ಪ್ರಲಾಪಗಳು
1
ಜೆರುಸಲೇಮ್ ತನ್ನ ನಾಶನದ ಬಗ್ಗೆ ಅಳುತ್ತಾಳೆ
1 ಒಂದು ಕಾಲದಲ್ಲಿ ಜೆರುಸಲೇಮ್ ಜನಭರಿತವಾದ ನಗರವಾಗಿತ್ತು.
ಆದರೆ ಈಗ ಆ ನಗರವು ಹಾಳುಬಿದ್ದಿದೆ.
ಒಂದು ಕಾಲದಲ್ಲಿ ಜೆರುಸಲೇಮ್ ಅತ್ಯಂತ ದೊಡ್ಡನಗರಗಳಲ್ಲಿ ಒಂದಾಗಿತ್ತು.
ಆದರೆ ಈಗ ಅದು ವಿಧವೆಯಂತೆ ಆಗಿದೆ.
ಒಂದು ಕಾಲದಲ್ಲಿ ಅವಳು ಎಲ್ಲ ನಗರಗಳ ನಡುವೆ ರಾಜಕುಮಾರಿಯಂತೆ ಇದ್ದಳು.
ಆದರೆ ಈಗ ಅವಳನ್ನು ದಾಸಿಯನ್ನಾಗಿ ಮಾಡಲಾಗಿದೆ.
2 ರಾತ್ರಿಯಲ್ಲಿ ಅವಳು ಬಿಕ್ಕಿಬಿಕ್ಕಿ ಅಳುತ್ತಾಳೆ.
ಅವಳ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತ್ತಿದೆ.
ಅವಳನ್ನು ಸಂತೈಸುವವರು ಯಾರೂ ಇಲ್ಲ.
ಅವಳ ಮಿತ್ರ ರಾಷ್ಟ್ರಗಳಲ್ಲಿ ಒಂದೂ ಕೂಡ ಅವಳನ್ನು ಸಂತೈಸುವುದಿಲ್ಲ.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ಶತ್ರುಗಳಾದರು.
3 ಅತಿ ಕಷ್ಟಗಳನ್ನು ಅನುಭವಿಸಿದ ಮೇಲೆ ಯೆಹೂದ ಬಂಧನಕ್ಕೊಳಗಾಗಿದ್ದಾಳೆ.
ಅತಿ ಶ್ರಮಪಟ್ಟ ಮೇಲೆಯೂ ಅವಳು ಸೆರೆ ಒಯ್ಯಲ್ಪಟ್ಟಿದ್ದಾಳೆ.
ಯೆಹೂದ ಬೇರೆ ಜನಾಂಗಗಳ ಜೊತೆಯಲ್ಲಿ ವಾಸಿಸುತ್ತಾಳೆ.
ಆದರೆ ಅವಳಿಗೆ ವಿಶ್ರಾಂತಿ ಸಿಕ್ಕಿಲ್ಲ.
ಅವಳನ್ನು ಬೆನ್ನಟ್ಟಿದ ಜನರು
ಆಕೆಯು ಬಳಲಿ ಹೋಗಿದ್ದಾಗಲೇ ಅವಳನ್ನು ಹಿಡಿದುಕೊಂಡರು.
4 ಚೀಯೋನಿಗೆ ಹೋಗುವ ದಾರಿಗಳು ದುಃಖಿಸುತ್ತಿವೆ.
ಅವುಗಳು ದುಃಖಿಸುತ್ತಿವೆ; ಏಕೆಂದರೆ ಯಾರೂ ಈಗ ಉತ್ಸವಗಳಿಗಾಗಿ ಚೀಯೋನಿಗೆ ಬರುವದಿಲ್ಲ.
ಚೀಯೋನಿನ ಎಲ್ಲ ಹೆಬ್ಬಾಗಿಲುಗಳು ನಿರ್ಜನವಾಗಿವೆ.
ಚೀಯೋನಿನ ಎಲ್ಲ ಯಾಜಕರು ನರಳಾಡುತ್ತಿದ್ದಾರೆ.
ಚೀಯೋನಿನ ತರುಣಿಯರನ್ನು ತೆಗೆದುಕೊಂಡು ಹೋಗಲಾಗಿದೆ.
