2
ಹನ್ನಳ ಸ್ತೋತ್ರ
ಹನ್ನಳು ಇಂತೆಂದಳು:
 
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.*
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದ ಜನರು
ಅನ್ನಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರಕ್ಕಾಗಿ ಹಸಿದಿದ್ದವರು
ಇಂದು ತಿಂದು ಕೊಬ್ಬಿರುವರು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
 
11 ಎಲ್ಕಾನ ಮತ್ತು ಅವನ ಕುಟುಂಬದವರು ರಾಮಾತದಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದರು. ಬಾಲಕನು ಶೀಲೋವಿನಲ್ಲಿಯೇ ಉಳಿದುಕೊಂಡನು ಮತ್ತು ಯಾಜಕನಾದ ಏಲಿಯ ಮಾರ್ಗದರ್ಶನದಲ್ಲಿ ಯೆಹೋವನ ಸೇವೆಮಾಡಿದನು.
ಏಲಿಯ ದುಷ್ಟ ಮಕ್ಕಳು
12 ಏಲಿಯ ಮಕ್ಕಳು ದುಷ್ಟರಾಗಿದ್ದರು. ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಾಜಕರು ಜನರೊಡನೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಅವರು ಲಕ್ಷಿಸುತ್ತಿರಲಿಲ್ಲ. ಯಾಜಕರು ಜನರಿಗಾಗಿ ಮಾಡಬೇಕಾದ ಕಾರ್ಯವೆಂದರೆ: ಒಬ್ಬ ವ್ಯಕ್ತಿಯು ಪ್ರತಿಸಲ ಯಜ್ಞವನ್ನರ್ಪಿಸಲು ಬಂದಾಗ ಯಾಜಕರು ಯಜ್ಞಮಾಂಸವನ್ನು ಒಂದು ಮಡಕೆಯಲ್ಲಿ ಬೇಯಿಸಬೇಕು. ಯಾಜಕರ ಸೇವಕನು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರಬೇಕು. 14 ಯಾಜಕರ ಸೇವಕನು ತ್ರಿಶೂಲವನ್ನು ಕೊಪ್ಪರಿಗೆಯಲ್ಲಾಗಲಿ ತಪ್ಪಲೆಯಲ್ಲಾಗಲಿ ಗಡಿಗೆಯಲ್ಲಾಗಲಿ ಭಾಂಡದಲ್ಲಾಗಲಿ ಚುಚ್ಚಿ ಹೊರ ತೆಗೆದಾಗ, ಅದರೊಂದಿಗೆ ಬರುವ ಮಾಂಸವನ್ನು ಮಾತ್ರ ಯಾಜಕನು ಸ್ವೀಕರಿಸಬೇಕು. ಶೀಲೋವಿಗೆ ಯಜ್ಞವನ್ನರ್ಪಿಸಲು ಬರುವ ಎಲ್ಲ ಇಸ್ರೇಲರೊಂದಿಗೆ ಇದೇ ರೀತಿ ಮಾಡಬೇಕಿತ್ತು. 15 ಆದರೆ ಏಲಿಯ ಮಕ್ಕಳು ಈ ರೀತಿ ಮಾಡುತ್ತಿರಲಿಲ್ಲ. ಯಜ್ಞವೇದಿಕೆಯ ಮೇಲೆ ಕೊಬ್ಬನ್ನು ಹೋಮ ಮಾಡುವುದಕ್ಕಿಂತ ಮೊದಲೇ ಅವರ ಸೇವಕರು ಯಜ್ಞಗಳನ್ನು ಅರ್ಪಿಸುವ ಜನರ ಬಳಿಗೆ ಹೋಗುತ್ತಿದ್ದರು. ಯಾಜಕನ ಸೇವಕನು, “ಯಾಜಕನಿಗೆ ಕರಿದು ಕೊಡಲು ಸ್ವಲ್ಪ ಮಾಂಸವನ್ನು ಕೊಡಿ. ಬೇಯಿಸಿದ ಮಾಂಸವನ್ನು ಯಾಜಕನು ನಿಮ್ಮಿಂದ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಿದ್ದನು.
