19
ಪರಲೋಕದಲ್ಲಿ ದೇವರಿಗೆ ಸ್ತೋತ್ರ
ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
 
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
 
ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
 
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
 
ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
 
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
 
ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
 
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
 
ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
 
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
 
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.
10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.
ಬಿಳಿ ಕುದುರೆಯ ಮೇಲಿನ ಸವಾರನು
11 ನಂತರ ಪರಲೋಕವು ತೆರೆದಿರುವುದನ್ನು ನಾನು ನೋಡಿದೆನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನ ಹೆಸರು ನಂಬಿಗಸ್ತ ಮತ್ತು ಸತ್ಯವಂತ. ಆತನು ತನ್ನ ತೀರ್ಪುಗಳಲ್ಲಿಯೂ ಯುದ್ಧಗಳಲ್ಲಿಯೂ ನ್ಯಾಯವಂತನಾಗಿದ್ದನು. 12 ಆತನ ಕಣ್ಣುಗಳು ಉರಿಯುವ ಕೆಂಡಗಳಂತಿದ್ದವು. ಆತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಮೇಲೆ ಒಂದು ಹೆಸರನ್ನು ಬರೆಯಲಾಗಿತ್ತು, ಆದರೆ ಆ ಹೆಸರಿನ ಅರ್ಥ ಆತನೊಬ್ಬನಿಗೆ ಮಾತ್ರ ತಿಳಿದಿತ್ತೇ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. 13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ. 14 ಪರಲೋಕದ ಸೈನ್ಯಗಳು ಬಿಳಿ ಕುದುರೆಗಳ ಮೇಲೆ ಆತನನ್ನು ಹಿಂಬಾಲಿಸುತ್ತಿದ್ದವು. ಅವರು ಬಿಳುಪಾಗಿಯೂ ಶುಭ್ರವಾಗಿಯೂ ಇದ್ದ ನಯವಾದ ನಾರಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ. 16 ಆತನ ನಿಲುವಂಗಿಯ ಮೇಲೆಯೂ ಆತನ ಕಾಲಿನ ಮೇಲೆಯೂ,
 
“ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು”
 
ಎಂಬ ಹೆಸರನ್ನು ಬರೆಯಲಾಗಿತ್ತು.
17 ನಂತರ ಒಬ್ಬ ದೇವದೂತನು ಸೂರ್ಯನ ಮೇಲೆ ನಿಂತಿರುವುದನ್ನು ನಾನು ನೋಡಿದೆನು. ಆ ದೇವದೂತನು ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿ ಬನ್ನಿರಿ. 18 ನೀವು ರಾಜರುಗಳ ಮತ್ತು ಸಹಸ್ರಾಧಿಪತಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬನ್ನಿರಿ. ಕುದುರೆಗಳ, ಕುದುರೆ ಸವಾರರ, ಸ್ವತಂತ್ರರಾದವರ, ಗುಲಾಮರ, ಚಿಕ್ಕವರ ಮತ್ತು ದೊಡ್ಡವರ ದೇಹಗಳನ್ನು ತಿನ್ನಲು ಬನ್ನಿರಿ.”
19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು. 20 ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸೈನ್ಯಗಳನ್ನು ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಹೊರಬಂದ ಕತ್ತಿಯಿಂದ ಕೊಲ್ಲಲಾಯಿತು. ಈ ದೇಹಗಳನ್ನು ಪಕ್ಷಿಗಳೆಲ್ಲ ಹೊಟ್ಟೆ ತುಂಬುವವರೆಗೆ ತಿಂದವು.