ನೀನು ಹೋಗಿ ಅವರನ್ನು ಭೇಟಿಯಾಗಿ ಅವರಿಗೆ, ‘ಇಸ್ರೇಲಿನಲ್ಲಿಯೂ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳುವುದೇಕೆ?
4 ರಾಜನಾದ ಅಹಜ್ಯನಿಗೆ ಈ ಸಂಗತಿಗಳನ್ನು ತಿಳಿಸಿ: ಬಾಳ್ಜೆಬೂಬನಿಂದ ಪ್ರಶ್ನೆಗಳನ್ನು ಕೇಳುವುದಕ್ಕೆ ನೀನು ಸಂದೇಶಕರನ್ನು ಕಳುಹಿಸಿದೆ. ನೀನು ಈ ಕಾರ್ಯವನ್ನು ಮಾಡಿದುದರಿಂದ, ಯೆಹೋವನು ಹೀಗೆನ್ನುವನು: ನೀನು ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ’ ಎಂದು ತಿಳಿಸು” ಎಂಬುದಾಗಿ ಹೇಳಿದನು. ಎಲೀಯನು ಅಹಜ್ಯನ ಸೇವಕರಿಗೆ ಈ ಮಾತುಗಳನ್ನು ಹೇಳಿ ಅಲ್ಲಿಂದ ಹೊರಟುಹೋದನು.
5 ಸಂದೇಶಕರು ಅಹಜ್ಯನ ಬಳಿಗೆ ಹಿಂದಿರುಗಿ ಬಂದರು. ಅಹಜ್ಯನು ಸಂದೇಶಕರನ್ನು, “ನೀವು ಇಷ್ಟು ಬೇಗ ಹಿಂದಕ್ಕೆ ಬಂದುದೇಕೆ?” ಎಂದು ಕೇಳಿದನು.
6 ಸಂದೇಶಕರು ಅಹಜ್ಯನಿಗೆ, “ಒಬ್ಬನು ನಮ್ಮನ್ನು ಭೇಟಿಯಾಗಿ ನಿಮ್ಮನ್ನು ಕಳುಹಿಸಿದ ರಾಜನ ಬಳಿಗೆ ಹಿಂದಿರುಗಿ ಹೋಗಿ ಯೆಹೋವನು ಹೇಳುವುದನ್ನು ಅವನಿಗೆ ತಿಳಿಸಿ. ಯೆಹೋವನು ಹೇಳುವುದೇನೆಂದರೆ: ‘ಇಸ್ರೇಲಿನಲ್ಲಿ ಒಬ್ಬ ದೇವರಿದ್ದಾನೆ! ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಸಂದೇಶಕರನ್ನು ಕಳುಹಿಸಿದುದೇಕೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ!’ ” ಎಂಬುದಾಗಿ ಹೇಳಿದರು.
7 ಅಹಜ್ಯನು ಸಂದೇಶಕರನ್ನು, “ನಿಮ್ಮನ್ನು ಭೇಟಿಮಾಡಿ ಈ ಮಾತುಗಳನ್ನು ತಿಳಿಸಿದ ಮನುಷ್ಯನು ಹೇಗಿದ್ದನು?” ಎಂದು ಕೇಳಿದನು.
8 ಸಂದೇಶಕರು ಅಹಜ್ಯನಿಗೆ, “ಅವನು ಉಣ್ಣೆಯ ಮೇಲಂಗಿಯನ್ನು ಧರಿಸಿದ್ದನು ಮತ್ತು ಸೊಂಟಕ್ಕೆ ಚರ್ಮದ ಪಟ್ಟಿಯನ್ನು ಕಟ್ಟಿಕೊಂಡಿದ್ದನು” ಎಂದರು.
ಆಗ ಅಹಜ್ಯನು, “ಅವನು ತಿಷ್ಬೀಯನಾದ ಎಲೀಯನು” ಎಂದು ಹೇಳಿದನು.
ಅಹಜ್ಯನು ಕಳುಹಿಸಿದ ಸೇನಾಧಿಪತಿಗಳ ನಾಶನ
9 ಅಹಜ್ಯನು ಎಲೀಯನ ಬಳಿಗೆ ಒಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಮಂದಿ ಜನರನ್ನು ಕಳುಹಿಸಿದನು. ಸೇನಾಧಿಪತಿಯು ಎಲೀಯನ ಬಳಿಗೆ ಹೋದನು. ಆ ಸಮಯದಲ್ಲಿ ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿದ್ದನು. ಆ ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ಕೆಳಗಿಳಿದು ಬಾ’ ” ಎಂದು ಹೇಳಿದನು.
10 ಎಲೀಯನು ಐವತ್ತು ಮಂದಿಯ ಸೇನಾಧಿಪತಿಗೆ, “ನಾನು ಒಬ್ಬ ದೇವಮನುಷ್ಯನಾಗಿರುವದಾದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಸೈನಿಕರನ್ನೂ ನಾಶಗೊಳಿಸಲಿ!” ಎಂದು ಉತ್ತರಿಸಿದನು.
ಆಗ ಬೆಂಕಿಯು ಪರಲೋಕದಿಂದ ಬಂದು ಆ ಸೇನಾಧಿಪತಿಯನ್ನು ಮತ್ತು ಅವನ ಐವತ್ತು ಮಂದಿ ಸೈನಿಕರನ್ನು ನಾಶಗೊಳಿಸಿತು.
