23
ದಾವೀದನ ಕೊನೆಯ ಮಾತುಗಳು
1 ಇವು ಇಷಯನ ಮಗನಾದ ದಾವೀದನ ಕೊನೆಯ ಮಾತುಗಳು:
“ದಾವೀದನು ಈ ಹಾಡನ್ನು ಹಾಡಿದನು.
ದೇವರಿಂದ ಉನ್ನತಿಗೇರಿಸಲ್ಪಟ್ಟವನ ಸಂದೇಶವಿದು.
ಯಾಕೋಬನ ದೇವರಿಂದ ಆರಿಸಲ್ಪಟ್ಟ ರಾಜನೇ ಅವನು.
ಅವನು ಇಸ್ರೇಲಿನ ಒಳ್ಳೆಯ ಹಾಡುಗಾರ.
2 ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು.
ಆತನ ನುಡಿಗಳು ನನ್ನ ನಾಲಿಗೆಯ ಮೇಲಿವೆ.
3 ಇಸ್ರೇಲಿನ ದೇವರು ಮಾತನಾಡಿದನು.
ಇಸ್ರೇಲಿನ ಬಂಡೆಯಾದಾತನು ನನಗೆ ತಿಳಿಸಿದನು.
‘ದೇವರಲ್ಲಿ ಭಯಭಕ್ತಿಯನ್ನಿಟ್ಟು
ಜನರನ್ನು ನ್ಯಾಯವಾಗಿ ಆಳುವ ವ್ಯಕ್ತಿಯು
4 ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ
ಮೋಡಗಳೇ ಇಲ್ಲದ ಮುಂಜಾನೆಯಂತೆಯೂ
ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ
ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.’
5 “ಯೆಹೋವನು ನನ್ನ ಕುಟುಂಬವನ್ನು ಸ್ಥಿರಗೊಳಿಸಿದನು.
ಆತನು ನನ್ನೊಡನೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದನು.
ಆತನು ನನಗೆ ಎಲ್ಲೆಲ್ಲಿಯೂ ಜಯ ಕೊಡುವನು.
ಆತನು ನನಗೆ ಬೇಕಾದದ್ದನ್ನೆಲ್ಲಾ ಕೊಡುವನು.
6 “ಆದರೆ ಕೆಟ್ಟಜನರೆಲ್ಲರೂ ಮುಳ್ಳುಗಳಂತಿದ್ದಾರೆ.
ಜನರು ಮುಳ್ಳುಗಳನ್ನು ಹಿಡಿದುಕೊಳ್ಳುವುದಿಲ್ಲ;
ಅವರು ಅವುಗಳನ್ನು ಎಸೆದುಬಿಡುವರು.
7 ಒಬ್ಬ ವ್ಯಕ್ತಿಯು ಅವುಗಳನ್ನು ಮುಟ್ಟಿದರೆ,
ಅವು ಮರದ ಮತ್ತು ಕಬ್ಬಿಣದ ಕತ್ತಿಗಳಿಂದ ಚುಚ್ಚಿದಂತಾಗುತ್ತದೆ.
ಆ ಜನರು ಮುಳ್ಳುಗಳಂತಿದ್ದಾರೆ.
ಅವರನ್ನು ಬೆಂಕಿಯಲ್ಲಿ ಎಸೆದು ಸಂಪೂರ್ಣವಾಗಿ ಸುಟ್ಟುಬಿಡುವರು!”
ದಾವೀದನ ಶೂರ ಸೈನಿಕರು
8 ದಾವೀದನ ಶೂರಸೈನಿಕರ ಹೆಸರುಗಳು ಹೀಗಿವೆ:
ತಹ್ಕೆಮೋನ್ಯನಾದ ಯೋಷೆಬಷ್ಷೆಬೆತನು. ಮೂವರು ವೀರರಿಗೆ ಯೋಷೆಬಷ್ಷೆಬೆತನು ಮುಖ್ಯಸ್ಥನಾಗಿದ್ದನು. ಅವನನ್ನು ಎಚ್ನೀಯನಾದ ಅದೀನೋ ಎಂದೂ ಕರೆಯುತ್ತಿದ್ದರು. ಯೋಷೆಬಷ್ಷೆಬೆತನು ಏಕಕಾಲದಲ್ಲಿ ಎಂಟುನೂರು ಜನರನ್ನು ಕೊಂದನು.
