32
ಹಿಜ್ಕೀಯನಿಗೆ ತೊಂದರೆಕೊಟ್ಟ ಅಶ್ಶೂರನ ಅರಸನು
ಹೀಗೆ ಒಳ್ಳೆಯ ಕಾರ್ಯಗಳನ್ನು ಹಿಜ್ಕೀಯನು ಮಾಡುತ್ತಿರುವಾಗ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಮೇಲೆ ಯುದ್ಧಮಾಡಲು ಬಂದನು. ಸರಿಯಾದ ಸಮಯದಲ್ಲಿ ಪಟ್ಟಣದ ಮೇಲೆ ಧಾಳಿಮಾಡಿ ಸೋಲಿಸುವದಕ್ಕೋಸ್ಕರ ಸನ್ಹೇರೀಬನೂ ಅವನ ಸೈನಿಕರೂ ಪಟ್ಟಣಗಳ ಕೋಟೆಗಳ ಹೊರಗಡೆ ಪಾಳೆಯ ಮಾಡಿದರು. ಜೆರುಸಲೇಮಿನ ಮೇಲೆ ಧಾಳಿ ಮಾಡಲಿಕ್ಕೋಸ್ಕರ ಸನ್ಹೇರೀಬನು ಬಂದಿದ್ದಾನೆಂದು ಹಿಜ್ಕೀಯನಿಗೆ ತಿಳಿಯಿತು. ಅವನು ತನ್ನ ಅಧಿಕಾರಿಗಳನ್ನೂ ಸೇನಾಪತಿಗಳನ್ನೂ ವಿಚಾರಿಸಿದನು. ಪಟ್ಟಣದ ಹೊರಗಿರುವ ಬುಗ್ಗೆಯನ್ನು ನಿಲ್ಲಿಸಿಬಿಡಬೇಕೆಂದು ಅವರೆಲ್ಲರೂ ಆಲೋಚನೆ ಮಾಡಿದರು. ಇದನ್ನು ಮಾಡಿ ಮುಗಿಸಲು ಅಧಿಕಾರಿಗಳೂ ಸೇನಾಪತಿಗಳೂ ಸಹಾಯ ಮಾಡಿದರು. ಅನೇಕ ಜನರು ಒಟ್ಟಾಗಿ ಬಂದು ದೇಶದ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನೂ ತೊರೆಗಳನ್ನೂ ಬುಗ್ಗೆಗಳನ್ನೂ ನಿಲ್ಲಿಸಿದರು. ಅಶ್ಶೂರದ ಅರಸನು ಬಂದಾಗ ಅವನಿಗೆ ನೀರು ಸಿಗದಂತೆ ಮಾಡಿದರು. ನಂತರ ಹಿಜ್ಕೀಯನು ಜೆರುಸಲೇಮಿನ ಬಿದ್ದುಹೋಗಿದ್ದ ಕೋಟೆಗೋಡೆಗಳನ್ನು ಕಟ್ಟಿಸಿ ಭದ್ರಪಡಿಸಿದನು, ಪೌಳಿಗೋಡೆಯ ಮೇಲೆ ಬುರುಜು ಕಟ್ಟಿಸಿದನು. ಅಲ್ಲದೆ ಪೌಳಿಗೋಡೆಯ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿದನು. ಜೆರುಸಲೇಮಿನ ಹಳೇ ಭಾಗದ ಪೂರ್ವದ ಗೋಡೆಯನ್ನು ಭದ್ರಪಡಿಸಿದನು. ಅವನು ಅನೇಕ ಆಯುಧಗಳನ್ನು ಮತ್ತು ಗುರಾಣಿಗಳನ್ನು ಮಾಡಿಸಿದನು. 