14
ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಯೋಜನೆ
(ಮತ್ತಾಯ 26:1-5; ಲೂಕ 22:1-2; ಯೋಹಾನ 11:45-53)
ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬಕ್ಕೆ ಕೇವಲ ಎರಡು ದಿನಗಳಿದ್ದವು. ಮಹಾಯಾಜಕರು ಹಾಗೂ ಧರ್ಮೋಪದೇಶಕರು ಯಾವುದಾದರೊಂದು ಸುಳ್ಳು ಅಪವಾದವನ್ನು ಕಂಡುಹಿಡಿದು ಯೇಸುವನ್ನು ಬಂಧಿಸಿ ಆತನನ್ನು ಕೊಲ್ಲಬೇಕೆಂದಿದ್ದರು. “ಆದರೆ ಹಬ್ಬದ ಸಮಯದಲ್ಲಿ ನಾವು ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಜನರು ಕೋಪಗೊಂಡು, ಗಲಭೆ ಎಬ್ಬಿಸುವ ಸಾಧ್ಯತೆಯಿದೆ” ಎಂದು ಅವರು ಮಾತಾಡಿಕೊಂಡರು.
ಸ್ತ್ರೀಯೊಬ್ಬಳು ಯೇಸುವಿಗೆ ಮಾಡಿದ ವಿಶೇಷಕಾರ್ಯ
(ಮತ್ತಾಯ 26:6-13; ಯೋಹಾನ 12:1-8)
ಬೆಥಾನಿಯದಲ್ಲಿ ಯೇಸು ಕುಷ್ಠರೋಗಿ ಸಿಮೋನನ ಮನೆಯಲ್ಲಿ ಊಟಮಾಡುತ್ತಿದ್ದಾಗ ಸ್ತ್ರೀಯೊಬ್ಬಳು ಆತನ ಬಳಿಗೆ ಬಂದಳು. ಆಕೆಯ ಬಳಿ ಅತ್ಯಂತ ಬೆಲೆಬಾಳುವ ಪರಿಮಳದ್ರವ್ಯದ ಭರಣಿ ಇತ್ತು. ಈ ಪರಿಮಳದ್ರವ್ಯವನ್ನು ಶುದ್ಧವಾದ ನಾರ್ಡ್‌* ತೈಲದಿಂದ ಮಾಡಲಾಗಿತ್ತು. ಆ ಸ್ತ್ರೀಯು ಭರಣಿಯನ್ನು ತೆರೆದು, ಆ ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.
ಅಲ್ಲಿದ್ದ ಕೆಲವು ಶಿಷ್ಯರು ಇದನ್ನು ನೋಡಿ ಕೋಪಗೊಂಡು ಆಕ್ಷೇಪಿಸಿದರು. “ಆ ಪರಿಮಳತೈಲವನ್ನು ಹಾಳುಮಾಡಿದ್ದೇಕೆ? ಅದು ಒಂದು ವರ್ಷದ ಸಂಪಾದನೆಗಿಂತ ಹೆಚ್ಚು ಬೆಲೆಬಾಳುತ್ತಿತ್ತು. ಅದನ್ನು ಮಾರಿ ಬಂದ ಹಣವನ್ನು ಬಡಜನರಿಗೆ ಕೊಡಬಹುದಾಗಿತ್ತು” ಎಂದು ಹೇಳಿ ಆ ಸ್ತ್ರೀಯನ್ನು ಕಟುವಾಗಿ ಟೀಕಿಸಿದರು.
