20
ದಾವೀದ ಮತ್ತು ಯೋನಾತಾನರ ಒಪ್ಪಂದ
1 ದಾವೀದನು ರಾಮದ ಪಾಳೆಯದಿಂದ ಓಡಿಹೋದನು. ದಾವೀದನು ಯೋನಾತಾನನ ಬಳಿಗೆ ಹೋಗಿ, “ನಾನು ಮಾಡಿರುವ ತಪ್ಪೇನು? ನನ್ನ ಅಪರಾಧವೇನು? ನಿನ್ನ ತಂದೆಯು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದೇಕೆ?” ಎಂದು ಕೇಳಿದನು.
2 ಯೋನಾತಾನನು, “ಎಂದಿಗೂ ಇಲ್ಲ. ನನ್ನ ತಂದೆಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ! ನನ್ನ ತಂದೆಯು ನನಗೆ ತಿಳಿಸದೆ ಏನನ್ನೂ ಮಾಡುವುದಿಲ್ಲ. ಅದು ಬಹು ಮುಖ್ಯವಾದದ್ದೇ ಆಗಿರಲಿ ಇಲ್ಲವೆ ಮುಖ್ಯವಾಗಿಲ್ಲದ್ದೇ ಆಗಿರಲಿ, ನನ್ನ ತಂದೆಯು ನನಗೆ ತಿಳಿಸೇ ತಿಳಿಸುತ್ತಾನೆ. ನನ್ನ ತಂದೆಯು ನಿನ್ನನ್ನು ಕೊಲ್ಲಬೇಕೆಂದಿದ್ದರೆ ನಾನು ನಿನಗೆ ತಿಳಿಸುತ್ತಿರಲಿಲ್ಲವೇ?” ಎಂದು ಹೇಳಿದನು.
3 ಆದರೆ ದಾವೀದನು, “ನಾನು ನಿನ್ನ ಗೆಳೆಯನೆಂಬುದು ನಿನ್ನ ತಂದೆಗೆ ಚೆನ್ನಾಗಿ ತಿಳಿದಿದೆ. ನಿನ್ನ ತಂದೆಯು, ‘ಯೋನಾತಾನನಿಗೆ ಇದು ತಿಳಿಯಲೇಬಾರದು. ಅವನಿಗೆ ತಿಳಿದುಬಿಟ್ಟರೆ ಅವನು ತನ್ನ ಹೃದಯದಲ್ಲಿ ದುಃಖಪಟ್ಟು ದಾವೀದನಿಗೆ ಹೇಳಿಬಿಡುತ್ತಾನೆ’ ಎಂದುಕೊಂಡಿದ್ದಾನೆ. ಯೆಹೋವನಾಣೆ, ನಿನ್ನ ಜೀವದಾಣೆ, ನಾನು ಸಾವಿಗೆ ಬಹು ಹತ್ತಿರವಾಗಿದ್ದೇನೆ” ಎಂದು ಹೇಳಿದನು.
4 ಯೋನಾತಾನನು, “ನೀನು ಬಯಸುವ ಏನನ್ನಾದರೂ ಮಾಡಲು ನಾನು ಸಿದ್ಧನಿದ್ದೇನೆ” ಎಂದು ದಾವೀದನಿಗೆ ಹೇಳಿದನು.
5 ಆಗ ದಾವೀದನು, “ನಾಳೆ ಅಮಾವಾಸ್ಯೆ ಹಬ್ಬ, ನಾನು ರಾಜನ ಜೊತೆಯಲ್ಲಿ ಊಟಮಾಡಬೇಕಾಗಿದೆ. ಆದರೆ ನಾನು ಈಗಲೇ ಹೋಗಿ ಸಂಜೆಯವರೆಗೆ ಹೊಲದಲ್ಲಿ ಅಡಗಿಕೊಳ್ಳಲು ಅವಕಾಶ ಮಾಡಿಕೊಡು.