9 ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗನಾದ ಎಲ್ಲಾಜಾರ. ದಾವೀದನು ಫಿಲಿಷ್ಟಿಯರನ್ನು ಎದುರಿಸಿದ ಸಮಯದಲ್ಲಿ ಅವನೊಂದಿಗಿದ್ದ ಮೂರು ಮಂದಿ ವೀರರಲ್ಲಿ ಎಲ್ಲಾಜಾರನು ಒಬ್ಬನಾಗಿದ್ದನು. ಫಿಲಿಷ್ಟಿಯರು ಯುದ್ಧಕ್ಕೆ ಕೂಡಿಬಂದಾಗ, ಇಸ್ರೇಲ್ ಸೈನಿಕರು ಓಡಿಹೋಗಿದ್ದರು.
10 ಎಲ್ಲಾಜಾರನು ಆಯಾಸಗೊಳ್ಳುವ ತನಕ ಫಿಲಿಷ್ಟಿಯರೊಡನೆ ಹೋರಾಡಿದನು. ಆದರೆ ಅವನು ತನ್ನ ಕೈ ಸೋತು ಹೋಗುವವರೆಗೂ ಫಿಲಿಷ್ಟಿಯರನ್ನು ಕೊಂದನು. ಯೆಹೋವನು ಇಸ್ರೇಲರಿಗೆ ಅಂದು ಮಹಾವಿಜಯವನ್ನು ಉಂಟುಮಾಡಿದನು. ಎಲ್ಲಾಜಾರನು ಯುದ್ಧದಲ್ಲಿ ವಿಜಯಿಯಾದ ಮೇಲೆ ಜನರು ಹಿಂದಿರುಗಿದರು. ಆದರೆ ಅವರು ಶತ್ರುಗಳಿಂದ ಬೆಲೆಬಾಳುವ ವಸ್ತುಗಳನ್ನು ಅಪಹರಿಸಲು ಮಾತ್ರವೇ ಬಂದಿದ್ದರು.
11 ಮೂರನೆಯವನು, ಹರಾರ್ಯನಾದ ಅಗೇಯನ ಮಗನಾದ ಶಮ್ಮ. ಫಿಲಿಷ್ಟಿಯರು ದೊಡ್ಡಗುಂಪಾಗಿ ಬಂದು ಅಲಸಂದಿಯ ಹೊಲದಲ್ಲಿ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಓಡಿಹೋದರು.
12 ಆದರೆ ಶಮ್ಮನು ಹೊಲದ ಮಧ್ಯಭಾಗದಲ್ಲಿ ನಿಂತು ಅದನ್ನು ಉಳಿಸಿಕೊಂಡನು. ಅವನು ಫಿಲಿಷ್ಟಿಯರನ್ನು ಕೊಂದನು. ಆ ಸಮಯದಲ್ಲಿ ಯೆಹೋವನು ಮಹಾವಿಜಯವನ್ನು ಕೊಟ್ಟನು.
13 ಸುಗ್ಗಿಯ ಕಾಲದ ಒಂದು ಸಮಯದಲ್ಲಿ ಮೂವತ್ತು ಮಂದಿ ಶೂರರಲ್ಲಿ ಮೂವರು ದಾವೀದನ ಬಳಿಗೆ ಬಂದರು. ಈ ಮೂವರು ಅದುಲ್ಲಾಮ್ ಗವಿಗೆ ಬಂದರು. ಫಿಲಿಷ್ಟಿಯರ ಸೈನ್ಯವು ರೆಫಾಯೀಮ್ ಕಣಿವೆಯಲ್ಲಿ ತನ್ನ ಪಾಳೆಯವನ್ನು ಮಾಡಿಕೊಂಡಿತ್ತು.
14 ಆ ಸಮಯದಲ್ಲಿ ದಾವೀದನು ಕೋಟೆಯಲ್ಲಿದ್ದನು. ಫಿಲಿಷ್ಟಿಯ ಸೈನಿಕರಲ್ಲಿ ಕೆಲವರು ಬೆತ್ಲೆಹೇಮಿನಲ್ಲಿದ್ದರು.
15 ದಾವೀದನಿಗೆ ತನ್ನ ಸ್ವಸ್ಥಳದ ನೀರನ್ನು ಕುಡಿಯಲು ಅತಿಯಾಸೆಯಾಯಿತು. ದಾವೀದನು “ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ಯಾರಾದರೂ ನೀರನ್ನು ನನಗೆ ತಂದುಕೊಟ್ಟರೆ ಎಷ್ಟು ಚೆನ್ನಾಗಿರುವುದು” ಎಂದು ಹೇಳಿದನು.
