20
ಹಿಜ್ಕೀಯನಿಗೆ ಕಾಯಿಲೆ
ಆ ಸಮಯದಲ್ಲಿ ಹಿಜ್ಕೀಯನಿಗೆ ಕಾಯಿಲೆಯಾಗಿ ಸತ್ತಂತಾದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಹಿಜ್ಕೀಯನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ. ‘ನಿನ್ನ ಮನೆಯನ್ನು ವ್ಯವಸ್ಥೆಗೊಳಿಸು; ಏಕೆಂದರೆ ನೀನು ಸಾಯುವೆ, ಬದುಕುವುದಿಲ್ಲ!’ ” ಎಂದು ಹೇಳಿದನು.
ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ, “ಯೆಹೋವನೇ, ನಾನು ಪೂರ್ಣಮನಸ್ಸಿನಿಂದ ನಿಜವಾಗಿಯೂ ನಿನ್ನ ಸೇವೆಮಾಡಿದ್ದೇನೆಂಬುದನ್ನು ನೆನಪುಮಾಡಿಕೊ. ನೀನು ಯೋಗ್ಯವೆಂದು ಹೇಳಿದವುಗಳನ್ನು ನಾನು ಮಾಡಿದೆನು” ಎಂದು ಹೇಳಿದನು. ನಂತರ ಹಿಜ್ಕೀಯನು ಬಹಳ ಜೋರಾಗಿ ಗೋಳಾಡಿದನು.
ಯೆಶಾಯನು ಮಧ್ಯಪ್ರಾಕಾರವನ್ನು ಬಿಡುವುದಕ್ಕೆ ಮುಂಚೆಯೇ, ಯೆಹೋವನ ವಾಕ್ಯವು ಅವನಿಗೆ ಬಂದಿತು. ಯೆಹೋವನು “ಹಿಂದಿರುಗಿ ಹೋಗಿ, ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಇದನ್ನು ಹೇಳು: ‘ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ಆದ್ದರಿಂದ ನಾನು ನಿನ್ನನ್ನು ಗುಣಪಡಿಸುತ್ತೇನೆ. ಮೂರನೆಯ ದಿನ, ನೀನು ದೇವಾಲಯಕ್ಕೆ ಹೋಗುವೆ. ನಾನು ನಿನ್ನ ಜೀವಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. ನಾನು ನಿನ್ನನ್ನು ಮತ್ತು ಈ ನಗರವನ್ನು ಅಶ್ಶೂರದ ರಾಜನ ಅಧಿಕಾರದಿಂದ ರಕ್ಷಿಸುತ್ತೇನೆ. ನಾನು ಈ ನಗರವನ್ನು ಸಂರಕ್ಷಿಸುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದಕ್ಕಾಗಿಯೂ ನನಗಾಗಿಯೂ ಇದನ್ನು ಮಾಡುತ್ತೇನೆ’ ” ಎಂದು ಹೇಳಿದನು.
ಆಗ ಯೆಶಾಯನು, “ಅಂಜೂರದ ಹಣ್ಣಿನಿಂದ ಒಂದು ಉಂಡೆಯನ್ನು ಮಾಡಿಸಿ ಅದನ್ನು ಕುರುವಿನ ಮೇಲೆ ಇಡು” ಎಂದು ಹೇಳಿದನು.
ಅಂತೆಯೇ ಅವರು ಅಂಜೂರಹಣ್ಣಿನ ಒಂದು ಉಂಡೆಯನ್ನು ಹಿಜ್ಕೀಯನ ಕುರುವಿನ ಮೇಲೆ ಇಟ್ಟರು. ಆಗ ಹಿಜ್ಕೀಯನಿಗೆ ಗುಣವಾಯಿತು.
ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುತ್ತಾನೆಂಬುದಕ್ಕೆ ಮತ್ತು ಮೂರನೆಯ ದಿನ ನಾನು ದೇವಾಲಯದವರೆಗೆ ಹೋಗುವೆನೆಂಬುದಕ್ಕೆ ಏನು ಗುರುತು?” ಎಂದು ಕೇಳಿದನು.
ಯೆಶಾಯನು, “ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ ಅಥವಾ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ?* ನಿನಗೆ ಯಾವುದು ಬೇಕಾಗಿದೆ? ಯೆಹೋವನು ತಾನು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದೇ ನಿನಗೆ ಗುರುತು” ಎಂದು ಹೇಳಿದನು.
10 ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದ್ದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಉತ್ತರಿಸಿದನು.
11 ಆಗ ಯೆಶಾಯನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಈಗಾಗಲೇ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡಿದನು.