6 ನಾನು ಇಲ್ಲದಿರುವುದನ್ನು ನಿಮ್ಮ ತಂದೆಯು ಗಮನಿಸಿದರೆ ಅವನಿಗೆ, ‘ದಾವೀದನು ಬೆತ್ಲೆಹೇಮಿನ ತನ್ನ ಮನೆಗೆ ಹೋಗಲು ಬಯಸಿದನು. ಅವನ ಕುಟುಂಬದವರು ಅಲ್ಲಿ ವಾರ್ಷಿಕಯಜ್ಞದ ಔತಣವನ್ನು ಏರ್ಪಡಿಸಿದ್ದಾರೆ. ಬೆತ್ಲೆಹೇಮಿಗೆ ಹೋಗಿ ತನ್ನ ಕುಟುಂಬದವರ ಜೊತೆಯಿರಲು ಅವಕಾಶ ಕೊಡಬೇಕೆಂದು ದಾವೀದನು ನನ್ನನ್ನು ಕೇಳಿಕೊಂಡನು’ ಎಂದು ಹೇಳು.
7 ನಿನ್ನ ತಂದೆಯು, ‘ಒಳ್ಳೆಯದಾಯಿತು’ ಎಂದರೆ ನಾನು ಬದುಕಿದೆ. ಆದರೆ ನಿನ್ನ ತಂದೆಯು ಕೋಪಗೊಂಡರೆ ಅವನು ನನಗೆ ಕೇಡುಮಾಡಲು ಬಯಸಿದ್ದಾನೆಂದು ತಿಳಿದುಕೋ.
8 ಯೋನಾತಾನನೇ, ನನ್ನ ಮೇಲೆ ದಯೆಯಿರಲಿ. ನಾನು ನಿನ್ನ ಸೇವಕ. ನೀನು ಯೆಹೋವನ ಮುಂದೆ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವೆ. ನಾನು ತಪ್ಪಿತಸ್ಥನಾಗಿದ್ದರೆ, ನೀನೇ ನನ್ನನ್ನು ಕೊಂದುಬಿಡು! ಆದರೆ ನಿನ್ನ ತಂದೆಯ ಹತ್ತಿರಕ್ಕೆ ನನ್ನನ್ನು ಕರೆದೊಯ್ಯಬೇಡ” ಎಂದು ಹೇಳಿದನು.
9 ಯೋನಾತಾನನು, “ಇಲ್ಲ, ಎಂದೆಂದಿಗೂ ಇಲ್ಲ! ನನ್ನ ತಂದೆಯು ನಿನಗೆ ಕೇಡು ಮಾಡುವುದಕ್ಕಾಗಿ ಉಪಾಯ ಮಾಡುತ್ತಿರುವುದು ನನಗೆ ತಿಳಿದುಬಂದರೆ ನಾನು ನಿನ್ನನ್ನು ಎಚ್ಚರಿಸುತ್ತೇನೆ” ಎಂದು ಉತ್ತರಿಸಿದನು.
10 ದಾವೀದನು, “ನಿನ್ನ ತಂದೆಯು ನಿನಗೆ ಕೆಟ್ಟ ಸಂಗತಿಗಳನ್ನು ಹೇಳಿದರೆ, ನನ್ನನ್ನು ಎಚ್ಚರಿಸುವವರು ಯಾರು?” ಎಂದು ಕೇಳಿದನು.
11 ಆಗ ಯೋನಾತಾನನು, “ನಾವು ಹೊಲದೊಳಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಯೋನಾತಾನನು ಮತ್ತು ದಾವೀದನು ಒಟ್ಟಾಗಿ ಹೊಲದೊಳಕ್ಕೆ ಹೋದರು.
12 ಯೋನಾತಾನನು ದಾವೀದನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಎದುರಿನಲ್ಲಿ ಈ ಪ್ರಮಾಣವನ್ನು ಮಾಡುತ್ತೇನೆ. ನನ್ನ ತಂದೆಯು ನಿನ್ನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವನೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಸಂದೇಶವೊಂದನ್ನು ನಾನು ಮೂರು ದಿನಗಳೊಳಗಾಗಿ ನಿನಗೆ ಕಳುಹಿಸಿಕೊಡುತ್ತೇನೆ.
