19
ಯೋವಾಬನು ದಾವೀದನನ್ನು ಖಂಡಿಸಿದ್ದು
ಈ ಸುದ್ದಿಯನ್ನು ಜನರು ಯೋವಾಬನಿಗೆ ತಿಳಿಸಿದರು. ಅವರು ಯೋವಾಬನಿಗೆ, “ನೋಡು, ರಾಜನು ಅಳುತ್ತಿದ್ದಾನೆ ಮತ್ತು ಅಬ್ಷಾಲೋಮನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂದು ಹೇಳಿದರು. ದಾವೀದನ ಸೈನ್ಯವು ಅಂದು ಯುದ್ಧದಲ್ಲಿ ಜಯಗಳಿಸಿತು. ಆದರೆ ಜನರಿಗೆಲ್ಲ ಆ ದಿನವೇ ಅತ್ಯಂತ ಶೋಕದ ದಿನವೂ ಆಯಿತು. “ರಾಜನು ಮಗನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂಬುದನ್ನು ಜನರು ಕೇಳಿ ದುಃಖಪಟ್ಟರು.
ಜನರು ನಾಚಿಕೆಯಿಂದ ನಗರದೊಳಕ್ಕೆ ಸದ್ದಿಲ್ಲದೆ ಬಂದರು. ಅವರು ಯುದ್ಧದಲ್ಲಿ ಸೋತುಬಂದವರಂತೆ ಕಾಣುತ್ತಿದ್ದರು. ರಾಜನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ರಾಜನು, “ನನ್ನ ಮಗನೇ, ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗಟ್ಟಿಯಾಗಿ ಅಳುತ್ತಿದ್ದನು.
ಯೋವಾಬನು ರಾಜನ ಮನೆಗೆ ಬಂದನು. ಅವನು ರಾಜನಿಗೆ, “ನೀನು ನಿನ್ನ ಎಲ್ಲಾ ಸೈನಿಕರನ್ನು ಅವಮಾನ ಮಾಡುತ್ತಿರುವೆ! ನಿನ್ನ ಸೈನಿಕರು ಇಂದು ನಿನ್ನ ಜೀವವನ್ನು ರಕ್ಷಿಸಿದರು. ಅವರು ನಿನ್ನ ಗಂಡುಮಕ್ಕಳ, ಹೆಣ್ಣುಮಕ್ಕಳ, ಪತ್ನಿಯರ ಮತ್ತು ದಾಸಿಯರ ಜೀವಗಳನ್ನು ರಕ್ಷಿಸಿದರು. ನಿನ್ನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸುವೆ; ನಿನ್ನನ್ನು ಪ್ರೀತಿಸುವ ಜನರನ್ನು ನೀನು ದ್ವೇಷಿಸುವೆ. ಆದ್ದರಿಂದ ನಿನ್ನ ಸೇವಕರು ಅವಮಾನಿತರಾಗಿದ್ದಾರೆ. ನಿನ್ನ ಅಧಿಕಾರಿಗಳು ಮತ್ತು ನಿನ್ನ ಜನರು ನಿನಗೆ ಮುಖ್ಯವಲ್ಲ ಎಂಬುದನ್ನು ನೀನಿಂದು ರುಜುವಾತುಪಡಿಸಿದೆ. ಇಂದು ಅಬ್ಷಾಲೋಮನು ಬದುಕಿದ್ದು, ನಾವೆಲ್ಲರೂ ಸತ್ತಿದ್ದರೆ, ನೀನು ಬಹಳ ಹರ್ಷಗೊಳುತ್ತಿದ್ದೆ ಎಂಬುದನ್ನು ನಾನು ಈ ದಿನ ಕಂಡುಕೊಂಡೆನು. ಈಗ ಮೇಲೆದ್ದು ನಿನ್ನ ಸೇವಕರೊಂದಿಗೆ ಮಾತನಾಡು; ಅವರನ್ನು ಪ್ರೋತ್ಸಾಹಿಸು. ಯೆಹೋವನಾಣೆ, ಈ ಕಾರ್ಯವನ್ನು ಮಾಡಲು ನೀನಿಂದು ಹೊರಗೆ ಹೋಗದಿದ್ದರೆ, ರಾತ್ರಿಯ ವೇಳೆಗೆ ನಿನ್ನೊಂದಿಗೆ ಯಾವ ಮನುಷ್ಯನೂ ಉಳಿಯುವುದಿಲ್ಲ. ನೀನು ನಿನ್ನ ಚಿಕ್ಕಂದಿನಿಂದ ಈವರೆಗೆ ಅನುಭವಿಸಿದ ಸಂಕಷ್ಟಗಳಲ್ಲೆಲ್ಲ ಇದು ತೀರ ಕೆಟ್ಟದಾಗಿರುತ್ತದೆ” ಎಂದು ಹೇಳಿದನು.
