2 ಸಮುವೇಲನು
1
ಸೌಲನ ಮರಣದ ಬಗ್ಗೆ ದಾವೀದನಿಗೆ ವಾರ್ತೆ
1 ದಾವೀದನು ಅಮಾಲೇಕ್ಯರನ್ನು ಸೋಲಿಸಿದ ಬಳಿಕ, ಚಿಕ್ಲಗಿಗೆ ಹಿಂದಿರುಗಿಬಂದು, ಅಲ್ಲಿ ಎರಡು ದಿವಸ ಇದ್ದನು. ಸೌಲನ ಮರಣಾನಂತರ ಇದು ಸಂಭವಿಸಿತು.
2 ಮೂರನೆಯ ದಿನ ಒಬ್ಬ ಯುವ ಸೈನಿಕನು ಚಿಕ್ಲಗಿಗೆ ಬಂದನು. ಈ ಮನುಷ್ಯನು ಸೌಲನಿದ್ದ ಪಾಳೆಯದಿಂದ ಬಂದವನು. ಅವನು ಬಟ್ಟೆಗಳೆಲ್ಲವನ್ನು ಹರಿದುಕೊಂಡಿದ್ದನು; ತಲೆಯ ಮೇಲೆ ಧೂಳನ್ನು ಹಾಕಿಕೊಂಡಿದ್ದನು. ಅವನು ದಾವೀದನ ಬಳಿಗೆ ಬಂದು ಅವನ ಮುಂದೆ, ತನ್ನ ತಲೆಯನ್ನು ನೆಲಕ್ಕೆ ಬಾಗಿಸಿ ನಮಸ್ಕರಿಸಿದನು.
3 ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಅವನನ್ನು ಕೇಳಿದನು.
ಅದಕ್ಕೆ ಅವನು, “ನಾನು ಇಸ್ರೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ” ಎಂದು ಹೇಳಿದನು.
4 ದಾವೀದನು ಅವನನ್ನು, “ಯುದ್ಧದಲ್ಲಿ ಯಾರು ಗೆದ್ದರು, ನನಗೆ ದಯವಿಟ್ಟು ತಿಳಿಸು?” ಎಂದು ಕೇಳಿದನು.
ಅವನು, “ಇಸ್ರೇಲ್ ಜನರು ಯುದ್ಧರಂಗದಿಂದ ಓಡಿಹೋದರು. ಯುದ್ಧದಲ್ಲಿ ಅನೇಕರು ಸತ್ತುಹೋದರು. ಸೌಲನು ಮತ್ತು ಅವನ ಮಗನಾದ ಯೋನಾತಾನನೂ ಸತ್ತರು” ಎಂದು ಹೇಳಿದನು.
5 ದಾವೀದನು ಆ ಯುವಕನಿಗೆ, “ಸೌಲನು ಮತ್ತು ಅವನ ಮಗನಾದ ಯೋನಾತಾನನು ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಕೇಳಿದನು.
6 ಅದಕ್ಕೆ ಆ ಯುವಕನು, “ನಾನು ಆಕಸ್ಮಿಕವಾಗಿ ಗಿಲ್ಬೋವದ ಶಿಖರದ ಮೇಲಿದ್ದೆ. ಸೌಲನು ತನ್ನ ಭರ್ಜಿಯ ಮೇಲೆ ಒರಗಿಕೊಂಡಿದ್ದನ್ನು ಅಲ್ಲಿಂದಲೇ ನಾನು ನೋಡಿದೆ. ಫಿಲಿಷ್ಟಿಯರ ರಥಗಳು ಮತ್ತು ಕುದುರೆಸವಾರರು ಸೌಲನ ಹತ್ತಿರಕ್ಕೆ ಬರುತ್ತಿದ್ದರು.
7 ಸೌಲನು ಹಿಂದಿರುಗಿ ನೋಡಿದಾಗ ಅವನಿಗೆ ನಾನು ಕಾಣಿಸಿದೆನು. ಅವನು ನನ್ನನ್ನು ಕರೆದಾಗ, ‘ಇಗೋ ಬಂದೆನು’ ಎಂದು ಉತ್ತರಿಸಿದೆನು.
8 ನಂತರ ಸೌಲನು, ‘ನೀನು ಯಾರು?’ ಎಂದು ಕೇಳಿದನು. ‘ನಾನೊಬ್ಬ ಅಮಾಲೇಕ್ಯನು’ ಎಂದು ನಾನು ಹೇಳಿದೆನು.
9 ಸೌಲನು ನನಗೆ, ‘ದಯವಿಟ್ಟು ನನ್ನನ್ನು ಕೊಂದುಬಿಡು. ನಾನು ಬಹು ಸಂಕಟದಲ್ಲಿದ್ದೇನೆ. ನಾನು ಈಗಾಗಲೇ ಸತ್ತವನಂತಿದ್ದೇನೆ’ ಎಂದನು.