6-7 ಹಿಜ್ಕೀಯನು ಸೈನಿಕರಿಗೆಲ್ಲಾ ದಳಪತಿಗಳನ್ನು ನೇಮಿಸಿದನು. ಜೆರುಸಲೇಮಿನ ನಗರದ ಹೆಬ್ಬಾಗಿಲ ಬಳಿಯಲ್ಲಿದ್ದ ಮೈದಾನದಲ್ಲಿ ಹಿಜ್ಕೀಯನು ಸೇನಾಪತಿಗಳೊಂದಿಗೆ ಸಮಾಲೋಚನೆ ನಡಿಸಿದನು; ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದನು. “ಧೈರ್ಯಶಾಲಿಗಳಾಗಿರಿ, ಬಲಗೊಳ್ಳಿರಿ, ಅಶ್ಶೂರದ ಅರಸನಿಗಾಗಲಿ ಅರಸನೊಂದಿಗಿರುವ ಆ ದೊಡ್ಡ ಸೈನ್ಯಕ್ಕಾಗಲಿ ಭಯಪಡಬೇಡಿರಿ. ಅವನಿಗಿಂತಲೂ ಹೆಚ್ಚಾದ ಸಾಮರ್ಥ್ಯ ನಮಗಿದೆ. ಅಶ್ಶೂರದ ರಾಜನ ಬಳಿಯಲ್ಲಿ ಮನುಷ್ಯರು ಮಾತ್ರ ಇರುವರು. ಆದರೆ ನಮ್ಮೊಂದಿಗೆ ದೇವರಾದ ಯೆಹೋವನಿದ್ದಾನೆ. ನಮ್ಮ ದೇವರು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಯುದ್ಧದಲ್ಲಿ ಆತನು ನಮಗೋಸ್ಕರ ಕಾದಾಡುವನು” ಎಂದು ಹೇಳಿ ಹಿಜ್ಕೀಯ ಅರಸನು ತನ್ನ ಜನರನ್ನು ಪ್ರೋತ್ಸಾಹಿಸಿ ಬಲಗೊಳಿಸಿದನು.
ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸಮಸ್ತ ಸೈನ್ಯದೊಡನೆ ಲಾಕೀಷ್ ಪಟ್ಟಣದ ಸಮೀಪದಲ್ಲಿ ಪಾಳೆಯ ಮಾಡಿಕೊಂಡಿದ್ದನು. ಅಲ್ಲಿ ತನ್ನ ಸೇವಕರನ್ನು ಯೆಹೂದದ ಅರಸನಾದ ಹಿಜ್ಕೀಯನ ಬಳಿಗೂ ಮತ್ತು ಜೆರುಸಲೇಮಿನಲ್ಲಿದ್ದ ಎಲ್ಲಾ ಯೆಹೂದದ ಜನರ ಬಳಿಗೂ ಸಂದೇಶದೊಡನೆ ಕಳುಹಿಸಿದನು.
 
