24
ದೀಪಸ್ತಂಭ ಮತ್ತು ಪವಿತ್ರ ರೊಟ್ಟಿ
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಎಣ್ಣೆ ಮರದ ಕಾಯಿಗಳನ್ನು ಕುಟ್ಟಿ ತೆಗೆದ ಶುದ್ಧವಾದ ಎಣ್ಣೆಯನ್ನು ಇಸ್ರೇಲರು ನಿನ್ನ ಬಳಿಗೆ ತರಬೇಕೆಂದು ಆಜ್ಞಾಪಿಸು. ದೇವದರ್ಶನಗುಡಾರದಲ್ಲಿರುವ ದೀಪಗಳನ್ನು ಉರಿಸಲು ಆ ಎಣ್ಣೆ ಬೇಕಾಗಿರುತ್ತದೆ. ಆ ದೀಪಗಳು ಆರಿಹೋಗದೆ ಉರಿಯುತ್ತಲೇ ಇರಬೇಕು. ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ದೀಪಗಳು ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸುವನು. ಇದು ತೆರೆಯ ಹೊರಗೆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಇರುವುದು. ಈ ನಿಯಮ ಶಾಶ್ವತವಾದದ್ದು. ಶುದ್ಧಚಿನ್ನದಿಂದ ಮಾಡಿದ ದೀಪಸ್ತಂಭದಲ್ಲಿ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಉರಿಯುತ್ತಿರುವಂತೆ ಆರೋನನು ನೋಡಿಕೊಳ್ಳಬೇಕು.
“ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿ ರೊಟ್ಟಿಯನ್ನು ಮಾಡಲು ಆರು ಸೇರು ಹಿಟ್ಟನ್ನು ಉಪಯೋಗಿಸಬೇಕು. ವುಗಳನ್ನು ಯೆಹೋವನ ಸನ್ನಿಧಿಯಲ್ಲಿರುವ ಚಿನ್ನದ ಮೇಜಿನ ಮೇಲೆ ಎರಡು ಸಾಲಾಗಿ ಇಡಬೇಕು. ಒಂದೊಂದು ಸಾಲಿನಲ್ಲಿ ಆರಾರು ರೊಟ್ಟಿಗಳಿರುವವು. ಪ್ರತಿ ಸಾಲಿನಲ್ಲಿ ಶುದ್ಧವಾದ ಧೂಪದ್ರವ್ಯವನ್ನಿಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಸಮರ್ಪಣೆಯನ್ನು ಯೆಹೋವನ ಜ್ಞಾಪಕಕ್ಕೆ ತರುವುದು. ರತಿ ಸಬ್ಬತ್‌ದಿನದಲ್ಲಿ ಆರೋನನು ಯೆಹೋವನ ಸನ್ನಿಧಿಯಲ್ಲಿ ರೊಟ್ಟಿಯನ್ನು ಕ್ರಮವಾಗಿ ಯಾವಾಗಲೂ ಇಡಬೇಕು. ಇಸ್ರೇಲರೊಂದಿಗೆ ಮಾಡಲ್ಪಟ್ಟ ಒಡಂಬಡಿಕೆಯು ಶಾಶ್ವತವಾದದ್ದು. ಆ ರೊಟ್ಟಿಯು ಆರೋನನಿಗೆ ಮತ್ತು ಅವನ ಪುತ್ರರಿಗೆ ಸಲ್ಲತಕ್ಕದ್ದು. ಅವರು ರೊಟ್ಟಿಯನ್ನು ಪವಿತ್ರಸ್ಥಳದಲ್ಲಿ ತಿನ್ನುವರು. ಯಾಕೆಂದರೆ ಅದು ಮಹಾ ಪವಿತ್ರವಾದದ್ದು. ಅದು ಅಗ್ನಿಯ ಮೂಲಕ ಅರ್ಪಿಸಿದ ಯಜ್ಞಗಳಲ್ಲಿ ಒಂದಾಗಿದೆ. ಆ ರೊಟ್ಟಿಯು ಶಾಶ್ವತವಾಗಿ ಆರೋನನಿಗೆ ಸಲ್ಲತಕ್ಕದ್ದು.”
