8
ಇಸ್ರೇಲರು ತಮಗೊಬ್ಬ ರಾಜನನ್ನು ಕೇಳಿಕೊಳ್ಳುವರು
1 ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರೇಲರಿಗೆ ನ್ಯಾಯಾಧೀಶರನ್ನಾಗಿ ಮಾಡಿದನು.
2 ಅವನ ಮೊದಲನೆಯ ಮಗ ಯೋವೇಲ್, ಎರಡನೆಯ ಮಗ ಅಬೀಯ. ಯೋವೇಲನು ಮತ್ತು ಅಬೀಯನು ಬೇರ್ಷೆಬದಲ್ಲಿ ನ್ಯಾಯಾಧೀಶರಾಗಿದ್ದರು.
3 ಆದರೆ ಸಮುವೇಲನ ಮಕ್ಕಳು ಅವನಂತೆ ನಡೆದುಕೊಳ್ಳಲಿಲ್ಲ. ಅವರು ಲಂಚವನ್ನು ಪಡೆದು ನ್ಯಾಯಾಲಯದಲ್ಲಿ ಅನ್ಯಾಯದ ತೀರ್ಪುಗಳು ಮಾಡುತ್ತಿದ್ದರು ಮತ್ತು ಜನರನ್ನು ವಂಚಿಸುತ್ತಿದ್ದರು.
4 ಆದ್ದರಿಂದ ಇಸ್ರೇಲರ ಹಿರಿಯರೆಲ್ಲ ಒಟ್ಟುಗೂಡಿದರು. ಅವರು ಸಮುವೇಲನನ್ನು ಭೇಟಿಮಾಡಲು ರಾಮಕ್ಕೆ ಹೋದರು.
5 ಹಿರಿಯರು ಸಮುವೇಲನಿಗೆ, “ನೀನು ಮುದುಕನಾಗಿರುವೆ ಮತ್ತು ನಿನ್ನ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿಲ್ಲ, ಅವರು ನಿನ್ನಂತಲ್ಲ. ಈಗ, ಬೇರೆ ದೇಶಗಳಂತೆ ಒಬ್ಬ ರಾಜನನ್ನು ನಮ್ಮನ್ನಾಳಲು ನೇಮಿಸು” ಎಂದು ಹೇಳಿದರು.
6 ಹೀಗೆ ಹಿರಿಯರೆಲ್ಲರು ತಮ್ಮನ್ನು ಮುನ್ನಡೆಸಲು ರಾಜನೊಬ್ಬನು ಬೇಕೆಂದರು. ಸಮುವೇಲನಿಗೆ ಇದು ಸರಿಯೆನಿಸಲಿಲ್ಲ. ಆದ್ದರಿಂದ ಅವನು ಯೆಹೋವನಲ್ಲಿ ಪ್ರಾರ್ಥಿಸಿದನು.
7 ಯೆಹೋವನು ಅವನಿಗೆ, “ಜನರು ನಿನಗೆ ಹೇಳಿದಂತೆ ಮಾಡು ಅವರು ನಿನ್ನನ್ನು ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ತಿರಸ್ಕರಿಸಿದ್ದಾರೆ! ಅವರಿಗೆ ನಾನು ರಾಜನಾಗಿರುವುದು ಬೇಕಿಲ್ಲ!
8 ಅವರು ಯಾವಾಗಲೂ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ಆದರೆ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳ ಸೇವೆ ಮಾಡಿದರು. ಅವರು ನಿನಗೂ ಹೀಗೆಯೇ ಮಾಡುತ್ತಿದ್ದಾರೆ.
9 ಆದ್ದರಿಂದ ಜನರ ಮಾತಿಗೆ ಕಿವಿಗೊಟ್ಟು ಅವರು ಹೇಳಿದಂತೆ ಮಾಡು. ಆದರೆ ಅವರಿಗೆ ಎಚ್ಚರಿಕೆಕೊಡು. ರಾಜನಾದವನು ಜನರಿಗೆ ಏನು ಮಾಡುತ್ತಾನೆ ಎಂಬುದನ್ನು ಅವರಿಗೆ ತಿಳಿಸಿ ಹೇಳು! ರಾಜನಾದವನು ಜನರನ್ನು ಹೇಗೆ ಆಳುತ್ತಾನೆಂಬುದನ್ನೂ ಅವರಿಗೆ ತಿಳಿಸಿಕೊಡು” ಎಂದು ಹೇಳಿದನು.
10 ಆ ಜನರು ರಾಜನೊಬ್ಬನನ್ನು ಕೇಳಿಕೊಂಡರು. ಆದ್ದರಿಂದ ಸಮುವೇಲನು ಅವರಿಗೆ ಯೆಹೋವನು ಹೇಳಿದ್ದನ್ನೆಲ್ಲ ತಿಳಿಸಿದನು.