16 ಯಜ್ಞವನ್ನರ್ಪಿಸುವವನು, “ಕೊಬ್ಬನ್ನು ಮೊದಲು ಹೋಮ ಮಾಡೋಣ. ಅನಂತರ ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ” ಎಂದು ಹೇಳಿದರೆ, ಯಾಜಕರ ಸೇವಕನು, “ಇಲ್ಲ, ಯಾಜಕನಿಗಾಗಿ ಕರಿಯಲು ಮಾಂಸವನ್ನು ಈಗಲೇ ಕೊಡು. ನೀನು ಕೊಡುವುದಿಲ್ಲವಾದರೆ, ನಾನೇ ತೆಗೆದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದನು.
17 ಯೆಹೋವನಿಗೆ ಅರ್ಪಿಸುವ ಯಜ್ಞವನ್ನು ಹೊಫ್ನಿ ಮತ್ತು ಫೀನೆಹಾಸರು ತುಚ್ಛೀಕರಿಸುತ್ತಿದ್ದರು. ಇದು ಯೆಹೋವನಿಗೆ ವಿರೋಧವಾದ ಮಹಾ ಪಾಪವಾಗಿತ್ತು.
18 ಆದರೆ ಬಾಲಕನಾದ ಸಮುವೇಲನು ಏಫೋದ್ ಎಂಬ ನಾರುಬಟ್ಟೆಯನ್ನು ಧರಿಸಿ ಯೆಹೋವನ ಸೇವೆ ಮಾಡುತ್ತಿದ್ದನು. 19 ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.
20 ಏಲಿಯು ಎಲ್ಕಾನನನ್ನು ಮತ್ತು ಅವನ ಹೆಂಡತಿಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳು ಯೆಹೋವನನ್ನು ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲಿ” ಎಂದು ಹೇಳಿದನು.
ಆಮೇಲೆ ಎಲ್ಕಾನ ಮತ್ತು ಹನ್ನ ಮನೆಗೆ ಹೋದರು. 21 ಯೆಹೋವನು ಹನ್ನಳಿಗೆ ದಯೆತೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಆದರು. ಬಾಲಕನಾದ ಸಮುವೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.
ಏಲಿಯು ತನ್ನ ದುಷ್ಟಮಕ್ಕಳನ್ನು ಹತೋಟಿಯಲ್ಲಿಡಲಿಲ್ಲ
22 ಏಲಿಯು ಬಹಳ ವೃದ್ಧನಾದನು. ತನ್ನ ಗಂಡುಮಕ್ಕಳು ಶೀಲೋವಿನಲ್ಲಿ ಇಸ್ರೇಲರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಮತ್ತು ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿರುವ ಸ್ತ್ರೀಯರೊಡನೆ ಕೂಡುತ್ತಿರುವುದನ್ನು ಅವನು ಕೇಳುತ್ತಿದ್ದನು.
23 ಏಲಿಯು ತನ್ನ ಗಂಡುಮಕ್ಕಳಿಗೆ, “ಇಲ್ಲಿಯ ಜನರು ನೀವು ಮಾಡುವ ದುಷ್ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. ನೀವು ಇಂತಹ ದುಷ್ಕೃತ್ಯಗಳನ್ನು ಏಕೆ ಮಾಡುತ್ತೀರಿ? 24 ಮಕ್ಕಳೇ, ಇಂತಹ ದುಷ್ಕೃತ್ಯಗಳನ್ನು ಮಾಡಬೇಡಿ. ಯೆಹೋವನ ಜನರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಮಾತಾಡುತ್ತಿದ್ದಾರೆ. 25 ಒಬ್ಬ ಮನುಷ್ಯನು ಬೇರೊಬ್ಬನ ವಿರುದ್ಧ ಅಪರಾಧ ಮಾಡಿದರೆ, ಯೆಹೋವನು ಅವನಿಗೆ ಸಹಾಯ ಮಾಡಬಹುದು, ಆದರೆ ಒಬ್ಬ ಮನುಷ್ಯನು ಯೆಹೋವನ ವಿರುದ್ಧವೇ ಅಪರಾಧ ಮಾಡಿದರೆ, ಆಗ ಅವನಿಗೆ ಸಹಾಯ ಮಾಡುವವರು ಯಾರು?” ಎಂದು ಬುದ್ಧಿಮಾತು ಹೇಳಿದನು.
