26
ರಚನೆಗಾರ: ದಾವೀದ.
ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
 
ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ* ಸುತ್ತಲೂ ನಡೆಯಲು
ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
ನನಗೆ ಎಷ್ಟೋ ಪ್ರಿಯವಾಗಿದೆ.
 
ಆ ಪಾಪಿಗಳ ಗುಂಪಿನಲ್ಲಿ ನನ್ನನ್ನು ಸೇರಿಸಬೇಡ.
ಆ ಕೊಲೆಗಾರರ ಜೀವದೊಂದಿಗೆ ನನ್ನ ಜೀವವನ್ನು ತೆಗೆಯಬೇಡ.
10 ಅವರು ಜನರನ್ನು ವಂಚಿಸುವರು;
ಕೆಟ್ಟಕಾರ್ಯಗಳನ್ನು ಮಾಡಲು ಲಂಚ ತೆಗೆದುಕೊಳ್ಳುವರು.
11 ನಾನಾದರೋ ನಿರಪರಾಧಿ.
ನನಗೆ ಕರುಣೆತೋರಿ ನನ್ನನ್ನು ರಕ್ಷಿಸು.
12 ನಾನು ಎಲ್ಲಾ ಅಪಾಯಗಳಿಂದ ಪಾರಾಗಿದ್ದೇನೆ.
ಯೆಹೋವನೇ, ನಿನ್ನ ಭಕ್ತರ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು.
 
* 26:6 ಯಜ್ಞವೇದಿಕೆ ಈ ಕೀರ್ತನೆಗಾರನು ಯಾಜಕನೂ ಲೇವಿಯನೂ ಆಗಿದ್ದಿರಬೇಕೆಂದು ಇದು ಸೂಚಿಸುತ್ತದೆ. ಜನರನ್ನು ಸಭೆ ಸೇರಿಸುವುದರಲ್ಲಿ ಇವನು ಕಾರ್ಯನಿರತನಾಗಿದ್ದಿರಬಹದು. (ವಚನ 12) ಯಾಜಕರು ಮತ್ತು ಲೇವಿಯರು ಮಾತ್ರ ಸೇವೆಮಾಡಬಹುದಾದ ದೇವಾಲಯದ ಸ್ಥಳದಲ್ಲಿ ಇವನು ಸೇವೆ ಮಾಡುತ್ತಿದ್ದಿರಬಹುದು. ವಚನದ ಈ ಭಾಗವನ್ನು “ನಾನು ಯಜ್ಞವೇದಿಕೆಯ ಸುತ್ತಲೂ ಜನರನ್ನು ಸೇರಿಸಲು ಸಾಧ್ಯವಾಗುವಂತೆ” ಎಂದು ಸಹ ಅನುವಾದಿಸಬಹುದು. ಈ ರೀತಿ ಅನುವಾದ ಮಾಡಿದರೆ, ಈ ಕೀರ್ತನೆಗಾರನು ತನ್ನನ್ನು ಶುದ್ಧೀಕರಿಸಿಕೊಳ್ಳುತ್ತಿದ್ದದ್ದು ಕೇವಲ ಆರಾಧಕನಾಗಿಯೇ ಹೊರತು ಯಾಜಕನಾಗಲ್ಲ ಎಂಬ ಅರ್ಥವನ್ನು ಕೊಡುತ್ತದೆ.