37
ರಚನೆಗಾರ: ದಾವೀದ
ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ. ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
ಸಮಾಧಾನವನ್ನು ಅನುಭವಿಸುವರು.
 
12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.
23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು
ಮತ್ತು ಅವನನ್ನು ಮೆಚ್ಚಿಕೊಳ್ಳುವನು.
24 ಅವನು ಎಡವಿದರೂ ಬೀಳುವುದಿಲ್ಲ;
ಯಾಕೆಂದರೆ ಯೆಹೋವನು ಅವನ ಕೈಹಿಡಿದುಕೊಂಡಿದ್ದಾನೆ.
25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ.
ನೀತಿವಂತರನ್ನು ದೇವರು ತೊರೆದುಬಿಟ್ಟದ್ದನ್ನಾಗಲಿ ಅವನ ಮಕ್ಕಳು ಆಹಾರಕ್ಕಾಗಿ ಬೇಡುವುದನ್ನಾಗಲಿ ನಾನೆಂದೂ ಕಾಣಲಿಲ್ಲ.
26 ನೀತಿವಂತನು ಬೇರೆಯವರಿಗೆ ಉದಾರವಾಗಿ ಕೊಡುವನು.
ಅವನ ಮಕ್ಕಳು ಆಶೀರ್ವಾದ ಹೊಂದುವರು.
27 ನೀನು ಕೆಟ್ಟದ್ದನ್ನು ಮಾಡದೆ
ಒಳ್ಳೆಯದನ್ನೇ ಮಾಡಿದರೆ ಸದಾಕಾಲ ಬದುಕುವೆ.
28 ಯೆಹೋವನು ನ್ಯಾಯವನ್ನು ಪ್ರೀತಿಸುವನು.
ಆತನು ತನ್ನ ಭಕ್ತರನ್ನು ತೊರೆದುಬಿಡದೆ
ಅವರನ್ನು ಯಾವಾಗಲೂ ಕಾಪಾಡುವನು.
ದುಷ್ಟರನ್ನಾದರೋ ಆತನು ನಾಶಮಾಡುವನು.
29 ದೇವರು ವಾಗ್ದಾನ ಮಾಡಿದ ಭೂಮಿಯನ್ನು
ನೀತಿವಂತರು ಪಡೆದುಕೊಂಡು ಅಲ್ಲಿ ಸದಾಕಾಲ ವಾಸಿಸುವರು.
30 ನೀತಿವಂತನು ಒಳ್ಳೆಯ ಬುದ್ಧಿವಾದ ಹೇಳುವನು.
ಅವನ ತೀರ್ಮಾನಗಳು ನ್ಯಾಯಬದ್ಧವಾಗಿರುತ್ತವೆ.
31 ಯೆಹೋವನ ಉಪದೇಶವು ನೀತಿವಂತನ ಹೃದಯದಲ್ಲಿರುತ್ತದೆ.
ಅವನು ನೀತಿಮಾರ್ಗದಲ್ಲಿ ನಡೆಯವನು.
 
32 ಕೆಡುಕರಾದರೋ ನೀತಿವಂತರಿಗೆ
ಕೇಡುಮಾಡಲು ಹೊಂಚುಹಾಕುವರು.
33 ಆದರೆ ಯೆಹೋವನು ನೀತಿವಂತರನ್ನು ತೊರೆದುಬಿಡುವುದಿಲ್ಲ.
ನೀತಿವಂತರಿಗೆ ಅಪರಾಧಿಗಳೆಂದು ತೀರ್ಪಾಗಲು ಆತನು ಬಿಡುವುದಿಲ್ಲ.
34 ಯೆಹೋವನನ್ನೇ ನಿರೀಕ್ಷಿಸಿಕೊಂಡು ಆತನ ಮಾರ್ಗವನ್ನು ಅನುಸರಿಸಿರಿ.
ಆಗ ಆತನು ನಿಮ್ಮನ್ನು ಜಯಶಾಲಿಗಳನ್ನಾಗಿ ಮಾಡುವನು;
ದೇವರು ವಾಗ್ದಾನ ಮಾಡಿದ ಭೂಮಿಯನ್ನು ನೀವು ಪಡೆದುಕೊಳ್ಳುವಿರಿ.
 
35 ಮಹಾದುಷ್ಟನನ್ನು ನಾನು ನೋಡಿದ್ದೇನೆ.
ಅವನು ಮಹಾವೃಕ್ಷದಂತೆ ಬಲಿಷ್ಠನಾಗಿದ್ದನು.
36 ಸ್ವಲ್ಪಕಾಲದ ಮೇಲೆ ಅವನು ಇಲ್ಲವಾದನು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
37 ಪವಿತ್ರರನ್ನೂ ಯಥಾರ್ಥರನ್ನೂ ಗಮನಿಸು.
ಶಾಂತಿಪ್ರಿಯರು ಅನೇಕ ಸಂತಾನಗಳನ್ನು ಹೊಂದಿಕೊಳ್ಳುವರು.
38 ಧರ್ಮಶಾಸ್ತ್ರವನ್ನು ಉಲ್ಲಂಘಿಸುವವರು ಸಂಪೂರ್ಣವಾಗಿ ನಾಶವಾಗುವರು.
ಅವರ ಮಕ್ಕಳೂ ನಾಶವಾಗುವರು.
39 ಯೆಹೋವನು ನೀತಿವಂತರನ್ನು ಕಾಪಾಡುತ್ತಾನೆ.
ಅವರು ಆಪತ್ತಿನಲ್ಲಿರುವಾಗ ಆತನೇ ಅವರಿಗೆ ಆಶ್ರಯಸ್ಥಾನವಾಗಿದ್ದಾನೆ.
40 ಯೆಹೋವನು ನೀತಿವಂತರಿಗೆ ಸಹಾಯಕನಾಗಿ ಅವರನ್ನು ರಕ್ಷಿಸುತ್ತಾನೆ.
ನೀತಿವಂತರು ಆತನನ್ನು ಆಶ್ರಯಿಸಿಕೊಂಡಾಗ ಆತನು ಅವರನ್ನು ದುಷ್ಟರಿಂದ ತಪ್ಪಿಸಿ ಕಾಪಾಡುವನು.