ಆಗ ರಾಜನು ನಗರದ ಬಾಗಿಲಿಗೆ ಹೋದನು. ರಾಜನು ಬಾಗಿಲಿನ ಬಳಿಯಲ್ಲಿದ್ದಾನೆಂಬ ಸುದ್ದಿಯು ಹರಡಿತು. ಆದ್ದರಿಂದ ಜನರೆಲ್ಲರೂ ರಾಜನನ್ನು ನೋಡಲು ಬಂದರು. ಅಬ್ಷಾಲೋಮನ ಹಿಂಬಾಲಕರಾದ ಇಸ್ರೇಲರೆಲ್ಲ ಮನೆಗಳಿಗೆ ಓಡಿಹೋದರು.
ದಾವೀದನು ಮತ್ತೆ ರಾಜನಾದನು
ಇಸ್ರೇಲಿನ ಕುಲಗಳ ಜನರೆಲ್ಲರೂ ತಮ್ಮಲ್ಲೇ ಚರ್ಚಿಸಿದರು. ಅವರು, “ರಾಜನಾದ ದಾವೀದನು ಫಿಲಿಷ್ಟಿಯರಿಂದ ಮತ್ತು ಇತರ ಶತ್ರುಗಳಿಂದ ನಮ್ಮನ್ನು ರಕ್ಷಿಸಿದನು. ಅಬ್ಷಾಲೋಮನಿಂದಾಗಿ ದಾವೀದನು ಓಡಿಹೋಗಬೇಕಾಯಿತು. 10 ನಾವು ನಮ್ಮನ್ನು ಆಳಲು ಅಬ್ಷಾಲೋಮನನ್ನು ಆರಿಸಿಕೊಂಡೆವು. ಆದರೆ ಅವನೀಗ ಯುದ್ಧದಲ್ಲಿ ಸತ್ತಿದ್ದಾನೆ. ದಾವೀದನನ್ನು ನಾವು ಮತ್ತೆ ರಾಜನನ್ನಾಗಿ ಮಾಡೋಣ” ಎಂದರು.