ಯೇಸು, “ಆಕೆಗೆ ತೊಂದರೆ ಕೊಡಬೇಡಿ. ನೀವು ಆಕೆಯನ್ನು ಕಾಡಿಸುವುದೇಕೆ? ಅವಳು ನನಗಾಗಿ ಬಹಳ ಒಳ್ಳೆಯದನ್ನು ಮಾಡಿದಳು. ನಿಮ್ಮೊಡನೆ ಬಡಜನರು ಯಾವಾಗಲೂ ಇರುತ್ತಾರೆ. ನಿಮಗೆ ಇಷ್ಟಬಂದ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. ಈಕೆ ನನಗಾಗಿ ತನ್ನಿಂದ ಸಾಧ್ಯವಾದ ಒಂದು ಕಾರ್ಯವನ್ನು ಮಾಡಿದಳು. ನಾನು ಸಾಯುವುದಕ್ಕಿಂತ ಮುಂಚೆ ನನ್ನನ್ನು ಸಮಾಧಿಗೆ ಸಿದ್ಧಮಾಡಲು ಆಕೆ ನನ್ನ ದೇಹದ ಮೇಲೆ ಪರಿಮಳತೈಲ ಸುರಿದಳು. ನಾನು ಸತ್ಯವನ್ನು ಹೇಳುತ್ತೇನೆ. ಪ್ರಪಂಚದಲ್ಲಿ ಸುವಾರ್ತೆ ಸಾರಲ್ಪಡುವಲ್ಲೆಲ್ಲಾ ಈಕೆ ಮಾಡಿದ ಈ ಕಾರ್ಯವನ್ನು ತಿಳಿಸುವುದರಿಂದ ಜನರು ಈಕೆಯನ್ನು ನೆನಪುಮಾಡಿಕೊಳ್ಳುವರು” ಎಂದು ಹೇಳಿದನು.
ಯೇಸುವಿನ ವೈರಿಗಳಿಗೆ ಯೂದನ ಸಹಾಯ
(ಮತ್ತಾಯ 26:14-16; ಲೂಕ 22:3-6)
10 ನಂತರ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಡಬೇಕೆಂಬ ದುರುದ್ದೇಶದಿಂದ ಮಹಾಯಾಜಕರೊಡನೆ ಮಾತಾಡಲು ಹೋದನು. 11 ಮಹಾಯಾಜಕರು ಇದರ ಬಗ್ಗೆ ಬಹಳ ಸಂತೋಷಗೊಂಡು, ಹಣಕೊಡುವುದಾಗಿ ಯೂದನಿಗೆ ಮಾತುಕೊಟ್ಟರು. ಆದ್ದರಿಂದ ಅವರಿಗೆ ಯೇಸುವನ್ನು ಹಿಡಿದುಕೊಡಲು ಅತ್ಯಂತ ಉತ್ತಮವಾದ ಸಮಯಕ್ಕಾಗಿ ಯೂದನು ಕಾಯತ್ತಿದ್ದನು.
ಪಸ್ಕ ಭೋಜನದ ಸಿದ್ಧತೆ
(ಮತ್ತಾಯ 26:17-25; ಲೂಕ 22:7-14, 21-23; ಯೋಹಾನ 13:21-30)
12 ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನವಾಗಿತ್ತು. ಯೆಹೂದಿಗಳು ಯಾವಾಗಲೂ ಪಸ್ಕಹಬ್ಬದ ಕುರಿಮರಿಗಳನ್ನು ಯಜ್ಞಮಾಡುವ ಸಮಯ ಇದಾಗಿತ್ತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ನಾವು ಪಸ್ಕಹಬ್ಬದ ಊಟವನ್ನು ನಿನಗಾಗಿ ಎಲ್ಲಿ ಸಿದ್ಧಪಡಿಸೋಣ?” ಎಂದು ಕೇಳಿದರು.
13 ಯೇಸು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ನೀವು ಪಟ್ಟಣದೊಳಕ್ಕೆ ಹೋದಾಗ, ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ನಿಮ್ಮ ಎದುರಿಗೆ ಬರುವನು. ಅವನನ್ನೇ ಹಿಂಬಾಲಿಸಿರಿ. 14 ಅವನು ಒಂದು ಮನೆಯೊಳಗೆ ನಡೆದು ಹೋಗುತ್ತಾನೆ. ನೀವು ಆ ಮನೆಯ ಯಜಮಾನನಿಗೆ, ‘ನಮ್ಮ ಗುರುವು ತನ್ನ ಶಿಷ್ಯರ ಸಂಗಡ ಪಸ್ಕ ಹಬ್ಬದ ಊಟ ಮಾಡಲು ಒಂದು ಕೋಣೆಯನ್ನು ತೋರಿಸಬೇಕೆಂದು ಕೇಳುತ್ತಾನೆ’ ಎಂದು ಹೇಳಿ. 15 ಆ ಯಜಮಾನನು ಮೇಲಂತಸ್ತಿನಲ್ಲಿ ಸಿದ್ಧವಾಗಿರುವ ಒಂದು ದೊಡ್ಡ ಕೋಣೆಯನ್ನು ತೋರಿಸುತ್ತಾನೆ. ಅಲ್ಲಿ ನಮಗಾಗಿ ಊಟವನ್ನು ಸಿದ್ಧಪಡಿಸಿರಿ” ಎಂದನು.