13 ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ.
14 ನನ್ನ ಜೀವಮಾನವೆಲ್ಲಾ ನೀನು ನನಗೆ ದಯಾಳುವಾಗಿರು.
15 ನನ್ನ ಕುಟುಂಬದ ಮೇಲೆ ಶಾಶ್ವತವಾಗಿ ನಿನ್ನ ದಯೆಯಿರಲಿ. ಭೂಮಿಯ ಮೇಲಿರುವ ನಿನ್ನ ಶತ್ರುಗಳೆಲ್ಲರನ್ನೂ ಯೆಹೋವನು ನಾಶಪಡಿಸುತ್ತಾನೆ.
16 ಒಂದುವೇಳೆ ಆ ಸಮಯದಲ್ಲಿ ಯೋನಾತಾನನ ಕುಟುಂಬವು ದಾವೀದನಿಂದ ಅಗಲಿ ಹೋಗಬೇಕಿದ್ದರೆ ಅಗಲಿ ಹೋಗಲಿ. ದಾವೀದನ ಶತ್ರುಗಳನ್ನು ಯೆಹೋವನು ದಂಡಿಸಲಿ” ಎಂದು ಹೇಳಿದನು.
17 ಯೋನಾತಾನನು ದಾವೀದನಿಂದ ತನ್ನ ಪ್ರೀತಿಯ ವಾಗ್ದಾನವನ್ನು ಮತ್ತೆ ಹೇಳಿಸಿದನು. ಯೋನಾತಾನನು ತನ್ನನ್ನು ತಾನು ಪ್ರೀತಿಸುತ್ತಿದ್ದಷ್ಟೆ ದಾವೀದನನ್ನೂ ಪ್ರೀತಿಸುತ್ತಿದ್ದುದ್ದೇ ಅದಕ್ಕೆ ಕಾರಣ.
18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆಯ ಔತಣ. ನಿನ್ನ ಸ್ಥಳವು ಖಾಲಿಯಾಗಿರುವುದನ್ನು ನನ್ನ ತಂದೆಯು ಕಂಡು, ನೀನು ಹೊರಟುಹೋಗಿರುವೆ ಎಂದು ತಿಳಿದುಕೊಳ್ಳುವನು.
19 ಈ ತೊಂದರೆಯು ಆರಂಭವಾದಾಗ ಎಲ್ಲಿ ಅಡಗಿದ್ದೆಯೋ ಅದೇ ಸ್ಥಳಕ್ಕೆ ಮೂರನೆಯ ದಿನ ಹೋಗು. ಆ ಬೆಟ್ಟದ ಸಮೀಪದಲ್ಲಿ ಕಾಯುತ್ತಿರು.
20 ಮೂರನೆಯ ದಿನ, ನಾನು ಆ ಬೆಟ್ಟಕ್ಕೆ ಹೋಗುತ್ತೇನೆ ಮತ್ತು ಗುರಿಯಿಟ್ಟು ಹೊಡೆಯುವವನಂತೆ ಕೆಲವು ಬಾಣಗಳನ್ನು ಹೊಡೆಯುತ್ತೇನೆ.
21 ನಂತರ ಆ ಬಾಣಗಳನ್ನು ಹುಡುಕಿಕೊಂಡು ಬರಲು ಹುಡುಗನನ್ನು ಕಳುಹಿಸುತ್ತೇನೆ. ಎಲ್ಲವೂ ಒಳಿತಾಗಿದ್ದರೆ ನಾನು ಆ ಹುಡುಗನಿಗೆ, ‘ನೀನು ಬಹು ದೂರ ಹೋಗಿರುವೆ! ಬಾಣಗಳು ನನ್ನ ಹತ್ತಿರದಲ್ಲೇ ಇವೆ. ಹಿಂತಿರುಗಿಬಂದು ಅವುಗಳನ್ನು ತೆಗೆದುಕೋ’ ಎಂದು ಹೇಳುತ್ತೇನೆ. ನಾನು ಆ ರೀತಿ ಹೇಳಿದರೆ, ನೀನು ಅಡಗಿದ್ದ ಸ್ಥಳದಿಂದ ಹೊರಗೆ ಬಾ. ಯೆಹೋವನಾಣೆ, ನೀನು ಸುರಕ್ಷಿತನಾಗಿರುವೆ. ನಿನಗೆ ಯಾವ ಅಪಾಯವೂ ಇಲ್ಲ.