10 ಅವರು ಹೇಳಿದ್ದೇನೆಂದರೆ, “ಅಶ್ಶೂರದ ಅರಸನಾದ ಸನ್ಹೇರೀಬನು ಹೇಳುವುದೇನೆಂದರೆ, ‘ಮುತ್ತಿಗೆ ಹಾಕಲ್ಪಟ್ಟ ಜೆರುಸಲೇಮಿನಲ್ಲಿ ನಿಮ್ಮನ್ನು ಇರುವಂತೆ ಮಾಡಿರುವ ಯಾವುದರ ಮೇಲೆ ನೀವು ಭರವಸವನ್ನಿಟ್ಟದ್ದೀರಿ? 11 ಹಿಜ್ಕೀಯನು ನಿಮ್ಮನ್ನು ಮೋಸಪಡಿಸುತ್ತಿದ್ದಾನೆ. ನೀವು ಜೆರುಸಲೇಮಿನಲ್ಲಿಯೇ ಇರುವಂತೆ ಹೇಳಿ ನಿಮಗೆ ಮೋಸಮಾಡುತ್ತಿದ್ದಾನೆ. ಹಾಗೆ ಮಾಡಿದರೆ ನೀವು ಅನ್ನನೀರಿಲ್ಲದೆ ಸಾಯುವಿರಿ. ನಿಮಗೆ ಹಿಜ್ಕೀಯನು, “ನಮ್ಮ ದೇವರಾದ ಯೆಹೋವನು ಅಶ್ಶೂರದ ರಾಜನಿಂದ ಕಾಪಾಡುವನು” ಎಂದು ಹೇಳುತ್ತಾನಲ್ಲಾ? 12 ಹಿಜ್ಕೀಯನು ತಾನೇ ಪೂಜಾಸ್ಥಳಗಳನ್ನೂ ವೇದಿಕೆಗಳನ್ನೂ ತೆಗೆದುಹಾಕಿದ್ದಾನೆ. ಒಂದೇ ಒಂದು ಧೂಪವೇದಿಕೆಯಲ್ಲಿ ಧೂಪಹಾಕಿ ಆರಾಧಿಸಬೇಕೆಂದು ಅವನು ಯೆಹೂದ ಮತ್ತು ಜೆರುಸಲೇಮಿನ ಜನರಾದ ನಿಮಗೆ ಹೇಳುತ್ತಿದ್ದಾನೆ. 13 ನಮ್ಮ ಪೂರ್ವಿಕರೂ ನಾನೂ ಬೇರೆ ದೇಶಗಳಿಗೆಲ್ಲಾ ಏನು ಮಾಡಿದ್ದೇವೆಂದು ನಿಮಗೆ ತಿಳಿದದೆ. ಆ ದೇಶದ ದೇವರುಗಳು ಅವರನ್ನು ಕಾಪಾಡಲಿಲ್ಲ. ಆ ದೇವರುಗಳು ಅವರನ್ನು ನಾಶಮಾಡದಂತೆ ನನ್ನನ್ನು ತಡೆಯಲಿಲ್ಲ. 14 ನನ್ನ ಪೂರ್ವಿಕರು ಆ ದೇಶಗಳನ್ನು ನಾಶಮಾಡಿದರು. ಯಾವ ದೇವರೂ ತನ್ನ ಜನರನ್ನು ನಾನು ನಾಶಮಾಡದಂತೆ ನನ್ನನ್ನು ತಡೆಯಲು ಸಾಧ್ಯವಿಲ್ಲ. ನಿಮ್ಮ ದೇವರು ನನ್ನಿಂದ ನಿಮ್ಮನ್ನು ಕಾಪಾಡುವನು ಎಂದು ನೀವು ನೆನಸುತ್ತೀರೋ? 15 ಹಿಜ್ಕೀಯನು ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ, ಅವನನ್ನು ನಂಬಬೇಡಿರಿ. ಯಾವ ದೇಶದ ದೇವರಿಗಾಗಲಿ ಅವನ ಜನರಿಗಾಗಲಿ ನನ್ನನ್ನು ನನ್ನ ಪೂರ್ವಿಕರನ್ನು ತಡೆಯಲು ಸಾಧ್ಯವಾಗಲಿಲ್ಲ. ನಿಮ್ಮ ದೇವರೂ ನನ್ನನ್ನು ತಡೆಯಲು ಸಾಧ್ಯವಿಲ್ಲ.’ ”
 
