58
ರಚನೆಗಾರ: ದಾವೀದ.
ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ?
ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ;
ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು.
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ.*
ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು.
ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.
 
ಯೆಹೋವನೇ, ಅವರು ಸಿಂಹಗಳಂತಿದ್ದಾರೆ.
ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
ಹರಿದು ಕಾಣದೆ ಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ.
ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ.
ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು
ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.
 
10 ದುಷ್ಟರಿಗಾಗುವ ಪ್ರತಿದಂಡನೆಯನ್ನು
ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
11 ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು;
ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.
 
* 58:4 ವಿಷದಷ್ಟೇ ಅಪಾಯಕರ ಇದು ಶಬ್ದ ಚಮತ್ಕಾರ. ಹೀಬ್ರೂ ಪದ “ಬಿಸಿಕೋಪವು,” “ಸುಡುವ ವಿಷವು” ಎಂಬಂತೆ ಉಚ್ಚರಿಸಲ್ಪಡುತ್ತದೆ.