23
ಯಾಜಕನಾದ ಯೆಹೋಯಾದ ಮತ್ತು ಅರಸನಾದ ಯೆಹೋವಾಷ
ಆರು ವರ್ಷದ ನಂತರ ಯೆಹೋಯಾದನು ತನ್ನ ಬಲವನ್ನು ಪ್ರದರ್ಶಿಸಿದನು. ಅವನು ಸೇನಾಪತಿಗಳೊಂದಿಗೆ ಒಪ್ಪಂದ ಮಾಡಿಕೊಂಡನು. ಅವರು ಯಾರೆಂದರೆ: ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ ಮತ್ತು ಜಿಕ್ರಿಯ ಮಗನಾದ ಎಲೀಷಾಫಾಟ್. ಅವರು ಯೆಹೂದ ರಾಜ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿದ್ದ ಲೇವಿಯರನ್ನು ಒಟ್ಟಾಗಿ ಸೇರಿಸಿದರು. ಅಲ್ಲದೆ ಗೋತ್ರಪ್ರಧಾನರನ್ನೂ ಒಟ್ಟಾಗಿ ಸೇರಿಸಿ, ಅವರನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. ಇವರೆಲ್ಲಾ ದೇವಾಲಯದಲ್ಲಿ ರಾಜನೊಂದಿಗೆ ಒಪ್ಪಂದವನ್ನು ಮಾಡಿಕೊಂಡರು.
ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು! ಯೆಹೋವನು ದಾವೀದನ ಸಂತತಿಯವರಿಗೆ ಮಾಡಿದ ವಾಗ್ದಾನದ ಪ್ರಕಾರ ಅರಸನಾಗತಕ್ಕವನು ಇವನೇ. ಈಗ ನೀವು ಮಾಡಬೇಕಾದದ್ದೇನೆಂದರೆ: ಸಬ್ಬತ್ ದಿವಸದಲ್ಲಿ ದೇವಾಲಯಕ್ಕೆ ಬರತಕ್ಕ ಯಾಜಕರಲ್ಲೂ ಲೇವಿಯರಲ್ಲೂ ಮೂರರಲ್ಲೊಂದು ಭಾಗವು ದೇವಾಲಯದ ದ್ವಾರಗಳನ್ನು ಕಾಯಬೇಕು. ಇನ್ನೊಂದು ಭಾಗವು ಅರಮನೆಯನ್ನು ಕಾಯಬೇಕು; ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲಿರಬೇಕು; ಯಾರನ್ನೂ ದೇವಾಲಯದೊಳಕ್ಕೆ ಬಿಡಬಾರದು. ಶುದ್ಧಮಾಡಲ್ಪಟ್ಟ ಯಾಜಕರು ಮತ್ತು ಲೇವಿಯರು ಮಾತ್ರ ದೇವರ ಸೇವೆಮಾಡುವದಕ್ಕಾಗಿ ಆಲಯದೊಳಗೆ ಬರುವರು. ಉಳಿದವರು ಯೆಹೋವನು ತಮಗೆ ಕೊಟ್ಟ ಕೆಲಸಗಳನ್ನು ಮಾಡಬೇಕು. ಲೇವಿಯರು ಅರಸನ ಸುತ್ತಲೂ ನಿಂತಿರಬೇಕು. ಪ್ರತಿಯೊಬ್ಬರು ತಮ್ಮ ಖಡ್ಗವನ್ನು ಹಿಡಿದವರಾಗಿರಬೇಕು. ಯಾರಾದರೂ ಆಲಯದೊಳಕ್ಕೆ ಪ್ರವೇಶಿಸಿದರೆ ಅವನನ್ನು ಸಾಯಿಸಿರಿ. ರಾಜನು ಹೋಗುವ ಸ್ಥಳಗಳಲ್ಲಿ ನೀವು ಅವನೊಂದಿಗೆಯೇ ಇರಬೇಕು.”