11 ಈ ಸುದ್ದಿ ರಾಜನಿಗೆ ಮುಟ್ಟಿತು. ಆಗ ಅವನು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಸಂದೇಶವನ್ನು ಕಳುಹಿಸಿದನು. ಅವನು ಹೇಳಿದ್ದೇನೆಂದರೆ, “ಯೆಹೂದದ ನಾಯಕರೊಂದಿಗೆ ಮಾತಾಡಿರಿ. ಅವರಿಗೆ, ‘ಅರಸನಾದ ನನ್ನನ್ನು ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವು ಕೊನೆಯವರಾದದ್ದೇಕೆ? ನೋಡಿ, ರಾಜನನ್ನು ಹಿಂದೆ ಕರೆತರಬೇಕೆಂದು ಇಸ್ರೇಲರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. 12 ನೀವು ನನ್ನ ಸೋದರರು, ನೀವು ನನ್ನ ಕುಟುಂಬದವರು. ಹೀಗಿರುವಾಗ ನನ್ನನ್ನು ಮತ್ತೆ ಕರೆತರಲು ನೀವೇಕೆ ಕೊನೆಯವರಾದಿರಿ?’ ಎಂದು ಹೇಳಿ. 13 ಅಲ್ಲದೆ ಅಮಾಸನಿಗೆ, ‘ನೀನು ನನ್ನ ಕುಟುಂಬದ ಒಂದು ಭಾಗವಾಗಿರುವೆ. ನಾನು ನಿನ್ನನ್ನು ಯೋವಾಬನ ಸ್ಥಾನದಲ್ಲಿ ಸೇನಾಪತಿಯನ್ನಾಗಿ ಮಾಡದೆ ಹೋದರೆ, ದೇವರು ನನ್ನನ್ನು ದಂಡಿಸಲಿ’ ಎಂದು ಹೇಳಿ” ಎಂದನು.
14 ದಾವೀದನ ಮಾತುಗಳು ಯೆಹೂದದ ಜನರೆಲ್ಲರ ಹೃದಯಗಳಿಗೆ ತಾಕಿದವು, ಅವರೆಲ್ಲರೂ ಒಂದೇ ಮನಸ್ಸಿನಿಂದ ಒಪ್ಪಿಕೊಂಡರು. ಯೆಹೂದದ ಜನರು ರಾಜನಿಗೆ, “ನೀನು ನಿನ್ನ ಸೇವಕರೆಲ್ಲರೊಡನೆ ಹಿಂದಿರುಗಿ ಬಾ” ಎಂಬ ಸಂದೇಶವೊಂದನ್ನು ಕಳುಹಿಸಿದರು.
15 ಆಗ ರಾಜನಾದ ದಾವೀದನು ಜೋರ್ಡನ್ ನದಿಯ ಬಳಿಗೆ ಬಂದನು. ಯೆಹೂದದ ಜನರು ರಾಜನನ್ನು ಭೇಟಿ ಮಾಡಲು ಗಿಲ್ಗಾಲಿಗೆ ಬಂದರು. ರಾಜನಾದ ದಾವೀದನನ್ನು ಜೋರ್ಡನ್ ನದಿಯಿಂದ ಈಚೆಗೆ ಕರೆತರಬೇಕೆಂದು ಅವರೆಲ್ಲ ಬಂದರು.
ಶಿಮ್ಮಿಯು ದಾವೀದನಿಂದ ಕ್ಷಮೆ ಕೇಳಿದ್ದು
16 ಗೇರನ ಮಗನಾದ ಶಿಮ್ಮಿಯು ಬೆನ್ಯಾಮೀನ್ ಕುಲದವನು. ಅವನು ಬಹುರೀಮಿನಲ್ಲಿ ನೆಲೆಸಿದ್ದನು. ರಾಜನಾದ ದಾವೀದನನ್ನು ಭೇಟಿ ಮಾಡಲು ಶಿಮ್ಮಿಯು ತ್ವರಿತವಾಗಿ ಯೆಹೂದದ ಜನರೊಂದಿಗೆ ಬಂದನು. 17 ಬೆನ್ಯಾಮೀನ್ ಕುಲದ ಒಂದು ಸಾವಿರ ಜನರು ಸಹ ಶಿಮ್ಮಿಯೊಂದಿಗೆ ಬಂದರು. ಸೌಲನ ಕುಲದಲ್ಲಿ ಸೇವಕನಾಗಿದ್ದ ಚೀಬನು ಸಹ ಬಂದನು. ಚೀಬನು ತನ್ನ ಹದಿನೈದು ಜನ ಮಕ್ಕಳನ್ನು ಮತ್ತು ಇಪ್ಪತ್ತು ಜನ ಸೇವಕರನ್ನು ತನ್ನೊಂದಿಗೆ ಕರೆತಂದನು. ಇವರೆಲ್ಲರೂ ರಾಜನಾದ ದಾವೀದನನ್ನು ಸಂಧಿಸಲು ಜೋರ್ಡನ್ ನದಿಯ ಹತ್ತಿರಕ್ಕೆ ಬಂದರು.
