5
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮತ್ತಾಯ 8:28-34; ಲೂಕ 8:26-39)
ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು. ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ. ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.
ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು. 7-8 ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.
ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅವನು “ನನ್ನ ಹೆಸರು ದಂಡು,* ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು. 10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.
11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು. 13 ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.
14 ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು. 15 ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು. 16 ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು. 17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.
18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.
20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.
ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಲೂಕ 8:40-56)
21 ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು. 22 ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, 23 “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.
24 ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.
25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು. 26 ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.
27 ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು. 28 ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ 29 ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು. 30 ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
31 ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು.
32 ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು. 33 ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು. 34 ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು.
35 ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು.
36 ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.
37 ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು. 38 ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು. 39 ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು. 40 ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು.
ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು. 41 ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.) 42 ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು. 43 ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು.
* 5:9 ದಂಡು ಅಂದರೆ 6,000 ಸೈನಿಕರುಳ್ಳ ಸೈನ್ಯದಳ.