3
ಯೋಹಾನನ ಬೋಧನೆ
(ಮತ್ತಾಯ 3:1-12; ಮಾರ್ಕ 1:1-8; ಯೋಹಾನ 1:19-28)
ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು.
 
ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ
ಹೆರೋದನು ಗಲಿಲಾಯಕ್ಕೂ
ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ
ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು.
 
ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು.* ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು. ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು. ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ:
 
“ ‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ.
ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು.
ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು.
ಡೊಂಕಾದ ದಾರಿಗಳು ನೀಟಾಗುವವು.
ಕೊರಕಲಾದ ದಾರಿಗಳು ಸಮವಾಗುವವು.
ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು!’
ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.” ಯೆಶಾಯ 40:3-5
 
ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.
10 ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
11 ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು.
12 ಸುಂಕವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.
13 ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು.
14 ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು.
ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.
15 ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು.
16 ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 17 ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. 18 ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.
ಯೋಹಾನನ ಸೇವೆಯ ಅಂತ್ಯ
19 ರಾಜ್ಯಪಾಲ ಹೆರೋದನು ತನ್ನ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಕೃತ್ಯಗಳನ್ನು ಯೋಹಾನನು ಖಂಡಿಸಿದನು. 20 ಆದ್ದರಿಂದ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿ ತನ್ನ ದುಷ್ಕೃತ್ಯಗಳೊಂದಿಗೆ ಮತ್ತೊಂದು ದುಷ್ಕೃತ್ಯವನ್ನು ಸೇರಿಸಿಕೊಂಡನು.
ಯೋಹಾನನಿಂದ ಯೇಸುವಿನ ದೀಕ್ಷಾಸ್ನಾನ
(ಮತ್ತಾಯ 3:13-17; ಮಾರ್ಕ 1:9-11)
21 ಯೋಹಾನನನ್ನು ಸೆರೆಮನೆಗೆ ಹಾಕುವುದಕ್ಕಿಂತ ಮೊದಲು, ಜನರೆಲ್ಲರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಆಗ ಯೇಸು ಸಹ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು. 22 ಪವಿತ್ರಾತ್ಮನು ಆತನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದು ಬಂದನು. ಆ ಕೂಡಲೇ, ಪರಲೋಕದಿಂದ ಧ್ವನಿಯೊಂದು ಹೊರಟು, “ನೀನು ನನ್ನ ಪ್ರಿಯ ಮಗನು, ನಾನು ನಿನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಯೋಸೇಫನ ಕುಟುಂಬ ಚರಿತ್ರೆ
(ಮತ್ತಾಯ 1:1-17)
23 ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು.
 