10 ಆದ್ದರಿಂದ ನಾನು ಅವನನ್ನು ಕೊಂದೆನು. ಅವನು ಮತ್ತೆ ಜೀವದಿಂದ ಉಳಿಯಲಾರದಷ್ಟು ಗಾಯಗೊಂಡಿದ್ದಾನೆಂಬುದು ನನಗೆ ತಿಳಿದಿತ್ತು. ನಂತರ ನಾನು ಅವನ ತಲೆಯಿಂದ ಕಿರೀಟವನ್ನೂ ಮತ್ತು ತೋಳಿನ ಕವಚವನ್ನೂ ತೆಗೆದುಕೊಂಡೆನು. ನನ್ನ ಒಡೆಯನೇ, ನಾನು ಆ ಕಿರೀಟವನ್ನು ಮತ್ತು ತೋಳಿನ ಕವಚವನ್ನು ನಿನ್ನ ಬಳಿಗೆ ತಂದಿದ್ದೇನೆ” ಎಂದು ಹೇಳಿದನು.
11 ಆಗ ದಾವೀದನು ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲ ಹರಿದುಕೊಂಡನು. ದಾವೀದನ ಜೊತೆಯಲ್ಲಿದ್ದವರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
12 ಅವರು ಬಹಳ ದುಃಖದಿಂದ ಅತ್ತರು. ಅವರು ಸಂಜೆಯ ತನಕ ಏನನ್ನೂ ತಿನ್ನಲಿಲ್ಲ. ಸೌಲನೂ ಅವನ ಮಗನಾದ ಯೋನಾತಾನನೂ ಯೆಹೋವನ ಜನರೂ ಸತ್ತದ್ದಕ್ಕಾಗಿ ಮತ್ತು ಇಸ್ರೇಲಿಗಾಗಿ ದಾವೀದನು ಮತ್ತು ಅವನ ಜನರು ಅತ್ತರು. ಸೌಲನನ್ನೂ ಅವನ ಮಗನಾದ ಯೋನಾತಾನನನ್ನೂ ಮತ್ತು ಅನೇಕ ಮಂದಿ ಇಸ್ರೇಲರನ್ನೂ ಖಡ್ಗಗಳಿಂದ ಇರಿದು ಕೊಂದದ್ದಕ್ಕಾಗಿ ಅವರು ಅತ್ತರು.
ಅಮಾಲೇಕ್ಯನನ್ನು ಕೊಲ್ಲಲು ದಾವೀದನ ಆಜ್ಞೆ
13 ಸೌಲನ ಮರಣದ ಬಗ್ಗೆ ತಿಳಿಸಿದ ಯುವಕನಿಗೆ ದಾವೀದನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.
ಆ ಯುವಕನು, “ನಾನು ಇಸ್ರೇಲ್ ಜನರಲ್ಲಿ ವಾಸಿಸುತ್ತಿರುವ ವಿದೇಶೀಯನ ಮಗ. ನಾನೊಬ್ಬ ಅಮಾಲೇಕ್ಯನು” ಎಂದು ಉತ್ತರಿಸಿದನು.
14 ದಾವೀದನು ಆ ಯುವಕನಿಗೆ, “ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ಕೊಲ್ಲಲು ನೀನು ಹೆದರಲಿಲ್ಲವೇಕೆ?” ಎಂದು ಕೇಳಿದನು.
15-16 ನಂತರ ದಾವೀದನು ತನ್ನ ಗುಂಪಿನ ಯುವಕನೊಬ್ಬನನ್ನು ಕರೆದು, “ನೀನು ಹೋಗಿ ಆ ಅಮಾಲೇಕ್ಯನನ್ನು ಕೊಲ್ಲು” ಎಂದು ಹೇಳಿದನು. ಇಸ್ರೇಲರ ಯುವಕನು ಆ ಅಮಾಲೇಕ್ಯನನ್ನು ಕೊಂದುಬಿಟ್ಟನು. ದಾವೀದನು ಆ ಅಮಾಲೇಕ್ಯನಿಗೆ, “ನಿನ್ನ ಸಾವಿಗೆ ನೀನೇ ಕಾರಣನು. ನೀನು ನಿನ್ನ ವಿರುದ್ಧವೇ ಸಾಕ್ಷಿ ಹೇಳಿದೆ. ‘ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ನಾನು ಕೊಂದೆ’ ಎಂದು ನೀನೇ ಹೇಳಿದೆ” ಎಂದನು.
ಸೌಲನನ್ನು ಮತ್ತು ಯೋನಾತಾನನನ್ನು ಕುರಿತು ದಾವೀದನ ಶೋಕಗೀತೆ
17 ದಾವೀದನು, ಸೌಲನನ್ನು ಮತ್ತು ಅವನ ಮಗನಾದ ಯೋನಾತಾನನನ್ನು ಕುರಿತು ಒಂದು ಶೋಕಗೀತೆಯನ್ನು ಹಾಡಿದನು.