16 ಅಶ್ಶೂರದ ಅರಸನ ಸೇವಕರು ದೇವರಾದ ಯೆಹೋವನ ವಿರುದ್ಧವಾಗಿಯೂ ದೇವರ ಸೇವಕನಾದ ಹಿಜ್ಕೀಯನ ವಿರುದ್ಧವಾಗಿಯೂ ಕೀಳಾಗಿ ಮಾತಾಡಿದರು; ಇಸ್ರೇಲಿನ ದೇವರಾದ ಯೆಹೋವನನ್ನು ಹಾಸ್ಯ ಮಾಡಿದರು. 17 ಅಶ್ಶೂರದ ಅರಸನು ಇಸ್ರೇಲಿನ ದೇವರಾದ ಯೆಹೋವನನ್ನು ಅವಮಾನ ಮಾಡಿ ಬರೆದ ಪತ್ರ ಹೀಗಿತ್ತು: “ಇತರ ದೇಶಗಳ ದೇವರುಗಳು ತಮ್ಮ ಜನರನ್ನು ನಾಶಮಾಡದಂತೆ ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ ಹಿಜ್ಕೀಯನ ದೇವರು ತನ್ನ ಜನರನ್ನು ನಾಶಮಾಡದ ಹಾಗೆ ನನ್ನನ್ನು ತಡೆಯಲು ಸಾಧ್ಯವಿಲ್ಲ.” 18 ಜೆರುಸಲೇಮಿನ ಪೌಳಿಗೋಡೆಯ ಮೇಲಿದ್ದ ಯೆಹೂದದ ಜನರನ್ನುದ್ದೇಶಿಸಿ ಜೆರುಸಲೇಮಿನ ಜನರು ಭಯಪಡಲೆಂದು ಸನ್ಹೇರೀಬನ ಸೇವಕರು ಗಟ್ಟಿಯಾಗಿ ಇಬ್ರಿಯ ಭಾಷೆಯಲ್ಲಿ ಮಾತನಾಡಿದರು. ಜೆರುಸಲೇಮನ್ನು ವಶಪಡಿಸಿಕೊಳ್ಳಲು ಅವರು ಹೀಗೆ ಮಾಡಿದರು. 19 ಲೋಕದ ಜನರು ಆರಾಧಿಸಿದ ಮತ್ತು ಕೈಯಾರೆ ಮಾಡಿದ್ದ ದೇವರುಗಳನ್ನು ಜೆರುಸಲೇಮಿನ ದೇವರೊಂದಿಗೆ ಹೋಲಿಸಿ ಆತನ ವಿರುದ್ಧವಾಗಿ ಮಾತಾಡಿದರು.
20 ಅರಸನಾದ ಹಿಜ್ಕೀಯನೂ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯೂ ತಮಗೆ ಬಂದೊದಗಿದ ಸಮಸ್ಯೆಗಾಗಿ ಪರಲೋಕದ ಕಡೆಗೆ ನೋಡಿ ಗಟ್ಟಿಯಾಗಿ ಪ್ರಾರ್ಥಿಸಿದರು. 21 ಆಗ ಯೆಹೋವನು ಅಶ್ಶೂರದ ಅರಸನ ಪಾಳೆಯಕ್ಕೆ ದೇವದೂತನನ್ನು ಕಳುಹಿಸಿದನು. ಆ ದೂತನು ಅಶ್ಶೂರದ ಎಲ್ಲಾ ಸೈನ್ಯದವರನ್ನೂ ಅವರ ಅಧಿಕಾರಿಗಳನ್ನೂ ಸಂಹರಿಸಿದನು. ಆಗ ಅಶ್ಶೂರದ ಅರಸನು ತನ್ನ ಸ್ವಂತ ದೇಶಕ್ಕೆ ಹಿಂತಿರುಗಿದನು. ಅವನ ಜನರು ಅವನ ವಿಷಯದಲ್ಲಿ ನಾಚಿಕೆಪಟ್ಟರು. ಅವನು ತನ್ನ ದೇವರಮಂದಿರದೊಳಕ್ಕೆ ಹೋದಾಗ ಅವನ ಸ್ವಂತ ಮಕ್ಕಳಲ್ಲಿ ಕೆಲವರು ಅವನನ್ನು ಖಡ್ಗದಿಂದ ಸಂಹರಿಸಿದರು. 