ದೇವರನ್ನು ಶಪಿಸಿದ ಮನುಷ್ಯನು
10 ಇಸ್ರೇಲಿನ ಒಬ್ಬ ಸ್ತ್ರೀಗೆ ಒಬ್ಬ ಮಗನಿದ್ದನು. ಅವನ ತಂದೆ ಈಜಿಪ್ಟಿನವನು. ಪಾಳೆಯದಲ್ಲಿದ್ದ ಇಸ್ರೇಲರ ಮಧ್ಯದಿಂದ ಅವನು ಹೊರಬಂದನು. ಅವನು ಒಬ್ಬ ಇಸ್ರೇಲನೊಡನೆ ಜಗಳವಾಡತೊಡಗಿದನು. 11 ಅವನು ದೂಷಿಸಲು ಪ್ರಾರಂಭಿಸಿ ಯೆಹೋವನ ನಾಮದ ಬಗ್ಗೆ ಕೆಟ್ಟಮಾತುಗಳನ್ನು ಹೇಳತೊಡಗಿದನು. ಆದ್ದರಿಂದ ಜನರು ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. (ಆ ಮನುಷ್ಯನ ತಾಯಿಯ ಹೆಸರು ಶೆಲೋಮೀತ್. ಅವಳು ದಾನ್ ಕುಲದವನಾದ ದಿಬ್ರೀಯನ ಮಗಳು.) 12 ಜನರು ಅವನನ್ನು ಸೆರೆಹಿಡಿದು, ಯೆಹೋವನ ಸ್ಪಷ್ಟವಾದ ಆಜ್ಞೆಗಾಗಿ ಕಾದುಕೊಂಡಿದ್ದರು.
13 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 14 “ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗಿರುವ ಸ್ಥಳಕ್ಕೆ ತನ್ನಿರಿ. ಬಳಿಕ ಅವನ ದೂಷಣೆ ಮಾತುಗಳನ್ನು ಕೇಳಿದ ಎಲ್ಲಾ ಜನರನ್ನು ಒಟ್ಟಾಗಿ ಕರೆಸಿರಿ. ಆ ಜನರು ತಮ್ಮ ಕೈಗಳನ್ನು ಅವನ ತಲೆಯ ಮೇಲೆ ಇಡುವರು. ಆ ಬಳಿಕ ಎಲ್ಲಾ ಜನರು ಅವನಿಗೆ ಕಲ್ಲೆಸೆದು ಕೊಲ್ಲಬೇಕು. 15 ನೀನು ಇಸ್ರೇಲರಿಗೆ ಹೀಗೆ ಹೇಳಬೇಕು: ದೇವದೂಷಣೆ ಮಾಡಿದವನಿಗೆ ಶಿಕ್ಷೆಯಾಗಬೇಕು. 16 ಯಾವನಾದರೂ ಯೆಹೋವನ ನಾಮದ ವಿರುದ್ಧ ಮಾತಾಡಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಜನರೆಲ್ಲರೂ ಅವನಿಗೆ ಕಲ್ಲೆಸೆದು ಕೊಲ್ಲಬೇಕು. ಯೆಹೋವನ ನಾಮವನ್ನು ನಿಂದಿಸುವ ಪರದೇಶಸ್ಥರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಯೆಹೋವನ ನಾಮವನ್ನು ನಿಂದಿಸುವವನಿಗೆ ಮರಣಶಿಕ್ಷೆಯಾಗಬೇಕು.
17 “ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು. 18 ಇನ್ನೊಬ್ಬನಿಗೆ ಸೇರಿದ ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಇನ್ನೊಂದು ಪಶುವನ್ನು ಕೊಡಬೇಕು.
19 “ಒಬ್ಬನು ತನ್ನ ನೆರೆಯವನನ್ನು ಅಂಗವಿಕಲನನ್ನಾಗಿ ಮಾಡಿದರೆ, ಅವನಿಗೂ ಅದೇ ರೀತಿ ಮಾಡಬೇಕು. 20 ಮುರಿದ ಮೂಳೆಗೆ ಬದಲಾಗಿ ಅವನ ಮೂಳೆಯನ್ನು ಮುರಿಯಬೇಕು. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಯಬೇಕು. 21 ಒಬ್ಬನು ಪಶುವೊಂದನ್ನು ಕೊಂದರೆ, ಅವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಆದರೆ ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು.
22 “ಈ ಕಟ್ಟಳೆ ನ್ಯಾಯವಾದದ್ದು. ಅದು ನಿಮ್ಮ ಸ್ವದೇಶದವರಿಗೆ ಅನ್ವಯಿಸುವಂತೆ ಪರದೇಶಸ್ಥರಿಗೂ ಅನ್ವಯಿಸುವುದು. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!”
23 ಬಳಿಕ ಮೋಶೆಯು ಇಸ್ರೇಲರೊಂದಿಗೆ ಮಾತಾಡಿದನು. ಆಗ ಅವರು ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಅವನಿಗೆ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.