16 ಆದ್ದರಿಂದ ಶಿಷ್ಯರು ಅಲ್ಲಿಂದ ಹೊರಟು, ಪಟ್ಟಣದೊಳಗೆ ಹೋದರು. ಯೇಸು ಹೇಳಿದ ರೀತಿಯಲ್ಲಿಯೇ ಪ್ರತಿಯೊಂದೂ ನಡೆಯಿತು. ಶಿಷ್ಯರು ಪಸ್ಕಹಬ್ಬದ ಊಟವನ್ನು ಸಿದ್ಧಪಡಿಸಿದರು.
17 ಸಾಯಂಕಾಲದಲ್ಲಿ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಆ ಮನೆಗೆ ಹೋದನು. 18 ಅವರೆಲ್ಲರೂ ಊಟ ಮಾಡುತ್ತಿರುವಾಗ, ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಈಗ ಅವನು ನನ್ನೊಂದಿಗೆ ಊಟಮಾಡುತ್ತಿದ್ದಾನೆ” ಎಂದನು.
19 ಇದನ್ನು ಕೇಳಿದಾಗ ಶಿಷ್ಯರಿಗೆ ಬಹಳ ದುಃಖವಾಯಿತು. ಪ್ರತಿಯೊಬ್ಬ ಶಿಷ್ಯನೂ ಯೇಸುವಿಗೆ, “ಖಂಡಿತವಾಗಿ ನಾನು ನಿನಗೆ ದ್ರೋಹಮಾಡುವುದಿಲ್ಲ” ಎಂದನು.
20 ಯೇಸು, “ಈ ಹನ್ನೆರಡು ಜನರಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಅವನು ನನ್ನೊಡನೆ ಒಂದೇ ಬಟ್ಟಲಿನಲ್ಲಿ ತನ್ನ ರೊಟ್ಟಿಯನ್ನು ಅದ್ದುತ್ತಿದ್ದಾನೆ. 21 ಮನುಷ್ಯಕುಮಾರನು ಹಿಂಸಿಸಲ್ಪಟ್ಟನು. ಪವಿತ್ರ ಗ್ರಂಥದಲ್ಲಿಯೂ ಅದನ್ನು ಬರೆಯಲಾಗಿದೆ. ಆದರೆ ಮನುಷ್ಯಕುಮಾರನನ್ನು ಕೊಲ್ಲಲು ಹಿಡಿದುಕೊಡುವ ವ್ಯಕ್ತಿಯ ಸ್ಥಿತಿ ಬಹಳ ಭೀಕರವಾಗಿರುತ್ತದೆ. ಅವನು ಹುಟ್ಟದೇ ಇದ್ದಿದ್ದರೆ ಅವನಿಗೆ ಒಳ್ಳೆಯದಾಗುತ್ತಿತ್ತು” ಎಂದನು.
ಪ್ರಭುವಿನ ಭೋಜನ
(ಮತ್ತಾಯ 26:26-30; ಲೂಕ 22:15-20; 1 ಕೊರಿ. 11:23-25)
22 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟನು. ಯೇಸು ಅವರಿಗೆ, “ಈ ರೊಟ್ಟಿಯನ್ನು ತೆಗೆದುಕೊಂಡು ತಿನ್ನಿರಿ. ಈ ರೊಟ್ಟಿಯು ನನ್ನ ದೇಹ” ಎಂದನು.