11 ಸಮುವೇಲನು, “ನೀವು ನಿಮ್ಮನ್ನು ಆಳಲು ರಾಜನು ಬೇಕೆಂದರೆ, ಅವನು ಬಲವಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸೈನಿಕರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಸೈನ್ಯದಲ್ಲಿಯೂ ಅಶ್ವಸೈನ್ಯದಲ್ಲಿಯೂ ಸೇರಿ ಹೋರಾಡಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥದ ಮುಂದೆ ಓಡುವ ಬೆಂಗಾವಲಿನವರಾಗಬೇಕಾಗುತ್ತದೆ.
12 “ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಐವತ್ತು ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು.
“ತನ್ನ ಭೂಮಿಯನ್ನು ಉಳಲು ಮತ್ತು ಪೈರನ್ನು ಕೊಯ್ಯಲು ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಾಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಬಳಸಿಕೊಳ್ಳುವನು.
13 “ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧದ್ರವ್ಯಗಳನ್ನು ತಯಾರಿಸಲೂ ಅಡಿಗೆ ಮಾಡಲೂ ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
14 “ನಿಮಗೆ ಸೇರಿದ ಉತ್ತಮ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಆಲಿವ್ ತೋಪುಗಳನ್ನೂ ರಾಜನು ಕಿತ್ತುಕೊಂಡು ತನ್ನ ಅಧಿಕಾರಿಗಳಿಗೆ ಕೊಡುತ್ತಾನೆ.
15 ನೀವು ಬೆಳೆದ ಧಾನ್ಯಗಳಲ್ಲಿ ಮತ್ತು ದ್ರಾಕ್ಷಿಗಳಲ್ಲಿ ಅವನು ಹತ್ತನೆ ಒಂದು ಭಾಗವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುತ್ತಾನೆ.
16 “ರಾಜನು, ನಿಮ್ಮ ಸೇವಕಸೇವಕಿಯರನ್ನು ತೆಗೆದುಕೊಳ್ಳುವನು; ಶ್ರೇಷ್ಠವಾದ ಎತ್ತುಗಳನ್ನೂ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕಾಗಿ ಬಳಸಿಕೊಳ್ಳುವನು.
17 ನಿಮ್ಮ ಕುರಿಹಿಂಡುಗಳಲ್ಲಿ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುವನು.
“ಆಗ ನೀವು ರಾಜನಿಗೆ ಸೇವಕರಾಗುವಿರಿ;
18 ರಾಜನು ಬೇಕೆಂದು ಕೇಳಿಕೊಂಡದ್ದಕ್ಕಾಗಿ ಗೋಳಾಡುವಿರಿ. ಆದರೆ ಆಗ ಯೆಹೋವನು ನಿಮಗೆ ಉತ್ತರಿಸುವುದಿಲ್ಲ” ಎಂದು ಹೇಳಿದನು.
19 ಆದರೆ ಸಮುವೇಲನ ಮಾತುಗಳಿಗೆ ಜನರು ಕಿವಿಗೊಡಲಿಲ್ಲ. ಅವರು, “ಇಲ್ಲ, ನಮ್ಮನ್ನಾಳಲು ಒಬ್ಬ ರಾಜನು ಇರಲೇ ಬೇಕು.
20 ಆಗ ನಾವು ಇತರ ಅನ್ಯಜನಾಂಗಗಳಂತೆ ಆಗುವೆವು. ನಮ್ಮ ರಾಜನು ನಮ್ಮನ್ನು ಮುನ್ನಡೆಸುವನು. ಅವನು ನಮ್ಮೊಡನೆ ಬಂದು ನಮಗೋಸ್ಕರ ಹೋರಾಡುವನು” ಎಂದು ಹೇಳಿದರು.
21 ಸಮುವೇಲನು ಅವರ ಮಾತುಗಳನ್ನೆಲ್ಲಾ ಯೆಹೋವನಿಗೆ ತಿಳಿಸಿದನು.
22 ಯೆಹೋವನು ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ರಾಜನನ್ನು ನೇಮಿಸು” ಎಂದು ಹೇಳಿದನು.
ಆಗ ಸಮುವೇಲನು ಇಸ್ರೇಲರಿಗೆ, “ಹಾಗೆಯೇ ಆಗಲಿ, ನೀವು ಒಬ್ಬ ಹೊಸ ರಾಜನನ್ನು ಪಡೆದುಕೊಳ್ಳುವಿರಿ. ಈಗ ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ಹಿಂದಿರುಗಿರಿ” ಎಂದನು.