30
ಹಿಜ್ಕೀಯನು ಪಸ್ಕಹಬ್ಬವನ್ನು ಆಚರಿಸಿದ್ದು
ಅರಸನಾದ ಹಿಜ್ಕೀಯನು ಯೆಹೂದದವರಿಗೂ ಇಸ್ರೇಲರಿಗೂ ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳವರಿಗೂ ಸಂದೇಶ ಕಳುಹಿಸಿ, ಯೆಹೋವನ ಆಲಯಕ್ಕೆ ಬಂದು ಇಸ್ರೇಲಿನ ಯೆಹೋವ ದೇವರಿಗೆ ಪಸ್ಕ ಹಬ್ಬವನ್ನು ಆಚರಿಸುವಂತೆ ಅವರನ್ನೆಲ್ಲಾ ಆಮಂತ್ರಿಸಿದನು. ಹಿಜ್ಕೀಯ ಅರಸನೂ ಅಧಿಕಾರಿಗಳೂ ಜೆರುಸಲೇಮಿನ ಸಭೆಯವರೆಲ್ಲರೂ ಎರಡನೆಯ ತಿಂಗಳಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದರು. ಅದಕ್ಕೆ ಕಾರಣವೇನೆಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ. ಈ ನಿರ್ಧಾರವು ಅರಸನಾದ ಹಿಜ್ಕೀಯನಿಗೂ ಜನರಿಗೂ ಸರಿಕಂಡಿತು. ಇದನ್ನು ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣದವರೆಗಿನ ಜನರಿಗೆಲ್ಲಾ ಪ್ರಕಟಿಸಿದರು. ಇಸ್ರೇಲಿನ ದೇವರಾದ ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಬರಲು ಎಲ್ಲರಿಗೂ ಆಹ್ವಾನಿಸಿದರು. ಮೋಶೆಯು ಹೇಳಿದ್ದ ನಿಯಮಕ್ಕನುಸಾರವಾಗಿ ಪಸ್ಕಹಬ್ಬವನ್ನು ಎಷ್ಟೋ ಜನರು ಅನೇಕ ವರ್ಷಗಳಿಂದ ಆಚರಿಸಿರಲಿಲ್ಲ. ಅದಕ್ಕಾಗಿ ಸಂದೇಶಕರು ರಾಜನ ಪತ್ರವನ್ನು ಇಡೀ ಇಸ್ರೇಲ್ ಮತ್ತು ಯೆಹೂದ ಪ್ರಾಂತ್ಯದ ಜನರಿಗೆ ಕೊಟ್ಟರು. ಅದರಲ್ಲಿ ಹೀಗೆ ಬರೆದಿದ್ದನು:
 
“ಇಸ್ರೇಲಿನ ಮಕ್ಕಳೇ, ಅಬ್ರಹಾಮನೂ ಇಸಾಕನೂ ಯಾಕೋಬನೂ ಆರಾಧಿಸಿದ ದೇವರಾದ ಯೆಹೋವನ ಕಡೆಗೆ ತಿರುಗಿರಿ. ಆಗ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ಆತನು ತಿರುಗಿಕೊಳ್ಳುವನು. ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದ ಕಾರಣ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಇದಕ್ಕೆ ನೀವೇ ಸಾಕ್ಷಿಗಳು. ನಿಮ್ಮ ಪೂರ್ವಿಕರ ಹಾಗೆ ಮೊಂಡರಾಗಿರಬೇಡಿ. ನೀವು ಪೂರ್ಣಮನಸ್ಸಿನಿಂದ ದೇವರಿಗೆ ವಿಧೇಯರಾಗಿರಿ. ಆತನ ಶಾಶ್ವತವಾದ ಮಹಾಪವಿತ್ರಸ್ಥಳಕ್ಕೆ ಬನ್ನಿರಿ. ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ ಮತ್ತು ಆತನ ಸೇವೆಮಾಡಿರಿ. ಆಗ ನಿಮ್ಮ ಮೇಲಿರುವ ಆತನ ಕೋಪವು ಶಮನವಾಗುವುದು. ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”
 
10 ಸಂದೇಶಕಾರರು ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯಗಳ ಪ್ರತಿಯೊಂದು ಪಟ್ಟಣಗಳಿಗೆ ಹೋದರು. ಜೆಬುಲೂನ್ ಪ್ರಾಂತ್ಯಕ್ಕೂ ಹೋದರು. ಆದರೆ ಜನರು ಸಂದೇಶಕರನ್ನು ಗೇಲಿ ಮಾಡಿದರು. 11 ಆದರೆ ಆಶೇರ್, ಮನಸ್ಸೆ ಮತ್ತು ಜೆಬುಲೂನ್ ಪ್ರಾಂತ್ಯಗಳ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಜೆರುಸಲೇಮಿಗೆ ಹೋದರು. 12 ಇದಲ್ಲದೆ, ದೇವರ ಶಕ್ತಿಯು ಯೆಹೂದದ ಜನರನ್ನು ಒಂದಾಗಿ ಮಾಡಿತು. ಆದ್ದರಿಂದ ಅವರು ಅರಸನಿಗೆ ಮತ್ತು ಅಧಿಕಾರಿಗಳಿಗೆ ವಿಧೇಯರಾದರು. ಹೀಗೆ ಜನರು ಯೆಹೋವನ ಕಟ್ಟಳೆಗಳಿಗೆ ವಿಧೇಯರಾದರು.
13 ಜೆರುಸಲೇಮಿನಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲು ಎಷ್ಟೋ ಮಂದಿ ಜೆರುಸಲೇಮಿಗೆ ಎರಡನೆಯ ತಿಂಗಳಲ್ಲಿ ಬಂದರು. ಅದು ಮಹಾ ಜನಸಮೂಹವಾಗಿತ್ತು. 14 ಆ ಜನರು ಜೆರುಸಲೇಮಿನೊಳಗಿದ್ದ ಅನ್ಯ ದೇವರುಗಳಿಗಾಗಿ ಮಾಡಿದ್ದ ಯಜ್ಞವೇದಿಕೆಗಳನ್ನು ಕೆಡವಿಹಾಕಿದರು; ವಿಗ್ರಹಗಳಿಗೆ ಧೂಪಸಮರ್ಪಣೆಗಾಗಿ ಮಾಡಿದ ವೇದಿಕೆಗಳನ್ನೂ ಹಾಳುಗೆಡವಿದರು. ಅವುಗಳನ್ನೆಲ್ಲಾ ಕಿದ್ರೋನ್ ಕಣಿವೆಯಲ್ಲಿ ಬಿಸಾಡಿದರು. 15 ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ* ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು. 16 ಮೋಶೆಯ ಕಟ್ಟಳೆಯ ಪ್ರಕಾರವಾಗಿ ಅವರು ತಮ್ಮತಮ್ಮ ಸ್ಥಾನಗಳಲ್ಲಿ ನಿಂತುಕೊಂಡು ಸೇವೆ ನಡಿಸಿದರು. ಲೇವಿಯರು ರಕ್ತವನ್ನು ಯಾಜಕರಿಗೆ ಕೊಟ್ಟರು. ಯಾಜಕರು ಆ ರಕ್ತವನ್ನು ವೇದಿಕೆಯ ಮೇಲೆ ಚಿಮಿಕಿಸಿದರು. 17 ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.
18-19 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್ ಮತ್ತು ಜೆಬುಲೂನಿನಿಂದ ಬಂದಿದ್ದ ಎಷ್ಟೋ ಮಂದಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಅವರು ಪಸ್ಕದ ಕುರಿಮರಿಯನ್ನು ಯೋಗ್ಯವಾದ ರೀತಿಯಲ್ಲಿ ತಿನ್ನಲಿಲ್ಲ. ಆದರೆ ಹಿಜ್ಕೀಯನು ಅಂಥವರಿಗೋಸ್ಕರವಾಗಿ, “ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ಇವರು ಯೋಗ್ಯವಾದ ರೀತಿಯಲ್ಲಿ ನಿನ್ನನ್ನು ಆರಾಧಿಸಲು ಬಂದಿದ್ದಾರೆ. ಆದರೆ ಧರ್ಮಶಾಸ್ತ್ರದ ಪ್ರಕಾರ ಅವರು ತಮ್ಮನ್ನು ಶುದ್ಧ ಮಾಡಿಕೊಳ್ಳಲಿಲ್ಲ. ದಯಮಾಡಿ ಅವರನ್ನು ಕ್ಷಮಿಸು. ನಮ್ಮ ಪಿತೃಗಳು ವಿಧೇಯರಾಗಿದ್ದ ದೇವರೇ, ಜನರು ಮೋಶೆಯ ನಿಯಮಕ್ಕನುಸಾರವಾಗಿ ತಮ್ಮನ್ನು ಶುದ್ಧಿ ಮಾಡಿಕೊಂಡಿಲ್ಲದಿದ್ದರೂ ನೀನು ಅವರನ್ನು ದಯವಿಟ್ಟು ಕ್ಷಮಿಸು” ಎಂದು ಪ್ರಾರ್ಥಿಸಿದನು. 