ಯೋಸೇಫನು ಹೇಲಿಯ ಮಗನು.
24 ಹೇಲಿಯು ಮತ್ತಾತನ ಮಗನು.
ಮತ್ತಾತನು ಲೇವಿಯ ಮಗನು.
ಲೇವಿಯು ಮೆಲ್ಕಿಯ ಮಗನು.
ಮೆಲ್ಕಿಯು ಯನ್ನಾಯನ ಮಗನು.
ಯನ್ನಾಯನು ಯೋಸೇಫನ ಮಗನು.
25 ಯೋಸೇಫನು ಮತ್ತಥೀಯನ ಮಗನು.
ಮತ್ತಥೀಯನು ಆಮೋಸನ ಮಗನು.
ಆಮೋಸನು ನಹೂಮನ ಮಗನು.
ನಹೂಮನು ಎಸ್ಲಿಯ ಮಗನು.
ಎಸ್ಲಿಯು ನಗ್ಗಾಯನ ಮಗನು.
26 ನಗ್ಗಾಯನು ಮಹಾಥತನ ಮಗನು.
ಮಹಾಥತನು ಮತ್ತಥೀಯನ ಮಗನು.
ಮತ್ತಥೀಯನು ಶಿಮೀಯನ ಮಗನು.
ಶಿಮೀಯನು ಯೋಸೇಖನ ಮಗನು.
ಯೋಸೇಖನು ಯೂದನ ಮಗನು.
27 ಯೂದನು ಯೋಹಾನನ ಮಗನು.
ಯೋಹಾನನು ರೇಸನ ಮಗನು.
ರೇಸನು ಜೆರುಬಾಬೆಲನ ಮಗನು.
ಜೆರುಬಾಬೆಲನು ಸಲಥಿಯೇಲನ ಮಗನು.
ಸಲಥಿಯೇಲನು ಸೇರಿಯ ಮಗನು.
28 ಸೇರಿಯು ಮೆಲ್ಕಿಯ ಮಗನು.
ಮೆಲ್ಕಿಯು ಅದ್ದಿಯ ಮಗನು.
ಅದ್ದಿಯು ಕೋಸಾಮನ ಮಗನು.
ಕೋಸಾಮನು ಎಲ್ಮದಾಮನ ಮಗನು.
ಎಲ್ಮದಾಮನು ಏರನ ಮಗನು.
29 ಏರನು ಯೆಹೋಷುವನ ಮಗನು.
ಯೆಹೋಷುವನು ಎಲಿಯೇಜರನ ಮಗನು.
ಎಲಿಯೇಜರನು ಯೋರೈವುನ ಮಗನು.
ಯೋರೈವುನು ಮತ್ತಾತನ ಮಗನು.
ಮತ್ತಾತನು ಲೇವಿಯ ಮಗನು.
30 ಲೇವಿಯು ಸಿಮೆಯೋನನ ಮಗನು.
ಸಿಮೆಯೋನನು ಯೂದನ ಮಗನು.
ಯೂದನು ಯೋಸೇಫನ ಮಗನು.
ಯೋಸೇಫನು ಯೊನಾವುನ ಮಗನು.
ಯೊನಾವುನು ಎಲಿಯಕೀಮನ ಮಗನು.
31 ಎಲಿಯಕೀಮನು ಮೆಲೆಯನ ಮಗನು.
ಮೆಲೆಯನು ಮೆನ್ನನ ಮಗನು.
ಮೆನ್ನನು ಮತ್ತಾಥನ ಮಗನು.
ಮತ್ತಾಥನು ನಾತಾನನ ಮಗನು.
ನಾತಾನನು ದಾವೀದನ ಮಗನು.
32 ದಾವೀದನು ಇಷಯನ ಮಗನು.
ಇಷಯನು ಓಬೇದನ ಮಗನು.
ಓಬೇದನು ಬೋವಜನ ಮಗನು.
ಬೋವಜನು ಸಲ್ಮೋನನ ಮಗನು.
ಸಲ್ಮೋನನು ನಹಸ್ಸೋನನ ಮಗನು.
33 ನಹಸ್ಸೋನನು ಅಮ್ಮಿನಾದ್ವಾನ ಮಗನು.
ಅಮ್ಮಿನಾದ್ವಾನು ಅದ್ಮಿನನ ಮಗನು.
ಅದ್ಮಿನನು ಅರ್ನೈಯನ ಮಗನು.
ಅರ್ನೈಯನು ಹೆಸ್ರೋನನ ಮಗನು.
ಹೆಸ್ರೋನನು ಪೆರೆಸನ ಮಗನು.
ಪೆರೆಸನು ಯೂದನ ಮಗನು.
34 ಯೂದನು ಯಾಕೋಬನ ಮಗನು.
ಯಾಕೋಬನು ಇಸಾಕನ ಮಗನು.
ಇಸಾಕನು ಅಬ್ರಹಾಮನ ಮಗನು.
ಅಬ್ರಹಾಮನು ತೇರಹನ ಮಗನು.
ತೇರಹನು ನಹೋರನ ಮಗನು.
35 ನಹೋರನು ಸೆರೂಗನ ಮಗನು.
ಸೆರೂಗನು ರೆಗೂವನ ಮಗನು.
ರೆಗೂವನು ಪೆಲೆಗನ ಮಗನು.
ಪೆಲೆಗನು ಎಬರನ ಮಗನು.
ಎಬರನು ಸಾಲನ ಮಗನು.
36 ಸಾಲನು ಕಯಿನನ ಮಗನು.
ಕಯಿನನು ಅರ್ಪಕ್ಷದನ ಮಗನು.
ಅರ್ಪಕ್ಷದನು ಶೇಮನ ಮಗನು.
ಶೇಮನು ನೋಹನ ಮಗನು.
ನೋಹನು ಲಾಮೆಕನ ಮಗನು.
37 ಲಾಮೆಕನು ಮೆತೂಷಲನ ಮಗನು.
ಮೆತೂಷಲನು ಹನೋಕನ ಮಗನು.
ಹನೋಕನು ಯೆರೆದನ ಮಗನು.
ಯೆರೆದನು ಮಹಲಲೇಲನ ಮಗನು.
ಮಹಲಲೇಲನು ಕಯಿನಾನನ ಮಗನು.
38 ಕಯಿನಾನನು ಎನೋಷನ ಮಗನು.
ಎನೋಷನು ಸೇಥನ ಮಗನು.
ಸೇಥನು ಆದಾಮನ ಮಗನು.
ಆದಾಮನು ದೇವರ ಮಗನು.
 
* 3:2 ಮಹಾಯಾಜಕ ಪ್ರಾಮುಖ್ಯರಾದ ಯೆಹೂದ್ಯಯಾಜಕರು. 3:12 ಸುಂಕವಸೂಲಿಗಾರರು ತೆರಿಗೆ ವಸೂಲಿಮಾಡುವುದಕ್ಕೆ ರೋಮನ್ನರಿಂದ ಸಂಬಳಕ್ಕೆ ನೇಮಿಸಲ್ಪಟ್ಟ ಯೆಹೂದ್ಯರು. ಅವರು ಆಗಾಗ್ಗೆ ಮೋಸಮಾಡುತ್ತಿದ್ದರು. ಆದ್ದರಿಂದ ಯೆಹೂದ್ಯರು ಅವರನ್ನು ದ್ವೇಷಿಸುತ್ತಿದ್ದರು. 3:17 ಶುದ್ಧಮಾಡುವುದಕ್ಕೆ “ಯೇಸು ಒಳ್ಳೆಯವರನ್ನು ಕೆಟ್ಟವರಿಂದ ಬೇರ್ಪಡಿಸುವನು” ಎಂಬುದು ಯೋಹಾನನ ಅರ್ಥವಾಗಿತ್ತು.