ಇದೆಲ್ಲ ಚೀಯೋನಿಗೆ ಅತಿ ದುಃಖವನ್ನುಂಟುಮಾಡಿದೆ.
5 ಜೆರುಸಲೇಮಿನ ಶತ್ರುಗಳು ಗೆದ್ದಿದ್ದಾರೆ.
ಅವಳ ಶತ್ರುಗಳು ಜಯಶೀಲರಾಗಿದ್ದಾರೆ.
ಯೆಹೋವನು ಅವಳನ್ನು ದಂಡಿಸಿದ ಕಾರಣ ಹೀಗಾಯಿತು.
ಅವಳ ಅನೇಕ ಪಾಪಗಳಿಗಾಗಿ ಆತನು ಜೆರುಸಲೇಮನ್ನು ದಂಡಿಸಿದನು.
ಅವಳ ಮಕ್ಕಳು ದೂರಹೋಗಿದ್ದಾರೆ.
ಅವರು ವೈರಿಗಳ ಸೆರೆಯಾಳುಗಳಾಗಿ ದೂರ ಹೋಗಿದ್ದಾರೆ.
6 ಚೀಯೋನಿನ ಮಗಳ ಸೌಂದರ್ಯವು ಹೊರಟುಹೋಗಿದೆ.
ಅವಳ ರಾಜಕುಮಾರರು ಹುಲ್ಲುಗಾವಲನ್ನು ಕಂಡುಕೊಂಡಿಲ್ಲದ ಜಿಂಕೆಯಂತಾಗಿದ್ದಾರೆ.
ಅವರು ಬಲಹೀನರಾಗಿ ಓಡಿಹೋದರು.
ಬೆನ್ನಟ್ಟಿ ಬಂದ ಜನರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ.
7 ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ;
ತಾನು ಮನೆಯನ್ನು ಕಳೆದುಕೊಂಡ
ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು
ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಹಳೆಯ ಕಾಲದಲ್ಲಿ ಲಭ್ಯವಿದ್ದ
ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ.
ತನ್ನ ಜನರನ್ನು ವೈರಿಗಳು
ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ.
ಆಗ ತನಗೆ ಸಹಾಯ ಮಾಡಲು
ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು.
ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.
8 ಜೆರುಸಲೇಮ್ ಮಹಾಪಾಪ ಮಾಡಿತು.
ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ
ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ.
ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ.
ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು.
ಜೆರುಸಲೇಮ್ ನರಳಾಡುತ್ತಿದ್ದಾಳೆ.
ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
9 ಜೆರುಸಲೇಮಿನ ಲಂಗಗಳು ಮಲಿನವಾಗಿದ್ದವು.
ಅವಳಿಗೆ ಮುಂದೆ ಏನಾಗುವದೆಂಬುದರ ಬಗ್ಗೆ ಅವಳು ಯೋಚಿಸಲಿಲ್ಲ.
ಅವಳ ಪತನ ವಿಸ್ಮಯಕಾರಿಯಾಗಿತ್ತು.
ಅವಳನ್ನು ಸಂತೈಸಲು ಯಾರೂ ಇರಲಿಲ್ಲ.
“ಅಯ್ಯೋ, ಯೆಹೋವನೇ, ನನಗೆಷ್ಟು ನೋವಾಗಿದೆ. ನೋಡು!
ನನ್ನ ಶತ್ರು ತನ್ನನ್ನು ಎಷ್ಟು ದೊಡ್ಡವನೆಂದು ಭಾವಿಸಿಕೊಂಡಿದ್ದಾನೆ.” ಎಂದು ಆಕೆ ಹೇಳುತ್ತಾಳೆ.
10 ಶತ್ರು ತನ್ನ ಕೈಗಳನ್ನು ಚಾಚಿದನು.
ಅವಳ ಎಲ್ಲ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡನು.
ಯೆಹೋವನೇ, ಆ ಜನರು ನಿನ್ನ ಸಭೆಯನ್ನು ಪ್ರವೇಶಿಸಬಾರದೆಂದು
ನೀನು ಆಜ್ಞಾಪಿಸಿದ್ದರೂ ಪರಕೀಯರು ತನ್ನ ಪವಿತ್ರಾಲಯವನ್ನು ಪ್ರವೇಶಿಸುವದನ್ನು ಅವಳು ನೋಡಬೇಕಾಯಿತು.
