15
ಯೆಹೂದದಲ್ಲಿ ಅಜರ್ಯನ ಆಳ್ವಿಕೆ
1 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು.
2 ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ.
3 ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು.
4 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.
5 ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾವುನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.
6 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.
7 ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾವುನು ಹೊಸ ರಾಜನಾದನು.
ಜೆಕರ್ಯನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು
8 ಯಾರೊಬ್ಬಾಮನ ಮಗನಾದ ಜೆಕರ್ಯನು ಇಸ್ರೇಲಿನ ಸಮಾರ್ಯದಲ್ಲಿ ಆರು ತಿಂಗಳ ಕಾಲ ಆಳಿದನು. ಅದು ಯೆಹೂದದ ರಾಜನಾಗಿದ್ದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷವಾಗಿತ್ತು.
9 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಜೆಕರ್ಯನು ಮಾಡಿದನು. ಅವನ ಪೂರ್ವಿಕರು ಮಾಡಿದಂತೆಯೇ ಅವನೂ ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಕೃತ್ಯಗಳನ್ನು ಅವನು ನಿಲ್ಲಿಸಲಿಲ್ಲ.
10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು.
11 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಜೆಕರ್ಯನು ಮಾಡಿದ ಇತರ ಕಾರ್ಯಗಳನ್ನೆಲ್ಲ ಬರೆಯಲಾಗಿದೆ.
12 ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.
ಶಲ್ಲೂಮನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು
13 ಯೆಹೂದದ ರಾಜನಾದ ಉಜ್ಜೀಯನ ಮೂವತ್ತೊಂಭತ್ತನೆಯ ವರ್ಷದ ಆಳ್ವಿಕೆಯಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರೇಲಿನ ರಾಜನಾದನು. ಶಲ್ಲೂಮನು ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
14 ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದನು. ಮೆನಹೇಮನು ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದುಹಾಕಿದನು. ನಂತರ ಮೆನಹೇಮನು ಅವನ ನಂತರ ಹೊಸ ರಾಜನಾದನು.
15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಶಲ್ಲೂಮನು ಮಾಡಿದ ಕಾರ್ಯಗಳನ್ನೂ ಜೆಕರ್ಯನ ವಿರುದ್ಧವಾಗಿ ಅವನು ಯೋಜಿಸಿದ ಉಪಾಯಗಳನ್ನೂ ಬರೆಯಲಾಗಿದೆ.
ಇಸ್ರೇಲಿನಲ್ಲಿ ಮೆನಹೇಮನ ಆಳ್ವಿಕೆ
16 ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.
17 ಅಜರ್ಯನು ಯೆಹೂದದ ರಾಜನಾಗಿದ್ದ ಮೂವತ್ತೊಂಭತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರೇಲಿನ ರಾಜನಾದನು. ಮೆನಹೇಮನು ಸಮಾರ್ಯದಲ್ಲಿ ಹತ್ತು ವರ್ಷಗಳ ಕಾಲ ಆಳಿದನು.
18 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮೆನಹೇಮನು ಮಾಡಿದನು. ಇಸ್ರೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮೆನಹೇಮನು ಮುಂದುವರಿಸಿದನು.
19 ಅಶ್ಶೂರ್ ದೇಶದ ರಾಜನಾದ ಪೂಲನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಮೆನಹೇಮನು ಪೂಲನಿಗೆ ಮೂವತ್ನಾಲ್ಕು ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. ಪೂಲನು ಮೆನಹೇಮನಿಗೆ ಬೆಂಬಲವನ್ನು ನೀಡಲು ಮತ್ತು ಮೆನಹೇಮನ ರಾಜ್ಯವನ್ನು ಬಲಪಡಿಸಲು ಹೀಗೆ ಮಾಡಿದನು:
20 ಶ್ರೀಮಂತರು ಮತ್ತು ಅಧಿಕಾರವುಳ್ಳ ಜನರು ತೆರಿಗೆಯನ್ನು ನೀಡುವಂತೆ ಮಾಡಿ, ಮೆನಹೇಮನು ಈ ಹಣವನ್ನು ಸಂಗ್ರಹಿಸಿದನು. ಮೆನಹೇಮನು ಪ್ರತಿಯೊಬ್ಬ ಮನುಷ್ಯನಿಗೂ ಆರುನೂರು ಗ್ರಾಂ ಬೆಳ್ಳಿಯ ತೆರಿಗೆಯನ್ನು ವಿಧಿಸಿದನು. ನಂತರ ಮೆನಹೇಮನು ಅಶ್ಶೂರದ ರಾಜನಿಗೆ ಹಣವನ್ನು ಕೊಟ್ಟನು. ಆದ್ದರಿಂದ ಅಶ್ಶೂರದ ರಾಜನು ಬಿಟ್ಟುಹೋದನು; ಅವನು ಇಸ್ರೇಲಿನಲ್ಲೇ ನೆಲೆಸಲಿಲ್ಲ.