20 ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. 21 ಇಸ್ರೇಲರು ಜೆರುಸಲೇಮಿನಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸಗಳ ತನಕ ಆಚರಿಸಿದರು. ಅವರೆಲ್ಲಾ ಹರ್ಷದಿಂದ ತುಂಬಿ ಹಬ್ಬವನ್ನು ಆಚರಿಸಿದರು. ಯಾಜಕರೂ ಲೇವಿಯರೂ ಪ್ರತಿದಿನ ಗಟ್ಟಿಯಾಗಿ ಸ್ತುತಿಗೀತೆಗಳನ್ನು ಹಾಡಿದರು. 22 ದೇವರ ಸೇವೆ ಮಾಡುವದನ್ನು ತಿಳಿದಿದ್ದ ಲೇವಿಯರನ್ನು ಹಿಜ್ಕೀಯನು ಪ್ರೋತ್ಸಾಹಿಸಿದನು. ಜನರು ಏಳು ದಿವಸ ಹಬ್ಬವನ್ನು ಆಚರಿಸಿ ಸಮಾಧಾನಯಜ್ಞವನ್ನು ಸಮರ್ಪಿಸಿದರು; ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿದರು.
23 ಬಂದವರೆಲ್ಲರೂ ಇನ್ನೂ ಏಳು ದಿವಸ ಅಲ್ಲಿಯೇ ಇರಲು ಒಪ್ಪಿಕೊಂಡರು. ಇನ್ನೂ ಏಳು ದಿವಸ ಪಸ್ಕಹಬ್ಬ ಆಚರಿಸಲು ಅವರು ಸಂತೋಷಪಟ್ಟರು. 24 ಯೆಹೂದದ ಅರಸನಾದ ಹಿಜ್ಕೀಯನು ಸೇರಿಬಂದ ಜನರಿಗೆ ಒಂದು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ವಧಿಸಿ ತಿನ್ನಲು ಕೊಟ್ಟನು. ಪ್ರಧಾನರು ಒಂದು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಸೇರಿಬಂದ ಜನರಿಗೆ ಕೊಟ್ಟರು. ಎಷ್ಟೋ ಮಂದಿ ಯಾಜಕರು ಪವಿತ್ರ ಸೇವೆಗೆ ತಮ್ಮನ್ನು ಶುದ್ಧಪಡಿಸಿಕೊಂಡರು. 25 ಯೆಹೂದದ ಜನರೆಲ್ಲರೂ ಲೇವಿಯರೂ ಇಸ್ರೇಲಿನಿಂದ ಬಂದ ಜನರೂ ಮತ್ತು ಇಸ್ರೇಲಿನಿಂದ ಬಂದು ಯೆಹೂದದಲ್ಲಿ ನೆಲೆಸಿದ್ದ ವಿದೇಶಿಯರೂ ಹಬ್ಬವನ್ನು ಆಚರಿಸಿ ಬಹಳವಾಗಿ ಸಂತೋಷಿಸಿದರು. 26 ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ. 27 ಯಾಜಕರು ಮತ್ತು ಲೇವಿಯರು ಎದ್ದುನಿಂತು ಜನರನ್ನು ಯೆಹೋವನು ಆಶೀರ್ವದಿಸುವಂತೆ ಕೇಳಿಕೊಂಡರು. ದೇವರು ಪರಲೋಕದ ತನ್ನ ಪವಿತ್ರ ನಿವಾಸಕ್ಕೆ ಬಂದ ಆ ಪ್ರಾರ್ಥನೆಗೆ ಕಿವಿಗೊಟ್ಟನು.
* 30:15 ನಾಚಿಕೆಯಿಂದ ದೇವರ ಕೆಲಸವನ್ನು ಅಲಕ್ಷ್ಯ ಮಾಡಿದ್ದರಿಂದ ಅವರು ನಾಚಿಕೊಂಡರು.