18 ರಾಜನ ಕುಟುಂಬವನ್ನು ಯೆಹೂದಕ್ಕೆ ಕರೆತರಲು ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿ ಹೋದರು. ರಾಜನು ಅಪೇಕ್ಷೆಪಟ್ಟಿದ್ದನ್ನು ಜನರು ಮಾಡಿದರು. ರಾಜನು ನದಿಯನ್ನು ದಾಟುತ್ತಿರುವಾಗ, ಗೇರನ ಮಗನಾದ ಶಿಮ್ಮಿಯು ಅವನನ್ನು ಸಂಧಿಸಲು ಬಂದನು. ರಾಜನ ಎದುರಿನಲ್ಲಿ ಶಿಮ್ಮಿಯು ನೆಲಕ್ಕೆ ಬಾಗಿ ನಮಸ್ಕರಿಸಿದನು. 19 ಶಿಮ್ಮಿಯು ರಾಜನಿಗೆ, “ನನ್ನ ಒಡಯನೇ, ನಾನು ಮಾಡಿದ ಕೆಟ್ಟಕಾರ್ಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳದಿರು. ನನ್ನ ರಾಜನಾದ ಒಡೆಯನೇ, ನೀನು ಜೆರುಸಲೇಮನ್ನು ಬಿಟ್ಟುಹೋದಾಗ ನಾನು ಮಾಡಿದ ಕೆಟ್ಟಕಾರ್ಯಗಳನ್ನು ನೆನಪಿಗೆ ತಂದುಕೊಳ್ಳಬೇಡ. 20 ನಾನು ಪಾಪಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೇನೆ. ಆದ ಕಾರಣವೇ, ನನ್ನ ರಾಜನಾದ ಒಡೆಯನೇ, ನಿನ್ನನ್ನು ಭೇಟಿಮಾಡಲು ಬಂದ ಯೋಸೇಫ್ಯರ ಕುಲದಲ್ಲಿ ನಾನೇ ಮೊದಲಿಗನು” ಎಂದು ಹೇಳಿದನು.
21 ಆದರೆ ಚೆರೂಯಳ ಮಗನಾದ ಅಬೀಷೈಯನು, “ಯೆಹೋವನಿಂದ ಆರಿಸಲ್ಪಟ್ಟ ರಾಜನಿಗೆ ಕೆಟ್ಟದ್ದು ಸಂಭವಿಸಲಿ ಎಂದು ಶಿಮ್ಮಿಯು ಅಪೇಕ್ಷಿಸಿದ್ದರಿಂದ ಮರಣ ಶಿಕ್ಷೆಗೆ ಗುರಿಯಾಗಲೇಬೇಕು” ಎಂದು ಹೇಳಿದನು.
22 ದಾವೀದನು, “ಚೆರೂಯಳ ಮಕ್ಕಳೇ, ನಾನು ನಿಮಗೆ ಏನು ಮಾಡಲಿ? ನೀವಿಂದು ನನಗೆ ವಿರುದ್ಧರಾಗಿರುವಿರಿ. ವಿಶೇಷವಾದ ಈ ದಿನದಲ್ಲಿ ಒಬ್ಬ ಇಸ್ರೇಲನನ್ನು ಸಾವಿಗೆ ಗುರಿಮಾಡುವುದು ಸರಿಯಾಗಿರುವುದೇ? ಇಸ್ರೇಲಿನಲ್ಲಿ ಈ ದಿನ ನಾನು ಇಸ್ರೇಲಿಗೆಲ್ಲ ರಾಜನೆಂಬುದು ನನಗೆ ತಿಳಿದಿದೆ” ಎಂದನು.