21 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮೆನಹೇಮನು ಮಾಡಿದ ಉಳಿದ ಮಹಾಕಾರ್ಯಗಳನ್ನು ಬರೆಯಲಾಗಿದೆ.
22 ಮೆನಹೇಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮೆನಹೇಮನ ನಂತರ ಅವನ ಮಗನಾದ ಪೆಕಹ್ಯನು ಹೊಸ ರಾಜನಾದನು.
ಇಸ್ರೇಲನ್ನು ಪೆಕಹ್ಯನು ಆಳಿದನು
23 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಪೆಕಹ್ಯನು ಎರಡು ವರ್ಷ ಆಳಿದನು.
24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಪೆಕಹ್ಯನು ಮಾಡಿದನು. ಇಸ್ರೇಲರನ್ನು ಪಾಪಕೃತ್ಯಗಳಿಗೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನೇ ಪೆಕಹ್ಯನು ಮುಂದುವರಿಸಿದನು.
25 ಪೆಕಹ್ಯನ ಸೇನೆಗೆ ರೆಮಲ್ಯನ ಮಗನಾದ ಪೆಕಹನು ಸೇನಾಧಿಪತಿಯಾಗಿದ್ದನು. ಅವನು ಪೆಕಹ್ಯನನ್ನು ಕೊಂದುಹಾಕಿದನು. ಅವನು ಸಮಾರ್ಯದಲ್ಲಿರುವ ರಾಜನ ಅರಮನೆಯಲ್ಲಿ ಪೆಕಹ್ಯನು ಅರ್ಗೋಬ್ ಮತ್ತು ಅರ್ಯೇ ಎಂಬವರನ್ನು ಸಹ ಕೊಂದುಹಾಕಿದನು. ಪೆಕಹ್ಯನನ್ನು ಪೆಕಹನು ಕೊಂದುಹಾಕಿದಾಗ ಅವನ ಸಂಗಡ ಗಿಲ್ಯಾದಿನ ಐವತ್ತು ಜನರಿದ್ದರು. ಪೆಕಹ್ಯನ ನಂತರ ಪೆಕಹನು ಹೊಸ ರಾಜನಾದನು.
26 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.
ಇಸ್ರೇಲನ್ನು ಪೆಕಹನು ಆಳುವನು
27 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಪೆಕಹನು ಇಪ್ಪತ್ತು ವರ್ಷ ಆಳಿದನು.
28 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ಪೆಕಹನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಪೆಕಹನು ಮುಂದುವರಿಸಿದನು.
29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.
30 ಏಲನ ಮಗನಾದ ಹೋಶೇಯನು ರೆಮಲ್ಯನ ಮಗನಾದ ಪೆಕಹನ ವಿರುದ್ಧ ಸಂಚುಗಳನ್ನು ಮಾಡಿ ಪೆಕಹನನ್ನು ಕೊಂದುಹಾಕಿದನು. ಪೆಕಹನ ನಂತರ ಹೋಶೇಯನು ಹೊಸ ರಾಜನಾದನು. ಉಜ್ಜೀಯನ ಮಗನಾದ ಯೋತಾವುನು ಯೆಹೂದದ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಹೀಗಾಯಿತು.
31 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.
ಯೆಹೂದವನ್ನು ಯೋತಾವುನು ಆಳುವನು
32 ಉಜ್ಜೀಯನ ಮಗನಾದ ಯೋತಾವುನು ಯೆಹೂದದ ರಾಜನಾದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾದ ಎರಡನೆಯ ವರ್ಷದಲ್ಲಿ ಹೀಗಾಯಿತು.
33 ಯೋತಾವುನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಯೋತಾವುನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಯೋತಾವುನ ತಾಯಿಯು ಚಾದೋಕನ ಮಗಳಾದ ಯೆರೂಷಾ ಎಂಬ ಹೆಸರಿನವಳು.
34 ಯೋತಾವುನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಮಾಡಿದನು.
35 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು. ಯೋತಾವುನು ಯೆಹೋವನ ಆಲಯಕ್ಕೆ ಮೇಲ್ಬಾಗಿಲನ್ನು ನಿರ್ಮಿಸಿದನು.
36 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋತಾವುನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.
37 ಆ ಕಾಲದಲ್ಲಿ, ಅರಾಮ್ಯರ ರಾಜನಾದ ರೆಚೀನನನ್ನು ಮತ್ತು ರೆಮಲ್ಯನ ಮಗನಾದ ಪೆಕಹನನ್ನು ಯೆಹೂದದ ವಿರುದ್ಧ ಹೋರಾಡಲು ಯೆಹೋವನು ಕಳುಹಿಸಲಾರಂಭಿಸಿದನು.
38 ಯೋತಾವುನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಯೋತಾವುನನ್ನು ಅವನ ಪೂರ್ವಿಕನಾದ ದಾವೀದನ ನಗರದಲ್ಲಿ ಸಮಾಧಿಮಾಡಿದರು. ಯೋತಾವುನ ನಂತರ ಅವನ ಮಗನಾದ ಅಹಾಜನು ಹೊಸ ರಾಜನಾದನು.