11 ಅಹಜ್ಯನು ಬೇರೊಬ್ಬ ಸೇನಾಧಿಪತಿಯನ್ನು ಮತ್ತು ಐವತ್ತು ಜನರನ್ನು ಎಲೀಯನ ಬಳಿಗೆ ಕಳುಹಿಸಿದನು. ಸೇನಾಧಿಪತಿಯು ಎಲೀಯನಿಗೆ, “ದೇವಮನುಷ್ಯನೇ, ರಾಜನು ಹೇಳುತ್ತಾನೆ, ‘ತ್ವರಿತವಾಗಿ ಕೆಳಗಿಳಿದು ಬಾ!’ ” ಎಂದು ಹೇಳಿದನು.
12 ಎಲೀಯನು ಸೇನಾಧಿಪತಿಗೆ ಮತ್ತು ಅವನ ಐವತ್ತು ಮಂದಿ ಜನರಿಗೆ, “ನಾನು ದೇವಮನುಷ್ಯನಾಗಿದ್ದರೆ ಪರಲೋಕದಿಂದ ಬೆಂಕಿಯು ಕೆಳಗಿಳಿದು ಬಂದು ನಿನ್ನನ್ನೂ ನಿನ್ನ ಐವತ್ತು ಜನರನ್ನೂ ನಾಶಗೊಳಿಸಲಿ!” ಎಂದು ಹೇಳಿದನು.
ಆಗ ಪರಲೋಕದಿಂದ ದೇವರ ಬೆಂಕಿಯು ಇಳಿದು ಬಂದು ಸೇನಾಧಿಪತಿಯನ್ನೂ ಅವನ ಐವತ್ತು ಜನರನ್ನೂ ನಾಶಗೊಳಿಸಿತು.
13 ಅಹಜ್ಯನು ಮೂರನೆಯ ಸೇನಾಧಿಪತಿಯನ್ನು ಐವತ್ತು ಜನರೊಂದಿಗೆ ಕಳುಹಿಸಿದನು. ಐವತ್ತು ಮಂದಿಯ ಮೂರನೆಯ ಸೇನಾಧಿಪತಿಯು ಎಲೀಯನ ಬಳಿಗೆ ಬಂದನು. ಸೇನಾಧಿಪತಿಯು ತನ್ನ ಮೊಣಕಾಲುಗಳ ಮೇಲೆ ಬಿದ್ದು ನಮಸ್ಕರಿಸಿದನು. ಸೇನಾಧಿಪತಿಯು ಎಲೀಯನನ್ನು ಬೇಡಿಕೊಳ್ಳುತ್ತಾ ಅವನಿಗೆ, “ದೇವ ಮನುಷ್ಯನೇ, ನನ್ನ ಮತ್ತು ಈ ಐವತ್ತು ಜನರ ಪ್ರಾಣವು ನಿನ್ನ ದೃಷ್ಟಿಯಲ್ಲಿ ಬೆಲೆಯುಳ್ಳದ್ದಾಗಿರಲಿ!
14 ಪರಲೋಕದಿಂದ ಕೆಳಗಿಳಿದು ಬಂದ ಬೆಂಕಿಯು ಮೊದಲ ಇಬ್ಬರು ಸೇನಾಧಿಪತಿಗಳನ್ನೂ ಅವರ ಐವತ್ತು ಜನರನ್ನೂ ನಾಶಗೊಳಿಸಿತು. ಆದರೆ ಈಗ ನಮ್ಮ ಮೇಲೆ ಕನಿಕರ ತೋರಿ ಜೀವಿಸಲು ಅವಕಾಶ ಮಾಡಿಕೊಡು” ಎಂದು ಹೇಳಿದನು.
15 ಯೆಹೋವನ ದೂತನು ಎಲೀಯನಿಗೆ, “ಸೇನಾಧಿಪತಿಯೊಡನೆ ಹೋಗು, ಅವನಿಗೆ ಹೆದರಬೇಡ” ಎಂದು ಹೇಳಿದನು.
ಎಲೀಯನು ರಾಜನಾದ ಅಹಜ್ಯನನ್ನು ನೋಡಲು ಆ ಸೇನಾಧಿಪತಿಯೊಡನೆ ಹೋದನು.
16 ಎಲೀಯನು ಅಹಜ್ಯನಿಗೆ, “ಇಸ್ರೇಲಿನಲ್ಲಿ ದೇವರಿದ್ದಾನೆ. ಹೀಗಿರುವಾಗ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ಪ್ರಶ್ನೆಗಳನ್ನು ಕೇಳಲು ಸಂದೇಶಕರನ್ನು ಏಕೆ ಕಳುಹಿಸಿದೆ? ನೀನು ಈ ಕಾರ್ಯವನ್ನು ಮಾಡಿದ್ದರಿಂದ ನಿನ್ನ ಹಾಸಿಗೆಯಿಂದ ನೀನು ಮೇಲಕ್ಕೇಳುವುದಿಲ್ಲ. ನೀನು ಅಲ್ಲೇ ಸಾಯುವೆ! ಎಂಬುದಾಗಿ ಯೆಹೋವನು ಅನ್ನುತ್ತಾನೆ.” ಎಂದು ಹೇಳಿದನು.
17 ಎಲೀಯನ ಮೂಲಕ ಯೆಹೋವನು ಹೇಳಿದಂತೆಯೇ ಅಹಜ್ಯನು ಸತ್ತುಹೋದನು. ಅಹಜ್ಯನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಹಜ್ಯನ ನಂತರ ಯೆಹೋರಾಮನು ಹೊಸ ರಾಜನಾದನು. ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೊಹೋರಾವುನು ಆಳುವುದಕ್ಕೆ ಆರಂಭಿಸಿದನು.
18 ಅಹಜ್ಯನು ಮಾಡಿದ ಇತರ ಕಾರ್ಯಗಳ ಬಗ್ಗೆ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.