ಯಾಜಕನಾದ ಯೆಹೋಯಾದನು ಆಜ್ಞಾಪಿಸಿದಂತೆ ಲೇವಿಯರೂ ಯೆಹೂದದ ಜನರೂ ಮಾಡಿದರು. ಆದ್ದರಿಂದ ಪ್ರತಿಯೊಬ್ಬ ಸೇನಾಧಿಪತಿಯು ತನ್ನ ಕೈ ಕೆಳಗೆ ಸಬ್ಬತ್‌ದಿನದಲ್ಲಿ ಕೆಲಸಮಾಡಲು ಹೋಗುತ್ತಿದ್ದವರನ್ನು ಮತ್ತು ಸಬ್ಬತ್ ದಿನದ ಕೆಲಸ ಮುಗಿಸಿಕೊಂಡು ಬರುತ್ತಿದ್ದವರನ್ನು ಕೂಡಿಸಿಕೊಂಡನು. ಯಾಜಕನಾದ ಯೆಹೋಯಾದನು ಅವರಿಗೆ ಬರ್ಜಿಯನ್ನೂ ದೊಡ್ಡ ಮತ್ತು ಚಿಕ್ಕ ಗುರಾಣಿಗಳನ್ನೂ ಕೊಟ್ಟನು. ಅವು ರಾಜನಾದ ದಾವೀದನಿಗೆ ಸೇರಿದವುಗಳಾಗಿದ್ದವು. ಅವು ದೇವಾಲಯದೊಳಗೆ ಇಡಲ್ಪಟ್ಟಿದ್ದವು. 10 ಸೇರಿಬಂದವರು ಎಲ್ಲೆಲ್ಲಿ ನಿಲ್ಲಬೇಕೆಂದು ಯೆಹೋಯಾದನು ಸೂಚಿಸಿದನು. ಪ್ರತಿಯೊಬ್ಬರ ಕೈಯಲ್ಲಿ ಆಯುಧಗಳಿದ್ದವು. ದೇವಾಲಯದ ಎಡಬಲಗಳಲ್ಲಿ ಜನರು ನಿಂತಿದ್ದರು. ಯಜ್ಞವೇದಿಕೆಯ ಬಳಿ, ದೇವಾಲಯದ ಬಳಿ ಮತ್ತು ಅರಸನ ಬಳಿಯಲ್ಲಿ ಅವರು ನಿಂತರು. 11 ಅವರು ರಾಜಕುಮಾರನನ್ನು ಹೊರತಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟರು. ಅವನ ಕೈಗೆ ಧರ್ಮಶಾಸ್ತ್ರದ ಪ್ರತಿಯನ್ನು ಕೊಟ್ಟು ಅವನನ್ನು ತಮ್ಮ ರಾಜನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಗಂಡುಮಕ್ಕಳೂ ಯೆಹೋವಾಷನನ್ನು ಅಭಿಷೇಕಿಸಿದರು. “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು.
12 ಜನರು ದೇವಾಲಯದಲ್ಲಿ ಅತ್ತಿತ್ತಾ ಓಡಾಡುತ್ತಾ ರಾಜನನ್ನು ಕೊಂಡಾಡುತ್ತಾ ಇರುವ ಶಬ್ದವನ್ನು ಅತಲ್ಯಳು ಕೇಳಿ ದೇವಾಲಯದೊಳಕ್ಕೆ ಬಂದಳು. ಅಲ್ಲಿ ಅರಸನು ನಿಂತದ್ದನ್ನು ಕಂಡಳು. 13 ಅವನು ಮುಂಭಾಗದ ಪ್ರವೇಶ ದ್ವಾರದಲ್ಲಿದ್ದ ರಾಜಸ್ತಂಭದ ಬಳಿ ನಿಂತಿದ್ದನು. ಸೇನಾಧಿಪತಿಗಳೂ ಅವರ ಜನರೂ ತುತ್ತೂರಿಯನ್ನು ಊದಿ ರಾಜನ ಬಳಿಯಲ್ಲಿಯೇ ನಿಂತಿದ್ದರು. ದೇಶದ ಪ್ರಜೆಗಳು ಸಂತೋಷದಿಂದ ತುತ್ತೂರಿಯನ್ನೂದಿದರು. ಗಾಯಕರು ವಾದ್ಯಗಳನ್ನು ಬಾರಿಸುತ್ತಿದ್ದರು. ಅವರು ಜನರನ್ನು ಸ್ತೋತ್ರಗೀತೆಯಲ್ಲಿ ನಡಿಸುತ್ತಿದ್ದರು. ಇದೆಲ್ಲವನ್ನು ಅತಲ್ಯಳು ನೋಡಿ ತನ್ನ ಬಟ್ಟೆಯನ್ನು ಹರಿದು, “ದ್ರೋಹ, ದ್ರೋಹ” ಎಂದು ಕಿರುಚಿದಳು.