23 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರೆಲ್ಲರೂ ಅದರಲ್ಲಿ ಕುಡಿದರು. 24 ಯೇಸು, “ಇದು ನನ್ನ ರಕ್ತ. ಒಡಂಬಡಿಕೆಯ ರಕ್ತ. ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೆ ಇದನ್ನು ಕುಡಿಯುವುದೇ ಇಲ್ಲ” ಎಂದನು.
26 ಆಗ ಶಿಷ್ಯರೆಲ್ಲರೂ ಒಂದು ಹಾಡನ್ನು ಹಾಡಿದರು. ನಂತರ ಅವರು ಆಲಿವ್ ಮರದ ಗುಡ್ಡಕ್ಕೆ ಹೋದರು.
ಶಿಷ್ಯರ ವಿಶ್ವಾಸ ದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಲೂಕ 22:31-34; ಯೋಹಾನ 13:36-38)
27 ನಂತರ ಯೇಸು ಶಿಷ್ಯರಿಗೆ, “ನೀವೆಲ್ಲರೂ ಭಯಗೊಂಡು ಹಿಂಜರಿಯುವಿರಿ.
 
‘ನಾನು ಕುರುಬನನ್ನು ಹೊಡೆಯುವೆನು;
ಆಗ ಕುರಿಗಳು ಚದರಿಹೋಗುತ್ತವೆ’ ಜೆಕರ್ಯ 13:7
 
ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 28 ಆದರೆ ನಾನು ಸತ್ತು ಪುನರುತ್ಥಾನ ಹೊಂದಿದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತೇನೆ” ಎಂದನು.
29 ಪೇತ್ರನು, “ಉಳಿದ ಶಿಷ್ಯರೆಲ್ಲರು ಭಯಗೊಂಡು ಹಿಂಜರಿದರೂ ನಾನು ಹಿಂಜರಿಯುವುದಿಲ್ಲ” ಎಂದು ಉತ್ತರಿಸಿದನು.
30 ಯೇಸು, “ನಾನು ಸತ್ಯವನ್ನು ಹೇಳುತ್ತೇನೆ. ಈ ರಾತ್ರಿ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಾರಿ, ನನ್ನನ್ನು ನೀನು ತಿಳಿದೇ ಇಲ್ಲವೆಂದು ಹೇಳುವೆ” ಎಂದು ಉತ್ತರಿಸಿದನು.
31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು.
ಯೇಸುವಿನ ಏಕಾಂತ ಪ್ರಾರ್ಥನೆ
(ಮತ್ತಾಯ 26:36-46; ಲೂಕ 22:39-46)
32 ಯೇಸು ಮತ್ತು ಆತನ ಶಿಷ್ಯರು ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದರು. ಯೇಸು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥಿಸಿ ಬರುವ ತನಕ ಕುಳಿತಿರಿ” ಎಂದು ಹೇಳಿ 33 ಪೇತ್ರನನ್ನು, ಯಾಕೋಬನನ್ನು ಮತ್ತು ಯೋಹಾನನನ್ನು ತನ್ನ ಜೊತೆ ಕರೆದುಕೊಂಡು ಹೋದನು. ನಂತರ ಯೇಸು ಬಹಳ ಗಲಿಬಿಲಿಗೊಂಡು, ದುಃಖದಿಂದ ತುಂಬಿದವನಾದನು. 34 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು.