11 ಜೆರುಸಲೇಮಿನ ಎಲ್ಲ ಜನರು ನರಳಾಡುತ್ತಿದ್ದಾರೆ.
ಅವಳ ಎಲ್ಲ ಜನರು ಆಹಾರಕ್ಕಾಗಿ ಹುಡುಕುತ್ತಿದ್ದಾರೆ.
ಅವರು ತಮ್ಮ ಎಲ್ಲ ಒಳ್ಳೆಯ ವಸ್ತುಗಳನ್ನು ಆಹಾರಕ್ಕಾಗಿ ಕೊಟ್ಟುಬಿಡುತ್ತಿದ್ದಾರೆ.
ಬದುಕಿರುವ ಸಲುವಾಗಿ ಅವರು ಹೀಗೆ ಮಾಡುತ್ತಿದ್ದಾರೆ. “ಯೆಹೋವನೇ, ನನ್ನ ಕಡೆಗೆ ನೋಡು!
ಜನರು ನನ್ನನ್ನು ಹೇಗೆ ದ್ವೇಷಿಸುತ್ತಾರೆ ನೋಡು” ಎಂದು ಜೆರುಸಲೇಮ್ ಬೇಡಿಕೊಂಡಳು.
12 ರಸ್ತೆಯಲ್ಲಿ ಹಾದುಹೋಗುವ ಜನರೇ,
ನೀವು ನನ್ನ ಬಗ್ಗೆ ಯೋಚಿಸುವುದಿಲ್ಲವೆಂದು ತೋರುತ್ತದೆ.
ನನ್ನ ಕಡೆಗೆ ಗಮನ ಕೊಡಿ.
ನನ್ನ ನೋವಿನಂಥ ನೋವು ಮತ್ತೊಂದು ಇದೆಯೇ?
ನನಗೆ ಬಂದಂಥ ನೋವು ಇನ್ನಾವುದಾದರೂ ಇದೆಯೇ?
ದಂಡನೆಯಾಗಿ ಯೆಹೋವನು ನನಗೆ ಕೊಟ್ಟ ನೋವಿನಂಥ ನೋವು ಮತ್ತೊಂದು ಇದೆಯೇ?
ಆತನು ತನ್ನ ಮಹಾಕೋಪದ ದಿನದಂದು
ನನ್ನನ್ನು ದಂಡಿಸಿರುವನು.
13 ಯೆಹೋವನು ಮೇಲಿನಿಂದ ಬೆಂಕಿಯನ್ನು ಕಳಿಸಿದ್ದಾನೆ.
ಆ ಬೆಂಕಿ ನನ್ನ ಎಲುಬುಗಳ ಆಳಕ್ಕೆ ಇಳಿದುಹೋಗಿದೆ.
ಆತನು ನನ್ನ ಪಾದಗಳಿಗೆ ಬಲೆಯನ್ನು ಒಡ್ಡಿದ್ದಾನೆ.
ಆತನು ನನ್ನನ್ನು ಸುತ್ತಲು ತಿರುಗಿಸಿದ್ದಾನೆ.
ಆತನು ನನ್ನನ್ನು ಹಾಳುಭೂಮಿಯನ್ನಾಗಿ ಮಾಡಿದ್ದಾನೆ.
ನಾನು ಸದಾ ಬಳಲುತ್ತಿದ್ದೇನೆ.
14 “ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ.
ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ.
ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ.
ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ.
ನಾನು ಎದುರಿಸಲಾಗದ ಜನರ ಕೈಗೆ
ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.
15 ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ.
ಆ ಸೈನಿಕರು ನಗರದ ಒಳಭಾಗದಲ್ಲಿದ್ದರು.
ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು.
ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು.
ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ.
ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.
16 “ನಾನು ಈ ಎಲ್ಲ ವಿಪತ್ತುಗಳಿಗಾಗಿ ಅಳುತ್ತೇನೆ.
ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ.
ನನ್ನನ್ನು ಸಂತೈಸುವವರು ಯಾರೂ ಸಮೀಪದಲ್ಲಿ ಇಲ್ಲ;
ನನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ.
ನನ್ನ ಮಕ್ಕಳು ಹಾಳುಬಿದ್ದ ಭೂಮಿಯಂತಿದ್ದಾರೆ.
ಶತ್ರುವು ಜಯಶಾಲಿಯಾದ ಕಾರಣ ಅವರು ಹಾಗಾಗಿದ್ದಾರೆ.”
