13
ಗೂಢಚಾರರು ಕಾನಾನ್ ದೇಶಕ್ಕೆ ಹೋದದ್ದು
ಯೆಹೋವನು ಮೋಶೆಗೆ, “ಕಾನಾನ್ ದೇಶದ ಬಗ್ಗೆ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಗೂಢಚಾರರನ್ನು ಕಳುಹಿಸು. ನಾನು ಇಸ್ರೇಲರಿಗೆ ಕೊಡುವ ದೇಶ ಇದಾಗಿದೆ. ಹನ್ನೆರಡು ಕುಲಗಳಿಂದ ಒಬ್ಬೊಬ್ಬ ನಾಯಕನನ್ನು ಕಳುಹಿಸು” ಎಂದು ಹೇಳಿದನು.
ಜನರು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡಿದ್ದಾಗ ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯು ಈ ನಾಯಕರನ್ನು ಕಳುಹಿಸಿದನು. ಆ ನಾಯಕರು ಯಾರೆಂದರೆ:
 
ರೂಬೇನ್ ಕುಲದಿಂದ ಜಕ್ಕೂರನ ಮಗನಾದ ಶಮ್ಮೂವ,
ಸಿಮೆಯೋನ್ ಕುಲದಿಂದ ಹೋರಿಯ ಮಗನಾದ ಶಾಫಾಟ್,
ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,
ಇಸ್ಸಾಕಾರ್ ಕುಲದಿಂದ ಯೋಸೇಫನ ಮಗನಾದ ಇಗಾಲ್,
ಎಫ್ರಾಯೀಮ್ ಕುಲದಿಂದ ನೂನನ ಮಗನಾದ ಹೋಶೇಯ,
ಬೆನ್ಯಾಮೀನ್ ಕುಲದಿಂದ ರಾಫೂವನ ಮಗನಾದ ಪಲ್ಟೀ,
10 ಜೆಬುಲೂನ್ ಕುಲದಿಂದ ಸೋದೀಯ ಮಗನಾದ ಗದ್ದೀಯೇಲ್,
11 ಯೋಸೇಫನ ಮಗನಾದ ಮನಸ್ಸೆ ಕುಲದಿಂದ ಸೂಸೀಯ ಮಗನಾದ ಗದ್ದೀ.
12 ದಾನ್ ಕುಲದಿಂದ ಗೆಮಲ್ಲೀಯ ಮಗನಾದ ಅಮ್ಮೀಯೇಲ್.
13 ಆಶೇರ್ ಕುಲದಿಂದ ಮೀಕಾಯೇಲನ ಮಗನಾದ ಸೆತೂರ್,
14 ನಫ್ತಾಲಿ ಕುಲದಿಂದ ವಾಪೆಸೀಯನ ಮಗನಾದ ನಹಬೀ,
15 ಗಾದ್ ಕುಲದಿಂದ ಮಾಕೀಯನ ಮಗನಾದ ಗೆಯೂವೇಲ್.
 
16 ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಕಳುಹಿಸಿದ ಗೂಢಚಾರರ ಹೆಸರುಗಳು ಇವೇ. (ಮೋಶೆಯು ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.)
17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)
21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತು ತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.
25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ. 28 ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು. 29 ಅಮಾಲೇಕ್ಯರು ನೆಗೆವ್‌ನಲ್ಲಿ ವಾಸಿಸುತ್ತಾರೆ. ಹಿತ್ತಿಯರು, ಯೆಬೂಸಿಯರು ಮತ್ತು ಅಮೋರಿಯರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ. ಕಾನಾನ್ಯರು ಸಮುದ್ರ ತೀರದಲ್ಲಿಯೂ ಮತ್ತು ಯೋರ್ದನ್ ನದಿಯ ಉದ್ದಕ್ಕೂ ವಾಸಿಸುತ್ತಾರೆ” ಎಂದು ಹೇಳಿದರು.
30 ಕಾಲೇಬನು ಮೋಶೆಯ ಬಳಿಯಲ್ಲಿದ್ದ ಗುಣುಗುಟ್ಟುವ ಜನರನ್ನು ಸುಮ್ಮನಿರಿಸಿ, “ನಾವು ಹೋಗಿ ದೇಶವನ್ನು ವಶಪಡಿಸಿಕೊಳ್ಳಬೇಕು. ನಾವು ಸುಲಭವಾಗಿ ದೇಶವನ್ನು ವಶಪಡಿಸಿಕೊಳ್ಳಬಹುದು” ಎಂದು ಹೇಳಿದನು.
31 ಆದರೆ ಅವನೊಡನೆ ಹೋದ ಜನರು, “ನಾವು ಆ ಜನರೊಡನೆ ಹೋರಾಡಲಾರೆವು, ಅವರು ನಮಗಿಂತಲೂ ಬಲಿಷ್ಠರು” ಎಂದು ಹೇಳಿದರು. 32 “ನಾವು ಸಂಚರಿಸಿ ವಿಷಯ ಸಂಗ್ರಹಿಸಿಕೊಂಡು ಬಂದ ದೇಶವು ಅಲ್ಲಿ ವಾಸಿಸುವವರನ್ನು ನಾಶಪಡಿಸುವ ದೇಶವಾಗಿದೆ. ನಾವು ಅಲ್ಲಿ ನೋಡಿದ ಎಲ್ಲಾ ಜನರು ರಾಕ್ಷಸರಂತಿದ್ದಾರೆ. 33 ಷಸರಾದ ನೆಫೀಲಿಯರು ಅಲ್ಲಿ ವಾಸವಾಗಿರುವುದನ್ನು ನಾವು ನೋಡಿದೆವು. (ಅನಾಕ್ಯರು ನೆಫೀಲಿಯ ಜನರ ಸಂತತಿಯವರಾಗಿದ್ದಾರೆ.) ಅವರ ಮುಂದೆ ನಾವು ಮಿಡತೆಗಳೊ ಎಂದೆನಿಸಿತು. ಅವರಿಗೂ ಸಹ ನಾವು ಮಿಡತೆಗಳಂತೆ ಕಂಡುಬಂದೆವು” ಎಂದರು.