35 ಯೇಸು ಅವರಿಂದ ಸ್ವಲ್ಪದೂರ ನಡೆದುಹೋಗಿ ನೆಲದ ಮೇಲೆ ಬೋರಲಬಿದ್ದು, ಪ್ರಾರ್ಥಿಸುತ್ತಾ “ಸಾಧ್ಯವಾದರೆ, ಈ ಸಂಕಟದ ಗಳಿಗೆ ನನಗೆ ಬಾರದಿರಲಿ” ಎಂದು ಬೇಡಿಕೊಂಡನು. 36 ಬಳಿಕ ಯೇಸು, “ಅಪ್ಪಾ, ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
37 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು, ಪೇತ್ರನಿಗೆ, “ಸೀಮೋನನೇ, ಏಕೆ ನಿದ್ರೆ ಮಾಡುತ್ತಿರುವೆ? ನೀನು ನನ್ನೊಡನೆ ಒಂದು ಗಂಟೆ ಕಾಲ ಎಚ್ಚರವಾಗಿರಲು ಸಾಧ್ಯವಾಗಲಿಲ್ಲವೇ? 38 ನೀನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸು. ಮನಸ್ಸೇನೋ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು” ಎಂದನು.
39 ಪುನಃ ಯೇಸು ದೂರ ಹೋಗಿ, ಮೊದಲಿನಂತೆಯೇ ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.
41 ಯೇಸು ಮೂರನೆಯ ಸಾರಿ ಪ್ರಾರ್ಥಿಸಿದ ಮೇಲೆ, ತನ್ನ ಶಿಷ್ಯರ ಬಳಿಗೆ ಹಿಂತಿರುಗಿ, “ನೀವು ಇನ್ನೂ ನಿದ್ರಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಗಳ ಕೈಗೆ ಮನುಷ್ಯಕುಮಾರನನ್ನು ಒಪ್ಪಿಸುವ ಸಮಯ ಬಂದಿದೆ. 42 ಮೇಲೇಳಿ! ನಾವು ಹೋಗಬೇಕು. ನನ್ನನ್ನು ಆ ಜನರಿಗೆ ಹಿಡಿದುಕೊಡುವವನು ಇಲ್ಲಿಗೆ ಬರುತ್ತಿದ್ದಾನೆ” ಎಂದನು.
ಯೇಸುವಿನ ಬಂಧನ
(ಮತ್ತಾಯ 26:47-56; ಲೂಕ 22:47-53; ಯೋಹಾನ 18:3-12)
43 ಯೇಸು ಇನ್ನೂ ಮಾತಾಡುತ್ತಿರುವಾಗ, ಯೂದನು ಅಲ್ಲಿಗೆ ಬಂದನು. ಹನ್ನೆರಡು ಜನ ಅಪೊಸ್ತಲರಲ್ಲಿ ಯೂದನು ಒಬ್ಬನಾಗಿದ್ದನು. ಯೂದನೊಡನೆ ಕತ್ತಿ ಮತ್ತು ದೊಣ್ಣೆಗಳಿಂದ ಸುಸಜ್ಜಿತರಾಗಿದ್ದ ಅನೇಕ ಜನರಿದ್ದರು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರುಗಳು ಈ ಜನರನ್ನು ಕಳುಹಿಸಿದ್ದರು.
44 ಯೇಸು ಯಾರೆಂಬುದನ್ನು ಜನರಿಗೆ ತೋರಿಸಲು ಯೂದನು ಒಂದು ಉಪಾಯ ಮಾಡಿದನು. ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಯೇಸು. ಅವನನ್ನು ಸೆರೆಹಿಡಿದು ಎಚ್ಚರಿಕೆಯಿಂದ ಕಾಯುತ್ತಾ ಕರೆದುಕೊಂಡು ಹೋಗಿರಿ!” ಎಂದು ಹೇಳಿಕೊಟ್ಟಿದ್ದನು. 45 ಆದ್ದರಿಂದ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ!” ಎಂದು ಹೇಳಿ ಯೇಸುವಿಗೆ ಮುದ್ದಿಟ್ಟನು. 46 ಆಗ ಆ ಜನರು ಯೇಸುವನ್ನು ಬಂಧಿಸಿದರು. 47 ಯೇಸುವಿನ ಹತ್ತಿರ ನಿಂತಿದ್ದ ಶಿಷ್ಯರಲ್ಲಿ ಒಬ್ಬನು ತನ್ನ ಕತ್ತಿಯನ್ನು ಹೊರಗೆಳೆದು ಪ್ರಧಾನಯಾಜಕನ ಸೇವಕನಿಗೆ ಹೊಡೆದು, ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