17 ಚೀಯೋನು ತನ್ನ ಕೈಗಳನ್ನು ಚಾಚಿದಳು.
ಅವಳನ್ನು ಸಂತೈಸುವವರೇ ಇರಲಿಲ್ಲ.
ಯಾಕೋಬನಿಗೆ ವೈರಿಗಳಾಗಬೇಕೆಂದು
ಅವನ ನೆರೆಹೊರೆಯವರಿಗೆ ಯೆಹೋವನು ಆಜ್ಞಾಪಿಸಿದ್ದನು.
ಜೆರುಸಲೇಮ್ ಒಂದು ಹೊಲಸು ವಸ್ತುವಾಗಿದ್ದಾಳೆ.
ಆ ವೈರಿಗಳ ಮಧ್ಯದಲ್ಲಿ ಅವಳು ಒಂದು ಹೊಲಸು ವಸ್ತುವಾಗಿದ್ದಾಳೆ.
18 ಅವಳು ಹೇಳಿದಳು, “ಯೆಹೋವನು ಮಾಡಿದ್ದು ನ್ಯಾಯವಾಗಿಯೇ ಇದೆ.
ಏಕೆಂದರೆ ನಾನು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎಲ್ಲಾ ಜನಗಳೇ, ನನ್ನ ಮಾತುಗಳನ್ನು ಕೇಳಿರಿ.
ನನ್ನ ವ್ಯಥೆಯನ್ನು ನೋಡಿರಿ.
ನನ್ನ ತರುಣತರುಣಿಯರು ಸೆರೆ ಒಯ್ಯಲ್ಪಟ್ಟಿದ್ದಾರೆ.
19 ನಾನು ನನ್ನ ಪ್ರಿಯತಮರನ್ನು ಕೂಗಿ ಕರೆದೆ.
ಆದರೆ ಅವರು ನನಗೆ ಮೋಸ ಮಾಡಿದರು.
ನನ್ನ ಯಾಜಕರು ಮತ್ತು ಹಿರಿಯರು
ನಗರದಲ್ಲಿ ಸತ್ತುಹೋದರು.
ಅವರು ತಮಗಾಗಿ ಆಹಾರವನ್ನು ಹುಡುಕುತ್ತಿದ್ದರು.
ಅವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳ ಬಯಸಿದರು.
20 “ಯೆಹೋವನೇ, ನನ್ನ ಕಡೆ ನೋಡು, ನಾನು ತೊಂದರೆಯಲ್ಲಿದ್ದೇನೆ.
ನನ್ನ ಮನಸ್ಸು ಕ್ಷೋಭೆಗೊಂಡಿದೆ. ನನ್ನ ಮನಸ್ಸಿಗೆ ತಲೆ ಕೆಳಗಾದಂತೆ ಭಾಸವಾಗುತ್ತಿದೆ.
ನಾನು ದುರಹಂಕಾರಿಯಾಗಿದ್ದುದರಿಂದ
ನನ್ನ ಮನಸ್ಸಿಗೆ ಹಾಗೆ ಭಾಸವಾಗುತ್ತಿದೆ.
ಕಾರಣವೇನೆಂದರೆ, ನಾನು ದಂಗೆಕೋರಳಾಗಿದ್ದೆ.
ಬೀದಿಗಳಲ್ಲಿ ನನ್ನ ಮಕ್ಕಳು ಖಡ್ಗಕ್ಕೆ ಆಹುತಿಯಾದರು.
ಮನೆಯಲ್ಲಿಯೂ ಸಹ ಸಾವಿತ್ತು.
21 “ನಾನು ನರಳಾಡುತ್ತಿದ್ದೇನೆ. ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು;
ನನ್ನನ್ನು ಸಂತೈಸುವವರು ಯಾರೂ ಇಲ್ಲ.
ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ.
ಅವರು ಸಂತೋಷಪಡುತ್ತಿದ್ದಾರೆ.
ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ.
ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು.
ಆ ದಿನ ನನ್ನ ಶತ್ರುಗಳ ಸ್ಥಿತಿ
ನನ್ನ ಇಂದಿನ ಸ್ಥಿತಿಯಂತೆ ಆಗಲಿ.
22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು.
ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ
ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು.
ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು.
ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”