23 ನಂತರ ರಾಜನು ಶಿಮ್ಮಿಗೆ, “ನಿನ್ನನ್ನು ಕೊಲ್ಲುವುದಿಲ್ಲ” ಎಂದು ವಾಗ್ದಾನ ಮಾಡಿದನು.*
ಮೆಫೀಬೋಶೆತನು ದಾವೀದನನ್ನು ನೋಡಲು ಬಂದದ್ದು
24 ಸೌಲನ ಮೊಮ್ಮಗನಾದ ಮೆಫೀಬೋಶೆತನು ರಾಜನಾದ ದಾವೀದನನ್ನು ನೋಡಲು ಬಂದನು. ರಾಜನು ಜೆರುಸಲೇಮನ್ನು ಬಿಟ್ಟು ಸುರಕ್ಷಿತವಾಗಿ ಮತ್ತೆ ಹಿಂದಿರುಗುವತನಕ ಮೆಫೀಬೋಶೆತನು ತನ್ನ ಪಾದಗಳನ್ನು ಲಕ್ಷಿಸಿರಲಿಲ್ಲ; ಗಡ್ಡವನ್ನು ಬೋಳಿಸಿರಲಿಲ್ಲ ಮತ್ತು ಬಟ್ಟೆಗಳನ್ನು ಒಗೆದಿರಲಿಲ್ಲ. 25 ಮೆಫೀಬೋಶೆತನು ರಾಜನನ್ನು ನೋಡಲು ಜೆರುಸಲೇಮಿನಿಂದ ಬಂದನು. ರಾಜನು ಅವನಿಗೆ, “ಮೆಫೀಬೋಶೆತನೇ, ನಾನು ಜೆರುಸಲೇಮಿನಿಂದ ಓಡಿಹೋದಾಗ ನೀನು ನನ್ನೊಡನೆ ಏಕೆ ಬರಲಿಲ್ಲ?” ಎಂದು ಕೇಳಿದನು.
26 ಮೆಫೀಬೋಶೆತನು, “ರಾಜನಾದ ನನ್ನ ಒಡೆಯನೇ, ನನ್ನ ಸೇವಕನಾದ ಚೀಬನು ನನಗೆ ಮೋಸಮಾಡಿದನು. ನಾನು ಚೀಬನಿಗೆ, ‘ನಾನು ಕುಂಟನಾಗಿರುವದರಿಂದ ತಡಿಯೊಂದನ್ನು ಹೇಸರಕತ್ತೆಯ ಮೇಲೆ ಹಾಕು. ನಾನು ಹೇಸರಕತ್ತೆಯ ಮೇಲೆ ಕುಳಿತು, ರಾಜನೊಂದಿಗೆ ಹೋಗುತ್ತೇನೆ’ ಎಂದೆನು. 27 ಆದರೆ ನನ್ನ ಸೇವಕನು ನನ್ನನ್ನು ಮೋಸಗೊಳಿಸಿದನು. ಅವನು ನನ್ನ ಬಗ್ಗೆ ನಿನಗೆ ಕೆಟ್ಟದ್ದನ್ನು ಹೇಳಿದನು. ಆದರೆ ರಾಜನಾದ ನನ್ನ ಒಡೆಯನು ದೇವದೂತನಂತಿದ್ದಾನೆ. ನಿನಗೆ ಒಳ್ಳೆಯದೆಂದು ತೋರಿದ್ದನ್ನು ಮಾಡು. 28 ನೀನು ನನ್ನ ತಾತನ ಕುಟುಂಬವನ್ನೆಲ್ಲ ಕೊಲ್ಲಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ನೀನು ನಿನ್ನ ಪಂಕ್ತಿಯಲ್ಲಿ ಊಟಮಾಡುವ ಜನರ ಜೊತೆಯಲ್ಲಿ ನನ್ನನ್ನೂ ಸೇರಿಸಿದೆ. ಆದ್ದರಿಂದ ರಾಜನ ಬಗ್ಗೆ ದೂರು ಹೇಳಲು ನನಗೆ ಯಾವ ಹಕ್ಕಿಲ್ಲ” ಎಂದು ಹೇಳಿದನು.