ಹಿಜ್ಕೀಯನು ತನ್ನ ಭಂಡಾರವನ್ನು ಬಾಬಿಲೋನಿನ ಜನರಿಗೆ ತೋರಿಸಿದನು
12 ಆ ಸಮಯದಲ್ಲಿ, ಬಲದಾನನ ಮಗನಾದ ಬೆರೋದಕ ಬಲದಾನ ಎಂಬುವನು ಬಾಬಿಲೋನಿನ ರಾಜನಾಗಿದ್ದನು. ಅವನು ಹಿಜ್ಕೀಯನಿಗೆ ಪತ್ರಗಳನ್ನು ಮತ್ತು ಕಾಣಿಕೆಯನ್ನು ಕಳುಹಿಸಿದನು. ಹಿಜ್ಕೀಯನು ಅಸ್ವಸ್ಥನಾಗಿದ್ದಾನೆ ಎಂಬುದನ್ನು ಬೆರೋದಕ ಬಲದಾನನು ತಿಳಿದುಕೊಂಡದ್ದರಿಂದ ಹೀಗೆ ಮಾಡಿದನು. 13 ಹಿಜ್ಕೀಯನು ಬಾಬಿಲೋನಿನ ಜನರನ್ನು ಸ್ವಾಗತಿಸಿ, ಅವರಿಗೆ ತನ್ನ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೋರಿಸಿದನು. ಅವನು ತನ್ನ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು, ಸುಗಂಧದ್ರವ್ಯಗಳನ್ನು, ಪರಿಮಳಭರಿತ ತೈಲವನ್ನು, ಆಯುಧಗಳನ್ನು ತೋರಿಸಿದನು. ಹಿಜ್ಕೀಯನ ಮನೆಯಲ್ಲಿ ಮತ್ತು ಅವನ ರಾಜ್ಯದಲ್ಲಿ ಅವರಿಗೆ ತೋರಿಸದೆ ಉಳಿದದ್ದು ಏನೂ ಇರಲಿಲ್ಲ.
14 ನಂತರ ಪ್ರವಾದಿಯಾದ ಯೆಶಾಯನು ರಾಜನಾದ ಹಿಜ್ಕೀಯನ ಬಳಿಗೆ ಬಂದು, “ಈ ಜನರು ಹೇಳುವುದೇನು? ಇವರು ಎಲ್ಲಿಂದ ಬಂದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ಬಹಳ ದೂರದೇಶದಿಂದ, ಬಾಬಿಲೋನಿನಿಂದ ಬಂದಿದ್ದಾರೆ” ಎಂದನು.
15 ಯೆಶಾಯನು, “ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ನನ್ನ ಮನೆಯಲ್ಲಿರುವುದನ್ನೆಲ್ಲಾ ನೋಡಿದರು. ಅವರಿಗೆ ತೋರಿಸದೆ ಉಳಿದಿರುವುದು ನನ್ನ ಭಂಡಾರದಲ್ಲಿ ಏನೂ ಇಲ್ಲ” ಎಂದು ಉತ್ತರಿಸಿದನು.
16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನಿಂದ ಬಂದ ಈ ಸಂದೇಶವನ್ನು ಆಲಿಸು. 17 ನಿನ್ನ ಮನೆಯಲ್ಲಿರುವ ವಸ್ತುಗಳೆಲ್ಲವನ್ನು ನಿನ್ನ ಮನೆಯಿಂದ ಬಾಬಿಲೋನಿಗೆ ಕೊಂಡೊಯ್ಯುವ ಕಾಲವು ಬರುತ್ತಿದೆ; ನಿನ್ನ ಪೂರ್ವಿಕರು ಇಂದಿನವರೆಗೆ ರಕ್ಷಿಸಿದ ವಸ್ತುಗಳೆಲ್ಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗುವ ಸಮಯವು ಬರುತ್ತಿದೆ. ಏನನ್ನೂ ಬಿಡುವುದಿಲ್ಲ! ಯೆಹೋವನೇ ಇದನ್ನು ನುಡಿದಿದ್ದಾನೆ. 18 ಬಾಬಿಲೋನಿನವರು ನಿನ್ನ ಮಕ್ಕಳನ್ನೂ ತೆಗೆದುಕೊಂಡು ಹೋಗುವರು. ನಿನ್ನ ಮಕ್ಕಳು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗುತ್ತಾರೆ” ಎಂದು ಹೇಳಿದನು.
19 ಹಿಜ್ಕೀಯನು ತನ್ನ ಜೀವಮಾನದಲ್ಲಿ ಹೇಗೂ ಶಾಂತಿಯಿರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ಯೆಹೋವನ ಈ ಸಂದೇಶವು ಒಳ್ಳೆಯದಾಗಿದೆ” ಎಂದು ಹೇಳಿದನು.
20 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಹಿಜ್ಕೀಯನು ಮಾಡಿದ ಇತರ ಎಲ್ಲಾ ಮಹಾಕಾರ್ಯಗಳನ್ನೂ ಅವನು ನಗರಕ್ಕೆ ಕೆರೆಯಿಂದ ಕೊಳವೆಗಳ ಮೂಲಕ ನೀರಿನ ವ್ಯವಸ್ಥೆಮಾಡಿದ್ದನ್ನೂ ಬರೆಯಲಾಗಿದೆ. 21 ಹಿಜ್ಕೀಯನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಲಾಯಿತು. ಹಿಜ್ಕೀಯನ ನಂತರ ಅವನ ಮಗನಾದ ಮನಸ್ಸೆಯು ಹೊಸ ರಾಜನಾದನು.
* 20:9 ನೆರಳು … ಹೋಗಬೇಕೋ? ಹಿಜ್ಕೀಯನು ಗಡಿಯಾರದಂತೆ ಬಳಸುತ್ತಿದ್ದ ಒಂದು ವಿಶೇಷ ಕಟ್ಟಡವು ಹೊರಗಡೆಯಿದ್ದಿತು. ಸೂರ್ಯಕಿರಣಗಳು ಮೆಟ್ಟಲಿನ ಮೇಲೆ ಬಿದ್ದಾಗ, ನೆರಳು ಆ ದಿನದ ಸಮಯವನ್ನು ತೋರಿಸುತ್ತಿತ್ತು ಎಂಬುದು ಇದರ ಅರ್ಥ.