22 ಆದರೆ ಅಲ್ಲಿ ತೊಂದರೆಯಿರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹಳ ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೆಹೋವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ.
23 ನಿನ್ನ ಮತ್ತು ನನ್ನ ಮಧ್ಯೆ ನಡೆದ ಈ ಒಪ್ಪಂದವನ್ನು ಜ್ಞಾಪಿಸಿಕೊ. ಯೆಹೋವನು ಸದಾಕಾಲ ನಮಗೆ ಸಾಕ್ಷಿಯಾಗಿರುವನು” ಎಂದು ಹೇಳಿದನು.
24 ನಂತರ ದಾವೀದನು ಹೊಲದಲ್ಲಿ ಅಡಗಿಕೊಂಡನು.
ಔತಣದಲ್ಲಿ ಸೌಲನ ವರ್ತನೆ
ಅಮಾವಾಸ್ಯೆಯ ಔತಣದ ಸಮಯವು ಬಂದಿತು. ರಾಜನು ಊಟಕ್ಕೆ ಕುಳಿತನು.
25 ರಾಜನು ತಾನು ಯಾವಾಗಲೂ ಕುಳಿತುಕೊಳ್ಳುವಂತೆ ಗೋಡೆಯ ಸಮೀಪದಲ್ಲಿ ಕುಳಿತುಕೊಂಡನು. ಯೋನಾತಾನನು ಸೌಲನ ಎದುರಾಗಿ ಕುಳಿತುಕೊಂಡನು. ಸೌಲನ ಪಕ್ಕದಲ್ಲಿ ಅಬ್ನೇರನು ಕುಳಿತುಕೊಂಡನು. ಆದರೆ ದಾವೀದನ ಸ್ಥಳವು ಖಾಲಿಯಾಗಿತ್ತು.
26 ಸೌಲನು ಆ ದಿನ ಏನನ್ನೂ ಹೇಳದೆ, “ದಾವೀದನಿಗೆ ಏನೋ ಸಂಭವಿಸಿರಬಹುದು ಆದ್ದರಿಂದ ಅವನು ಇಂದು ಶುದ್ಧನಾಗಿರಲಿಕ್ಕಿಲ್ಲ” ಎಂದು ಯೋಚಿಸಿದನು.
27 ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಎರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನನಿಗೆ, “ನಿನ್ನೆ ಮತ್ತು ಇಂದು ಅಮಾವಾಸ್ಯೆ ಔತಣಕ್ಕೆ ಇಷಯನ ಮಗನಾದ ದಾವೀದನು ಏಕೆ ಬರಲಿಲ್ಲ?” ಎಂದು ಕೇಳಿದನು.
28 ಯೋನಾತಾನನು, “ಬೆತ್ಲೆಹೇಮಿಗೆ ಹೋಗಲು ತನಗೆ ಅವಕಾಶಕೊಡಬೇಕೆಂದು ದಾವೀದನು ನನ್ನನ್ನು ಬಹಳವಾಗಿ ಕೇಳಿಕೊಂಡನು.
29 ‘ನಮ್ಮ ಗೋತ್ರದವರು ಬೆತ್ಲೆಹೇಮಿನಲ್ಲಿ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ನನ್ನ ಸಹೋದರರು ನನಗೂ ಬರಬೇಕೆಂದು ಕೇಳಿಕೊಂಡಿದ್ದಾರೆ. ನೀನು ನನ್ನ ಗೆಳೆಯನಾಗಿರುವುದಾದರೆ ನನ್ನ ಸೋದರರನ್ನು ನೋಡಿಕೊಂಡು ಬರಲು ದಯವಿಟ್ಟು ನನಗೆ ಅವಕಾಶಕೊಡು ಎಂದು ಹೇಳಿದನು.’ ಆದ್ದರಿಂದಲೇ ದಾವೀದನು ರಾಜನ ಊಟದ ಮೇಜಿಗೆ ಬಂದಿಲ್ಲ” ಎಂದು ಉತ್ತರಿಸಿದನು.