29 ರಾಜನು ಮೆಫೀಬೋಶೆತನಿಗೆ, “ನಿನ್ನ ಸಮಸ್ಯೆಗಳ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಬೇಡ. ನಾನು ಈ ರೀತಿ ತೀರ್ಮಾನಿಸಿದ್ದೇನೆ. ನೀನು ಮತ್ತು ಚೀಬನು ಭೂಮಿಯನ್ನು ಹಂಚಿಕೊಳ್ಳಿ” ಎಂದು ಹೇಳಿದನು.
30 ಮೆಫೀಬೋಶೆತನು ರಾಜನಿಗೆ, “ಚೀಬನೇ ಎಲ್ಲಾ ಭೂಮಿಯನ್ನು ತೆಗೆದುಕೊಳ್ಳಲಿ. ನನ್ನ ಒಡೆಯನಾದ ರಾಜನು ತನ್ನ ಸ್ವಂತ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದು ಹೇಳಿದನು.
ದಾವೀದನು ಬರ್ಜಿಲ್ಲೈಗೆ, ಜೆರುಸಲೇಮಿಗೆ ಬರುವಂತೆ ಹೇಳಿದ್ದು
31 ಗಿಲ್ಯಾದಿನ ಬರ್ಜಿಲ್ಲೈಯನು ರೋಗೆಲೀಮಿನಿಂದ ರಾಜನಾದ ದಾವೀದನೊಂದಿಗೆ ಜೋರ್ಡನ್ ನದಿಯ ಬಳಿಗೆ ಬಂದನು. ರಾಜನು ನದಿಯನ್ನು ದಾಟುವಾಗ ರಾಜನೊಂದಿಗಿರಲು ಅವನು ಬಂದನು. 32 ಬರ್ಜಿಲ್ಲೈಯನು ಮುದುಕನಾಗಿದ್ದನು. ಅವನಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ದಾವೀದನು ಮಹನಯಿಮಿನಲ್ಲಿ ವಾಸಿಸುತ್ತಿದ್ದಾಗ ಅವನು ದಾವೀದನಿಗೆ ಆಹಾರವನ್ನೂ ಮತ್ತಿತರ ವಸ್ತುಗಳನ್ನೂ ಕೊಟ್ಟಿದ್ದನು; ಯಾಕೆಂದರೆ ಅವನು ಶ್ರೀಮಂತನಾಗಿದ್ದನು. 33 ದಾವೀದನು ಬರ್ಜಿಲ್ಲೈಯನಿಗೆ, “ನದಿಯನ್ನು ದಾಟಿ ನನ್ನೊಂದಿಗೆ ಆಚೇದಡಕ್ಕೆ ಬಾ. ನೀನು ಜೆರುಸಲೇಮಿನಲ್ಲಿ ನನ್ನೊಂದಿಗೆ ವಾಸಿಸುವುದಾದರೆ, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಹೇಳಿದನು.
