17
ಯೇಸುವಿನ ರೂಪಾಂತರ
(ಮಾರ್ಕ 9:2-13; ಲೂಕ 9:28-36)
ಆರು ದಿನಗಳ ತರುವಾಯ, ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ಸಹೋದರನಾದ ಯೋಹಾನನನ್ನು ಕರೆದುಕೊಂಡು ಯೇಸು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. ಅವರಲ್ಲದೆ ಬೇರೆ ಯಾರೂ ಅಲ್ಲಿರಲಿಲ್ಲ. ಈ ಶಿಷ್ಯರ ಕಣ್ಣೆದುರಿನಲ್ಲಿಯೇ ಆತನು ರೂಪಾಂತರ ಹೊಂದಿದನು. ಆತನ ಮುಖವು ಸೂರ್ಯನಂತೆ ಪ್ರಕಾಶಮಾನವಾಯಿತು. ಆತನ ಉಡುಪುಗಳು ಬೆಳಕಿನಂತೆ ಬೆಳ್ಳಗಾದವು. ಅಲ್ಲದೆ ಆತನೊಂದಿಗೆ ಇಬ್ಬರು ಪುರುಷರು ಮಾತಾಡುತ್ತಾ ನಿಂತಿದ್ದರು. ಅವರೇ ಮೋಶೆ ಮತ್ತು ಎಲೀಯ.
ಪೇತ್ರನು ಯೇಸುವಿಗೆ, “ಪ್ರಭುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನೀನು ಇಷ್ಟಪಟ್ಟರೆ ಇಲ್ಲಿ ಮೂರು ಡೇರೆಗಳನ್ನು ಹಾಕುವೆವು. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದನು.
ಪೇತ್ರನು ಮಾತಾಡುತ್ತಿರುವಾಗಲೇ ಪ್ರಕಾಶಮಾನವಾದ ಒಂದು ಮೋಡವು ಅವರ ಮೇಲೆ ಕವಿಯಿತು ಮತ್ತು ಆ ಮೋಡದೊಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ನಾನು ಈತನನ್ನು ಬಹಳ ಮೆಚ್ಚಿಕೊಂಡಿದ್ದೇನೆ. ಈತನಿಗೆ ವಿಧೇಯರಾಗಿರಿ!” ಎಂದು ಹೇಳಿತು.
ಯೇಸುವಿನ ಸಂಗಡವಿದ್ದ ಶಿಷ್ಯರಿಗೂ ಈ ಧ್ವನಿ ಕೇಳಿಸಿತು. ಅವರು ಬಹಳ ಭಯದಿಂದ ಬೋರಲಬಿದ್ದರು. ಆಗ ಆತನು ಶಿಷ್ಯರ ಬಳಿಗೆ ಬಂದು ಅವರನ್ನು ಮುಟ್ಟಿ, “ಏಳಿ, ಹೆದರಬೇಡಿ” ಎಂದನು. ಅವರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.
ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ತನ್ನ ಶಿಷ್ಯರಿಗೆ, “ನೀವು ಬೆಟ್ಟದ ಮೇಲೆ ಕಂಡ ದರ್ಶನವನ್ನು ಈಗ ಯಾರಿಗೂ ಹೇಳದೆ ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬಂದ ಮೇಲೆ ತಿಳಿಸಿರಿ” ಎಂದು ಆಜ್ಞಾಪಿಸಿದನು.
10 ಶಿಷ್ಯರು ಯೇಸುವಿಗೆ, “ಕ್ರಿಸ್ತನು ಬರುವುದಕ್ಕಿಂತ ಮುಂಚೆ ಎಲೀಯನು ಬರಬೇಕಾಗಿದೆ ಎಂದು ಧರ್ಮೋಪದೇಶಕರು ಹೇಳುವುದೇಕೆ?” ಎಂದು ಕೇಳಿದರು.