30 ಸೌಲನು ಯೋನಾತಾನನ ಮೇಲೆ ಬಹಳ ಕೋಪಗೊಂಡು, “ನೀನು ಅವಿಧೇಯಳಾದ ದಾಸಿಯ ಮಗ. ನೀನೂ ಅವಳಂತೆಯೇ ಅವಿಧೇಯ. ನೀನು ದಾವೀದನ ಪಕ್ಷವಹಿಸಿರುವುದು ನನಗೆ ಗೊತ್ತಿದೆ. ನೀನು ನಿನಗೂ ಮತ್ತು ನಿನ್ನ ತಾಯಿಗೂ ನಾಚಿಕೆಯನ್ನು ತಂದಿರುವೆ.
31 ಇಷಯನ ಮಗ ಬದುಕಿರುವವರೆಗೆ ನೀನು ರಾಜನಾಗುವುದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮನುಷ್ಯ!” ಎಂದು ಹೇಳಿದನು.
32 ಯೋನಾತಾನನು ತನ್ನ ತಂದೆಗೆ, “ದಾವೀದನನ್ನು ಏಕೆ ಕೊಲ್ಲಬೇಕು? ಅವನು ಮಾಡಿದ ತಪ್ಪಾದರೂ ಏನು?” ಎಂದು ಕೇಳಿದನು.
33 ಆದರೆ ಸೌಲನು ಯೋನಾತಾನನನ್ನು ಕೊಲ್ಲುವುದಕ್ಕಾಗಿ ಈಟಿಯನ್ನು ಅವನ ಕಡೆಗೆ ಎಸೆದನು. ದಾವೀದನನ್ನು ಕೊಲ್ಲಲು ತನ್ನ ತಂದೆಯು ದೃಢನಿರ್ಧಾರ ಮಾಡಿದ್ದಾನೆಂದು ಯೋನಾತಾನನು ತಿಳಿದುಕೊಂಡನು.
34 ಯೋನಾತಾನನು ಬಹಳ ಕೋಪಗೊಂಡು ಊಟದ ಮೇಜನ್ನು ಬಿಟ್ಟುಹೋದನು. ಯೋನಾತಾನನು ತನ್ನ ತಂದೆಯ ಮೇಲೆ ಬಹಳವಾಗಿ ಬೇಸರಗೊಂಡಿದ್ದರಿಂದ ಮತ್ತು ಕೋಪವುಳ್ಳವನಾಗಿದ್ದರಿಂದ ಎರಡನೆ ದಿನ ಔತಣದಲ್ಲಿ ಅವನು ಏನನ್ನೂ ತಿನ್ನಲಿಲ್ಲ. ಸೌಲನು ದಾವೀದನಿಗೆ ಅವಮಾನ ಮಾಡಿದ್ದರಿಂದ ಯೋನಾತಾನನು ಕೋಪಗೊಂಡಿದ್ದನು. ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದುದರಿಂದ ಯೋನಾತಾನನು ದುಃಖಿಸಿದನು.
ದಾವೀದ ಮತ್ತು ಯೋನಾತಾನರ ಬೀಳ್ಕೊಡುಗೆ
35 ಮಾರನೆಯ ದಿನ ಬೆಳಿಗ್ಗೆ ಯೋನಾತಾನನು ಹೊಲಕ್ಕೆ ಹೋದನು. ಅವನು ದಾವೀದನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಅವನನ್ನು ನೋಡಲು ಹೋದನು. ಯೋನಾತಾನನು ಒಬ್ಬ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋದನು.