16 ಆದರೆ ಈ ಮೂವರು ಪರಾಕ್ರಮಿಗಳು ಫಿಲಿಷ್ಟಿಯ ಸೈನ್ಯದಲ್ಲಿ ನುಗ್ಗಿಹೋಗಿ, ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ನೀರನ್ನು ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಅವನು ಯೆಹೋವನ ಸನ್ನಿಧಿಯಲ್ಲಿ ಸುರಿದು,
17 “ಯೆಹೋವನೇ, ನಾನು ಈ ನೀರನ್ನು ಕುಡಿಯುವುದಿಲ್ಲ. ನಾನು ಈ ನೀರನ್ನು ಕುಡಿದರೆ, ನನಗಾಗಿ ತಮ್ಮ ಪ್ರಾಣಗಳನ್ನೇ ಆಪತ್ತಿಗೀಡುಮಾಡಿಕೊಂಡಿದ್ದ ಜನರ ರಕ್ತವನ್ನು ಕುಡಿದಂತಾಗುತ್ತದೆ” ಎಂದು ಹೇಳಿದನು. ಈ ಕಾರಣದಿಂದಲೇ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ಮೂವರು ಪರಾಕ್ರಮಿಗಳು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದರು.
Other Brave Soldiers
18 ಚೆರೂಯಳ ಮಗನೂ ಯೋವಾಬನ ಸೋದರನೂ ಆದ ಅಬೀಷೈಯನು ಈ ಮೂವರು ಪರಾಕ್ರಮಿಗಳಿಗೆ ನಾಯಕನು. ಅಬೀಷೈಯನು ಮುನ್ನೂರು ಮಂದಿ ಶತ್ರುಗಳ ವಿರುದ್ಧ ತನ್ನ ಬರ್ಜಿಯನ್ನು ಬಳಸಿ ಅವರನ್ನು ಕೊಂದನು. ಅವನೂ ಈ ಮೂವರಂತೆಯೇ ಪ್ರಸಿದ್ಧನಾದನು.
19 ಅಬೀಷೈಯನು ಈ ಮೂವರಿಗಿಂತಲೂ ಹೆಚ್ಚು ಗೌರವಕ್ಕೆ ಪಾತ್ರನಾದನು. ಅವನು ಈ ಮೂವರಿಗೆ ನಾಯಕನಾದನು. ಆದರೆ ಅವನು ಈ ಮೂವರಲ್ಲಿ ಒಬ್ಬನಾಗಿರಲಿಲ್ಲ.
20 ಯೆಹೋಯಾದಾವನ ಮಗನಾದ ಬೆನಾಯನು ಅವರಲ್ಲಿ ಒಬ್ಬನು. ಅವನು ಬಲಿಷ್ಠ ವ್ಯಕ್ತಿಯಾಗಿದ್ದನು. ಅವನು ಕಬ್ಜಯೇಲಿನವನಾಗಿದ್ದನು. ಬೆನಾಯನು ಅನೇಕ ಸಾಹಸಕಾರ್ಯಗಳನ್ನು ಮಾಡಿದನು. ಬೆನಾಯನು ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಬೆನಾಯನು ಮಂಜುಸುರಿಯುವಾಗ ಒಂದು ತಗ್ಗಿನಲ್ಲಿ ಇಳಿದು ಸಿಂಹವನ್ನು ಕೊಂದನು.
21 ಬೆನಾಯನು ವೀರಯೋಧನಾದ ಈಜಿಪ್ಟಿನವನೊಬ್ಬನನ್ನು ಕೊಂದನು. ಈಜಿಪ್ಟಿನವನ ಕೈಯಲ್ಲಿ ಒಂದು ಬರ್ಜಿಯಿತ್ತು. ಬೆನಾಯನ ಕೈಯಲ್ಲಿ ಒಂದು ಲಾಠಿ ಮಾತ್ರವೇ ಇದ್ದಿತು. ಬೆನಾಯನು ಈಜಿಪ್ಟಿನವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಆ ಬರ್ಜಿಯಿಂದಲೇ ಅವನನ್ನು ಕೊಂದುಬಿಟ್ಟನು.
22 ಯೆಹೋಯಾದಾವನ ಮಗನಾದ ಬೆನಾಯನು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದನು. ಬೆನಾಯನು ಆ ಮೂವರು ಪರಾಕ್ರಮಿಗಳಷ್ಟೇ ಪ್ರಸಿದ್ಧನಾಗಿದ್ದನು.