34 ಆದರೆ ಬರ್ಜಿಲ್ಲೈಯನು ದಾವೀದನಿಗೆ, “ನನಗೆ ಎಷ್ಟು ವಯಸ್ಸಾಗಿದೆಯೆಂಬುದು ನಿನಗೆ ತಿಳಿದಿಲ್ಲವೇ? ನಾನು ನಿನ್ನೊಂದಿಗೆ ಜೆರುಸಲೇಮಿಗೆ ಬರಬಹುದೇ? 35 ನನಗೀಗ ಎಂಭತ್ತು ವರ್ಷ. ಒಳಿತು ಕೆಡುಕುಗಳಿಗಿರುವ ವ್ಯತ್ಯಾಸ ಈಗ ನನಗೆ ತಿಳಿಯುವುದಿಲ್ಲ. ನಾನು ತಿನ್ನುವ ಇಲ್ಲವೆ ಕುಡಿಯುವ ವಸ್ತುಗಳ ರುಚಿಯೂ ನನಗೆ ಗೊತ್ತಾಗುವುದಿಲ್ಲ. ಹಾಡುತ್ತಿರುವ ಗಂಡಸರ ಮತ್ತು ಹೆಂಗಸರ ಯಾವುದೇ ಧ್ವನಿಯೂ ನನಗೆ ಕೇಳಿಸುವುದಿಲ್ಲ. ನನ್ನ ಒಡೆಯನಾದ ರಾಜನಿಗೆ ನಾನೇಕೆ ಭಾರವಾಗಬೇಕು? 36 ನೀನು ನನಗೆ ಕೊಡಬೇಕೆಂದಿರುವ ಯಾವ ವಸ್ತುಗಳೂ ನನಗೆ ಬೇಕಿಲ್ಲ. ನಾನು ನಿನ್ನೊಂದಿಗೆ ಜೋರ್ಡನ್ ನದಿಯನ್ನು ದಾಟುತ್ತೇನೆ. 37 ಆದರೆ ದಯವಿಟ್ಟು ನನ್ನನ್ನು ಹಿಂದಿರುಗಲು ಬಿಡು. ನಂತರ ನಾನು ನನ್ನ ಸ್ವಂತ ಸ್ಥಳದಲ್ಲಿ ಸಾಯುತ್ತೇನೆ. ನನ್ನ ತಂದೆತಾಯಿಗಳನ್ನು ಸಮಾಧಿ ಮಾಡಿದ ಸ್ಮಶಾನದಲ್ಲಿಯೇ ನನ್ನನ್ನು ಸಮಾಧಿ ಮಾಡಲಿ. ಆದರೆ ನನ್ನ ಒಡೆಯನಾದ ರಾಜನೇ, ಇಲ್ಲಿರುವ ಕಿಮ್ಹಾಮನು ನಿನ್ನ ಸೇವಕನಾಗಿರುತ್ತಾನೆ; ಅವನು ನಿನ್ನೊಂದಿಗೆ ಬರುತ್ತಾನೆ. ನಿನಗೆ ಇಷ್ಟಬಂದಂತೆ ಅವನಿಗೆ ಮಾಡು” ಎಂದು ಹೇಳಿದನು.
38 ರಾಜನು, “ಕಿಮ್ಹಾಮನು ನನ್ನೊಂದಿಗೆ ಬರಲಿ. ನಾನು ನಿನಗೋಸ್ಕರ ಅವನಿಗೆ ದಯೆತೋರಿಸುವೆನು. ಅವನಿಗಾಗಿ ನೀನು ಏನು ಮಾಡಬೇಕೆಂದು ಬಯಸುತ್ತೀಯೋ ಅದನ್ನೆಲ್ಲಾ ಮಾಡುತ್ತೇನೆ” ಎಂದು ಉತ್ತರಿಸಿದನು.
ದಾವೀದನು ಮನೆಗೆ ಹಿಂದಿರುಗಿದ್ದು
39 ರಾಜನು ಬರ್ಜಿಲ್ಲೈಯನಿಗೆ ಮುದ್ದಿಟ್ಟು ಆಶೀರ್ವದಿಸಿದನು. ಬರ್ಜಿಲ್ಲೈಯನು ಮನೆಗೆ ಹಿಂದಿರುಗಿದನು. ರಾಜನು ತನ್ನ ಜನರೆಲ್ಲರೊಂದಿಗೆ ನದಿಯನ್ನು ದಾಟಿದನು.