36 ಯೋನಾತಾನನು ಆ ಬಾಲಕನಿಗೆ, “ನಾನು ಪ್ರಯೋಗಿಸುವ ಬಾಣಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಬಾಲಕನು ಓಡಲು ಆರಂಭಿಸಿದನು, ಯೋನಾತಾನನು ಆ ಬಾಲಕನ ಆಚೆಗೆ ಬಾಣಗಳನ್ನು ಪ್ರಯೋಗಿಸಿದನು.
37 ಬಾಣಗಳು ಹೋಗಿ ಬಿದ್ದ ಸ್ಥಳಕ್ಕೆ ಬಾಲಕನು ಹೋದನು. ಆದರೆ ಯೋನಾತಾನನು, “ಬಾಣಗಳು ಬಹಳ ದೂರದಲ್ಲಿವೆ!” ಎಂದು ಹೇಳಿದನು.
38 ನಂತರ ಯೋನಾತಾನನು, “ಬೇಗ ಹೋಗು! ಅವುಗಳನ್ನು ತೆಗೆದುಕೊಂಡು ಬಾ! ಅಲ್ಲಿಯೇ ನಿಲ್ಲಬೇಡ!” ಎಂದು ಕೂಗಿಹೇಳಿದನು. ಆ ಬಾಲಕನು ಬಾಣಗಳನ್ನೆಲ್ಲ ಆರಿಸಿಕೊಂಡು ತನ್ನ ಒಡೆಯನ ಬಳಿಗೆ ತಂದನು.
39 ಅಲ್ಲಿ ಏನು ನಡೆಯಿತು ಎಂಬುದು ಬಾಲಕನಿಗೇನೂ ತಿಳಿಯಲಿಲ್ಲ. ಯೋನಾತಾನ ಮತ್ತು ದಾವೀದರಿಗೆ ಮಾತ್ರ ತಿಳಿದಿತ್ತು.
40 ಯೋನಾತಾನನು ತನ್ನ ಬಿಲ್ಲು ಮತ್ತು ಬಾಣಗಳನ್ನು ಬಾಲಕನಿಗೆ ಕೊಟ್ಟನು. ನಂತರ ಯೋನಾತಾನನು ಆ ಬಾಲಕನಿಗೆ, “ಪಟ್ಟಣಕ್ಕೆ ಹಿಂದಿರುಗಿ ಹೋಗು” ಎಂದು ಹೇಳಿದನು.
41 ಬಾಲಕನು ಹೊರಟುಹೋದನು. ದಾವೀದನು ತಾನು ಅಡಗಿದ್ದ ಬೆಟ್ಟದ ಮತ್ತೊಂದು ಕಡೆಯ ಸ್ಥಳದಿಂದ ಹೊರಬಂದನು. ದಾವೀದನು ಯೋನಾತಾನನ ಮುಂದೆ ಬಂದು ಮೂರು ಸಲ ತನ್ನ ಮುಖವನ್ನು ನೆಲದವರೆಗೂ ಬಗ್ಗಿಸಿ ನಮಸ್ಕರಿಸಿದನು. ನಂತರ ದಾವೀದ ಮತ್ತು ಯೋನಾತಾನರು ಪರಸ್ಪರ ಮುದ್ದಿಟ್ಟರು, ಅವರಿಬ್ಬರೂ ಒಟ್ಟಾಗಿ ಅತ್ತರು. ದಾವೀದನು ಯೋನಾತಾನನಿಗಿಂತ ಹೆಚ್ಚು ಅತ್ತನು.
42 ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವಿಬ್ಬರೂ ಗೆಳೆಯರಾಗಿರಲು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದೇವೆ. ನಮ್ಮಿಬ್ಬರಿಗೂ ನಮ್ಮ ಸಂತತಿಯವರಿಗೂ ಇರುವ ಸಂಬಂಧಕ್ಕೆ ಯೆಹೋವನೇ ಸಾಕ್ಷಿ ಎಂದು ಹೇಳಿದ್ದೇವೆ” ಎಂದನು.