18 ಈ ಶೋಕಗೀತೆಯನ್ನು ಯೆಹೂದದ ಜನರಿಗೆ ಕಲಿಸಬೇಕೆಂದು ಅವನು ತನ್ನ ಜನರಿಗೆ ಹೇಳಿದನು. ಈ ಗೀತೆಗೆ “ಬಿಲ್ಲು” ಎಂದು ಹೆಸರು. ಈ ಗೀತೆಯನ್ನು ಯಾಷಾರ್ ಗ್ರಂಥದಲ್ಲಿ ಬರೆಯಲಾಗಿದೆ.
19 “ಇಸ್ರೇಲೇ, ನಿನ್ನ ಸೌಂದರ್ಯವೆಲ್ಲ ಉನ್ನತಸ್ಥಳಗಳಲ್ಲಿ ನಾಶವಾಯಿತು.
ಬಲಶಾಲಿಗಳಾದ ಜನರೆಲ್ಲ ಬಿದ್ದು ಹೋದರು.
20 ಗತ್‌ನಲ್ಲಿ ಈ ಸುದ್ದಿಯನ್ನು ಹೇಳದಿರು.
ಅಷ್ಕೆಲೋನಿನ ಬೀದಿಗಳಲ್ಲಿ ಇದನ್ನು ಸಾರದಿರು.
ಫಿಲಿಷ್ಟಿಯರ ಪಟ್ಟಣಗಳೆಲ್ಲಾ ಸಂತೋಷಪಡುವವು.
ಆ ವಿದೇಶಿಯರ ಹೆಣ್ಣುಮಕ್ಕಳು ಉಲ್ಲಾಸಪಡುವರು.
21 “ಗಿಲ್ಬೋವದ ಪರ್ವತಗಳಲ್ಲಿ
ಮಂಜೂ ಮಳೆಯೂ ಸುರಿಯದಿರಲಿ.
ಆ ಹೊಲಗಳಿಂದ ಕಾಣಿಕೆಯ ವಸ್ತುಗಳೂ ಬಾರದಿರಲಿ.
ಅಲ್ಲಿನ ಶಕ್ತಿಸಂಪನ್ನರ ಗುರಾಣಿಗಳೆಲ್ಲ ತುಕ್ಕುಹಿಡಿದಿವೆ.
ಸೌಲನ ಗುರಾಣಿಯು ಎಣ್ಣೆಯಿಲ್ಲದೆ ಬಿದ್ದಿದೆ.
22 ಯೋನಾತಾನನ ಬಿಲ್ಲು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಸೌಲನ ಖಡ್ಗವು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಈಗ ಸತ್ತುಬಿದ್ದಿರುವ ಸೈನಿಕರ ರಕ್ತವನ್ನು ಅವರ ಆಯುಧಗಳು ಚಿಮ್ಮಿಸಿದವು.
ಅವರ ಆಯುಧಗಳು ಬಲಿಷ್ಠರ ಕೊಬ್ಬನ್ನು ಕತ್ತರಿಸಿಹಾಕಿದವು.
23 “ಸೌಲನು ಮತ್ತು ಯೋನಾತಾನನು ಒಬ್ಬರನ್ನೊಬ್ಬರು ಪ್ರೀತಿಸಿದರು;
ತಮ್ಮ ಪರಸ್ಪರ ಜೀವಿತದಲ್ಲಿ ಆನಂದಿಸಿದರು.
ಸೌಲನು ಮತ್ತು ಯೋನಾತಾನನು ಮರಣದಲ್ಲೂ ಒಂದಾದರು.
ಅವರು ಹದ್ದುಗಳಿಗಿಂತ ವೇಗವಾಗಿ ಹೋದರು;
ಸಿಂಹಗಳಿಗಿಂತ ಶಕ್ತಿಶಾಲಿಗಳಾಗಿದ್ದರು.
24 ಇಸ್ರೇಲಿನ ಕುವರಿಯರೇ, ಸೌಲನಿಗಾಗಿ ಗೋಳಾಡಿರಿ!
ಸೌಲನು ನಿಮಗೆ ಕೆಂಪು ಬಟ್ಟೆಗಳನ್ನು ಉಡಿಸಿದನು.
ಸೌಲನು ಸುವರ್ಣಾಭರಣಗಳನ್ನು ಬಟ್ಟೆಗಳ ಮೇಲೆ ತೊಡಿಸಿದನು.
25 “ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
ಗಿಲ್ಬೋವ ಪರ್ವತಗಳಲ್ಲಿ ಯೋನಾತಾನನೂ ಮಡಿದನು.
26 ಸೋದರನಾದ ಯೋನಾತಾನನೇ, ನಿನಗಾಗಿ ನಾನು ದುಃಖಿಸುವೆ!
ನಿನ್ನ ಗೆಳೆತನವು ನನಗೆ ಉಲ್ಲಾಸದಾಯಕವಾಗಿತ್ತು.
ನನ್ನ ಮೇಲಿನ ನಿನ್ನ ಪ್ರೀತಿಯು
ಸ್ತ್ರೀಯರ ಪ್ರೀತಿಗಿಂತಲೂ ಅತಿಶಯವಾಗಿತ್ತು.
27 ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
ಅವರ ಯುದ್ಧಾಯುಧಗಳೆಲ್ಲ ಹಾಳಾಗಿಹೋದವು.”