22 ಈ ರೀತಿಯಾಗಿ ದೇವರಾದ ಯೆಹೋವನು ಜೆರುಸಲೇಮಿನ ಜನರನ್ನು ಅಶ್ಶೂರದ ಅರಸನಾದ ಸನ್ಹೇರೀಬನಿಂದಲೂ ಮತ್ತು ಇತರ ಎಲ್ಲಾ ಜನರಿಂದಲೂ ಪಾರುಮಾಡಿದನು; ಹಿಜ್ಕೀಯನನ್ನು ಮತ್ತು ಜೆರುಸಲೇಮಿನ ಜನರನ್ನೂ ಪರಿಪಾಲನೆ ಮಾಡಿದನು. 23 ಎಷ್ಟೋ ಜನರು ಜೆರುಸಲೇಮಿನಲ್ಲಿನ ದೇವರಾದ ಯೆಹೋವನಿಗೆ ಕಾಣಿಕೆಗಳನ್ನು ತಂದರು. ಹಾಗೆಯೇ ಅರಸನಾದ ಹಿಜ್ಕೀಯನಿಗೂ ಬೆಲೆಬಾಳುವ ವಸ್ತುಗಳನ್ನು ತಂದರು. ಅಂದಿನಿಂದ ಬೇರೆ ದೇಶದವರು ಹಿಜ್ಕೀಯನನ್ನು ಗೌರವಿಸಿದರು.
24 ಆ ಸಮಯದಲ್ಲಿ ಹಿಜ್ಕೀಯನು ಮರಣಕರವಾದ ರೋಗದಿಂದ ನರಳುತ್ತಾ ಇದ್ದದರಿಂದ ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಹಿಜ್ಕೀಯನೊಂದಿಗೆ ಮಾತನಾಡಿ ಅವನಿಗೊಂದು ಗುರುತನ್ನು ಕೊಟ್ಟನು. 25 ಆದರೆ ಹಿಜ್ಕೀಯನ ಹೃದಯವು ಗರ್ವದಿಂದ ತುಂಬಿತ್ತು. ಅವನು ದೇವರ ಕರುಣೆಗಾಗಿ ಉಪಕಾರಸ್ತುತಿ ಹೇಳಲಿಲ್ಲ. ಇದರಿಂದಾಗಿ ಆತನು ಹಿಜ್ಕೀಯನ ಮೇಲೂ ಯೆಹೂದ ಮತ್ತು ಜೆರುಸಲೇಮಿನ ಜನರ ಮೇಲೂ ಕೋಪಗೊಂಡನು. 26 ಆಗ ಹಿಜ್ಕೀಯನೂ ಜೆರುಸಲೇಮಿನ ನಿವಾಸಿಗಳೂ ತಮ್ಮ ಹೃದಯವನ್ನು ಪರಿವರ್ತಿಸಿಕೊಂಡರು; ತಮ್ಮನ್ನು ಬಹಳವಾಗಿ ತಗ್ಗಿಸಿಕೊಂಡು ಗರ್ವಪಡುವದನ್ನು ನಿಲ್ಲಿಸಿದರು. ಆದ್ದರಿಂದ ಹಿಜ್ಕೀಯನು ಇದ್ದಷ್ಟು ಕಾಲ ಯೆಹೋವನ ಕೋಪ ಅವರ ಮೇಲೆ ಬರಲಿಲ್ಲ.