11 ಅದಕ್ಕೆ ಯೇಸು, “ಎಲೀಯನು ಬರುತ್ತಾನೆಂದು ಅವರು ಹೇಳುವುದು ಸರಿ. ನಿಜವಾಗಿಯೂ ಎಲೀಯನು ಬಂದು ಎಲ್ಲಾ ವಿಷಯಗಳನ್ನು ಸರಿಪಡಿಸುವನು. 12 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ಈಗಾಗಲೇ ಬಂದಿದ್ದಾನೆ. ಆದರೆ ಆತನು ಯಾರೆಂಬುದು ಜನರಿಗೆ ತಿಳಿಯಲಿಲ್ಲ. ಜನರು ತಮಗಿಷ್ಟಬಂದಂತೆ ಅವನನ್ನು ಹಿಂಸಿಸಿದರು. ಅದೇ ರೀತಿ ಅವರು ಮನುಷ್ಯಕುಮಾರನನ್ನು ಹಿಂಸೆಪಡಿಸುವರು” ಎಂದು ಉತ್ತರಕೊಟ್ಟನು. 13 ಯೇಸು ಹೇಳುತ್ತಿರುವುದು ಸ್ನಾನಿಕನಾದ ಯೋಹಾನನನ್ನೇ ಕುರಿತು ಎಂದು ಶಿಷ್ಯರು ಗ್ರಹಿಸಿಕೊಂಡರು.
ಯೇಸುವಿನಿಂದ ಕಾಯಿಲೆಯ ಬಾಲಕನಿಗೆ ಸ್ವಸ್ಥತೆ
(ಮಾರ್ಕ 9:14-29; ಲೂಕ 9:37-43)
14 ಯೇಸು ಮತ್ತು ಆತನ ಶಿಷ್ಯರು ಜನರ ಬಳಿಗೆ ಹಿಂತಿರುಗಿ ಹೋದರು. ಒಬ್ಬನು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, 15 “ಪ್ರಭುವೇ, ನನ್ನ ಮಗನಿಗೆ ದಯೆತೋರು. ಅವನು ಮೂರ್ಛಾರೋಗದಿಂದ ಬಹಳ ಬಾಧೆಪಡುತ್ತಿದ್ದಾನೆ. ಅವನು ಆಗಾಗ್ಗೆ ಬೆಂಕಿಯಲ್ಲಿ ಇಲ್ಲವೇ ನೀರಿನಲ್ಲಿ ಬೀಳುತ್ತಾನೆ. 16 ನಾನು ನನ್ನ ಮಗನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಆದರೆ ಅವನನ್ನು ಗುಣಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
17 ಯೇಸು, “ಅಯ್ಯೋ, ವಿಶ್ವಾಸವಿಲ್ಲದ ವಕ್ರಸಂತತಿಯೇ, ಇನ್ನೆಷ್ಟು ಕಾಲ ನಾನು ನಿಮ್ಮೊಂದಿಗಿರಬೇಕು? ಇನ್ನೆಷ್ಟು ಕಾಲ ನಾನು ನಿಮ್ಮನ್ನು ಸಹಿಸಿಕೊಳ್ಳಲಿ? ಆ ಬಾಲಕನನ್ನು ಇಲ್ಲಿಗೆ ಕರೆತನ್ನಿ” ಎಂದು ಉತ್ತರಕೊಟ್ಟನು. 18 ಯೇಸು ಬಾಲಕನಲ್ಲಿದ್ದ ದೆವ್ವಕ್ಕೆ ಬಲವಾಗಿ ಗದರಿಸಲು ದೆವ್ವವು ಅವನನ್ನು ಬಿಟ್ಟುಹೋಯಿತು. ಅವನಿಗೆ ಆ ಕ್ಷಣದಲ್ಲೇ ಗುಣವಾಯಿತು.
19 ಆಗ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅವನನ್ನು ದೆವ್ವದಿಂದ ಬಿಡಿಸಲು ನಾವು ಪ್ರಯತ್ನಿಸಿದರೂ ನಮಗೇಕೆ ಸಾಧ್ಯವಾಗಲಿಲ್ಲ?” ಎಂದರು.
20 ಅದಕ್ಕೆ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ನಂಬಿಕೆಯು ಸಾಸಿವೆ ಕಾಳಿನಷ್ಟಿದ್ದರೂ, ಈ ಪರ್ವತಕ್ಕೆ ‘ಇಲ್ಲಿಂದ ಅಲ್ಲಿಗೆ ಹೋಗು’ ಎಂದು ನೀವು ಹೇಳಿದರೂ ಅದು ಹೋಗುತ್ತದೆ. ನಿಮಗೆ ಅಸಾಧ್ಯವಾಗದ ಕಾರ್ಯಗಳೇ ಇರದು” ಎಂದನು. 21  *
ತನ್ನ ಮರಣವನ್ನು ಕುರಿತು ಯೇಸುವಿನ ಎರಡನೆ ಪ್ರಕಟನೆ
(ಮಾರ್ಕ 9:30-32; ಲೂಕ 9:43-45)
22 ಒಮ್ಮೆ ಶಿಷ್ಯರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದರು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. 23 ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಮರಣದಿಂದ ಮೇಲೆದ್ದು ಬರುವನು” ಎಂದು ಹೇಳಿದನು.