ಆದರೆ ಏಲಿಯ ಮಾತನ್ನು ಅವನ ಮಕ್ಕಳು ಕೇಳಲಿಲ್ಲ. ಆದ್ದರಿಂದ ಯೆಹೋವನು ಏಲಿಯ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದನು.
26 ಬಾಲಕನಾದ ಸಮುವೇಲನು ದೊಡ್ಡವನಾಗುತ್ತಲೇ ಇದ್ದನು. ಅವನು ದೇವರಿಗೆ ಮತ್ತು ಜನರಿಗೆ ಪ್ರಿಯನಾದನು.
ಏಲಿಯ ಕುಟುಂಬದ ಬಗ್ಗೆ ಭೀಕರ ಪ್ರವಾದನೆ
27 ದೇವಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು, “ಯೆಹೋವನು ಈ ಸಂಗತಿಗಳನ್ನು ತಿಳಿಸಿದನು: ‘ನಿನ್ನ ಪೂರ್ವಿಕರು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದರು. ಆಗ ನಾನು ನಿನ್ನ ಪೂರ್ವಿಕರಿಗೆ ದರ್ಶನ ನೀಡಿದೆ. 28 ಇಸ್ರೇಲಿನ ಎಲ್ಲಾ ಕುಲಗಳಲ್ಲಿ ನಿನ್ನ ಕುಟುಂಬದವರನ್ನು ನನ್ನ ಯಾಜಕರನ್ನಾಗಿ ಆರಿಸಿಕೊಂಡೆನು. ಏಫೋದನ್ನು ಧರಿಸಿಕೊಳ್ಳುವುದಕ್ಕೂ ಯಜ್ಞವನ್ನು ಅರ್ಪಿಸುವುದಕ್ಕೂ ಧೂಪಹಾಕುವುದಕ್ಕೂ ನಾನು ಅವರನ್ನು ಆರಿಸಿಕೊಂಡೆನು. ಇಸ್ರೇಲರು ನನಗೆ ಅರ್ಪಿಸುವ ಯಜ್ಞಗಳಲ್ಲಿ ಮಾಂಸವನ್ನು ಪಡೆಯುವ ಅವಕಾಶವನ್ನೂ ನಾನು ನಿಮ್ಮ ಕುಲದವರಿಗೆ ನೀಡಿದೆನು. 29 ಹೀಗಿರುವಾಗ ಆ ಯಜ್ಞಗಳನ್ನು ಮತ್ತು ಕಾಣಿಕೆಗಳನ್ನು ನೀವು ಗೌರವಿಸದಿರುವುದೇಕೇ? ನಿನ್ನ ಮಕ್ಕಳನ್ನು ನನಗಿಂತ ಹೆಚ್ಚು ಗೌರವಿಸುತ್ತಿರುವೆ. ಇಸ್ರೇಲರು ನನಗಾಗಿ ತರುವ ಯಜ್ಞಮಾಂಸದ ಉತ್ತಮ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಂಡಿರುವಿರಿ.’
30 “ನಿಮ್ಮ ತಂದೆಯ ಕುಟುಂಬವು ಸರ್ವಕಾಲವೂ ಆತನ ಸೇವೆ ಮಾಡುವುದೆಂದು ಇಸ್ರೇಲಿನ ದೇವರಾದ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಈಗ ಯೆಹೋವನು ಹೀಗೆನ್ನುತ್ತಾನೆ: ‘ಅದೆಂದಿಗೂ ಸಾಧ್ಯವಿಲ್ಲ. ನನ್ನನ್ನು ಸನ್ಮಾನಿಸುವವರನ್ನು ನಾನೂ ಸನ್ಮಾನಿಸುತ್ತೇನೆ. ಆದರೆ ನನ್ನನ್ನು ತಿರಸ್ಕರಿಸುವವರನ್ನು ನಾನೂ ತಿರಸ್ಕರಿಸುತ್ತೇನೆ. 31 ನಿನ್ನ ಸಂತತಿಯವರನ್ನೆಲ್ಲಾ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 32 ಇಸ್ರೇಲಿಗೆ ಶುಭಗಳಾದರೂ ನಿನ್ನ ಮನೆಯಲ್ಲಿ ಅಶುಭಗಳಿರುವುದನ್ನು ನೀನು ನೋಡುವೆ. ನಿನ್ನ ಕುಟುಂಬದಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 33 ನನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನನ್ನು ಉಳಿಸಿಕೊಳ್ಳುವೆನು. ಅವನು ಬಹುಮುಪ್ಪಿನವರೆಗೂ ಬದುಕುವನು. ಅವನ ಕಣ್ಣುಗಳು ಕಾಣದೆ ಹೋಗುವವರೆಗೂ ಬಲಹೀನನಾಗುವವರೆಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರೆಲ್ಲಾ ಖಡ್ಗದಿಂದ ಸಾಯುವರು. 34 ಈ ಸಂಗತಿಗಳು ನಿಜವಾಗುತ್ತವೆಯೆಂದು ತೋರಿಸಲು ನಾನು ನಿನಗೊಂದು ಗುರುತನ್ನು ಕೊಡುವೆನು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಒಂದೇ ದಿನದಲ್ಲಿ ಸಾಯುವರು. ಅದೇ ಆ ಗುರುತು. 35 ನಾನು ನನಗೋಸ್ಕರ ನಂಬಿಗಸ್ತನಾದ ಯಾಜಕನೊಬ್ಬನನ್ನು ಆರಿಸಿಕೊಳ್ಳುತ್ತೇನೆ. ಈ ಯಾಜಕನು ನಾನು ಹೇಳುವುದನ್ನು ಕೇಳುವನು ಮತ್ತು ನನಗೆ ಇಷ್ಟವಾದುದನ್ನು ಮಾಡುವನು. ಈ ಯಾಜಕನ ಕುಟುಂಬವನ್ನು ನಾನು ಬಲಗೊಳಿಸುವೆನು. ನಾನು ಆರಿಸಿಕೊಂಡಿರುವ ರಾಜನ ಬಳಿಯಲ್ಲಿ ಅವನು ಸದಾಕಾಲ ಸೇವೆಮಾಡುವನು. 36 ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ ಜನರೆಲ್ಲ ಅವನಲ್ಲಿ ಬಿಡಿಕಾಸನ್ನೂ ರೊಟ್ಟಿಯ ಚೂರನ್ನೂ ಬೇಡುವರು. ಅವರೆಲ್ಲ, “ನಮಗೆ ದೇವಸ್ಥಾನದಲ್ಲಿ ಯಾಜಕನ ಹುದ್ದೆಯನ್ನು ಕೊಡು, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುವರು” ’ ” ಎಂದನು.
* 2:1 ನಾನು … ನಗುವೆನು ಅಕ್ಷರಶಃ, “ನನ್ನ ಶತ್ರುಗಳ ಮುಂದೆ ನನ್ನ ಬಾಯಿ ತೆರೆದಿದೆ.” 2:15 ಕೊಬ್ಬನ್ನು ಹೋಮಮಾಡು ಪ್ರಾಣಿ ದೇಹದ ಒಂದು ಭಾಗವಾದ ಕೊಬ್ಬು ದೇವರಿಗೆ ಮಾತ್ರ ಸೇರಿದ್ದು. ಯಾಜಕರು ದೇವರಿಗೆ ಕಾಣಿಕೆಯಾಗಿ ಈ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಸುಡುತ್ತಿದ್ದರು.