14 ಯಾಜಕನಾದ ಯೆಹೋಯಾದನು ಸೈನ್ಯಾಧಿಕಾರಿಗಳನ್ನು ಹೊರತಂದು, “ಅತಲ್ಯಳನ್ನು ಹೊರಗೆ ಎಳೆದುಕೊಂಡು ಹೋಗಿ, ಯಾರಾದರೂ ಆಕೆಯನ್ನು ಹಿಂಬಾಲಿಸಿದರೆ ಖಡ್ಗದಿಂದ ಅವರನ್ನು ಸಂಹರಿಸಿರಿ” ಎಂದು ಹೇಳಿದನು. ಆಗ ಯಾಜಕರು ಸಿಪಾಯಿಗಳಿಗೆ, “ಅತಲ್ಯಳನ್ನು ದೇವಾಲಯದೊಳಗೆ ಕೊಲ್ಲಬೇಡಿ” ಎಂದು ಎಚ್ಚರಿಸಿದರು. 15 ಅರಮನೆಗೆ ಹೋಗುವ ದಾರಿಯಲ್ಲಿ ಕುದುರೆ ಬಾಗಿಲಿನ ಹತ್ತಿರ ಸಿಪಾಯಿಗಳು ಆಕೆಯನ್ನು ಸಂಹರಿಸಿದರು.
16 ಅನಂತರ ಯೆಹೋಯಾದನು ಅರಸನೊಂದಿಗೂ ನೆರೆದು ಬಂದಿದ್ದ ಎಲ್ಲಾ ಜನರೊಂದಿಗೂ ಒಪ್ಪಂದವನ್ನು ಮಾಡಿಕೊಂಡನು. ಅವರೆಲ್ಲರೂ ಯೆಹೋವನ ಜನರಾಗಿ ಜೀವಿಸುವದಕ್ಕೆ ಒಪ್ಪಿಕೊಂಡರು. 17 ಆಗ ಜನರೆಲ್ಲರು ಬಾಳನ ಗುಡಿಯೊಳಗೆ ನುಗ್ಗಿ ಅದನ್ನು ಹಾಳು ಮಾಡಿದರು. ಅದರ ಯಜ್ಞವೇದಿಕೆಗಳನ್ನೂ ವಿಗ್ರಹಗಳನ್ನೂ ಪುಡಿಪುಡಿ ಮಾಡಿದರು. ಬಾಳನ ಅರ್ಚಕನಾದ ಮತ್ತಾನನನ್ನು ಬಾಳನ ವೇದಿಕೆಯ ಮುಂದೆಯೇ ಕೊಂದುಹಾಕಿದರು.
18 ಆ ಬಳಿಕ ಯೆಹೋಯಾದನು ದೇವಾಲಯದೊಳಗೆ ಸೇವೆಮಾಡುವ ಜವಾಬ್ದಾರಿಕೆಯನ್ನು ಕೆಲವು ಯಾಜಕರಿಗೆ ವಹಿಸಿದನು. ಅವರೆಲ್ಲಾ ಲೇವಿಯರಾಗಿದ್ದರು. ದಾವೀದನು ಅವರಿಗೆ ದೇವಾಲಯದ ಜವಾಬ್ದಾರಿಕೆಯನ್ನು ಕೊಟ್ಟಿದ್ದನು. ಮೋಶೆಯು ಕೊಟ್ಟಿದ್ದ ನಿಯಮಕ್ಕನುಸಾರವಾಗಿ ಅವರು ಸರ್ವಾಂಗಹೋಮವನ್ನು ಅರ್ಪಿಸಿದರು. ದಾವೀದನು ಆಜ್ಞಾಪಿಸಿದಂತೆ ಅವರು ಹೋಮಗಳನ್ನೂ ಯಜ್ಞಗಳನ್ನೂ ಅರ್ಪಿಸುವಾಗ ಹಾಡುತ್ತಾ ಸಂತೋಷದಿಂದ ತಮ್ಮ ಕೆಲಸವನ್ನು ಮಾಡಿದರು. 19 ಅಶುದ್ಧರಾದವರು ದೇವಾಲಯದೊಳಗೆ ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನು ನೇಮಿಸಿದನು.
20 ಯೆಹೋಯಾದನು ಸೇನಾಧಿಪತಿಗಳಿಗೂ ಅಧಿಪತಿಗಳಿಗೂ ಎಲ್ಲಾ ಜನರಿಗೂ ತನ್ನನ್ನು ಹಿಂಬಾಲಿಸುವಂತೆ ಹೇಳಿ, ಅರಸನನ್ನು ದೇವಾಲಯದೊಳಗಿಂದ ಹೊರತಂದನು. ಅವರೆಲ್ಲಾ ಮೇಲಿನ ಬಾಗಿಲಿನ ಮೂಲಕ ರಾಜನಿವಾಸಕ್ಕೆ ಹೋದರು. ಅಲ್ಲಿ ರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದರು. 21 ದೇಶದ ಎಲ್ಲಾ ಜನರು ಸಂತೋಷಭರಿತರಾದರು. ಅತಲ್ಯಳನ್ನು ಸಾಯಿಸಿದ್ದರಿಂದ ದೇಶದಲ್ಲಿ ಶಾಂತಿ ನೆಲೆಸಿತು.