ತೆರಿಗೆಯ ಕುರಿತು ಯೇಸುವಿನ ಉಪದೇಶ
24 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ದೇವಾಲಯಕ್ಕೆ ಯೆಹೂದ್ಯರಿಂದ ವಾರ್ಷಿಕ ತೆರಿಗೆ ವಸೂಲಿ ಮಾಡುವ ಕೆಲವರು ಪೇತ್ರನ ಬಳಿಗೆ ಬಂದು, “ನಿಮ್ಮ ಬೋಧಕನು ದೇವಾಲಯದ ವಾರ್ಷಿಕ ತೆರಿಗೆಯನ್ನು ಸಲ್ಲಿಸುವುದಿಲ್ಲವೋ?” ಎಂದು ಕೇಳಿದರು.
25 ಅದಕ್ಕೆ ಪೇತ್ರನು, “ಹೌದು, ಸಲ್ಲಿಸುತ್ತಾನೆ” ಎಂದು ಉತ್ತರಕೊಟ್ಟನು.
ಬಳಿಕ ಪೇತ್ರನು ಯೇಸುವಿದ್ದ ಮನೆಯೊಳಕ್ಕೆ ಹೋದನು. ಅವನು ಈ ವಿಷಯವನ್ನು ಹೇಳುವುದಕ್ಕಿಂತ ಮೊದಲೇ ಯೇಸು ಅವನಿಗೆ, “ಭೂಲೋಕದ ರಾಜರುಗಳು ಜನರಿಂದ ಅನೇಕ ಬಗೆಯ ತೆರಿಗೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತೆರಿಗೆ ಕೊಡುವ ಜನರು ಯಾರು? ರಾಜನ ಮಕ್ಕಳೇ ಅಥವಾ ಬೇರೆ ಜನರೇ? ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು.
26 ಪೇತ್ರನು, “ಬೇರೆ ಜನರು ತೆರಿಗೆಗಳನ್ನು ಸಲ್ಲಿಸುತ್ತಾರೆ” ಎಂದು ಉತ್ತರಕೊಟ್ಟನು.
ಯೇಸು ಪೇತ್ರನಿಗೆ, “ಹಾಗಾದರೆ ರಾಜನ ಮಕ್ಕಳು ತೆರಿಗೆ ಕೊಡಬೇಕಿಲ್ಲ. 27 ಆದರೆ ತೆರಿಗೆ ವಸೂಲಿಗಾರರನ್ನು ನಾವೇಕೆ ಕೋಪಗೊಳಿಸಬೇಕು? ನೀನು ತೆರಿಗೆಯನ್ನು ಕೊಡು. ಸರೋವರಕ್ಕೆ ಹೋಗಿ ಮೀನನ್ನು ಹಿಡಿ. ನಿನಗೆ ಸಿಕ್ಕಿದ ಮೊದಲನೇ ಮೀನಿನ ಬಾಯನ್ನು ತೆರೆ, ಅದರ ಬಾಯೊಳಗೆ ವಾರ್ಷಿಕ ತೆರಿಗೆಗೆ ಬೇಕಾದ ಒಂದು ನಾಣ್ಯವನ್ನು ಕಾಣುವೆ. ಅದನ್ನು ತೆಗೆದುಕೊಂಡು ಬಂದು, ತೆರಿಗೆ ವಸೂಲಿ ಮಾಡುವವರಿಗೆ ಕೊಡು. ಅದರಿಂದ ನನ್ನ ಮತ್ತು ನಿನ್ನ ತೆರಿಗೆಯನ್ನು ಕೊಟ್ಟಂತಾಗುವುದು” ಎಂದು ಹೇಳಿದನು.
* 17:21 ಕೆಲವು ಗ್ರೀಕ್ ಪ್ರತಿಗಳಲ್ಲಿ 21 ನೇ ವಚನವನ್ನು ಸೇರಿಸಲಾಗಿದೆ: “ನೀವು ಉಪವಾಸ ಪ್ರಾರ್ಥನೆ ಮಾಡಿದರಷ್ಟೇ ಅಂಥ ದೆವ್ವಗಳನ್ನು ಬಿಡಿಸಲು ಸಾಧ್ಯ.”