48 ಆಗ ಯೇಸು, “ಒಬ್ಬ ಅಪರಾಧಿಯನ್ನು ಬಂಧಿಸುವಂತೆ ನೀವು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಬರಬೇಕಿತ್ತೇ? 49 ಪ್ರತಿದಿನ ದೇವಾಲಯದಲ್ಲಿ ನಾನು ಉಪದೇಶಿಸುತ್ತಾ ನಿಮ್ಮೊಡನೆ ಇದ್ದೆನು. ಅಲ್ಲಿ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಈ ಎಲ್ಲಾ ಸಂಗತಿಗಳು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನಡೆದಿವೆ” ಎಂದನು. 50 ಆಗ ಯೇಸುವಿನ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
51 ಯೇಸುವಿನ ಶಿಷ್ಯನಾಗಿದ್ದ ಒಬ್ಬ ಯುವಕನು ಅಲ್ಲಿದ್ದನು. ಅವನು ನಾರುಬಟ್ಟೆಯನ್ನು ಧರಿಸಿದ್ದನು. ಜನರು ಅವನನ್ನು ಸಹ ಹಿಡಿದುಕೊಂಡರು. 52 ಅವನು ತಾನು ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ಅಲ್ಲಿಯೇ ಬಿಟ್ಟು ಬರೀಮೈಯಲ್ಲಿ ಓಡಿಹೋದನು.
ಯೆಹೂದ್ಯನಾಯಕರ ಮುಂದೆ ಯೇಸು
(ಮತ್ತಾಯ 26:57-68; ಲೂಕ 22:54-55, 63-71; ಯೋಹಾನ 18:13-14, 19-24)
53 ಯೇಸುವನ್ನು ಬಂಧಿಸಿದ್ದ ಜನರು ಪ್ರಧಾನಯಾಜಕನ ಮನೆಗೆ ಆತನನ್ನು ಕರೆದುಕೊಂಡು ಹೋದರು. ಎಲ್ಲಾ ಮಹಾಯಾಜಕರುಗಳು, ಹಿರಿಯ ಯೆಹೂದ್ಯನಾಯಕರುಗಳು, ಹಾಗೂ ಧರ್ಮೋಪದೇಶಕರು ಅಲ್ಲಿ ಸೇರಿದ್ದರು. 54 ಪೇತ್ರನು ಯೇಸುವನ್ನು ದೂರದಲ್ಲಿ ಹಿಂಬಾಲಿಸುತ್ತಾ ಪ್ರಧಾನಯಾಜಕನ ಮನೆಯ ಅಂಗಳದೊಳಕ್ಕೆ ಹೋಗಿ, ಕಾವಲುಗಾರರೊಡನೆ ಕುಳಿತುಕೊಂಡು ಬೆಂಕಿಯಿಂದ ಚಳಿಕಾಯಿಸಿಕೊಳ್ಳತೊಡಗಿದನು.
55 ಮಹಾಯಾಜಕರು ಹಾಗೂ ಹಿರಿಯ ಸಭೆಯವರೆಲ್ಲರು ಆತನನ್ನು ಕೊಲ್ಲಲು ಬೇಕಾದ ಒಂದು ತಪ್ಪನ್ನು ಆತನಲ್ಲಿ ಕಂಡುಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೆ ಯೇಸುವನ್ನು ಕೊಲ್ಲಲು ಸರಿಯಾದ ಯಾವುದೇ ಆಧಾರವನ್ನು ಕಂಡುಹಿಡಿಯಲು ಸಮಿತಿಗೆ ಸಾಧ್ಯವಾಗಲಿಲ್ಲ. 56 ಅನೇಕ ಜನರು ಬಂದು, ಯೇಸುವಿನ ವಿರುದ್ಧ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಅವರೆಲ್ಲರು ಒಂದಕ್ಕೊಂದು ಹೊಂದಾಣಿಕೆಯಾಗದಂತಹ ಬೇರೆಬೇರೆ ಸಂಗತಿಗಳನ್ನು ಹೇಳಿದರು.