23 ಬೆನಾಯನು ಮೂವತ್ತು ಮಂದಿ ಪರಾಕ್ರಮಿಗಳಿಗಿಂತ ಹೆಚ್ಚು ಗೌರವಕ್ಕೆ ಪಾತ್ರನಾದರೂ ಆ ಮೂವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲಿಲ್ಲ. ದಾವೀದನು ತನ್ನ ಅಂಗರಕ್ಷಕ ಪಡೆಯ ನಾಯಕನನ್ನಾಗಿ ಬೆನಾಯನನ್ನು ನೇಮಿಸಿದನು.
ಮೂವತ್ತು ಮಂದಿ ಪರಾಕ್ರಮಿಗಳು
24 ಯೋವಾಬನ ಸೋದರನಾದ ಅಸಾಹೇಲನು ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾಗಿದ್ದನು. ಮೂವತ್ತು ಮಂದಿ ಪರಾಕ್ರಮಿಗಳ ಗುಂಪಿನಲ್ಲಿದ್ದ ಇತರ ಜನರೆಂದರೆ:
ಬೆತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನಾನನು.
25 ಹೆರೋದಿನವರಾದ ಶಮ್ಮ,
ಎಲೀಕರು,
26 ಪೆಲೆಟಿನವನಾದ ಹೆಲೆಚ್,
ತೆಕೋವದ ಇಕ್ಕೇಷನ ಮಗನಾದ ಈರಾ,
27 ಅಣತೋತಿನವನಾದ ಅಬೀಯೆಜೆರ್,
ಹುಷಾ ಊರಿನವನಾದ ಮೆಬುನ್ನೈ
28 ಅಹೋಹಿನವನಾದ ಚಲ್ಮೋನ್,
ನೆಟೋಫದವನಾದ ಮಹರೈ,
29 ನೆಟೋಫದವನಾದ ಬಾಣನ ಮಗ ಹೇಲೆದ್,
ಬೆನ್ಯಾಮೀನ್ ಕುಟುಂಬದ ಗಿಬೆಯದ ರೀಬೈ ಎಂಬವನ ಮಗನಾದ ಇತ್ತೈ,
30 ಪಿರಾತೋನ್ಯನಾದ ಬೆನಾಯ,
ನಹಲೇಗಾಷಿನವನಾದ ಹಿದ್ದೈ,
31 ಅರಾಬಾದ ಅಬೀಅಲ್ಬೋನ್,
ಬರ್ಹುಮ್ಯನಾದ ಅಜ್ಮಾವೇತ್,
32 ಶಾಲ್ಬೋನ್ಯನಾದ ಎಲೆಯಖ್ಬಾ,
ಯಾಷೇನನ ಗಂಡುಮಕ್ಕಳು,
ಯೋನಾತಾನ,
33 ಹರಾರ್ಯನಾದ ಶಮ್ಮ,
ಅರಾರ್ಯನಾದ ಶಾರಾರನ ಮಗ ಅಹೀಯಾಮ್,
34 ಮಾಕಾದ ಅಹಸ್ಬೈನ ಮಗನಾದ ಎಲೀಫೆಲೆಟ್,
ಗಿಲೋವಿನ ಅಹೀತೋಫೆಲನ ಮಗ ಎಲೀಯಾಮ್,
35 ಕರ್ಮೆಲ್ಯನಾದ ಹೆಚ್ರೋ,
ಅರ್ಬೀಯನಾದ ಪಾರೈ,
36 ಚೋಬದ ನಾತಾನನ ಮಗನಾದ ಇಗಾಲ್,
ಗಾದ್ಯನಾದ ಬಾನೀ,
37 ಅಮ್ಮೋನಿಯನಾದ ಚೆಲೆಕ್,
ಚೆರೂಯಳ ಮಗನಾದ ಯೋವಾಬನ ಸಹಾಯಕನೂ
ಬೇರೋತ್ಯನೂ ಆದ ನಹರೈ,
38 ಇತ್ರೀಯರಾದ ಈರಾ
ಗಾರೇಬರು ಮತ್ತು
39 ಹಿತ್ತಿಯನಾದ ಊರೀಯನು.
ಹೀಗೆ ಒಟ್ಟು ಮೂವತ್ತೇಳು ಜನರಿದ್ದರು.