40 ರಾಜನು ಜೋರ್ಡನ್ ನದಿಯನ್ನು ದಾಟಿ ಗಿಲ್ಗಾಲಿಗೆ ಹೋದನು. ಕಿಮ್ಹಾಮನು ಅವನೊಂದಿಗೆ ಹೋದನು. ಯೆಹೂದ ದೇಶದ ಜನರೆಲ್ಲರು ಮತ್ತು ಇಸ್ರೇಲಿನ ಅರ್ಧದಷ್ಟು ಜನರು ದಾವೀದನನ್ನು ನದಿ ದಾಟಿಸಿ ಕರೆದುಕೊಂಡು ಹೋದರು.
ಇಸ್ರೇಲರು ಯೆಹೂದದ ಜನರೊಂದಿಗೆ ವಾದ ಮಾಡಿದ್ದು
41 ಇಸ್ರೇಲರೆಲ್ಲರೂ ರಾಜನ ಬಳಿಗೆ ಬಂದರು. ಅವರು ರಾಜನಿಗೆ, “ನಮ್ಮ ಸೋದರರಾದ ಯೆಹೂದದ ಜನರು ತಾವೇ ಬಂದು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ನಿನ್ನ ಜನರೊಂದಿಗೆ ಜೋರ್ಡನ್ ನದಿಯನ್ನು ದಾಟಿಸಿ ಕರೆತಂದದ್ದೇಕೆ?” ಎಂದು ಕೇಳಿದರು.
42 ಯೆಹೂದದ ಜನರೆಲ್ಲರು ಇಸ್ರೇಲರಿಗೆ, “ಏಕೆಂದರೆ ರಾಜನು ನಮ್ಮ ಸಮೀಪದ ಬಂಧು. ಇದರ ಕುರಿತು ನೀವೇಕೆ ನಮ್ಮ ಮೇಲೆ ಕೋಪಗೊಳ್ಳುತ್ತೀರಿ? ರಾಜನ ಖರ್ಚಿನಲ್ಲೇನೂ ನಾವು ಊಟಮಾಡಲಿಲ್ಲ. ರಾಜನು ನಮಗೆ ಯಾವ ಬಹುಮಾನವನ್ನೂ ನೀಡಲಿಲ್ಲ” ಎಂದು ಉತ್ತರಿಸಿದರು.
43 ಇಸ್ರೇಲರು, “ದಾವೀದನಲ್ಲಿ ನಾವು ಹತ್ತುಪಾಲನ್ನು ಹೊಂದಿದ್ದೇವೆ. ಆದ್ದರಿಂದ ದಾವೀದನ ಮೇಲೆ ನಿಮಗಿಂತಲೂ ನಮಗೆ ಹೆಚ್ಚಿನ ಹಕ್ಕಿದೆ. ಆದರೆ ನೀವು ನಮ್ಮನ್ನು ಕಡೆಗಣಿಸಿದ್ದೇಕೆ? ರಾಜನನ್ನು ಹಿಂದಕ್ಕೆ ಕರೆತರಲು ಮಾತಾನಾಡಿದವರಲ್ಲಿ ನಾವೇ ಮೊದಲಿಗರು” ಎಂದು ಉತ್ತರಿಸಿದರು.
ಆದರೆ ಯೆಹೂದದ ಜನರು ಇಸ್ರೇಲರಿಗೆ ಕಟುವಾಗಿ ಉತ್ತರಿಸಿದರು. ಯೆಹೂದ ಜನರ ಮಾತುಗಳು ಇಸ್ರೇಲರ ಮಾತುಗಳಿಗಿಂತ ಹೆಚ್ಚು ಕಟುವಾಗಿದ್ದವು.
* 19:23 ನಂತರ … ವಾಗ್ದಾನ ಮಾಡಿದನು ದಾವೀದನು ಶಿಮ್ಮಿಯನ್ನು ಕೊಲ್ಲಲಿಲ್ಲ. ಆದರೆ ಕೆಲವು ವರ್ಷಗಳ ನಂತರ, ದಾವೀದನ ಮಗನಾದ ಸೊಲೊಮೋನನು ಶಿಮ್ಮಿಯನ್ನು ಕೊಲ್ಲಲು ಆಜ್ಞೆ ಮಾಡಿದನು.