57 ನಂತರ ಕೆಲವು ಜನರು ನಿಂತುಕೊಂಡು, ಯೇಸುವಿನ ವಿರುದ್ಧ ಕೆಲವು ಅಪವಾದಗಳನ್ನು ಹೊರಿಸುತ್ತಾ, 58 “ಈ ಮನುಷ್ಯನು, ‘ಕೈಯಿಂದ ಕಟ್ಟಿದ ಈ ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕೈಯಿಂದ ಕಟ್ಟಿಲ್ಲದ ಇನ್ನೊಂದು ದೇವಾಲಯವನ್ನು ಕಟ್ಟುತ್ತೇನೆ’ ಎಂದು ಹೇಳಿದ್ದನ್ನು ನಾವು ಕೇಳಿದೆವು” ಎಂದರು. 59 ಆದರೂ ಜನರು ಹೇಳಿದ ಈ ಸಂಗತಿಗಳು ಹೊಂದಿಕೆಯಾಗಲಿಲ್ಲ.
60 ಆಗ ಪ್ರಧಾನಯಾಜಕನು ಎಲ್ಲಾ ಜನರೆದುರಿಗೆ ಎದ್ದುನಿಂತು, ಯೇಸುವಿಗೆ, “ಈ ಜನರು ನಿನಗೆ ವಿರುದ್ಧವಾಗಿ ಹೊರಿಸುತ್ತಿರುವ ಈ ಆರೋಪಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯೋ? ಜನರು ಹೇಳುತ್ತಿರುವುದು ನಿಜವೇ?” ಎಂದು ಕೇಳಿದನು. 61 ಆದರೆ ಯೇಸು ಮೌನವಾಗಿದ್ದನು. ಯಾವ ಉತ್ತರವನ್ನೂ ಕೊಡಲಿಲ್ಲ.
ಪ್ರಧಾನಯಾಜಕನು ಯೇಸುವಿಗೆ, “ಮಹಾದೇವರ ಮಗನಾದ ಕ್ರಿಸ್ತನು ನೀನೋ?” ಎಂಬ ಇನ್ನೊಂದು ಪ್ರಶ್ನೆಯನ್ನು ಕೇಳಿದನು.
62 ಯೇಸು, “ಹೌದು, ನಾನೇ ದೇವರ ಮಗನು. ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀನು ಕಾಣುವೆ” ಎಂದು ಉತ್ತರಿಸಿದನು.
63 ಪ್ರಧಾನಯಾಜಕನು ಬಹಳ ಕೋಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಮಗೆ ಇನ್ನೂ ಹೆಚ್ಚಿನ ಸಾಕ್ಷಿಗಳ ಅವಶ್ಯಕತೆಯಿಲ್ಲ. 64 ಇವನು ದೇವರ ವಿರುದ್ಧವಾಗಿ ಹೇಳಿದ ಮಾತನ್ನು ನೀವೆಲ್ಲರೂ ಕೇಳಿದ್ದೀರಿ. ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು.
ಯೇಸು ಅಪರಾಧಿಯೆಂತಲೂ ಆತನಿಗೆ ಮರಣದಂಡನೆ ಆಗಬೇಕೆಂತಲೂ ಜನರೆಲ್ಲರು ಹೇಳಿದರು. 65 ಅಲ್ಲಿದ್ದ ಕೆಲವು ಜನರು ಯೇಸುವಿಗೆ ಉಗುಳಿ, ಆತನ ಮುಖವನ್ನು ಮುಚ್ಚಿ, ಮುಷ್ಠಿಯಿಂದ ಗುದ್ದಿ, “ನಮಗೆ ಪ್ರವಾದನೆ ಹೇಳು” ಎಂದರು. ನಂತರ ಕಾವಲುಗಾರರು ಯೇಸುವನ್ನು ದೂರ ಕರೆದುಕೊಂಡು ಹೋಗಿ, ಆತನನ್ನು ಹೊಡೆದರು.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:69-75; ಲೂಕ 22:56-62; ಯೋಹಾನ 18:15-18; 25-27)
66 ಆ ಸಮಯದಲ್ಲಿ ಪೇತ್ರನು ಇನ್ನೂ ಅಂಗಳದಲ್ಲಿದ್ದನು. ಪ್ರಧಾನಯಾಜಕನ ದಾಸಿಯಾಗಿದ್ದ ಹುಡುಗಿಯೊಬ್ಬಳು ಪೇತ್ರನ ಬಳಿಗೆ ಬಂದಳು. 67 ಪೇತ್ರನು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಅವಳು ಕಂಡು, ಪೇತ್ರನನ್ನು ಹತ್ತಿರದಿಂದ ದಿಟ್ಟಿಸಿ ನೋಡಿ, “ನೀನು ನಜರೇತಿನವನಾದ ಯೇಸುವಿನ ಜೊತೆ ಇದ್ದವನಲ್ಲವೇ?” ಎಂದಳು.