27 ಹಿಜ್ಕೀಯನಿಗೆ ಬೇಕಾದಷ್ಟು ಧನೈಶ್ವರ್ಯಗಳಿದ್ದವು. ಅವನು ಬೆಳ್ಳಿಬಂಗಾರಗಳನ್ನೂ ಸುಗಂಧವಸ್ತುಗಳನ್ನೂ ಗುರಾಣಿಗಳನ್ನೂ ಬೆಲೆಬಾಳುವ ಆಭರಣಗಳನ್ನೂ ಇಡಲು ಸ್ಥಳವನ್ನು ಏರ್ಪಡಿಸಿದನು. 28 ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವಗಳನ್ನೆಲ್ಲಾ ಸಂಗ್ರಹಿಸಲು ಉಗ್ರಾಣಗಳನ್ನು ನಿರ್ಮಿಸಿದನು. ಪಶುಗಳಿಗೂ ಮಂದೆಗಳಿಗೂ ಹಟ್ಟಿಗಳನ್ನು ಕಟ್ಟಿಸಿದನು. 29 ಅವನು ನಗರಗಳನ್ನು ಕಟ್ಟಿಸಿದನು. ಅವನಿಗೆ ದನಕುರಿಗಳ ದೊಡ್ಡ ಹಿಂಡುಗಳಿದ್ದವು; ದೇವರು ಅವನಿಗೆ ಅಪರಿಮಿತವಾದ ಐಶ್ವರ್ಯವನ್ನು ಕೊಟ್ಟನು. 30 ಹಿಜ್ಕೀಯನು ಗೀಹೋನ್ ಬುಗ್ಗೆಯನ್ನು ತಡೆದು ಆ ನೀರು ಪಶ್ಚಿಮದ ಕಡೆಯಲ್ಲಿದ್ದ ದಾವೀದ ನಗರಕ್ಕೆ ನೇರವಾಗಿ ಇಳಿದು ಬರುವಂತೆ ಮಾಡಿದನು. ಅವನು ಕೈಹಾಕಿದ ಕಾರ್ಯಗಳೆಲ್ಲವೂ ಸಫಲವಾದವು.
31 ಒಂದು ಸಾರಿ ಬಾಬಿಲೋನಿನವರು ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿದರು. ಅವರು ದೇಶದಲ್ಲಿ ಆದ ಅದ್ಭುತ ವಿಷಯದ ಬಗ್ಗೆ ವಿಚಾರಿಸಿದರು. ಅವರು ಹಿಜ್ಕೀಯನ ಬಳಿಗೆ ಬಂದಾಗ ದೇವರು ಅವನನ್ನು ಪರೀಕ್ಷಿಸುವುದಕ್ಕಾಗಿಯೂ ಅವನ ಹೃದಯದಲ್ಲಿದ್ದ ಪ್ರತಿಯೊಂದು ಆಲೋಚನೆಯನ್ನು ತಿಳಿದುಕೊಳ್ಳುವುದಕ್ಕಾಗಿಯೂ ಅವನನ್ನು ತೊರೆದುಬಿಟ್ಟನು.
32 ಹಿಜ್ಕೀಯನು ಮಾಡಿದ ಇತರ ಕಾರ್ಯಗಳೂ ಅವನ ಭಕ್ತಿಕಾರ್ಯಗಳೂ ಆಮೋಚನ ಮಗನಾದ ಯೆಶಾಯನ ದರ್ಶನ ಗ್ರಂಥದಲ್ಲಿ ಬರೆದಿವೆ; ಯೆಹೂದ ಮತ್ತು ಇಸ್ರೇಲ್ ರಾಜರ ಚರಿತ್ರೆ ಪುಸ್ತಕದಲ್ಲೂ ಬರೆದಿರುತ್ತವೆ. 33 ಹಿಜ್ಕೀಯನು ಸತ್ತು ತನ್ನ ಪೂರ್ವಿಕರ ಬಳಿಗೆ ಸೇರಿದಾಗ ಅವನ ಶವವನ್ನು ದಾವೀದ ವಂಶದವರ ಕುಟುಂಬ ಸ್ಮಶಾನ ಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನು ಸತ್ತಾಗ ಎಲ್ಲಾ ಯೆಹೂದದ ಜನರೂ ಜೆರುಸಲೇಮಿನ ಜನರೂ ಅವನಿಗೆ ಹೆಚ್ಚಾದ ಗೌರವವನ್ನು ಕೊಟ್ಟರು. ಹಿಜ್ಕೀಯನ ಬದಲು ಅವನ ಮಗನಾದ ಮನಸ್ಸೆಯು ಅರಸನಾದನು.