2
ಜ್ಞಾನದ ಮೌಲ್ಯ
ನನ್ನ ಮಗನೇ, ನಾನು ಹೇಳುವ ಈ ಮಾತುಗಳನ್ನು ಸ್ವೀಕಾರಮಾಡಿಕೊ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೊ. ಜ್ಞಾನಕ್ಕೆ ಕಿವಿಗೊಡು; ಅದನ್ನು ಅರ್ಥಮಾಡಿಕೊಳ್ಳಲು ನಿನ್ನಿಂದಾದಷ್ಟು ಪ್ರಯತ್ನಿಸು. ಬುದ್ಧಿಗಾಗಿ ಮೊರೆಯಿಡು! ವಿವೇಕಕ್ಕಾಗಿ ಕೂಗಿಕೊ! ಬೆಳ್ಳಿಯನ್ನು ಹುಡುಕುವಂತೆ ವಿವೇಕವನ್ನು ಹುಡುಕು. ಅಡಗಿರುವ ಭಂಡಾರದಂತೆ ಅದನ್ನು ಹುಡುಕು. ಆಗ ನೀನು ಯೆಹೋವನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವೆ; ದೈವಜ್ಞಾನವನ್ನು ಹೊಂದಿಕೊಳ್ಳುವೆ.
ಜ್ಞಾನವನ್ನು ಕೊಡುವಾತನು ಯೆಹೋವನೇ. ವಿವೇಕ ಮತ್ತು ತಿಳುವಳಿಕೆ ಆತನ ಬಾಯಿಂದ ಬರುತ್ತವೆ. ಆತನು ನೀತಿವಂತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು; ನಿರ್ದೋಷಿಗಳಿಗೆ ಗುರಾಣಿಯಂತಿರುವನು. ಆತನು ನ್ಯಾಯವಂತರನ್ನು ಕಾಪಾಡುತ್ತಾನೆ; ತನ್ನ ಪವಿತ್ರ ಜನರಿಗೆ ಕಾವಲಾಗಿರುತ್ತಾನೆ.
ಆಗ ನೀನು ಒಳ್ಳೆಯದನ್ನೂ ನ್ಯಾಯನೀತಿಗಳನ್ನೂ ಸನ್ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವೆ. 10 ಆಗ ಜ್ಞಾನವು ನಿನ್ನ ಹೃದಯದ ಒಳಗೆ ಬರುವುದು; ನಿನ್ನ ಆತ್ಮವು ತಿಳುವಳಿಕೆಯೊಡನೆ ಸಂತೋಷವಾಗಿರುವುದು.
11 ವಿವೇಕವು ನಿನ್ನನ್ನು ಕಾಪಾಡುವುದು; ಬುದ್ಧಿಯು ನಿನಗೆ ಕಾವಲಾಗಿರುವುದು; 12 ಹೀಗೆ ನೀನು ದುರ್ಮಾರ್ಗಗಳಿಂದಲೂ ಸುಳ್ಳುಗಾರರಿಂದಲೂ ತಪ್ಪಿಸಿಕೊಳ್ಳುವೆ. 13 ಅವರಾದರೊ ನೀತಿಮಾರ್ಗವನ್ನು ಬಿಟ್ಟು ಪಾಪವೆಂಬ ಕತ್ತಲೆಯಲ್ಲಿ ಜೀವಿಸುತ್ತಿದ್ದಾರೆ. 14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ. 15 ಅವರ ಮಾರ್ಗಗಳು ವಕ್ರವಾಗಿವೆ; ಅವರ ನಡತೆಗಳು ದುರ್ನಡತೆಗಳಾಗಿವೆ.
16 ವ್ಯಭಿಚಾರಿಣಿಯು ನಿನ್ನೊಡನೆ ಸವಿಮಾತುಗಳನ್ನಾಡಿ ತನ್ನೊಡನೆ ಪಾಪ ಮಾಡುವಂತೆ ನಿನ್ನನ್ನು ಒತ್ತಾಯಿಸಬಹುದು. 17 ಯೌವನಪ್ರಾಯದಲ್ಲಿ ಮದುವೆಮಾಡಿಕೊಂಡ ಅವಳು ತನ್ನ ಗಂಡನನ್ನು ಬಿಟ್ಟುಬಿಟ್ಟಿದ್ದಾಳೆ; ಮದುವೆಯಲ್ಲಿ ದೇವರ ಮುಂದೆ ಮಾಡಿದ ವಾಗ್ದಾನಗಳನ್ನು ಮೀರಿದ್ದಾಳೆ. 18 ನೀನು ಅವಳ ಮನೆಯೊಳಗೆ ಹೋದರೆ, ನಾಶನದ ಕಡೆಗೆ ಮೊದಲನೆ ಹೆಜ್ಜೆ ಹಾಕುತ್ತಿರುವೆ. ನೀವು ಅವಳನ್ನು ಹಿಂಬಾಲಿಸಿದರೆ, ಅವಳು ನಿನ್ನನ್ನು ಸಮಾಧಿಗೆ ನಡೆಸುವಳು. 19 ಅವಳು ಸಮಾಧಿಯಂತೆ ಇದ್ದಾಳೆ. ಅವಳ ಬಳಿಗೆ ಹೋಗುವವನು ಎಂದಿಗೂ ಹಿಂತಿರುಗಿ ಬರುವುದಿಲ್ಲ; ಅವನ ಜೀವನವು ಮೊದಲಿನಂತಿರುವುದಿಲ್ಲ.
20 ಆದ್ದರಿಂದ ನೀನು ಒಳ್ಳೆಯವರ ಮಾದರಿಯನ್ನು ಅನುಸರಿಸಬೇಕು. ನೀತಿವಂತರ ಮಾರ್ಗದಲ್ಲಿ ಜೀವಿಸಬೇಕು. 21 ಯಥಾರ್ಥವಂತರು ಸ್ವದೇಶದಲ್ಲಿ ವಾಸಿಸುವರು. ನಿರ್ದೋಷಿಗಳು ಸ್ವದೇಶದಲ್ಲಿ ನೆಲೆಸುವರು. 22 ದುಷ್ಟರಾದರೋ ಸ್ವದೇಶದಿಂದ ತೆಗೆದುಹಾಕಲ್ಪಡುವರು; ದ್ರೋಹಿಗಳು ನಿರ್ಮೂಲವಾಗುವರು.