68 ಆದರೆ ಪೇತ್ರನು ಆಕೆಯ ಮಾತನ್ನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆಯೋ ನನಗೆ ತಿಳಿಯದು” ಎಂದು ಹೇಳಿ ಎದ್ದು, ಅಂಗಳದ ಪ್ರವೇಶದ್ವಾರದ ಬಳಿಗೆ ಹೋದನು.
69 ಪೇತ್ರನು ಅಲ್ಲಿರುವುದನ್ನು ಆ ದಾಸಿಯು ನೋಡಿ, ಅಲ್ಲಿ ನಿಂತಿದ್ದ ಜನರಿಗೆ, “ಈ ಮನುಷ್ಯನು ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ಒಬ್ಬನು” ಎಂದು ಹೇಳಿದಳು. 70 ಪುನಃ ಪೇತ್ರನು ಆಕೆಯ ಮಾತನ್ನು ನಿರಾಕರಿಸಿದನು.
ಸ್ವಲ್ಪ ಸಮಯದ ನಂತರ, ಪೇತ್ರನ ಬಳಿ ನಿಂತಿದ್ದ ಕೆಲವು ಜನರು ಅವನಿಗೆ, “ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ನೀನೂ ಒಬ್ಬನು ಎಂಬುದು ನಮಗೆ ತಿಳಿದಿದೆ. ನೀನು ಯೇಸುವಿನಂತೆ ಗಲಿಲಾಯದವನು” ಎಂದರು.
71 ಆಗ ಪೇತ್ರನು ತನಗೆ ಶಾಪ ಹಾಕಿಕೊಳ್ಳುತ್ತಾ “ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನೀವು ಹೇಳುತ್ತಿರುವ ಈ ಮನುಷ್ಯನನ್ನು ನಾನು ತಿಳಿದಿಲ್ಲ!” ಎಂದು ಬಲವಾಗಿ ಹೇಳಿದನು.
72 ಪೇತ್ರನು ಇದನ್ನು ಹೇಳಿದ ಮೇಲೆ ಕೋಳಿ ಎರಡನೇ ಸಾರಿ ಕೂಗಿತು. “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ, ನೀನು ನನ್ನನ್ನು ತಿಳಿದಿಲ್ಲವೆಂದು ಮೂರು ಸಾರಿ ಹೇಳುವೆ” ಎಂದು ಯೇಸು ತನಗೆ ಹೇಳಿದ್ದನ್ನು ಪೇತ್ರನು ಜ್ಞಾಪಿಸಿಕೊಂಡು ಬಹಳ ದುಃಖದಿಂದ ಗೋಳಾಡಿದನು.
* 14:3 ನಾರ್ಡ್ ನಾರ್ಡ್‌ ಎಂಬ ಸಸ್ಯದ ಬೇರುಗಳಿಂದ ತಯಾರಿಸಿದ ಬೆಲೆಬಾಳುವ ಪರಿಮಳತೈಲ. 14:36 ಅಪ್ಪಾ ಮೂಲಪದ ಅರಮೇಯಿಕ್ ಭಾಷೆಯ “ಅಬ್ಬಾ” ಇದರರ್ಥ “ಅಪ್ಪಾ.”